Tuesday 2 April 2013

'ಅವಧಿ'ಯಲ್ಲಿ ಲೇಖನ ; ಜನಪದ ಸಮುದಾಯ ಮತ್ತು ಜನಪರ ಸಾಂಗತ್ಯ -ಡಾ.ಪ್ರಕಾಶ ಗ.ಖಾಡೆ


ಜನಪದ ಸಮುದಾಯ ಮತ್ತು ಜನಪರ ಸಾಂಗತ್ಯ
ಡಾ.ಪ್ರಕಾಶ ಗ. ಖಾಡೆ,
ಭಾರತೀಯ ಸಂವೇದನೆಯಲ್ಲಿ ಇಂಗ್ಲಿಷ್ ಶಿಕ್ಷಣ ಕ್ರಮ ಮತ್ತು ವಸಾಹತುಶಾಹಿ ಕಾರಣವಾಗಿ ಉಂಟಾದ ಸಂಘರ್ಷ ನೆಲೆ ಕನ್ನಡ ಭಾಷಿಕ, ಸಾಂಸ್ಕೃತಿಕ ಪರಿಸರದ ಮೇಲೂ ದಟ್ಟ ಪ್ರಭಾವ ಮೂಡಿಸಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾದ ಸಾಂಸ್ಕೃತಿಕ ಪುನರುಜ್ಜೀವನವು ಒಂದು ಬಗೆಯಲ್ಲಿ ವಸಾಹತುಶಾಹಿಯ ಕೊಡುಗೆ ಎನಿಸಿದರೂ ಅದರ ವಿರುದ್ಧ ದೇಸಿಯ ಒಳ ಬಂಡಾಯ ತೀವ್ರವಾಗಿ ನಡೆದುಕೊಂಡೆ ಬಂದಿತ್ತು. ದೇಸಿವಾದದ ಹಿಂದೆ ಸಂಸ್ಕೃತಿ ಬಗೆಗಿನ ಚಲನಶೀಲವಾದ ಪರಿಕಲ್ಪನೆಯಿದೆ. ಬದುಕಿನ ಸತ್ವಶೀಲಗಳನ್ನು ಕಬಳಿಸುವ ಒಳಗಣ ಮತ್ತು ಹೊರಗಣ ಎಲ್ಲ ಚಲನೆಗಳ ವಿರುದ್ಧ ದೇಸಿವಾದವು ಬಂಡು ಹೂಡುತ್ತದೆ, ಹೀಗಾಗಿ ಇಲ್ಲಿ ವಸಾಹತುಶಾಹಿಯ ಭದ್ರ ಬಾಹುಗಳು ಒಟ್ಟು ಸ್ಥಳೀಯತೆಯನ್ನು ಚಾಚಿ ತಬ್ಬಿಕೊಳ್ಳಲು ಮಾಡಿದ ಹೇಳಿಕೆಗಳು ಭಾರತೀಯ ಗ್ರಾಮ ಸಮುದಾಯಕ್ಕೆ ಕೆಲವು ಬಾರಿ ತಟ್ಟದೇ ದೂರವೇ ಉಳಿಯುವಂತಾಯಿತು.
ಈ ಚರ್ಚೆಗೆ ಪೂರಕವಾಗಿ ವಸಾಹತುಶಾಹಿ ಸಂಘರ್ಷವು ಒಟ್ಟು ಭಾರತೀಯ ಆ ಮೂಲಕ ಕನ್ನಡತನವನ್ನು ಆಕ್ರಮಿಸಿಕೊಂಡಿತೆಂದು ಹೇಳುವುದು ಅರ್ಧಸತ್ಯವಾಗುತ್ತದೆ. ಬ್ರಿಟಿಷ್ ಮಿಶನರಿಗಳು ಭಾರತದ ನಾಗರಿಕತೆಯನ್ನು ನಾಶ ಮಾಡಲು ಪ್ರಯತ್ನಿಸಿದರು. ಆದರೆ ಎರಡು ಕಾರಣಗಳಿಂದಾಗಿ ಅವರು ಇದರಲ್ಲಿ ಸಫಲರಾಗಲು ಸಾಧ್ಯವಾಗಲಿಲ್ಲ. ಒಂದು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳ ಶಿಲ್ಪಿಗಳು ಹಾಗೂ ರಕ್ಷಕರು ಮಹಿಳೆಯರು, ಇನ್ನೊಂದು ಭಾರತದ ಜನಸಂಖ್ಯೆಯ ಪ್ರತಿಶತ ಎಪ್ಪತ್ತೈದರಷ್ಟು ಮಂದಿ ಹಳ್ಳಿಗಳಲ್ಲಿ ವಾಸ ಮಾಡುವವರು. ಹಾಗಾಗಿ ಬ್ರಿಟಿಷ್ ಆಡಳಿತಗಾರರ ಹಾಗೂ ಮಿಶನರಿಗಳ ಪ್ರಭಾವ ಅವರನ್ನು ಮುಟ್ಟಲೇ ಇಲ್ಲ.
