ಜನಪದರ ಬನ್ನಿ ಹಬ್ಬ : ವಿಜಯ ಕರ್ನಾಟಕ ಬೋಧಿವೃಕ್ಷದಲ್ಲಿ 12.10.2013 ರ ಸಂಚಿಕೆಯಲ್ಲಿ ಪ್ರಕಟ ..
ಜನಪದರ ಬನ್ನಿ ಹಬ್ಬ
- ಡಾ.ಪ್ರಕಾಶ ಗ. ಖಾಡೆ
ವಿಜಯದಶಮಿ ಕನ್ನಡ ಜನಪದರ ಸಂಭ್ರಮದ ಹಬ್ಬ. ಭಾರತದ ತುಂಬೆಲ್ಲ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಬೇರೆ ಬೇರೆಯಾಗಿ ಆಚರಿಸಿದರೆ ಕನ್ನಡಿಗರು ಬನ್ನಿಯ ಹಬ್ಬವಾಗಿ ಇದನ್ನು ಆಚರಿಸುತ್ತಾರೆ. ಬೆಳಸು ತುಂಬಿದ ಭೂಮಿಯು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡನ್ನು ಸೇರುವದೆಂದು ಸೂಚಿಸುವ ಶುಭದಿನವಿದು.
ಊರ ಸೀಮೆಯ ದಾಟಿ ಕಾಡ ಗಡಿಯನು ಸೇರಿ
ಕಾಡ ಸಂಪತ್ತು ತರಬನ್ನಿ
ಬೆಳೆದ ಬೆಳಸಿಗೆ ಬನ್ನಿ
ಭೂಮಿ ತಾಯಿಗೆ ಬನ್ನಿ
ನಾಡ ಸಂಪತ್ತು ಬೆರಿ ಬನ್ನಿ
ನಾಡ ಜನರ ಒಡಲು ತುಂಬುವ ಭೂ ತಾಯಿಯ ಮಡಿಲು ತುಂಬಿ ಬರಲು ಈ ಹಬ್ಬದಲ್ಲಿ ದೇವರೆದುರಲ್ಲಿ ಘಟಸ್ಥಾಪನ ದಿನ ಸಸಿ ಬೆಳೆಸುತ್ತಾರೆ.ಇದೊಂದು ಜನಪದರ ಮಣ್ಣು ಪೂಜೆ.
ಖಂಡೆ ಪೂಜೆ : ಅಶ್ವಿನಿ ಶುದ್ದ ನವಮಿಯ ದಿನ ಆಚರಿಸುವ ಪೂಜೆ. ಈ ದಿನ ರೈತರು ಒಕ್ಕಲುತನದ ಸಾಮಗ್ರಿಗಳನ್ನೆಲ್ಲ ತೊಳೆದು, ತಿಕ್ಕಿ ಭಕ್ತಿಯಿಂದ ಪೂಜೆ ಮಾಡಿ ಹೊಲದಲ್ಲಿನ ತುಂಬಿದ ಬೆಳಸನ್ನು ತಂದು ಪೂಜೆಗೆ ಏರಿಸಿ ಕೈ ಮುಗಿಯುತ್ತಾರೆ. ವ್ಯಾಪಾರಿಗಳು ತಮ್ಮ ತೂಕ ತಕ್ಕಡಿಗಳನ್ನು ಈ ದಿನ ಪೂಜಿಸುತ್ತಾರೆ. ಹಿಂದೆ ರಾಜಮಹಾರಾಜರು ತಮ್ಮ ಯುದ್ದ ಸಾಮಗ್ರಿಗಳನ್ನು ಈ ದಿನ ಪೂಜೆ ಮಾಡುತ್ತಿದ್ದರು. ಬನ್ನಿ ಹಬ್ಬದ ದಿನವನ್ನು ದಿಗ್ವಿಜಯ ಕೈಕೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು ಕರೆದು ಯುದ್ದ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದರು. ಇಂಥ ಬನ್ನಿಯ ದಿಬ್ಬಗಳು ಕರ್ನಾಟಕದ ಅನೇಕ ಕಡೆ ಇದ್ದವೆಂದೂ ಅವೆಲ್ಲ ಅಳಿದು ಹೋಗಿರಬಹುದಾದ ನಿದರ್ಶನಗಳಿವೆ. ವಿಜಯನಗರದ ಬನ್ನಿದಿಬ್ಬ ಈಗ ನಮ್ಮ ಕಣ್ಣೆದುರಿಗೆ ಉಳಿದುಕೊಂಡಿರುವ ಒಂದು ಐತಿಹಾಸಿಕ ಸ್ಮಾರಕ.