ಹಾಗಾಗಿ ಈ ವಸಾಹತುಶಾಹಿಯ ಬಾಹುಗಳು ನಮ್ಮ ಗ್ರಾಮ ಜೀವನವನ್ನು ವ್ಯಾಪಕವಾಗಿ ಆಕ್ರಮಿಸಿಕೊಳ್ಳದೆ ಇರುವ ಕಾರಣವು ಇಲ್ಲಿ ಜನಪದರ ಹಾಡು ಸಂದರ್ಭಗಳಿಗೆ ಧಕ್ಕೆ ಬಾರದೇ ಅವು ರೂಡಿಗತವಾಗುತ್ತ ಉಳಿದುಕೊಂಡು ಬಂದವು. ಎಲ್ಲೆಲ್ಲಿ ಈ ಪ್ರಭಾವವು ದಟ್ಟವಾಯಿತೋ ಅಲ್ಲೆಲ್ಲ ಪ್ರತಿರೋಧವಾಗಿ ವಸಾಹತುಶಾಹಿಯ ಧೋರಣೆಯನ್ನು ಖಂಡಿಸಲಾಯಿತು. ಆದರೆ ವಸಾಹತುಶಾಹಿ ಮನಸ್ಸುಗಳಿಂದ ರೂಪಿತವಾದ ನಮ್ಮ ನಗರ ಸಮುದಾಯವು ಗ್ರಾಮ ಬದುಕಿನ ಒಳ ಆವರಣವನ್ನು ಕಲುಷಿತಗೊಳಿಸುವ ಸಂದರ್ಭಗಳೂ ಬಂದಾಗಲೂ ಇಲ್ಲಿ ತಲ್ಲಣ, ತಳಮಳ ಆರಂಭವಾಯಿತು. ನಗರ ಬದುಕಿನ ಆಕರ್ಷಣೆಗಳು, ಆಧುನಿಕರಣದ ಸೋಂಕಿಲ್ಲದ ಗ್ರಾಮ ಬದುಕನ್ನು Ùಳದ್ರಗೊಳಿಸುವ ಸಂಚೂ ಸದ್ದಿಲ್ಲದೆ ನಡೆಯಿತು.
ಈ ಬಗೆಯಲ್ಲಿ ಯಾವುದನ್ನು ಭಾರತೀಯವಾಗಿಟ್ಟುಕೊಳ್ಳಬೇಕೆಂಬ ದ್ವಂದ್ವ ಆರಂಭವಾಯಿತು. ಗಾಂದಿ ಹೇಳಿದರು ‘ತನ್ನಷ್ಟೇ ಪುರಾತನವಾದ ಗ್ರಾಮ ಭಾರತ ಅಥವಾ ವಿದೇಶೀ ಪ್ರಭುತ್ವದ ದಾಸ್ಯದಡಿಯಲ್ಲಿ ಸೃಷ್ಟಿಯಾಗಿ ಬೆಳೆದು ಬಂದ ನಗರ ಜೀವನದ ಭಾರತ ಇವೆರಡರಲ್ಲಿ ಒಂದನ್ನು ನಾವು ಆರಿಸಿಕೊಳ್ಳಬೇಕಾಗಿದೆ. ಹಳ್ಳಿಗಳ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸಂಪತ್ತನ್ನೆಲ್ಲ ಹೀರುತ್ತಿರುವ ಇಂದಿನ ನಗರಗಳು ಹಳ್ಳಿಗಳನ್ನು ಹಾಳುಗೆಡವುತ್ತಿವೆ. ಈ ದಬ್ಬಾಳಿಕೆ ನಿಂತು ನಗರಗಳು ಗ್ರಾಮ ಜೀವನದ ಪೋಷಕವಾದ ಸೇವೆಸಲ್ಲಿಸುವಂತಿರಬೇಕೆಂದು ನನ್ನ ಖಾದಿ ಮನೋಭಾವ ನನಗೆ ಬೋದಿಸುತ್ತದೆ. ಹಳ್ಳಿಗಳ ಶೋಷಣೆ ಒಂದು ವ್ಯವಸ್ಥಿತ ಹಿಂಸಾಚಾರ.
ನಾವು ಸ್ವರಾಜವನ್ನು ಅಹಿಂಸೆಯ ತಳಹದಿಯ ಮೇಲೆ ನಿರ್ಮಿಸುವುದಾದರೆ ಗ್ರಾಮಗಳಿಗೆ ಯೋಗ್ಯ ಸ್ಥಾನವನ್ನು ಕೊಡಲೇಬೇಕು.’(ಹರಿಜನ ಪತ್ರಿಕೆ-20.01.1940) ಹೀಗೆ ಗ್ರಾಮ ಸಮುದಾಯದ ಮನೋಧರ್ಮ ಮತ್ತು ಮನಸ್ಥಿತಿಗಳು ಕೋಮಲ ಹಾಗೂ ಹೃದಯಪೂರ್ಣವಾದುದ್ದರ ಕಾರಣವಾಗಿ ಅಹಿಂಸೆಯ ಆಚರಣೆಗೆ ಅದೇ ಶಕ್ತಿ ಮತ್ತು ಬಲ ತುಂಬಬಲ್ಲದೆಂದು ಅರಿತಿದ್ದ ಗಾಂದಿಜಿಯವರು ಗ್ರಾಮ ಸಮುದಾಯದ ಆಶಯಗಳಿಗೆ ಮಹತ್ವ ನೀಡಿದ್ದರು.
ಗಾಂದಿಯವರಿಗೆ ಸ್ಥಳೀಯತೆಯು ಎಲ್ಲಾ ಯೋಚನೆ-ಯೋಜನೆಗಳ ಮೂಲ ಮಂತ್ರವಾಗಿತ್ತು. ಆ ಹೊತ್ತಿಗೆ ವಸಾಹತು ಮನೋಭೂಮಿಕೆ ಉಂಟುಮಾಡಿದ ನಗರ-ಗ್ರಾಮ್ಯಗಳ ತಾಕಲಾಟದ ಒಳ ಸಂಘರ್ಷಣೆಗೆ ಅವರು ಪ್ರತಿಕ್ರಿಯಾತ್ಮವಾಗಿ ಅನೇಕ ಚಿಂತನ, ಭಾಷಣಗಳನ್ನು ಮುಂದಿಡುತ್ತಾ ಬಂದರು. ಗಾಂದಿಯವರ ಈ ಚಿಂತನೆಗಳನ್ನು ಅಕ್ಷರ ಬಾರದ, ಸಂಪರ್ಕ ರಹಿತ ಗ್ರಾಮ ಸಮುದಾಯಕ್ಕೆ ತಲುಪಿಸುವಲ್ಲಿ ನಮ್ಮ ಜನಪದ ಮೌಖಿಕ ಕಾವ್ಯ ತುದಿಗಾಲ ಮೇಲೆ ನಿಂತು ಕೆಲಸ ಮಾಡಿ ಪ್ರಧಾನ ಬಿತ್ತಿಗೆ ತನ್ನನ್ನು ಸಮರ್ಪಿಸಿಕೊಂಡಿತು. ಈ ಕಾರ್ಯ ವ್ಯಾಪಕವಾಗಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಹಬ್ಬಿತು. ಲಾವಣಿಕಾರರು ತಮ್ಮ ಹಾಡುಗಳಿಗೆ ಸಾಂದರ್ಬಿಕತೆಯನ್ನು ಬಳಸಿಕೊಂಡು ರಾಷ್ಟ್ರೀಯ ಚಳವಳಿಗೆ ಗ್ರಾಮ ಸಮುದಾಯವನ್ನು ಸಜ್ಜುಗೊಳಿಸಿದರು.