ಬನ್ನಿ ಎಲೆ ಚಿನ್ನ :
ಜನಪದರು ತಮ್ಮ ಪೂಜೆ ಪುನಸ್ಕಾರಗಳಲ್ಲಿ ಪಾಂಡವರಿಗೆ ಅಗ್ರಸ್ಥಾನ ನೀಡಿದ್ದಾರೆ ಬನ್ನಿ ಹಬ್ಬದ ದಿನವೇ ಪಾಂಡವರ ಅಜ್ಞಾತವಾಸ ಆರಂಭವಾದದ್ದು.ಅವರು ಅಜ್ಞಾತವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಬನ್ನಿಯ ಮರದ ಪೊಟರೆಯಲ್ಲಿಟ್ಟು ನಾವು ಬರುವವರೆಗೂ ಅವುಗಳನ್ನು ಕಾಯಬೇಕೆಂದು ಆ ಮರಕ್ಕೆ ಹೇಳಿ ಹೊರಟು ಹೋದರೆಂದು ಕಥೆ ಇದೆ. ಪಾಂಡವರ ವನವಾಸ, ಅಜ್ಞಾತವಾಸವನ್ನು ನಮ್ಮ ಜನಪದರು ಮನಕರಗುವಂತೆ ಕೆಲ ಸಾಲುಗಳಲ್ಲಿ ಹೇಳುತ್ತಾರೆ.
ಕಲ್ಲು ಕಡುಬ ಮಾಡಿ ಮುಳ್ಳ ಶಾವಿಗೆ ಮಾಡಿ
ಬನ್ನಿಯ ಎಲಿಯಾಗ ಎಡೆಮಾಡಿ-ಪಾಂಡವರು
ಉಂಡು ಹೋಗ್ಯಾರೋ ವನವಾಸೋ.
ರೈತರು ಪಾಂಡವರನ್ನು ಸುಗ್ಗಿ ಕಣದ ದಂಡೆಯ ಮೇಲೆ, ಹೊಟ್ಟಿನ ಕುಟ್ಟರಿಯ ಎಡಭಾಗದಲ್ಲಿಟ್ಟು ಪೂಜೆ ಮಾಡಿ ರಾಶಿ ಬುತ್ತಿಯ ಊಟವನ್ನು ಎಡೆಮಾಡುವರು. ಬನ್ನಿಮರದ ಎಲೆಯನ್ನು ಚಿನ್ನವೆಂದು ಜನಪದರು ಭಾವಿಸಿದ್ದಾರೆ.ಬನ್ನಿ ಮರ ಒಂದು ಪವಿತ್ರ ಮರ. ದಸರಾ ಹಬ್ಬದಲ್ಲಿ ಈ ಮರಕ್ಕೆ ವಿಶೇಷ ಪೂಜೆ. ವಿಜಯದಶಮಿಯ ದಿನ ಬನ್ನಿ ಮರವನ್ನು ಪೂಜಿಸಿ ಅದರ ಎಲೆಯನ್ನು ಚಿನ್ನವೆಂದು ತಿಳಿದು ಹಂಚುವ ಪದ್ಧತಿ ಇದೆ. ಈ ದಿನ ಬನ್ನಿಮರಕ್ಕೆ ನೈವೇದ್ಯ ತೆಗೆದುಕೊಂಡು ಹೋಗಿ ಹೆಣ್ಣು ಮಕ್ಕಳು ಅರಿಷಿಣ , ಕುಂಕುಮ ಹಚ್ಚಿ
ಪೂಜೆ ಮಾಡುವರು.
ದೇವದೇವರ ಬನ್ನಿ
ದೈವದೈವದ ಬನ್ನಿ
ನಾವು ಮುಡಿವೂದು ನಮ್ಮ ಬನ್ನಿ.
ಬನ್ನಿ ಮುಡಿಯುವದೆಂದರೆ ಅದೊಂದು ಸಂಭ್ರಮದ ಸಂದರ್ಭ. ದೇವರಿಗೆ,ತಂದೆ ತಾಯಂದಿಯರಿಗೆ ,ಅಕ್ಕ ತಂಗಿಯರಿಗೆ,ಅಣ್ಣ ತಮ್ಮರಿಗೆ ,ಬೀಗರು ಬಿಜ್ಜರಿಗೆ, ಗೆಳೆಯ ಗೆಳತಿಯರಿಗೆ ಬನ್ನಿ ಕೊಡುವುದು ಎಲ್ಲಿಲ್ಲದ ಸಂಭ್ರಮ.ಜಗಳವಾಡಿ, ಮಾತು ಬಿಟ್ಟು ಮುನಿಸಿಕೊಂಡವರು ಈ ದಿನ ಬನ್ನಿ ವಿನಿಮಯ ಮಾಡಿಕೊಂಡು ಒಂದಾಗುವ ಸಂಭ್ರಮ ಹಳ್ಳಿಗಳಲ್ಲಿ ನೋಡಬಹುದು.
ಹಡೆದ ತಾಯಿಗೆ ಬನ್ನಿ
ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮ್ಮ ಬನ್ನಿ
ಮಕ್ಕಳು ತಂದೆ-ತಾಯಿಯರಿಗೆ,ಹೆಂಡತಿ ಗಂಡನಿಗೆ ಬನ್ನಿ ಕೊಡುವ ಮೂಲಕ ಕೃತಜ್ಞತೆ ಸಲ್ಲಿಸುವ ವಿಧವಿದೆ.ಹೆಣ್ಣುಮಗಳೊಬ್ಬಳು ಬನ್ನಿಯ ಹಬ್ಬಕ್ಕೆ ತವರಿಗೆ ಹೋಗಿ ಅಲ್ಲಿ ಅಣ್ಣನಿಗೆ ಹಿಡಿ ಬನ್ನಿಯನ್ನು ಕೊಟ್ಟು ಅಣ್ಣನ ಮಗಳಿಗೆ ಕುಂಕುಮದ ಬೊಟ್ಟಿಟ್ಟು ಸೊಸೆಯನ್ನಾಗಿ ಮಾಡಿಕೊಂಡು ಬರುವ ಸಂದರ್ಭ ಗೀತೆಯೊಂದಿದೆ.
ದಸರೇಕ ತವರಿಗೆ ಕುಶಲದಿ ನಾ ಹೋದೆ
ಸೊಸಿನೋಡಿ ಕೊಟ್ಟೆ ಹಿಡಿ ಬನ್ನಿ-ಅಣ್ಣಯ್ಯ
ಖುಷಿಲಿಂದ ಬೊಟ್ಟು ಸೊಸೆಗಿಟ್ಟು.
ಬನ್ನಿ ಮುಡಿಯುವ ಆಚರಣೆಯು ಬಂಧುತ್ವ ಮತ್ತು ಭಾವೈಕೈತೆಯನ್ನು ಬೆಸೆಯುತ್ತದೆ.ಬದುಕಿನ ಜಂಜಾಟದಲ್ಲಿ ,ಹತ್ತು ಹಲವು ನೋವು,ವಿರಸದಲ್ಲಿ ಮುನಿಸಿಕೊಂಡವರು ಒಂದಾಗುವ ಚೆಂದಾಗುವ ಉಲ್ಲಾಸದ ಈ ದಿನ ಬದುಕಿಗೆ ಹೊಸ ಅರ್ಥ ಕೊಡುತ್ತದೆ.
ನಾವು ಕುಣಿಯೋಣ ಬನ್ನಿ
ಹ್ಯಾಂವ ಮುರಿಯೋಣ ಬನ್ನಿ
ಜೀವ ಒಂದಾಗಿ ಇರಬನ್ನಿ
ಇಂದು ಮುಡಿಯುವ ಬನ್ನಿ
ಮುಂದೆಮಗೆ ಹೊನ್ನಾಗಿ
ಕಂದಣದಾರುತಿ ಬೆಳಗುದಕ.
========
ಲೇಖಕರ ವಿಳಾಸ; ಡಾ.ಪ್ರಕಾಶ ಗ.ಖಾಡೆ ,ಮನೆ ನಂ.ಎಸ್.135,ಬಡಾವಣೆ ಸಂಖ್ಯೆ-63,ನವನಗರ.ಬಾಗಲಕೋಟ-587103. ಮೊ. 9845500890