ಗಾಂದಿಜಿಯವರ ಸಂದೇಶ ಮತ್ತು ಆಶಯಗಳಿಗೆ ದತ್ತವಾದ ರಾಷ್ಟ್ರೀಯ ಆಂದೋಲನ ಪ್ರಚಾರಕ್ಕಾಗಿ ಗೀತ-ಮೇಳಗಳನ್ನು ಕಟ್ಟಿ ತಮ್ಮ ಹಾಡುಗಳ ಮೂಲಕ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಕೀರ್ತಿ ಲಾವಣಿಕಾರರಿಗೆ ಸಲ್ಲುತ್ತದೆ. ದೇಸೀಯ ಚಿಂತನೆಗಳಿಗೆ ಗಾಂದಿಜಿ ಒತ್ತು ಕೊಡುವುದರ ಮೂಲಕ ಗ್ರಾಮ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಗ್ರಾಮ ಸಂಸ್ಕೃತಿಯ ಜ್ಞಾನ ಕ್ಷೇತ್ರಗಳು ಮೌಖಿಕ ಆಶಯಗಳಾಗಿದ್ದವು. ಉದ್ದಕ್ಕೂ ಮೌಖಿಕ ಮತ್ತು ಲಿಖಿತ ನೆಲೆಗಳ ಬಗೆಗೆ ಸಂಘರ್ಷಗಳು ಕಂಡು ಬಂದವು. ಜಾನಪದವು ಮೌಖಿಕ ಕಾವ್ಯದ ಒಂದು ಸಮೃದ್ಧ ಸೃಷ್ಟಿ. ಆದರೆ ಲಿಖಿತವಾಗಿ ಅದು ಒಂದು ಕಟ್ಟಳೆಗೆ ಒಳಗಾದಾಗ ಅದರ ಹೊಸತನವೆಂಬುದು ಎಷ್ಟು ಪ್ರಸ್ತುತ ಎಂಬ ಕುರಿತು ಜಿಜ್ಞಾಸೆಗಳು ಆರಂಭವಾದವು.
ಲಿಖಿತವೆನ್ನುವುದು ಜಾನಪದವನ್ನು ಒಂದು ಬಗೆಯಲ್ಲಿ ಕಟ್ಟಳೆಗೆ ಒಳಪಡಿಸುತ್ತದೆ. ಜನಪದ ಕಾವ್ಯಗಳು ಉದ್ದಕ್ಕೂ ಮೌಖಿಕ ಸಂವಹನದಿಂದಲೇ ಉಳಿದುಕೊಂಡು ಬಂದು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಕಾಲಕಾಲಕ್ಕೆ ತನ್ನ ಹೊಸತನದ ಇರುವನ್ನೇ ಪ್ರಕಟಪಡಿಸುತ್ತ ಬಂದವು. ಹೀಗೆ ಮೌಖಿಕ ಕಾವ್ಯ ಸಂವಹನದಿಂದ ಪ್ರಭಾವಿತರಾಗಿ ಲಿಖಿತವೆನ್ನುವುದು ಬಂದಾಗ ನಮ್ಮವರು ಬರೆದದ್ದು ಅವರ ಸೃಜನಶೀಲತೆಯೊಂದಿಗೆ ಜನಪದ ಮೌಖಿಕ ಸಂವಹನದ ಎಳೆಗಳೂ ಸೇರಿ ‘ಜಾನಪದವೇ’ ಎನ್ನುವಷ್ಟು ಗಾಢತೆ ಮೆರೆದವು.ಕಿ.ರಂ.ನಾಗರಾಜ ಅವರ ಪ್ರಕಾರ ‘ಬಹುತೇಕ ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳು ಅನಕ್ಷರಸ್ಥ ಸಂಸ್ಕೃತಿಯ ಬಗೆಗೆ ಗಾಢವಾದ ತಿಳುವಳಿಕೆಯಿಂದ ಕೂಡಿದ್ದಾಗಿದೆ. ಇಂದಿಗೂ ನಿಜವಾದ ಅರ್ಥದಲ್ಲಿ ಅನಕ್ಷರಸ್ಥರೇ ಕನ್ನಡ ಕವಿತೆಯ ನಿಜವಾದ ಗ್ರಾಹಕರು.’
ಮೌಖಿಕ ಕಾವ್ಯ ಸಂವಹನವು ಹೆಚ್ಚು ಕೇಳುಗರನ್ನು ಪಡೆದುಕೊಳ್ಳುತ್ತದೆ ಮತ್ತು ಅರ್ಥವಾಗಲು ಯಾರ ನೆರವನ್ನೂ ಬಯಸುವುದಿಲ್ಲ. ಕೆಲವು ಕಟ್ಟಳೆಗಳು ತನ್ನಷ್ಟಕ್ಕೆ ತಾವೇ ರೂಪುಗೊಳ್ಳುತ್ತವೆ. ಹೀಗಾಗಿ ಈ ಕಟ್ಟಳೆಗಳಿಂದ ಜಾನಪದವು ಅಳಿದು ಹೋಗುತ್ತದೆ ಎಂಬ ಆತಂಕವಿದೆ. ಇದಕ್ಕೆ ಮೊಗಳ್ಳಿ ಗಣೇಶ್ ಹೀಗೆ ಹೇಳುತ್ತಾರೆ: ಜಾನಪದ ಪಠ್ಯ ಹಾಳಾಗಿ ಹೋಗುತ್ತದೆ ಎಂಬ ಆತಂಕ ಬೇಕಾಗಿರುವುದಿಲ್ಲ. ಜಾನಪದ ಸ್ವಭಾವವೇ ಅತ್ಯಂತ ಚಲನಶೀಲತೆಯನ್ನು ಬಯಸುವಂಥದ್ದು, ಆದರೆ ಇಲ್ಲಿ ಪಠ್ಯದ ರೂಪ ರಚನೆಯಲ್ಲಿ ಮಹತ್ವದ ಬದಲಾವಣೆಗಳು ದಿಡೀರನೆ ಉಂಟಾಗದಿದ್ದರೂ ತನ್ನ ರಚನೆಗೆ ಶೈಲಿಗೆ ಹೊಸತನ್ನ ಸ್ವೀಕರಿಸುವ ಗುಣ ಪಠ್ಯಕ್ಕೆ ಇರುತ್ತದೆ. ಅಂದರೆ ಕಾಲದ ಮೌಲ್ಯಗಳು ಸೂಕ್ಷ್ಮವಾಗಿ ಪಠ್ಯದ ಭಾಗಗಳಾಗಿ ಬಿಡುತ್ತವೆ. ಮೌಖಿಕ ಲಿಖಿತ ಎನ್ನುವಲ್ಲಿ ಕಾವ್ಯ ಸಂವಹನಗೊಳ್ಳುವ ತೀವ್ರತೆಯಲ್ಲಿ ಅದರ ಅರ್ಥವಂತಿಕೆ ಬಿಚ್ಚಿಕೊಳ್ಳುತ್ತದೆ.
ಅಝಾದ್ ಹಿಂದ್ ಗೀಗೀ ಮೇಳ
ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು.
ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜಾನೇವಾರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ (ಹುಲಕುಂದ ಬಿಮಕವಿ) ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು.
ಭಾರತೀಯ ಗ್ರಾಮೀಣ ಮನಸ್ಸುಗಳನ್ನು ಆಧುನಿಕತೆ ಆಕ್ರಮಿಸಿಕೊಂಡುದರ ಸಂಕೇತವಾಗಿ ಬದಲಾದ, ಬದಲಾಗುತ್ತಿರುವ ವಸ್ತು ಸಂಗತಿಗಳನ್ನು ಕಾವ್ಯದಲ್ಲಿ ಕಟ್ಟಿಕೊಡುವುದರ ಮೂಲಕ ಲಾವಣಿಕಾರರು ಸಮಕಾಲೀನತೆಗೆ ಸ್ಪಂದಿಸಿದ್ದು ಸ್ಪಷ್ಟವಾಗುತ್ತದೆ. ನಾಡಿನ ಪ್ರೀತಿಯನ್ನು ಅವರ ಕಾವ್ಯಶಕ್ತಿ ಜನಸಾಮಾನ್ಯರಲ್ಲಿ ಮಿಂಚು ಮೂಡಿಸಿತು. ಅಕ್ಷರಬಾರದ ಅನೇಕ ಜನಪದ ಸಮುದಾಯದ ಹಾಡುಗಾರಿಕೆಯಿಂದಾಗಿ ಅಂದು ಗಾಂಧೀಜಿಯವರ ಸಂದೇಶವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಿದ ಕೀರ್ತಿ ನಮ್ಮ ಜನಪದರಿಗೆ ಸಲ್ಲುತ್ತದೆ.ಈ ಮೂಲಕ ಗಾಂಧೀಜಿ ಸ್ಥಳೀಯತೆಯ ಸದ್ಭಳಕೆಗೆ ಚಾಲನೆ ನೀಡಿದರು.

1 comment: