Saturday 12 October 2013

ಜನಪದರ ಬನ್ನಿ ಹಬ್ಬ-ಡಾ.ಪ್ರಕಾಶ ಗ.ಖಾಡೆ

ಜನಪದರ ಬನ್ನಿ ಹಬ್ಬ : ವಿಜಯ ಕರ್ನಾಟಕ ಬೋಧಿವೃಕ್ಷದಲ್ಲಿ 12.10.2013 ರ ಸಂಚಿಕೆಯಲ್ಲಿ ಪ್ರಕಟ ..

                           
ಜನಪದರ ಬನ್ನಿ ಹಬ್ಬ 


                           
                                   - ಡಾ.ಪ್ರಕಾಶ ಗ. ಖಾಡೆ 

           ವಿಜಯದಶಮಿ ಕನ್ನಡ ಜನಪದರ ಸಂಭ್ರಮದ ಹಬ್ಬ. ಭಾರತದ ತುಂಬೆಲ್ಲ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಬೇರೆ ಬೇರೆಯಾಗಿ ಆಚರಿಸಿದರೆ ಕನ್ನಡಿಗರು ಬನ್ನಿಯ ಹಬ್ಬವಾಗಿ ಇದನ್ನು ಆಚರಿಸುತ್ತಾರೆ. ಬೆಳಸು ತುಂಬಿದ ಭೂಮಿಯು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡನ್ನು ಸೇರುವದೆಂದು ಸೂಚಿಸುವ ಶುಭದಿನವಿದು.
ಊರ ಸೀಮೆಯ ದಾಟಿ ಕಾಡ ಗಡಿಯನು ಸೇರಿ
ಕಾಡ ಸಂಪತ್ತು ತರಬನ್ನಿ
ಬೆಳೆದ ಬೆಳಸಿಗೆ ಬನ್ನಿ
ಭೂಮಿ ತಾಯಿಗೆ ಬನ್ನಿ
ನಾಡ ಸಂಪತ್ತು ಬೆರಿ ಬನ್ನಿ
ನಾಡ ಜನರ ಒಡಲು ತುಂಬುವ ಭೂ ತಾಯಿಯ ಮಡಿಲು ತುಂಬಿ ಬರಲು ಈ ಹಬ್ಬದಲ್ಲಿ ದೇವರೆದುರಲ್ಲಿ ಘಟಸ್ಥಾಪನ ದಿನ ಸಸಿ ಬೆಳೆಸುತ್ತಾರೆ.ಇದೊಂದು ಜನಪದರ ಮಣ್ಣು ಪೂಜೆ.
ಖಂಡೆ ಪೂಜೆ  :   ಅಶ್ವಿನಿ ಶುದ್ದ ನವಮಿಯ ದಿನ ಆಚರಿಸುವ ಪೂಜೆ. ಈ ದಿನ ರೈತರು ಒಕ್ಕಲುತನದ ಸಾಮಗ್ರಿಗಳನ್ನೆಲ್ಲ ತೊಳೆದು, ತಿಕ್ಕಿ ಭಕ್ತಿಯಿಂದ ಪೂಜೆ ಮಾಡಿ ಹೊಲದಲ್ಲಿನ ತುಂಬಿದ ಬೆಳಸನ್ನು ತಂದು ಪೂಜೆಗೆ ಏರಿಸಿ ಕೈ ಮುಗಿಯುತ್ತಾರೆ. ವ್ಯಾಪಾರಿಗಳು ತಮ್ಮ ತೂಕ ತಕ್ಕಡಿಗಳನ್ನು ಈ ದಿನ ಪೂಜಿಸುತ್ತಾರೆ. ಹಿಂದೆ ರಾಜಮಹಾರಾಜರು ತಮ್ಮ ಯುದ್ದ ಸಾಮಗ್ರಿಗಳನ್ನು ಈ ದಿನ ಪೂಜೆ ಮಾಡುತ್ತಿದ್ದರು. ಬನ್ನಿ ಹಬ್ಬದ ದಿನವನ್ನು ದಿಗ್ವಿಜಯ ಕೈಕೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು ಕರೆದು ಯುದ್ದ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದರು. ಇಂಥ ಬನ್ನಿಯ ದಿಬ್ಬಗಳು ಕರ್ನಾಟಕದ ಅನೇಕ ಕಡೆ ಇದ್ದವೆಂದೂ ಅವೆಲ್ಲ ಅಳಿದು ಹೋಗಿರಬಹುದಾದ ನಿದರ್ಶನಗಳಿವೆ. ವಿಜಯನಗರದ ಬನ್ನಿದಿಬ್ಬ ಈಗ ನಮ್ಮ ಕಣ್ಣೆದುರಿಗೆ ಉಳಿದುಕೊಂಡಿರುವ ಒಂದು ಐತಿಹಾಸಿಕ ಸ್ಮಾರಕ.

ಬನ್ನಿ ಎಲೆ ಚಿನ್ನ :
 ಜನಪದರು ತಮ್ಮ ಪೂಜೆ ಪುನಸ್ಕಾರಗಳಲ್ಲಿ ಪಾಂಡವರಿಗೆ  ಅಗ್ರಸ್ಥಾನ ನೀಡಿದ್ದಾರೆ ಬನ್ನಿ ಹಬ್ಬದ ದಿನವೇ ಪಾಂಡವರ ಅಜ್ಞಾತವಾಸ ಆರಂಭವಾದದ್ದು.ಅವರು ಅಜ್ಞಾತವಾಸಕ್ಕೆ ಹೋಗುವಾಗ ತಮ್ಮ ಆಯುಧಗಳನ್ನು ಬನ್ನಿಯ ಮರದ ಪೊಟರೆಯಲ್ಲಿಟ್ಟು ನಾವು ಬರುವವರೆಗೂ ಅವುಗಳನ್ನು ಕಾಯಬೇಕೆಂದು ಆ ಮರಕ್ಕೆ ಹೇಳಿ  ಹೊರಟು ಹೋದರೆಂದು ಕಥೆ ಇದೆ. ಪಾಂಡವರ ವನವಾಸ, ಅಜ್ಞಾತವಾಸವನ್ನು ನಮ್ಮ ಜನಪದರು ಮನಕರಗುವಂತೆ ಕೆಲ ಸಾಲುಗಳಲ್ಲಿ ಹೇಳುತ್ತಾರೆ.
ಕಲ್ಲು ಕಡುಬ ಮಾಡಿ ಮುಳ್ಳ ಶಾವಿಗೆ ಮಾಡಿ
ಬನ್ನಿಯ ಎಲಿಯಾಗ ಎಡೆಮಾಡಿ-ಪಾಂಡವರು
ಉಂಡು ಹೋಗ್ಯಾರೋ ವನವಾಸೋ.
ರೈತರು ಪಾಂಡವರನ್ನು ಸುಗ್ಗಿ ಕಣದ ದಂಡೆಯ ಮೇಲೆ, ಹೊಟ್ಟಿನ ಕುಟ್ಟರಿಯ ಎಡಭಾಗದಲ್ಲಿಟ್ಟು ಪೂಜೆ  ಮಾಡಿ ರಾಶಿ ಬುತ್ತಿಯ ಊಟವನ್ನು ಎಡೆಮಾಡುವರು. ಬನ್ನಿಮರದ ಎಲೆಯನ್ನು ಚಿನ್ನವೆಂದು ಜನಪದರು ಭಾವಿಸಿದ್ದಾರೆ.ಬನ್ನಿ ಮರ ಒಂದು ಪವಿತ್ರ ಮರ. ದಸರಾ ಹಬ್ಬದಲ್ಲಿ ಈ ಮರಕ್ಕೆ ವಿಶೇಷ ಪೂಜೆ. ವಿಜಯದಶಮಿಯ ದಿನ ಬನ್ನಿ ಮರವನ್ನು ಪೂಜಿಸಿ ಅದರ ಎಲೆಯನ್ನು ಚಿನ್ನವೆಂದು ತಿಳಿದು ಹಂಚುವ ಪದ್ಧತಿ ಇದೆ. ಈ ದಿನ ಬನ್ನಿಮರಕ್ಕೆ ನೈವೇದ್ಯ ತೆಗೆದುಕೊಂಡು ಹೋಗಿ ಹೆಣ್ಣು ಮಕ್ಕಳು ಅರಿಷಿಣ , ಕುಂಕುಮ ಹಚ್ಚಿ
ಪೂಜೆ ಮಾಡುವರು.
ದೇವದೇವರ ಬನ್ನಿ
ದೈವದೈವದ ಬನ್ನಿ
ನಾವು ಮುಡಿವೂದು ನಮ್ಮ ಬನ್ನಿ.

ಬನ್ನಿ ಮುಡಿಯುವದೆಂದರೆ ಅದೊಂದು ಸಂಭ್ರಮದ ಸಂದರ್ಭ. ದೇವರಿಗೆ,ತಂದೆ ತಾಯಂದಿಯರಿಗೆ ,ಅಕ್ಕ ತಂಗಿಯರಿಗೆ,ಅಣ್ಣ ತಮ್ಮರಿಗೆ ,ಬೀಗರು ಬಿಜ್ಜರಿಗೆ, ಗೆಳೆಯ ಗೆಳತಿಯರಿಗೆ ಬನ್ನಿ ಕೊಡುವುದು ಎಲ್ಲಿಲ್ಲದ ಸಂಭ್ರಮ.ಜಗಳವಾಡಿ, ಮಾತು ಬಿಟ್ಟು ಮುನಿಸಿಕೊಂಡವರು ಈ ದಿನ ಬನ್ನಿ ವಿನಿಮಯ ಮಾಡಿಕೊಂಡು ಒಂದಾಗುವ ಸಂಭ್ರಮ ಹಳ್ಳಿಗಳಲ್ಲಿ ನೋಡಬಹುದು.
ಹಡೆದ ತಾಯಿಗೆ ಬನ್ನಿ
ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮ್ಮ ಬನ್ನಿ
ಮಕ್ಕಳು ತಂದೆ-ತಾಯಿಯರಿಗೆ,ಹೆಂಡತಿ ಗಂಡನಿಗೆ ಬನ್ನಿ ಕೊಡುವ ಮೂಲಕ ಕೃತಜ್ಞತೆ ಸಲ್ಲಿಸುವ ವಿಧವಿದೆ.ಹೆಣ್ಣುಮಗಳೊಬ್ಬಳು ಬನ್ನಿಯ ಹಬ್ಬಕ್ಕೆ ತವರಿಗೆ ಹೋಗಿ ಅಲ್ಲಿ ಅಣ್ಣನಿಗೆ ಹಿಡಿ ಬನ್ನಿಯನ್ನು ಕೊಟ್ಟು ಅಣ್ಣನ ಮಗಳಿಗೆ ಕುಂಕುಮದ ಬೊಟ್ಟಿಟ್ಟು ಸೊಸೆಯನ್ನಾಗಿ ಮಾಡಿಕೊಂಡು ಬರುವ ಸಂದರ್ಭ ಗೀತೆಯೊಂದಿದೆ.
ದಸರೇಕ ತವರಿಗೆ ಕುಶಲದಿ ನಾ ಹೋದೆ
ಸೊಸಿನೋಡಿ ಕೊಟ್ಟೆ ಹಿಡಿ ಬನ್ನಿ-ಅಣ್ಣಯ್ಯ
ಖುಷಿಲಿಂದ ಬೊಟ್ಟು ಸೊಸೆಗಿಟ್ಟು.
ಬನ್ನಿ ಮುಡಿಯುವ ಆಚರಣೆಯು ಬಂಧುತ್ವ ಮತ್ತು ಭಾವೈಕೈತೆಯನ್ನು ಬೆಸೆಯುತ್ತದೆ.ಬದುಕಿನ ಜಂಜಾಟದಲ್ಲಿ ,ಹತ್ತು ಹಲವು ನೋವು,ವಿರಸದಲ್ಲಿ ಮುನಿಸಿಕೊಂಡವರು ಒಂದಾಗುವ ಚೆಂದಾಗುವ ಉಲ್ಲಾಸದ ಈ ದಿನ ಬದುಕಿಗೆ ಹೊಸ ಅರ್ಥ ಕೊಡುತ್ತದೆ.
ನಾವು ಕುಣಿಯೋಣ ಬನ್ನಿ
ಹ್ಯಾಂವ ಮುರಿಯೋಣ ಬನ್ನಿ
ಜೀವ ಒಂದಾಗಿ ಇರಬನ್ನಿ
ಇಂದು ಮುಡಿಯುವ ಬನ್ನಿ
ಮುಂದೆಮಗೆ ಹೊನ್ನಾಗಿ
ಕಂದಣದಾರುತಿ ಬೆಳಗುದಕ.
        ========


ಲೇಖಕರ ವಿಳಾಸ; ಡಾ.ಪ್ರಕಾಶ ಗ.ಖಾಡೆ ,ಮನೆ ನಂ.ಎಸ್.135,ಬಡಾವಣೆ ಸಂಖ್ಯೆ-63,ನವನಗರ.ಬಾಗಲಕೋಟ-587103.    ಮೊ. 9845500890


Wednesday 11 September 2013



ಜನಪದರ ಆಚರಣೆಯಲ್ಲಿ ಶಿವರಾತ್ರಿ


-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಶಿವಶಿವ ಅಂದರ ಸಿಡಿಲೆಲ್ಲ ಬಯಲಾಗಿ

ಕಲ್ಲ ಬಂದೆರಗಿ ಕಡಿಗಾಗಿ-ಎಲೆ ಮನವೆ

ಶಿವನೆಂಬ ಶಬುದ ಬಿಡಬ್ಯಾಡ

ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ ನಂಬುಗೆ ಮತ್ತು ಆಚರಣೆಗಳ ಮೇಲೆ ನಿಂತಿವೆ.ಆರಾಧನಾ ಸಂಸ್ಕøತಿಯ ಜನಪದರು ಋತುಮಾನಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸುತ್ತಾ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಸಾಕ್ಷಿಯಾಗಿದ್ದಾರೆ.ಜನಪದರ ಹಬ್ಬಗಳು ಸಹಬಾಳ್ವೆ,ಸಮಾನತೆ ಮತ್ತು ಸೌಹಾರ್ದತೆಗೆ ಮೊದಲಾಗಿವೆ.ಮನುಷ್ಯನ ಚಲನಶೀಲ ಮತ್ತು ಕ್ರಿಯಾಶೀಲ ದೇಹ ಮನಸ್ಸುಗಳ ಜೀವಂತಿಕೆಗೆ ಒಂದರ ಮೇಲೊಂದು ಬರುವ ಹಬ್ಬಗಳೇ ಆಧಾರವಾಗಿವೆ.ಜನಪದರ ಹಬ್ಬಗಳ ಆಚರಣೆಯಲ್ಲಿ ಶಿವರಾತ್ರಿಯೂ ಒಂದು.ಋತುಮಾಕ್ಕನುಗುಣವಾಗಿ ಹಬ್ಬಗಳು ರೂಪ ಪಡೆದುಕೊಂಡಿವೆ.ಚಳಿಗಾಲ ಮುಗಿದು ಸುಡು ಸುಡು ಬಿಸಿಲು ಆರಂಭವಾಗುವ ಹೊತ್ತು ,ಸುಗ್ಗಿ ಮುಗಿಸಿ ನಮ್ಮ ರೈತಾಪಿ ಜನರ ಬಿಡುವಾಗಿರುವ ಸಮಯ.ಕೈಯಲ್ಲಿ ಒಂದಿಷ್ಟು ಕಾಸು.ಇದೇ ಹೊತ್ತಿಗೆ ವಸಂತನ ಆಗಮನದ ವಾಸನೆ, ಬೇವಿನ ಹೂದಳಗಳಿಂದ ಹೊರಹೊಮ್ಮಿದ ಘಳಿಗೆ.ಎಲೆ ಉದುರಿ ಬರಡಾದ ಗಿಡ ಮರಗಳಲ್ಲಿ ಹೊಸ ಚಿಗುರಿನ ಉದಯ.ಮೊಗ್ಗೆ,ಹೂವು,ಮಿಡಿಗಳನ್ನು ಹೊತ್ತ ವನಸಂಕುಲ,ಕೋಗಿಲೆಯು ಹೊಸ ಚಿಗುರು ಮೆದ್ದು ಕಂಠ ಪರಿಶುದ್ದವಾಗಿ ಪಂಚÀಮ ಸರದಲ್ಲಿ ಹಾಡುವ ಸುಯೋಗ,ಹೊಸ ದುಪ್ಪಳತೊಟ್ಟ ಹಕ್ಕಿ ಪಕ್ಕಿಗ¼ ಚೆಲವು,ಸಕಲ ಸೃಷ್ಟಿಯೇ ಪ್ರಾಯ ತುಂಬಿ ಭೂರಮೆ ಹಸಿರು ತೊಡುವ ಹೊತ್ತಿಗೆ ಶಿವರಾತ್ರಿ ಹಬ್ಬ ಆಗಮಿಸುತ್ತದೆ.ಇದು ಶಿವಯೋಗದ ಪುಣ್ಯದಿನ. ಭರತಖಂಡದ ಎಲ್ಲ ಭಾಗಗಳಲ್ಲಿಯೂ ಆಚರಿಸಲ್ಪಡುವ ಹಬ್ಬ. ಹಬ್ಬದಂದು ದೇಶದ ತುಂಬೆಲ್ಲಾ ಶಿವನಿಗೆ ಅಭಿಷೇಕ ಮಹೋತ್ಸವಗಳು ನಡೆಯುವವು. ಶಿವನಿಗೆ ನಮ್ಮ ಜನಪದರು 'ಕೊಕ್ಕಾ ಬತ್ತಿ'ಗಳ ಸರಮಾಲೆಯನ್ನು, ಶಿವಪೂಜೆ ಮಾಡಿ ಬೆಳಗುವರು.

ಕೊಕ್ಕಾ ಬತ್ತಿ, ಕ್ವಾಡಾ ಬತ್ತಿ

ನಾಡಿಗೆಲ್ಲಾ ಒಂದೇ ಬತ್ತಿ

ಇದೇ ಆ ಜನರು ಬೆಳಗುವ ಶಿವದೀಪ.ಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ವಿಷ್ಣು,ಬ್ರಹ್ಮರು ಸೃಷ್ಠಿ ಸ್ಥಿತಿಯ ದೇವತೆಗಳಾದರೆ ಲಯದ ದೇವತೆ ಶಿವ. ಶಿವನ ಪ್ರಧಾನ ಲಕ್ಷಣವೆಂದರೆ ತಾಮಸಗುಣ. ಶಿವನಿಗೆ ಗಂಗಾ ಮತ್ತು ಪಾರ್ವತಿಯರೆಂಬ ಇಬ್ಬರು ಹೆಂಡತಿಯರು. ಶಿವ ತನ್ನ ಶಿರದಲ್ಲಿ ಗಂಗೆಯನ್ನು ಹೊಂದಿದ್ದಾನೆ.ಪಾರ್ವತಿಯ ತಪೋ ನಿಷ್ಠೆಗೆ ಮನಸೋತ ಶಿವನು ಅವಳನ್ನು ಮದುವೆಯಾದ ಬಳಿಕ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನೆಂಬುದೂ,ಭಗೀರಥನ ತಪಸ್ಸಿನ ಫಲದಿಂದ ಗಂಗೆ ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ವೇಗವನ್ನು ತಾಳಲು ಭೂಮಿ ಅಸಮರ್ಥಳೆಂಬುದನ್ನು ಗ್ರಹಿಸಿದ ಶಿವ ದೃಢವಾಗಿ ನಿಂತು ಆಕೆಯನ್ನು ತನ್ನ ಜಟಾಕಲಾಪದೊಳಗೆ ತಾಳಿಕೊಂಡನೆಂಬುದು ಪುರಾಣದಲ್ಲಿ ಪ್ರಸಿದ್ದವಾಗಿದೆ.

ಆರತಿ ಬೆಳಾಗೂವೆ ಅಖಂಡ ಗುರುವಿಗೆ

ಪಾರ್ವತಿದೇವಿ ರಮಣನಿಗೆ

ಮೂರು ಲೋಕಕೆ ಕಾರ್ತನನೀಸುವ

ಸಾಂಬ ಸದಾಶಿವ ಶಂಕರಗೆ

ಎಂದು ಪಾರ್ವತಿಯನ್ನು ಉಲ್ಲೇಖಿಸಿ ಹಾಡಿದರೆ,

ದೇಶ ದೇಶ ತಿರುಗಿ ನಮ್ಮ ಶಿವ

ಪಾತಾಳ ಗಂಗೆ ತಂದ

ಪಾತಾಳದ ಗಂಗೆ ಬಾಯಂದು ಕರುದಾರೆ

ಜ್ಯೋತಿ ಬೆಳಗುವೆನು ನಾನುಂದಾರತಿ ಬೆಳಗುವೆನು.

ಎಂದು ಗಂಗೆಯನ್ನು ಆರಾಧಿಸುತ್ತಾರೆ.

ಮೂರು ಹಬ್ಬ :

ಸವತಿ ಮತ್ಸರ ದೇವರನ್ನೂ ಬಿಟ್ಟಿಲ್ಲ. ಗಂಗೆ ಗೌರಿಯರ ಜಗಳ ಇದ್ದದ್ದೆ,ಗಂಗೆ ಕೈ ಬೀಸಿ ಮಳೆರಾಯನನ್ನು ಕರೆಯುತ್ತಾಳೆ.ಗಂಗೆ ಮೊಳಕಾಲುದ್ದ ನೀರಿನಲ್ಲಿ ನಿಂತರೆ,ಗೌರಿ ಕೊಚ್ಚಿ ಹೋಗುತ್ತಾಳೆ.ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ,ಗಂಗೆಯನ್ನು ಬೇಸ್ತರ ಮನೆಗೆ ಕಳಿಸುತ್ತಾ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ,ನಡು ಊರಲ್ಲಿ ನಿನ್ನ ಪೂಜಿಸುತ್ತಾರೆ.'ಎಂದರೆ ಗೌರಿಗೆ 'ಬ್ರಾಹ್ಮಣರ ಮನೆಯಲ್ಲಿ ಸೇರಿಕೊ, ವರ್ಷಕ್ಕೊಮ್ಮೆ ಗೌರಿ ಹಬ್ಬದಲ್ಲಿ ನೀನು ಬಾ ,ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ'ಎಂದು ಹೇಳಿಕಳಿಸುತ್ತಾನೆ.ನಿಮ್ಮೀಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ,ಆ ಹಬ್ಬದಲ್ಲಿ ನಾನು ಬರುತ್ತೀನಿ ಎಂದು ಶಿವ ಮೂವರಿಗೂಮೂರು ಹಬ್ಬ ನೇಮಿಸುತ್ತಾನೆ.ಈ ಹಬ್ಬಕ್ಕೆ ಧಾರ್ಮಿಕ ಮಹತ್ವವು ಇದೆ. ಬೆಳುವಲದಲ್ಲಿ ಬೇಸಗೆಯು ದಿನ ದಿನಕ್ಕೆ ಬೆಳೆಯ ಹತ್ತಲು ನಮ್ಮ ರೈತಾಪಿ ಜನ ಬಿಸಿಲಲ್ಲಿ ದುಡಿಯಲಾರದೆ ಶಿವ ಶಿವನೆಂದು ಊಟ ಮಾಡಿ ಮನೆಯಲ್ಲಿಯೇ ಉಳಿಯುವರು.

ದೇವರೆಂಬುವುದು ಒಂದು 'ದಿವ್ಯ ಜ್ಯೋತಿ' ಎಂಬ ತತ್ವವೂ ಅಡಗಿದೆ ಇದರಲ್ಲಿ. ಸುತ್ತೆಲ್ಲ ಶಿವಭಜನೆ ನಡೆದು ನಾಡೇ 'ಶಿವಲೋಕ'ವೆಂಬ ಭಾವನೆ ಬರುವುದು. ಶಿವಯೋಗದ ದಿವಸ ಶಿವಪೂಜೆ ಮಾಡಿ ಕೈಲಾಸವನ್ನು ಪಡೆದ ಶಿವಶರಣರ ಕಥೆಗಳನ್ನು ಕೇಳಿದ ನಮ್ಮ ಜನಪದರು ಶಿವಶರಣರನ್ನು ಕುರಿತು

ಹಾಡಿದ್ದಾರೆ.

ಬೇಡ ಬೇಟೆಗೆ ಹೋಗಿ, ಬೆಲ್ಲಪತ್ತರಿಕೊಯ್ದು

ಬೇಡಕನ್ನಯ್ಯ ಶಿವಪೂಜೆ| ಮಾಡಿದರ

ನಾಡೊಳಗ ನೋಡು ಶಿವರಾತ್ರಿ

ಶಿವಶರಣರ ಪ್ರಭಾವದಿಂದಲೇ ನಾಡಿನೊಳಗೆ ಬೈಗು ಬೆಳಗಾಗಿ ವರುಷ ವರುಷಕ್ಕೆ ಶಿವರಾತ್ರಿಯು ಜನಪದಕ್ಕೆ ಬರುವುದೆಂದು ಜನಪದರು ಹಂತಿಯಲ್ಲಿ ಮನತುಂಬಿ ಹಾಡಿದ್ದಾರೆ. ಬೇಡರ ಕನ್ನಯ್ಯನು ಪಡೆದ ಶಿವಯೋಗವನ್ನೂ, ಬಿಲ್ವಪತ್ರೆಯ ಮಹತ್ವವನ್ನು ಹಾಡಿನಲ್ಲಿ ತೋರಿಸಿದ್ದಾರೆ.

ಕುಂಬಾರ ಗುಂಡಯ್ಯ ತುಂಬಿ ತಿಗರಿಗೆ ಕೆಸರ

ಶಂಬು ಹರನೆಂದು ತಿರುಗಿಸಲು-ಶಿವ ಕುಣಿದ

ಹಂಬಲಿಸಿ ಜಂಗ ಕಟಿಗೊಂಡು

ಕಾಯಕ ನಿರತ ಶರಣರು ತಮ್ಮ ನಿತ್ಯ ಕಾಯಕದಲ್ಲಿ ಶಿವನನ್ನು ಆಹ್ವಾನಿಸಿಕೊಂಡಿದ್ದಾರೆ.ಶಿವನನ್ನು ಪರಿಪರಿಯಾಗಿ ತಮ್ಮ ರಚನೆಗಳಲ್ಲಿ ಶರಣರು ಹಾಡಿ ಹೊಗಳಿದ್ದಾರೆ.




ಶಿವನ ರೂಪ:

ಆರಾಧ್ಯ ದೈವ ಶಿವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.ಶಿವ ಕೆಂಪು ಬಣ್ಣವುಳ್ಳ ದಟ್ಟವಾದ ಜಡೆಗಳನ್ನು ಹೊಂದಿದ್ದಾನೆ. ಆದ್ದರಿಂದ ಇವನನ್ನು ಕಪರ್ದಿ ಎಂದು ಕರೆಯಲಾಗಿದೆ. ಶಿವನನ್ನು ಅಗ್ನಿಯೆಂದೂ ಕರೆಯಲಾಗಿದೆ. ಈತನಿಗೆ ಮೂರು ಕಣ್ಣುಗಳು, ಹಣೆಗಣ್ಣು ಬೆಂಕಿಯಿಂದ ಕೂಡಿದೆ, ಶಿವನನ್ನು ತ್ರಿನೇತ್ರ, ಪಾಲನೇತ್ರ, ಅಗ್ನಿಲೋಚನ ಎಂಬ ಮುಂತಾದ ಹೆಸರುಗಳಿಂದಲೂ ಕರೆಯಲಾಗಿದೆ.

ಅಳುವ ಕಂದನ ತುಟಿಯು ಹವಳದ ಕುಡಿಹಂಗ

ಕುಡಿಹುಬ್ಬು ಬೇವಿನೆಸಳಂಗ-ಕಣ್ಣೋಟ

ಶಿವನ ಕೈಯಲಗು ಹೊಳದಂಗ

ಎನ್ನುವಂತೆ ಶಿವ ಯಾವಾಗಲೂ ತನ್ನ ಕೈಯಲ್ಲಿ ಶೂಲವನ್ನು ಹಿಡಿದಿರುತ್ತಾನೆ. ಮತ್ತೊಂದು ಪಿನಾಕ ಎಂಬ ಆಯುಧವನ್ನು ಹಿಡಿದಿರುವುದರಿಂದ ಶಿವನಿಗೆ ಪಿನಾಕಪಾಣಿ ಎಂಬ ಹೆಸರು ಬಂದಿದೆ. ಶಿವ ಮತ್ತು ಶಿವನ ವಾಹನವಾದ ವೃಷಭ ಇಬ್ಬರೂ ಬಿಳಿಯ ಬಣ್ಣದವರಾಗಿದ್ದಾರೆ. ಶಿವನನ್ನು ಎರಡು, ನಾಲ್ಕು, ಎಂಟು ಮತ್ತು ಹತ್ತು ಕೈಗಳನ್ನುಳ್ಳವನು ಎಂದು ವರ್ಣಸಲಾಗಿದೆ. ಶಿವ ತನ್ನ ಪಿನಾಕದ ಜೊತೆಗೆ ಕಟ್ವಾಂಗ ಎಂಬ ಗದೆ, ಅಜಗವ ಎಂಬ ಧನಸ್ಸು, ಒಂದು ಜಿಂಕೆ, ಮಣಿ, ಬುರುಡೆ, ಢಮರುಗ ಮುಂತಾದ ಪವಿತ್ರವಾದ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಗಂಗಾ ಮತ್ತು ಚಂದ್ರರು ಆ ಶಿವನ ಶಿರದಲ್ಲಿ ನೆಲೆಸಿರುವುದರಿಂದ ಗಂಗಾಧರ ಮತ್ತು ಚಂದ್ರಚೂಡ ಎಂಬ ಹೆಸರುಗಳು ಬಂದಿವೆ. ಮನುಷ್ಯರ ತಲೆಬುರುಡೆಗಳ ಸರಮಾಲೆಯನ್ನು ತನ್ನ ಶಿರದ ಸುತ್ತಲು ಧರಿಸಿಕೊಂಡಿದ್ದಾನೆ. ಶಿವ ಹುಲಿಯ ಚರ್ಮವನ್ನು ಧರಿಸಿ, ಆನೆಯ ಚರ್ಮವನ್ನು ಹೊದ್ದುಕೊಂಡಿದ್ದಾನೆ. ಎಲ್ಲ ಅಂಗಾಂಗಗಳ ಮೇಲೂ ಆಭರಣದ ರೀತಿಯಲ್ಲಿ ಸರ್ಪಗಳು ಸುತ್ತಿಕೊಂಡಿವೆ. ಸರ್ಪಗಳನ್ನು ಕಿವಿಯಲ್ಲಿ ಧರಿಸಿದ್ದರಿಂದ ಶಿವನನ್ನು ನಾಗಕುಂಡಲ ಎಂದು ಕರೆಯಲಾಗಿದೆ.

ಭಾರತವಲ್ಲದೆ ವಿದೇಶಗಳಲ್ಲೂ ಶಿವನ ಆರಾಧನೆ ನಡೆಯುತ್ತಾ ಬಂದಿದೆ.ಮೂಲತಹ ಕೃಷಿಕರು, ಪಶುಸಂಗೋಪನೆಯಲ್ಲಿ ತೊಡಗಿರುವ ನಮ್ಮ ಬುಡಕಟ್ಟು ಜನಾಂಗದಲ್ಲಿ ಶಿವನನ್ನು ಪೂಜಿಸುವಲ್ಲಿ ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ಸಾತ್ವಿಕವಾದ ಪೂಜಾಕ್ರಮಗಳು ಇರುವಂತೆ ಸಾತ್ವಿಕವಲ್ಲದ ಪೂಜಾಕ್ರಮಗಳೂ ಇವೆ. 'ಪರಶುಪದಂ'(ಪಾಶುಪಥಂ) ಎಂಬ ಪೂಜಾಪ್ರಕಾರ ಬಹು ಪುರಾತನವಾದುದು. 'ಗೂಢಮಿಲ್ಲಂ' ಎಂಬ ಪ್ರದೇಶದಲ್ಲಿರುವ ಶಿವಲಿಂಗವು ಕ್ರಿ.ಪೂ. ಎರಡನೆಯ ಶತಮಾನದಷ್ಟು ಹಳೆಯದು.ಶಿವನ್ನು ಸಾಂಕೇತಿಸುವ ಅನೇಕ ಚಿನ್ಹೆಗಳಲ್ಲಿ ಶಿವಲಿಂಗವು ಬಹು ಮುಖ್ಯವಾದದ್ದು.ಅಪಘಾಣಿಸ್ತಾನz ಹಜರ ಮಂಗೋಲರಲ್ಲಿ ಗ್ರಾಮೀಣ ಬೇಸಾಯಗಾರರು ಮತ್ತು ಪಶುಸಂಗೋಪಕರು ಎಂಬ ಬುಡಕಟ್ಟುಗಳು ಶಿವನ ಆರಾಧಕರಾಗಿದ್ದಾರೆ.ದಕ್ಷಿಣ ರಾಜಸ್ತಾನದ ಬನೇಶ್ವರದಲ್ಲಿ ಬನೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯತ್ತದೆ.ಬನೇಶ್ವರ ಎಂದರೆ ಶಿವಲಿಂಗ,ಸ್ವಯಂ ಭೂಲಿಂಗ ಎಂಬ ಪ್ರತೀತಿಯಿದೆ.ಭಿಲ್ಲರ ವರ್ಣರಂಜಿತ ಪ್ರಮುಖ ಜಾತ್ರೆ ಇದು.

ಆಡಿನ ಹಿಕ್ಕಿ ತಂದು ತೀಡಿ ಲಿಂಗವ ಮಾಡಿ

ನೋಡಿದಿರೇನ ಶಿವನ ಮಹಿಮೆ-ಗೋಲಗೇರಿ ಲಿಂಗ

ಆಡಿನ ಹಿಕ್ಕ್ಯಾಗ ಒಲಿದಾನ

ಲಿಂಗಗಳಲ್ಲಿ ಎರಡು ವಿಧ. ಒಂದು, ಸ್ಥಾವರ ಲಿಂಗ; ಮತ್ತೊಂದು, ಚಲಿಸುವ ಲಿಂಗ. ಸ್ಥಾವರ ಲಿಂಗವು ಮಣ್ಣು, ಕಲ್ಲು, ಮರ, ಹರಳು ಮುಂತಾದವುಗಳಿಂದ ಮಾಡಿದಂಥವು. ನಾನಾ ರೀತಿಯ ಪೀಠಗಳಮೇಲೆ ಇರಿಸಿದ ತಾತ್ಕಾಲಿಕ ಲಿಂಗಗಳನ್ನು ಗಂಡು ಕಲ್ಲುಗಳಿಂದಲೂ, ಪೀಠಗಳನ್ನು ಹೆಣ್ಣು ಕಲ್ಲುಗಳಿಂದಲು ಮಾಡಲಾಗುತ್ತದೆ.ನಮ್ಮ ಜನಪದರು ಶಿವನನ್ನು ಕುರಿತು ಮನತುಂಬಿ ಹಾಡಿದ್ದಾರೆ.

ಶಿವ ಶಿವನಂದರ ಶಿವದಾರ ಕೊರಳಾಗ

ಶಿವದಾರ ನಮ್ಮ ಕೊರಳಾಗ-ಪಂಚಮುಖದ

ವಿಭೂತಿ ನಮ್ಮ ಹಣಿಮ್ಯಾಗ




ಕಲ್ಲಿಗಿ ಮುಕ್ಹಾಕಿ ಎಲ್ಲಾರ್ನ ನೆನದೀನಿ

ಸಲ್ಲ ಕೇಳಾಕ ಶಿವಬಂದ-ಮ್ಯಾಲಿರುವ

ಮಾದೇವ ಬಂದ ಮನನೋಡಿ.







ಹರಕೀಯ ಹೊತ್ತೇನಿ ಅರಿಕುಳ್ಳ ದೇವರಿಗೆ

ಹಾದಿ ಮ್ಯಾಲಿರುವ ಶಿವನಿಗೆ -ಪರಮಾನಂದ

ಮನಸೀನ ಹರಕಿ ಇಳದೇನ




ಆಕಾಶದಡವ್ಯಾಗ ಧೂಪದ ಹೊಗೆಯೆದ್ದು

ಆಯ್ತು ಮಲ್ಲಯ್ಯನ ಶಿವಪೂಜೆ-ಆಗಾಗ

ಆಕಾಸದ ಘಂಡಿ ಘಳಲೆಂದು.




ಮಂದೇನ ಕೊಟ್ಟೀತ ಮನವೇನು ದಣದೀತ

ಮುಂಜಾನದಾಗ ಗಿರಿಮಲ್ಲ -ಕೊಟ್ಟರ

ಮನಿ ತುಂಬಿ ನಮ್ಮ ಮನ ತುಂಬಿ.




ಕರುಣ ಬಂದರ ಕಾಯೋ ಮರಣ ಬಂದರೆ ಒಯ್ಯೋ

ಕರುಣಿ ಕಲ್ಯಾಣ ಬಸವಣ್ಣ-ಶಿವಲಿಂಗ

ಕಡೆತನಕಕಾಯೊ ಅಭಿಮಾನ.

-ಡಾ.ಪ್ರಕಾಶ ಗ.ಖಾಡೆ,

=============================================================

ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890

ಸಾಹಿತ್ಯದ ತಾಯಿಬೇರು ಜಾನಪದ


  ಸಾಹಿತ್ಯದ ತಾಯಿ ಬೇರು “ಜಾನಪದ”

                          * ಡಾ. ಪ್ರಕಾಶ ಗ. ಖಾಡೆ


ಜನಪದ ಸಾಹಿತ್ಯ ಜನ ಬದುಕಿದ, ಬದುಕುತ್ತಿರುವ ಎಲ್ಲ ಪ್ರದೇಶಗಳಲ್ಲೂ ಎಲ್ಲ ಕಾಲಕ್ಕೂ

ಉಳಿದುಕೊಂಡು ಬಂದಿದೆ. ಯಾವುದೇ ದೇಶದ ಮೊದಲ ಸಾಹಿತ್ಯ ಆ ದೇಶದ ಜನಪದ ಸಾಹಿತ್ಯವೇ ಆಗಿದೆ. ಈ ಕಾರಣವಾಗಿ ಅದರ ಒಡಲೊಳಗೇ ಉದಿಸಿ ಬಂದ ಶಿಷ್ಟ ಸಾಹಿತ್ಯದ ಬೇರುಗಳು ಜಾನಪದವೇ ಆಗಿರುವುದು ಸರ್ವವಿಧಿತ. ಕಾಲ ಕಾಲಕ್ಕೆ ಕಾವ್ಯದ ರೂಪ ಕಟ್ಟುವಿಕೆಯ ಶೈಲಿ ಬದಲಾಗುತ್ತ ಬಂದರೂ ಜಾನಪದರಿಂದಲೇ ಹೊಸತನ ಪಡೆದುಕೊಂಡು ನೆಲೆನಿಂತಿರುವುದು ಕಾಣುತ್ತೇವೆ. ಇವತ್ತು ತನ್ನ ಸತ್ವ ಸೊಗಡು ಕಳೆದುಕೊಂಡಿರುವ ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಕೇವಲ ಹಳೆಯದರ ಪಳೆಯುಳಿಕೆಯಾಗದಂತೆ ಜನಪದ ಸಾಹಿತ್ಯ ಇವತ್ತು ಆಧುನಿಕತೆಯ ಶಕ್ತಿ, ಸೌಂದರ್ಯ, ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದು ನಿಲ್ಲ ಬೇಕಾದ ಕಾಲ ಬಂದಿದೆ. ಹೀಗಾಗಿ ಜನಪದದಿಂದ ಶಿಷ್ಟ ಸಾಹಿತ್ಯ, ಶಿಷ್ಟ ಸಾಹಿತ್ಯದಿಂದ ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಕೊಡಕೊಳ್ಳುವ ಕಾರ್ಯ ನಡೆದೆ ಇದೆ. ಈ ಮೂಲಕ ಹೃದಯದಲ್ಲಿ ನಿಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ, ವೈಚಾರಿಕ ನೆಲೆಗಟ್ಟಿನಲ್ಲಿದ್ದ ಶಿಷ್ಟರು  ಹೃದಯದಲ್ಲಿ ನಿಂತು ಬದುಕುವ ಸಂದರ್ಭ ಸೃಷ್ಠಿಯಾಗಿದೆ. ‘ಆಧುನಿಕತೆಯಿಂದ ಜನಪದವೂ ಜೀವಂತವಾಗುವುದು. ಜನಪದ ಸಾಹಿತ್ಯದ ಸತ್ವ ಸೊಬಗುಗಳಿಂದ ಇಂದಿನ ಹೆಚ್ಚಿನ ಕವಿಗಳು ಶಿಷ್ಟ ಸಾಹಿತ್ಯ ರಚಿಸುತ್ತಿರುವ ಅವರ ಕಾವ್ಯ ಜೀವಂತವಾಗಿರಲು ಕಾರಣವಾಗಿದೆ. ಇಲ್ಲದಿದ್ದರೆ ಅವರ ರಚನೆಗಳೆಲ್ಲ ಕಾಗದದ ಹೂವುಗಳಾಗುವವು’ಎಂಬ ಚೆನ್ನಣ್ಣ ವಾಲೀಕಾರರ ಮಾತುಗಳು ಜಾನಪದವನ್ನು ಅರಗಿಸಿ ಕೊಂಡ ಶಿಷ್ಟತೆಯ ಪ್ರಸ್ತುತತೆಯನ್ನು ಕಂಡರಿಸುತ್ತದೆ.

                ಆದಾವ ನಮ ಜೋಳ


                ಉಳಿದಾವ ನಮ ಹಾಡ

   ಎನ್ನುವಂತೆ ಜನಪದಕ್ಕೆ ಅಂತ್ಯ ಎಂಬುದು ಇಲ್ಲ. ಅದು ಬೇರೆ ಬೇರೆ ರೂಪದಿಂದ ಹೊರ ಹೊಮ್ಮುತ್ತಲೇ ಇರುತ್ತದೆ. ವೈಜ್ಞಾನಿಕ ನಾಗರಿಕತೆಯ ಹಾಗೂ ಅರ್ವಾಚೀನ ಕಲೆಗಳ ತಾಯಿ ಬೇರುಗಳನ್ನು ಪ್ರಾಚೀನ ಜನಪದದಲ್ಲಿ ಗುರುತಿಸುತ್ತೇವೆ.


     ಖ್ಯಾತ ವಿದ್ವಾಂಸರಾದ ದೇ.ಜವರೇಗೌಡರು ಹೇಳುವಂತೆ:

“ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಯಾವಾಗಲೂ ಎಂದಿನಿಂದಲೂ ಜನಪದ ಸಾಹಿತ್ಯಕ್ಕೆ ಋಣಿಯಾಗಿದೆ. ಹೋಮರ್, ವಾಲ್ಮೀಕಿ, ವ್ಯಾಸಾದಿ ಕವಿಗಳೆಲ್ಲರೂ ಅಜ್ಞಾತ ಜನಪದ ಕವಿಗಳಿಗೆ ನಾನಾ ರೀತಿಯಲ್ಲಿ ಋಣಿಗಳಾಗಿದ್ದಾರೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ.” ಶಿಷ್ಟ ಸಾಹಿತ್ಯ ಮಡುಗೊಂಡು ಪಾಚಿ ಬೆಳೆದು ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯ  ವಾಹಿನಿ ಅದರ ಮೇಲೆ ಹರಿದು ಪಾಚಿ ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. ವಡ್ರ್ಸವರ್ತ, ಬರನ್ಸ,  ಸ್ಕಾಟ್, ಪುಸ್ಕಿನ್, ಕುಮಾರವ್ಯಾಸ, ವಚನಕಾರರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಅದರಂತೆ ಪಂಪ ತನ್ನ ಕಾವ್ಯದ ಉನ್ನತಿಗೆ ಪ್ರೌಢದ ಜತೆಗೆ ದೇಸೀಯನ್ನು ಸಮೀಕರಿಸಿದ್ದಾನೆ.ಶಿವಶರಣರು ತಮ್ಮ ಹಿಂದಿನ ಚಂಪೂ ಪರಂಪರೆಯನ್ನು ಮುರಿದು ವಚನ ಪರಂಪರೆಯನ್ನು ಪ್ರತಿಷ್ಠಾಪಿಸಲು ಜನಪದ ಸಾಹಿತ್ಯವನ್ನೇ ಆಶ್ರಯಿಸಿದರು. ಜನಪದ ಭಾಷೆ, ಛಂದಸ್ಸು ಶಿಷ್ಟ ಸಾಹಿತ್ಯದ ಹುಟ್ಟಿಗೆ ಮೂಲವಾಗಿದೆ. ಗರತಿಯ  ತ್ರಿಪದಿಯೇ ಶಿಷ್ಟರ ಚೌಪದಿ, ಷಟ್ಪದಿ ಹುಟ್ಟಿಗೆ ಬುನಾದಿಯಾಗಿದೆ. ಜನಪದ ಛಂದಸ್ಸು, ಜೈನರ ಚಂಪೂ, ವೀರಶೈವರ ವಚನ ರಗಳೆ, ಬ್ರಾಹ್ಮಣರ ಷಟ್ಪದಿ, ದಾಸರ ಹಾಡು, ಸರ್ವಜ್ಞನ ತ್ರಿಪದಿಗಳಿಗೆ ಆಶ್ರಯವಾಗಿದೆ.

               ಜನಪದ ಗೀತೆ ಎಲ್ಲವನ್ನು ಒಳಗೊಂಡ ಬಯಲು ಆಲಯ. ಅದು ಉದ್ದೇಶಪೂರ್ವಕವಾಗಿ ಕಲಾತ್ಮಕವಾದುದಲ್ಲ. ಅದರ ಜೀವಂತಿಕೆಯೇ ಅದರ ಕಲಾತ್ಮಕತೆ, ಅನುಭವ ಮತ್ತು ಶಾಸ್ತ್ರರೂಪದ ಇಲ್ಲಿನ ವಸ್ತು ಜನರ ಸಮೂಹ ಕೇಂದ್ರಿತ ಆಸಕ್ತಿ, ಮಾತೃ ನಂಬಿಕೆಗಳ ಮೇಲೆ ನಿಂತಿರುವಂಥದಾಗಿದೆ. ‘ವ್ಯಕ್ತಿ ವ್ಯವಸ್ಥೆಯ ಸಂಬಂಧ, ಸಾಮಾಜಿಕ ರಚನೆ, ಸಂಘರ್ಷ ರೂಪದ ಜೀವನ, ಮಾನವ ಜೀವನದ ಸ್ಥಿತಿಗತಿಗಳ ನೀತಿ, ನಿಯಮ ನಿಷ್ಠೆ, ಸಾರ್ಥಕತೆಗಳು ಆಚಾರ, ವಿಚಾರ, ಸಂಪ್ರದಾಯ ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ’ ಹೀಗೆ ಒಟ್ಟು ಬದುಕಿನ ಪ್ರತಿ ಮಗ್ಗಲುಗಳನ್ನು ಆವರಿಸಿಕೊಂಡಿರುವ ಜನಪದವು ಶಿಷ್ಟ ಪ್ರಕಾರಕ್ಕೆ ತನ್ನ ಕೊಡುಗೆ ನೀಡುತ್ತ ಉಳಿದುಕೊಂಡು ಬಂದಿರುವುದು ಅದರ ಚಲನ ಶೀಲತೆಗೆ ಸಾಕ್ಷಿಯಾಗಿದೆ.     

        ಚಂಪೂ, ವಚನÀ, ಷಟ್ಪದಿ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯ ಪರಂಪರೆಯ ಉದ್ದಕ್ಕೂ ಜಾನಪದದ ಇತಿಹಾಸ ಗುರುತಿಸಬಹುದು.ತ್ರಿಪದಿಗಳು, ಕಥನಕವನಗಳು, ಗೊಂದಲಿಗರ ಹಾಡುಗಳು, ಲಾವಣಿಗಳು, ಕೋಲಾಟದ , ಬಯಲಾಟದ ಪದಗಳು, ಡೊಳ್ಳಿನ ಪದಗಳು.. ಹೀಗೆ ಅನೇಕ ರೀತಿಯ ಪದ್ಯ ರೂಪಗಳು ಬಹುಕಾಲದಿಂದಲೂ ನಡೆದು ಬಂದಿರುವುದು ಇತಿಹಾಸದ ಮುಂದುವರಿಕೆಯಾಗಿದೆ.

ಇಂದಿಗೂ ಜನಪದ ಕಾವ್ಯ ಪರಂಪರೆ ಜೀವಂತವಾಗಿದೆ. ಗೊಂದಲಿಗರು, ಹೆಳವರು ತಾವು ಕಲಿತ ಹಾಡುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾವು ಹೋದೆಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಹಿಮ್ಮೇಳದಲ್ಲಿ ಉಪಯೋಗಿಸಿಕೊಳ್ಳುತ್ತಾರೆ,

                      ಮುಂದೆ ಅವರೂ ಸ್ವತಂತ್ರವಾಗಿ ಹಾಡಬಲ್ಲವರಾಗುತ್ತಾರೆ. ಶಕ್ತರಾದವರು ಹೊಸ ಹಾಡುಗಳನ್ನು ಕಟ್ಟಿಕೊಂಡು ಜೋಡಿಸಿಕೊಳ್ಳುತ್ತಾರೆ. ಕಂಸಾಳೆ ಸಿರಿಯ ದೇವರ ಗುಡ್ಡರು ಗುರುವಿನ ಮೂಲಕ ಹಾಡುಗಳನ್ನು ಕಷ್ಟಪಟ್ಟು ಕಲಿಯುತ್ತಾರೆ ಇದು ಪರಂಪರೆಯಿಂದ ಸಾಗಿ ಬಂದ ಇತಿಹಾಸ ಗುರುತಿಸುತ್ತದೆ.

        ಜಾನಪದಕ್ಕೆ ಪ್ರಭು ಸಂಸ್ಕ್ರತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಅನ್ವಯಿಸಿಕೊಳ್ಳುವ ಬಗ್ಗೆ ಹಿ.ಶಿ. ರಾಮಚಂದ್ರೇಗೌಡರ ವಿರೋಧವಿದೆ. ಶ್ರೇಷ್ಠತೆಯ ಮಾನದಂಡಗಳು ವರ್ಗಸಮಾಜ ಮತ್ತು ಬಹುಸಮಾಜದ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಬೇರೆ ಬೇರೆಯಾಗುತ್ತವೆ. ಕಾವ್ಯ ಧ್ವನಿ-ಸಾಂಸ್ಸøತಿಕ ಧ್ವನಿ ಅದು ಅಲೌಕಿಕ ಧ್ವನಿ ಅಲ್ಲ. ಇದರ ಪರಿಣಾಮವಾಗಿ ಸಂಸ್ಕøತಿ ಹುಟ್ಟಿಕೊಳ್ಳುತ್ತದೆ. ಸಾಹಿತ್ಯ ಸ್ಠೃಷ್ಟಿಯಾಗುತ್ತದೆ. ಇಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ಸಂದರ್ಭಗಳನ್ನು ಗಮನಿಸಬೇಕು.                                              

     ‘ಶಿಷ್ಟ ಜನಪದವಾದರೆ ಅದಕ್ಕೆ ಚಿರಂತತೆ ಬರುವುದು. ಜನಪದ ಶಿಷ್ಟವಾದರೆ ಅದಕ್ಕೆ ಸಾವುಂಟಾಗುವುದು’ ಎಂಬ ಚೆನ್ನಣ್ಣ ವಾಲೀಕಾರರ ಮಾತನ್ನು ಇಲ್ಲಿ ಗಮನಿಸಬೇಕು. ಶಿಷ್ಟರ ಸಾಹಿತ್ಯ ಶಿಷ್ಟರ ಮಧ್ಯೆಯೇ ಬೆಳೆದು ಅಲ್ಲಿಯೇ ಪರ್ಯಾವಸಾನಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕವಿ, ಗಮಕಿ, ಕೆಲವೊಮ್ಮೆ ಸಹೃದಯ ಇರುತ್ತಾರೆ. ಶಿಷ್ಟ ಸಾಹಿತ್ಯದ ಪ್ರದರ್ಶನಕ್ಕೆ ಸಂದರ್ಭ ಒದಗಿಸಿಕೊಂಡು ಅದಕ್ಕಾಗಿಯೇ ವೇದಿಕೆ ನಿರ್ಮಿಸಬೇಕು. ಶಿಷ್ಟ ಸಾಹಿತಿ ತಾನೇ ರಚಿಸಿದ ಕವನವನ್ನು ಬಾಯಿಪಾಠ ಮಾಡಿ ಹಾಡಬೇಕಾಗುತ್ತದೆ. ಆದರೆ ಜನಪದದಲ್ಲಿ ಹೀಗಿಲ್ಲ. ಜನಪದ ಗೀತೆಗಳನ್ನು ಹಾಡುವವರು ಅವರದೇ ಆದ ರಾಗ, ಭಾವ, ತಾಳ, ಮೇಳಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಹಾಗೆ ಹಾಡುವಾಗ ಭಾವಕ್ಕನುಗುಣವಾಗಿ ಸಂದರ್ಭ ತಕ್ಕಂತೆ ಹಿಗ್ಗಿಸುವ ಕುಗ್ಗಿಸುವ ಸಾಮಥ್ರ್ಯವೂ ಅವರದಾಗಿರುತ್ತದೆ. ಆದ್ದರಿಂದ ಸಹೃದಯವೇ ಜನಪದ, ಜಾನಪದವೇ ಸಹೃದಯ. ಜನಪದ ಅದಕ್ಕಾಗಿಯೇ ನಿರ್ಮಿಸಿ ಮತ್ತೆ ಕಿತ್ತೆಸುವ ಅಗತ್ಯವಿಲ್ಲ. ಅದು ಜನಸಾಮಾನ್ಯರ ನಿತ್ಯ ಜೀವನದೊಂದಿಗೆ ಬೆರೆತು ಅವರೊಡನೆಯೇ ಜೀವಿಸುತ್ತದೆ. ಜೊತೆಗೆ ಜನಪದ ಕವಿ ಅನುಭಾವಿಯಾಗಿದ್ದರಿಂದ ಅದನ್ನು ಹೇಳುವ ಚತುರನಾಗಿರುತ್ತಾನೆ. ಹೀಗೆ ಶಿಷ್ಟ ಮತ್ತು ಜನಪದ ಸಾಹಿತ್ಯ ತನ್ನ ನೆಲೆಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತವೆ.

        ‘ಜನಪದ ಕಾವ್ಯದಲ್ಲಿ ಚಿಕ್ಕಪುಟ್ಟ ಪದಗಳೇ ಹೆಚ್ಚು, ಕಾರಣ ದೀರ್ಘ ಕವಿತೆಗಳನ್ನು ಕಟ್ಟುತ್ತ ನೆನಪಿಡುವುದು ಕಠಿಣ’ ಎಂದು ಹೇಳುವ ಮಾತಿದೆ. ಆದರೆ ಇದು ತಪ್ಪು. ಜನಪದ ಕಾವ್ಯಗಳು ಕೇವಲ ತ್ರಿಪದಿ ರೂಪದ ಪುಟ್ಟ ಪುಟ್ಟ ಕೃತಿಗಳಾಗದೆ ಅನೇಕ ಮಹಾಕಾವ್ಯಗಳು ಜಾನಪದದ ವಿಸ್ತಾರವನ್ನು ಸಾರಿವೆ.’ ಈ ಕಾವ್ಯಗಳ ಹಿರಿಮೆಯನ್ನು ದೇ. ಜವರೇಗೌಡರು ಹೀಗೆ ದಾಖಲಿಸುತ್ತಾರೆ:

       ‘ಮಲೆಯ ಮಾದೇಶ್ವರ ಕಾವ್ಯ, ದೇವರ ಗುಡ್ಡದ ಮಹಾಕಾವ್ಯ ಕಂಸಾಳೆ ವಾದ್ಯದೊಡನೆ ಏಳೆಂಟು ರಾತ್ರಿ ಅವಿಚ್ಛಿನ್ನವಾಗಿ ಅದರ ಗಾಯನ ಸಾಗುತ್ತದೆ. ವೈವಿಧ್ಯಮಯವಾದ ಛಂದೋಬಂಧಗಳಲ್ಲಿ ರಚಿತವಾದ ಲಲಿತಕಾವ್ಯವಿದು... 

                     

ನೀಲಗಾರರಿಗೆ  ಮೀಸಲಾದ ಮಂಟೇಸ್ವಾಮಿ ಕಾವ್ಯ ಒಂದೇ ಒಂದು ಛಂದದಲ್ಲಿ ತಂಬೂರಿಯೊಡನೆ ನಿರರ್ಗಳವಾಗಿ ಹರಿಯುತ್ತದೆ. ಮೊದಲನೆಯದರಲ್ಲಿ ಮೂವತ್ತೆರಡು ಸಾವಿರ ಸಾಲುಗಳೂ, ಎರಡನೆಯದರಲ್ಲಿ ಇಪ್ಪತ್ನಾಲ್ಕು ಸಾವಿರ ಸಾಲುಗಳಿದ್ದು ಕಲೇವಾಲಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೇ ಹೇಳಬೇಕು. ನೀಲಗಾರರ ಮಂಟೇಸ್ವಾಮಿ ಕಾವ್ಯವನ್ನು ‘ಧರೆಗೆ ದೊಡ್ಡವರ ವಚನ’ವೆಂದು ಕರೆಯುತ್ತಾರೆ. ಸುಮಾರು ಹದಿನೈದು ಸಾವಿರ ಸಾಲುಗಳು ವಿಸ್ತಾರವುಳ್ಳ, ಹತ್ತು ವಿಭಾಗಗಳಲ್ಲಿ ದೊರೆಯುವ ‘ಜನಪದ ಬಸವ ಪುರಾಣ’ವೊಂದು ಸೊಗಸಾದ ಮಹಾಕಾವ್ಯ. ಚೌಡಿಕೆ ಸಂಪ್ರದಾಯದ ಎಲ್ಲಮ್ಮನ ಕಾವ್ಯ ಮತ್ತು ಕಾಡುಗೊಲ್ಲರ ಸಂಪ್ರದಾಯದ ಜುಂಜಪ್ಪನ ಕಾವ್ಯಗಳು ಮಹಾ ಕಾವ್ಯದ ವಿಸ್ತಾರ ಹೊಂದಿರದಿದ್ದರೂ ಗುಣಲಕ್ಷಣಗಳಿಂದ  ಸಮೃದ್ಧವಾದ ಜನಪ್ರಿಯ ಕೃತಿಗಳು’ ಹೀಗೆ ಕೆರೆಯ ಹೊನ್ನಮ್ಮ, ಕಾಳಿಂಗರಾಯ, ಚೆನ್ನಿಗ ಚೆಲುವಯ್ಯ ಮುಂತಾದ ಮಹಾಕಾವ್ಯಗಳು ಕನ್ನಡ ಜನಪದ ಕಾವ್ಯದ ಗುಣ ಗಾತ್ರಗಳೆರಡರಿಂದಲೂ  ಸಮೃದ್ಧವಾಗಿ, ಬೇರೆ ಕಡೆ ಸಿಗದ ಮೌಲಿಕ ಸಾಹಿತ್ಯ ‘ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗ ಬಲ್ಲವುಗಳಾಗಿವೆ’ ಎಂದಿದ್ದಾರೆ.

        ಶಿಷ್ಟ ಸಾಹಿತ್ಯÀ ಕೇವಲ ಮನಸ್ಸಿನ ಸಾಹಿತ್ಯ, ಜನಪದ ಸಾಹಿತ್ಯ ದೇಹ ಮತ್ತು ಮನಸ್ಸಿನ ಸಾಹಿತ್ಯ ಇದು ಕ್ರಿಯೆಯೊಂದಿಗೆ ಹುಟ್ಟುತ್ತದೆ. ಬೀಸುವಾಗ, ಕುಟ್ಟುವಾಗ, ಅಲೆದಾಡುವಾಗ, ದೋಣಿ ನಡೆಸುವಾಗ ಹೀಗೆ ಒಟ್ಟು ಕ್ರಿಯೆಯಲ್ಲಿಯೇ ರೂಪುಗೊಂಡು ಬಳಕೆಯಾಗುತ್ತದೆ. ಶಿಷ್ಟ ಸಾಹಿತ್ಯವು ಏಕಸೃಷ್ಟಿಗೆ, ಏಕ ಶ್ರೇಷ್ಠತೆಗೆ ಸಂಬಂಧಪಟ್ಟಿದಾದರೆ, ಜನಪದ ಸಾಹಿತ್ಯ ಪುನರ್ ಸೃಷ್ಠಿಯಾಗುವಂಥದು. ಒಂದು ವ್ಯಕ್ತಿ ಸೃಷ್ಠಿ, ಮತ್ತೊಂದು ಸಮೂಹ ಸೃಷ್ಠಿ. ಜನಪದ ಸಾಹಿತ್ಯ ಸಮಾಜನಿಷ್ಠವಾಗಿ, ವಿಷಯನಿಷ್ಠವಾಗಿ ಮಾತನಾಡುತ್ತದೆ. ಅದು ವಸ್ತುನಿಷ್ಠವಾಗಿ ಮಾತನಾಡುವುದಿಲ್ಲ. ಹೀಗೆ ಅದರ ಪ್ರತ್ಯೇಕ ಅಸ್ತಿತ್ವಗಳನ್ನು ಗುರುತಿಸಿದರೂ ಅವು ಒಂದರೊಳಗೊಂದು  ಬೆಸೆದುಕೊಂಡು ಸೃಷ್ಟಿಯಾಗುತ್ತಿರುವುದು ಜನಪದದ ಪುನರ್ ಸೃಷ್ಟಿಯ ದ್ಯೋತಕವಾಗಿದೆ.

          ‘ಜಾನಪದಕ್ಕೆ ಸಾವಿಲ್ಲ; ಅದು ಭಿನ್ನ ರೂಪದಲ್ಲಿ ಮುಂದುವರೆಯುತ್ತದೆ’ ಎಂಬ ಮಾತಿನಂತೆ ‘ಜಾನಪದ ಪಳಿಯುಳಿಕೆ’ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳೆಯುಳಿಕೆ ಎಂದಲ್ಲ, ಪಳೆಯುಳಿಕೆಯ ಪುನಃಸೃಷ್ಟಿ ಅಂದರೆ ಪಳೆಯುಳಿಕೆಯನ್ನು ಪುನಃಸೃಷ್ಟಿಸುತ್ತಾ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ ಎಂಬ ತಿದ್ದುಪಡಿಯೊಂದಿಗೆ ತಿಳಿದುಕೊಳ್ಳಬೇಕು ಎಂಬುದು ಅದರ ನಿರಂತರ ಪುನಃಸೃಷ್ಟಿ ಕ್ರಿಯೆಯನ್ನು ಕಾಣುತ್ತೇವೆ. ಪ್ರಸ್ತುತ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಈ ಸಂದರ್ಭದಲ್ಲಿ ಈ ಚಿಂತನೆಗಳು ಪೂರಕವಾಗಲಿ.                ###                                                                                                                                                                    ಡಾ.ಪ್ರಕಾಶ ಗ.ಖಾಡೆ, ,ಮನೆ ನಂ135, ಸೆಕ್ಟರ್ ನಂ63, ನವನಗರ, ಬಾಗಲಕೋಟ -587103. emಚಿiಟ : ಜಡಿಠಿಡಿಚಿಞಚಿshಞhಚಿಜe@gmಚಿiಟ.ಛಿom,



 

ಬಾಗಲಕೋಟ ಜಿಲ್ಲೆಯ ಜಾನಪದ

 ವಿಶೇಷ ಲೇಖನ

         ಬಾಗಲಕೋಟ ಜಿಲ್ಲೆಯ ಜಾನಪದ ಪರಂಪರೆ

                           - ಡಾ.ಪ್ರಕಾಶ ಗ.ಖಾಡೆ

 ಕನ್ನಡ ಜಾನಪದ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯು ಹಲವು ಪ್ರಥಮಗಳಿಗೆ ಕಾರಣವಾಗಿದೆ.ಕನ್ನಡ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಈ ಜಿಲ್ಲೆಯವರು ಎಂಬುದು ದಾಖಲಾರ್ಹವಾದುದು.ಕ್ರಿ.ಶ. 700 ರ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಸಿಕ್ಕುವ ತ್ರಿಪದಿ ಕನ್ನಡ ಜಾನಪದದ ತಾಯಿ ಬೇರಾದರೆ,ಇದೇ ಬಾದಾಮಿಯಿಂದಲೇ ಕ್ರಿ.ಶ. 1874 ರ ಸುಮಾರಿಗೆ ಕನ್ನಡದಲ್ಲಿ ಮೊದಲ ಜನಪದ ಸಾಹಿತ್ಯ ಸಂಗ್ರಹಣಾ ಕಾರ್ಯ ಆರಂಭವಾಯಿತು.ಜೊತೆಗೆ ಬಾದಾಮಿ ತಾಲೂಕಿನ ಕೆರೂರದ ಡಾ.ಬಿ.ಎಸ್.ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದಲ್ಲಿ ಮೊದಲ ಪಿಎಚ್.ಡಿ. ಸಂಪಾದಿಸಿದರು.ಹೀಗೆ ಜಾನಪದದ ರೂಪ,ಸಂಗ್ರಹ ,ಸಂಪಾದನೆ,ಸಂಶೋಧನೆ ಕಾರ್ಯಗಳೆಲ್ಲ ಬಾಗಲಕೋಟ ಜಿಲ್ಲೆಯಿಂದಲೇ ಮೊದಲಾದದ್ದು ಒಂದು ಐತಿಹಾಸಿಕ ಸತ್ಯವಾÀಗಿದೆ.
                                                                  ಜಿ.ಬಿ.ಖಾಡೆ
ಹಲಸಂಗಿ ಗೆಳೆಯರು ಮಾಡಿದ ಜನಪದ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ಪ್ರೇರಿತರಾಗಿ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗಣಪತಿ ಬಾಪು ಖಾಡೆಯವರು ಕ್ರಿ.ಶ. 1965 ರಲ್ಲಿ ಜಮಖಂಡಿ ಭಾಗದ ಹಳ್ಳಿಗಳಲ್ಲಿ ಹಾಡುವ ಬೀಸುಕಲ್ಲಿನ ಪದಗಳು, ಕೋಲಾಟದ ಪದಗಳು,ಡೊಳ್ಳಿನ ಹಾಗೂ ಹಂತಿ ಪದಗಳನ್ನು ಸಂಗ್ರಹಿಸಿದರು.ಹೀಗೆ ಸಂಗ್ರಹಿಸಿದ ಜಿ.ಬಿ.ಖಾಡೆಯವರ ಜನಪದ ಹಾಡುಗಳ ಸಂಕಲನ 'ಕಾಡು ಹೂಗಳು' ಹೆಸರಿನಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗದಿಂದ 1973 ರಲ್ಲಿ ಪ್ರಕಟವಾಯಿತು.ಈ ಕೃತಿಯಿಂದ ಜಮಖಂಡಿ ಭಾಗದ ಕೃಷ್ಣಾ ತೀರದ ಜನಪದ ಸಾಹಿತ್ಯ ಮೊದಲ ಬಾರಿಗೆ ಸಂಶೋಧಕರಿಗೆ ಲಭ್ಯವಾಗುವಂತಾಯಿತು.

ಸಧ್ಯ ಮುಧೋಳದಲ್ಲಿ ನೆಲೆಸಿರುವ 72 ವಯಸ್ಸಿನ ಹಿರಿಯ ಜನಪದ ತಜ್ಞರಾದ ಜಿ.ಬಿ.ಖಾಡೆಯವರು ಸಂಪಾದಿಸಿರುವ 23 ಜನಪದ ಕಥೆಗಳ 'ಬೆಳವಲ ಬೆಳಕು 'ಕೃತಿ ಮತ್ತು ಅಪಾರ ಪ್ರಮಾಣದ ಕರಬಲಾ ಪದಗಳ'ಹಳ್ಳಿ ಹಬ್ಬಿಸಿದ ಹೂಬಳ್ಳಿ' ಕೃತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 1981 ರಲ್ಲಿ ಪ್ರಕಟಿಸಿದೆ.ಅಲ್ಲದೇ 'ಬದುಕೇ ಜಾನಪದ' ಹೆಸರಿನಲ್ಲಿ ಅವರ ಜನಪದ ಆತ್ಮ ಕಥನವು 2010 ರಲ್ಲಿ ಪ್ರಕಟವಾಗಿದೆ.ಜಮಖಂಡಿ ತಾಲೂಕು ತುಂಗಳದವರಾದ ಡಾ.ಸಂಗಮೇಶ ಬಿರಾದಾರ ಅವರು ಜನಪದ ಸಾಹಿತ್ಯ ಸಂಗ್ರಹದೊಂದಿಗೆ ಸಂಶೋಧನೆಗೆ ಒತ್ತು ಕೊಟ್ಟರು.ಚಾಪ ಹಾಕತೀವ ಡಪ್ಪಿನ ಮ್ಯಾಲ,ತೇರದಾಳದ ಲಾವಣಿಕಾರರು,ಪಾರಿಜಾತ ಪುಷ್ಪಗಳು,ಜಾನಪದ ಅಲೆಗಳು ಡಾ.ಬಿರಾದಾರ ಅವರ ಜನಪದ ಕೃತಿಗಳು.ಡಾ.ಶ್ರೀರಾಮ ಇಟ್ಟಣ್ಣವರ ಅವರು ಬಯಲಾಟಗಳ ರಾಜ ಎಂದೇ ಖ್ಯಾತಿ ಪಡೆದಿರುವ 'ಶ್ರೀ ಕೃಷ್ಣ ಪಾರಿಜಾತ' ಕುರಿತು ಪಿಎಚ್.ಡಿ. ಅಧ್ಯಯನ ಕೈಕೊಂಡು ಮೊದಲಬಾರಿಗೆ ಅದರ ಚರಿತ್ರೆ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.ಲಾವಣಿ,ಕೌಜಲಗಿ ನಿಂಗಮ್ಮ ಇವರ ಇತರ ಜಾನಪದ ಕೃತಿಗಳು.ಜಿಲ್ಲೆಯ ಡಾ.ಪಿ.ಕೆ.ಖಂಡೋಬಾ ಅವರು ಲಂಬಾಣಿ ಜೀವನ ಸಂಸ್ಕøತಿ ಕುರಿತು ಆಳವಾದ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ.ಡಾ.ಮೃತ್ಯುಂಜಯ ಹೊರಕೇರಿ ಅವರ'ಜನಪದ ಬೈಗುಳಗಳು' ಒಂದು ವಿಶಿಷ್ಟ ಜನಪದ ಕೃತಿ.ಎಸ್.ಜಿ.ಕೋಟಿಯವರ'ತೀರದ ದನಿ',ಡಾ.ಸರೋಜಿನಿ ಪಾವಟೆಯವರ 'ಚಲವಾದಿ ಗೌರಮ್ಮನ ಕಥೆಗಳು',ಶಿವಯೋಗಿ ಬಿದರಿಯವರ 'ಪಲ್ಲಕ್ಕಿ ಮ್ಯಾಲ ಮಗ ಬರಲಿ',ಜಿಲ್ಲೆಯ ಪ್ರಮುಖ ಜನಪದ ಕೃತಿಗಳು.
ಹೊಸತೆಲೆಮಾರಿನ ಜನಪದ ವಿದ್ವಾಂಸರಲ್ಲಿ ಡಾ.ಪ್ರಕಾಶ ಖಾಡೆ,ಡಾ.ವಿರೇಶ ಬಡಿಗೇರ ಹಾಗೂ ಡಾ.ಅಶೋಕ ನರೋಡೆ ಮುಖ್ಯರು
.ಬಾಗಲಕೋಟೆಯಲ್ಲಿ ನೆಲೆಸಿರುವ ಡಾ.ಪ್ರಕಾಶ ಖಾಡೆಯವರು ತಂದೆಯ ಜಾನಪದ ಕಾಯಕವನ್ನು ಮುಂದುವರಿಸಿದ್ದಾರೆ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ 'ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ',ಕೃಷ್ಣಾತೀರದ ಜನಪದ ಒಗಟುಗಳು,ಜನಪದ ಕೋಗಿಲೆ ಗೌರಮ್ಮ ಚಲವಾದಿ,

ನೆಲಮೂಲ ಸಂಸ್ಕøತಿ.ಜಾನಪದ ಹೆಬ್ಬಾಗಿಲು. ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು,ಜಾನಪದ ಲೋಕ ಇವರ ಪ್ರಕಟಿತ ಜನಪದ ಕೃತಿಗಳು.ಹಂಪಿ ವಿ.ವಿ.ಪ್ರಾಧ್ಯಾಪಕರಾದ ಡಾ.ವಿರೇಶ ಬಡಿಗೇರ ಬಾಗಲಕೋಟ ತಾಲೂಕಿನ ಬೆಣ್ಣುರ ಗ್ರಾಮದವರು.ಉತ್ತರ ಕರ್ನಾಟಕದ ಜನಪದ ಗೀತ ಮೇಳಗಲು,ರಾಶಿ ಬುತ್ತಿ,ಅಡಿಗಲ್ಲು,ಹಳೆಲಾವಣಿಗಳು,ಗುಳ್ಳವ್ವ ಆಚರಣೆ,ಹಾಗೂ ಸಂಸ್ಕøತಿ ಸಂರಚನೆ ಇವರ ಜನಪದ ಕೃತಿಗಳು.ಡಾ.ಅಶೋಕ ನರೋಡೆಯವರ 'ಗೋಸಾಯಿಗಳು ಒಂದು ಜನಾಂಗೀಯ ಅಧ್ಯಯನ,ಉತ್ತರ ಕರ್ನಾಟಕದ ಗೀ ಗೀ ಮೇಳಗಳು.ಜಾನಪದ ಜಗತ್ತಿಗೆ ಅಗಸೀ ಬಾಗಿಲು,ಕೌಜಲಗಿ ನಿಂಗಮ್ಮ ಇವರ ಜನಪದ ಕೃತಿಗಳು,ಬೀರಪ್ಪ ಹಳಮನಿ ಅವರ ಡೊಳ್ಳನ ಪದಗಳು,ಡಾ.ಬಿ.ಆರ್ ಪೋಲಿಸ ಪಾಟೀಲ ಅವರ ಲಾವಣಿಗಳು,ಮೊದಲಾದವು ಬಾಗಲಕೋಟ ಜಿಲ್ಲೆಯ ಜನಪದ ಸಾಹಿತ್ಯದ ಕೃತಿ ರತ್ನಗಳಾಗಿವೆ.

ಕಲಾ ಶ್ರೀಮಂತಿಕೆ ;
ಬಾಗಲಕೋಟ ಜಿಲ್ಲೆಯು ಜನಪದ ಕಲೆಗಳ ತವರುಮನೆ ಎನಿಸಿದೆ.ಇಲ್ಲಿ ಪ್ರತಿ ಊರಿಗೆ ಒಂದು ಭಜನಾ ಮೇಳ,ಡೊಳ್ಳಿನ ಮೇಳ,ಕರಡಿ ಮಜಲು ಕಾಣಸಿಗುತ್ತವೆ.ಸೋಬಾನೆ ಪದಗಳನ್ನು,ಬೀಸುವ ಪದಗಳನ್ನು ಹಾಡುವ ತಾಯಂದಿರು ಪ್ರತಿ ಹಳ್ಳಿಗಳಲ್ಲಿದ್ದಾರೆ.ಜಿಲ್ಲೆಯ ಶ್ರೀಮಂತ ಜನಪದ ಕಲೆ ಶ್ರೀ ಕೃಷ್ಣಪಾರಿಜಾತ.ಪಾರಿಜಾತದಲ್ಲಿ ಕೌಜಲಗಿ ನಿಂಗಮ್ಮ,ಕೃಷ್ಣಾಜಿ ದೇಶಪಾಂಡೆ,ಅಪ್ಪಾಲಾಲ ನಧಾಪ,ಬರಗಿ ರಾಚಯ್ಯ, ಟಕ್ಕಳಕಿ ವಿಠ್ಠಲರಾವ,ಸೂಳಿಕೇರಿ ಯಮೂನಾಬಾಯಿ,

                                                      ಪಾರಿಜಾತ ಕಲಾವಿದೆ ನಾಡೋಜ ಯಲ್ಲವ್ವ
ಯಲ್ಲವ್ವ ರೊಡ್ಡಪ್ಪನವರ,ಕಾಶಿಬಾಯಿ ದಾದನಟ್ಟಿ,ಮೊದಲಾದವರು ಖ್ಯಾತನಾಮರು.ಗೊಂದಲಿಗರ ಕಲೆಯಲ್ಲಿ ಬಾಗಲಕೋಟೆಯ ಸುಗತೇಕರ ಕುಟುಂಬದವರು ಜನಪ್ರಿಯರು.ಹುನಗುಂದ ತಾಲೂಕಿನ ಕೋಡಿಹಾಳ, ಮುಧೋಳ ತಾಲೂಕಿನ ಲೋಕಾಪುರಗಳಲ್ಲಿ ಬುಡಬುಡಕಿ ಕಲೆಯ ಕಲೆಗಾರಿದ್ದಾರೆ.ಬಾದಾಮಿ ತಾಲೂಕಿನ ಕರಡಿಗುಡ್ಡದಲ್ಲಿ ಕಿಳ್ಳೆ ಕ್ಯಾತ ಕಲಾವಿದರು ಉಳಿದುಕೊಂಡಿದ್ದಾರೆ.ದುರಗ ಮುರಗಿ ಅಲೆಮಾರಿ ಜನಾಂಗದವರು ಜಿಲ್ಲೆಯಲ್ಲಿ ಕಾಣಸಿಗುತ್ತಾರೆ.ಬಾದಾಮಿ ತಾಲೂಕಿನ ಕುಟಕನಕೇರಿ,ಕೆಂದೂರಗಳಲ್ಲಿ ಮೋಡಿ ಆಟದ ಮನೆತನಗಳು ಮೋಡಿ ಆಟದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.ಪ್ರಸಿದ್ದ ಬಾಗಲಕೋಟೆಯ ಹೋಳಿ ಆಚರಣೆಯಲ್ಲಿ ಹಲಗೆ ನುಡಿಸುವ ತಂಡಗಳಿವೆ.ಮಹಾಲಿಂಗಪುರದ ಕರಡಿ ಮನೆತನ ಕರಡಿ ವಾದನಕ್ಕೆ ರಾಷ್ಟ ಖ್ಯಾತಿ ಪಡೆದಿದೆ.ಜಿಲ್ಲೆಯ ತುಂಬೆಲ್ಲ ಜನಪದ ಕಲೆಯ ಸೊಬಗು ಚೆಲ್ಲುವರಿದಿದೆ.ಆದರೆ ಆಧುನಿಕತೆಯ ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಜನಪದ ಕಲೆಗಳು ಮರೆಯಾಗುತ್ತಿವೆ, ಕಲಾವಿದರು ಪ್ರೋತ್ಸಾಹವಿಲ್ಲದೆ ಸೊರಗುತ್ತಿದ್ದಾರೆ.
-------------------------------------------------------------------
Dr.Prakash G.Khade,Navanagar,Bagalkot-587103, Cell-9845500890

Sunday 18 August 2013

ಕನ್ನಡ ಲಾವಣಿ ಸಾಹಿತ್ಯ-ಡಾ.ಖಾಡೆ

 ವಿಶೇಷ ಲೇಖನ :

                                                          ಕನ್ನಡ ಲಾವಣಿ ಸಾಹಿತ್ಯ

                                                         -ಡಾ.ಪ್ರಕಾಶ ಗ.ಖಾಡೆ
       
     ಕನ್ನಡ ಕಾವ್ಯಕ್ಕೆ ಜೀವ ಕಳೆ ತಂದ ಲಾವಣಿ ಪ್ರಧಾನವಾಗಿ ಶೃಂಗಾರ ಕಾವ್ಯ. ಕಾಲಾಂತರದಲ್ಲಿ ಅವುಗಳ ಜನಪ್ರಿಯತೆಯು ಸ್ಥಳೀಯ ಸಂದರ್ಭ ಮತ್ತು ಪರಿಸ್ಥಿತಿಗಳಿಗನುಗುಣವಾಗಿ ಬದಲಾದ ವಸ್ತುವಿಗೆ ಬಳಸಿಕೊಳ್ಳಬೇಕಾಯಿತು.ಮರಾಠಿ ಸಾಹಿತ್ಯದಲ್ಲಿ ಲಾವಣಿಗೆ ಹೆಚ್ಚು ಮೌಲಿಕತೆ ಪ್ರಾಪ್ತವಾಗಿದೆ. ಮರಾಠಿಯಿಂದ ಗುಳೇ ಬಂದು ‘ದಕ್ಷಿಣ ಮಹಾರಾಷ್ಟ್ರ’ವೇ ಆಗಿದ್ದ ಉತ್ತರ ಕರ್ನಾಟಕದ ಗಡಿಯಲ್ಲಿ ಲಾವಣಿಯ ಲಾವಣ್ಯ ರಸಬಳ್ಳಿಯಂತೆ ಹಬ್ಬಿದೆ. ‘‘ಮರಾಠಿ ಮತ್ತು ಕನ್ನಡ ಸಾಹಿತ್ಯದ ಆದಾನ ಪ್ರದಾನದ ಮಹತ್ವದ ಕೊಂಡಿ ಲಾವಣಿ ಸಾಹಿತ್ಯ’’ ಎನ್ನುತ್ತಾರೆ ವಾಮನ ಬೇಂದ್ರೆಯವರು. ಸರ್ವ ಸಾಮಾನ್ಯ ಜನತೆಯ ಮನೋರಂಜನೆಗಾಗಿ ಜನತೆಗೆ ಹಿಡಿಸುವಂತೆ ಲೌಕಿಕ, ಪೌರಾಣಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ರಚಿಸಿದ ಕಥೆ, ಡೋಲಕದ ತಾಳ ಹಿಡಿದು, ವಿಶಿಷ್ಟ ರೀತಿಯಲ್ಲಿ ಹಾಡುವ ವಿಶೇಷ ಪದ್ದತಿಯ, ಹಾಡಲು ಸರಳತೆಯನ್ನೊಳಗೊಂಡ ಪದ್ಮಾವರ್ತನೀ ಎಂಟು ಮಾತ್ರೆಗಳ ಆವರ್ತನೆ  ಮತ್ತು ಭೃಂಗಾವರ್ತನೀ ಆರು ಮಾತ್ರೆಗಳ ಆವರ್ತನ ಉಳ್ಳ ರಚನೆಗಳೇ ಲಾವಣಿಗಳು ಎಂಬ ನಿರ್ಣಯವನ್ನು ಮರಾಠಿ ಸಾಹಿತ್ಯ ವಿಮರ್ಶಕರು ನಮೂದು ಮಾಡಿದ್ದಾರೆ.
   ಪೇಶವೆ ಕಾಲದ ಅನಂತರದಲ್ಲಿ 19 ಮತ್ತು 20ನೆಯ ಶತಮಾನಗಳಲ್ಲಿ ಮರಾಠಿ ಮತ್ತು ಕನ್ನಡ ಲಾವಣಿ ಸಾಹಿತ್ಯಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ, ವೈವಿಧ್ಯ ಪ್ರಾಪ್ತವಾಯಿತು. ಭಾರತ ಸ್ವಾತಂತ್ರ್ಯ ಆಂದೋಲನ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯೋಜನೆಗಳ ಪ್ರಚಾರಕ್ಕೆ ಬಹುವಾಗಿ ಬಳಕೆಯಾಯಿತು.
ಸರಸೋತಿ ನಿಮ್ಮ ಸ್ತುತಿ
ಸಬಾದಾಗ ಬಂದ ನಿಂತ  ನಾ ನಾಗೇಶಿ
ಚರಣಕ್ಕೆರಗಿ ಕರುಣ ಮಾಡಿ ಕೈ ಮುಗದ
ಕಾಯ ಒಡಿತೇವ ನಾವು ನಮಸ್ಕರಿಸಿ
 ಶಬ್ದಸೃಷ್ಟಿಯ ಸರಸ್ವತಿಯನ್ನು ಕೈ ಮುಗಿದು ತಮ್ಮ ನಾಲುಗೆಯ ನುಡಿ ಸಾಲುಗಳಿಗೆ ಆಹ್ವಾನಿಸಿಕೊಳ್ಳುವ ಜನಪದರು ದೈವದಲ್ಲಿ ಇಟ್ಟ ನಂಬುಗೆಯಿಂದ ಸದಾ ಜಾಗೃತ ಮತ್ತು ಪವಿತ್ರ ನೆಲೆಯನ್ನು ತಮ್ಮ ಪರಿಸರದಲ್ಲಿ ಕಟ್ಟಿಕೊಳ್ಳುತ್ತಾರೆ.  ಲಾವಣಿಗಳು ತೀರಾ ಆಪ್ತವಾಗುವುದು ಅವುಗಳ ಕಾವ್ಯ ಸೌಂದರ್ಯ ಮತ್ತು ಜನರಾಡುವ ಮಾತಿನ ಕಾವ್ಯ ಶಕ್ತಿಯಿಂದ. ವಾಸ್ತವ ಬದುಕಿನ ಹಲವಾರು ಮಜಲುಗಳನ್ನು ಇವು ತೆರೆದಿಡುತ್ತವೆ. ತನ್ನ ಗಂಬಿsೀರತೆ, ಶೃಂಗಾರ, ಟೀಕೆ, ಮೊನಚಾದ ಪ್ರತಿಕ್ರಿಯೆಗಳಿಂದ ನೀತಿ ಬೋಧನೆಯನ್ನು ಪ್ರಧಾನವಾಗಿಸಿಕೊಂಡಿವೆ.
ಈ ಮನಾ ಅಂಬೂದು ಉಡಾಳ ದನಾ ಹಾಕ ಮುಗದಾನಾ
ಹಗ್ಗಾ ಹಿಡಿ ಜಗ್ಗಿ ಅದು ನಡೂತೈತಿ ತಲೆಬಾಗಿ
ಸಡ್ಲ ಬಿಟ್ಟಿಂದ ಜಿಗದಾಡತೈತಿ ಟುಣ ಟುಣಾ ಅಡ್ನಾಡ ಅವಗುಣಾ
ಅಸ್ಕೋತೈತಿ ಹೋಗಿ ಕೆಡವಿತ ನಿನ್ನ ಯಮಬಾದಿನಿ
ಹರಿದಾಡುವ ಮನಸ್ಸಿಗೆ ಮುಗದಾನ ಹಾಕಿ ಕಟ್ಟಿ ಬದುಕು ರೂಪಿಸಿಕೊಳ್ಳಬೇಕೆಂದು ನೀತಿಯನ್ನು ಸಾರುವ ಲಾವಣಿಕಾರರು ತಮ್ಮ ಸ್ಥಳೀಯ, ತಾವು ಕಂಡ ಪರಿಸರದ ವಸ್ತು ಸಂಗತಿಗಳಿಂದಲೇ ಕಾವ್ಯದ ಸೆಳಕುಗಳನ್ನು  ನೀಡುತ್ತಾರೆ.
    ಲಾವಣಿಕಾರರ ಕಾವ್ಯಶ್ರೇಷ್ಠತೆ ಇರುವುದು ಅವರು ಸ್ಥಳೀಯವಾಗಿ ದೊರಕಿಸಿಕೊಳ್ಳುವ  ಉದಾಹರಣೆಗಳಲ್ಲಿ. ಅತಿ ರಂಜಿತವಲ್ಲ, ಅತಿ ಬಿಗುವಲ್ಲದ ಮತ್ತು ಹಾಗೆಂದು ತೋರುಗೊಡುವ ಪದಪುಂಜಗಳನ್ನೂ ಸನಿಹಕ್ಕೂ ತರಸಿಕೊಳ್ಳದೆ ತಾನು ಕಂಡ ಪರಿಸರ ಸಾಮಗ್ರಿಯನ್ನು ಎತ್ತಿಕೊಳ್ಳುವುದು ಅವರ ವಿಶೇಷತೆ. ರಾಮ, ಲಕ್ಷ್ಮಣ, ಸೀತೆಯರ ವನವಾಸ ಪ್ರಸಂಗ ಚಿತ್ರಿತವಾಗಿರುವುದನ್ನು ಗಮನಿಸಿದಾಗ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ.
ಕಲ್ಲನಾರ ಮಡಿಯನುಟ್ಟ ಹುಲ್ಲ ಹಾಂವ ಚೇಳಿನಾಗ
ಜಲ್ಲಹತ್ತಿ ತಿರಗತಾರ ಬರಿಗಾಲಾ
ಹುಣಚಿ ಹುಲ್ಲ ಬೀಜ ತಿಂಬತಾರ ಹೆಂತಾಕಾಲಾ
ಕಾರಿಕಾಯಿ ಬಾರಿಕಾಯಿಗಳ ಹಣ ಹಂಪಲಾ
ಮನಿಯಿಲ್ಲ ಮಾರಯಿಲ್ಲ ತೋಸಿಕೊಂಡ ಒಣಗತಾರ
ಆರತಿಂಗಳಗಟ್ಲೆ ಥಂಡಿ ಮಳಿಗಾಲಾ ಬಾಸಿಗಿ ಬಿಸಿಲಾ
ಇಲ್ಲಿ ಬಳಸಿರುವ ಕಲ್ಲನಾಗರ, ಬರಿಗಾಲ, ಹುಣಚಿಬೀಜ, ಕಾರಿಕಾಯಿ, ಬಾರಿಕಾಯಿ ‘ಮನಿಯಿಲ್ಲ ಮಾರಯಿಲ್ಲ’ ‘ತೋಸಿಗೊಂಡ ಒಣಗತಾರ’ ಥಂಡಿ.... ಹೀಗೆ ಪ್ರತಿ ಸಾಲಿನಲ್ಲಿ ಬಳಕೆಯಾದ ಆಡುಮಾತಿನ  ಗಟ್ಟಿತನದ ಪದಗಳು ಜನಪದರ ದೇಸೀ ಕಾವ್ಯದ ಭಾಷಾಸತ್ವವನ್ನು ನಿರೂಪಿಸುತ್ತವೆ.
ಚರಿತ್ರೆ
 ಸಮಕಾಲೀನ ಸಂಗತಿ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡ ಲಾವಣಿಗೀತ ಪ್ರಕಾರವು ಕನ್ನಡದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪರಂಪರೆಯ ಶ್ರೇಷ್ಠ ದಾಖಲೆಗಳೆನಿಸಿವೆ. 1897ರಲ್ಲಿ ಭಾರತಕ್ಕೆ ಬಂದ ಜಾನ್ ಫೇತ್‍ಪುಲ್ ಪಿs್ಲೀಟರು ಬಂದ ಒಂದೆರಡು ವರ್ಷಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ಆಡಳಿತಾದಿsಕಾರ ವಹಿಸಿಕೊಂಡು ಕನ್ನಡ ಕಲಿತು, ಆ ಕಾಲಕ್ಕೆ ಜನಪದರಲ್ಲಿ ಹಾಡಿಕೊಂಡು ಬಂದ ಲಾವಣಿಗಳಿಗೆ ಮನಸೋತು ಅವುಗಳ ಸಂಗ್ರಹಕ್ಕೆ ನಿಂತ ಕಾರಣವಾಗಿ ಬ್ರಿಟಿಷರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಚಳವಳಿ ಪ್ರಕಟವಾಗುವಂತಾಯಿತು. ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು ಐತಿಹಾಸಿಕ ವೀರರಾಗಿ ಚಿತ್ರಿಸಿದ ಇಂಥ ಚಾರಿತ್ರಿಕ ಲಾವಣಿಗಳು. ನಿಶ್ಯಸ್ತ್ರೀಕರಣ ಕಾಯಿದೆ, ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆ, ಆದಾಯ ತೆರಿಗೆ ವಿರುದ್ಧ ನಡೆದ  ಬಂಡಾಯವನ್ನು ಚಿತ್ರಿಸಿದರು. ಜೊತೆಗೆ ವಸಾಹತುಶಾಹಿ ಸ್ಥಳೀಯ ಸಂಸ್ಕøತಿಯ ಮೇಲೆ ಉಂಟುಮಾಡಿದ ಬಹುದೊಡ್ಡ ಅನ್ಯಾಕ್ರಮಣವನ್ನೂ ಕಂಡಂತೆ ಹಾಡಿ ತೋರಿಸಿದವು. ಬಾದಾಮಿ ಕೋಟೆಯನ್ನು ‘ಕುಂಪಣಿ’ಯವರು ಕೆಡವಿಸಿದ್ದರ ವಸ್ತುವನ್ನೊಳಗೊಂಡ ಪಿs್ಲೀಟರು ಸಂಗ್ರಹಿಸಿದ ಒಂದು ಪದ ಹೀಗಿದೆ:
ಕುಂಪಣಿಯವರು ಮಾಡ್ಯಾರ ಸಂವಾರ
ನಾಡಮೇಗಿನ ಜನಾ ಮರುಗಿತೋ ಮರಮರಾ
ಸರಕಾರ ಬಂದು ಕೆಡವಿದ ಮೇಲೆ ಯಾರಿಲ್ಲ ಈ ಧರಾ
ಕಳಸ ಇಲ್ಲದಾ ತೇರಿನ ಗತಿ ಬದಾಮಿ ಶೃಂಗಾರಾ
ಕರ್ನಾಟಕ ಪ್ರಾಂತಕ್ಕ ಆಧಾರ ಇತ್ತ ಈ ಗಡಾ
ಬಡಕೊಂಡು ಹೋದರೂ ಕೇಳವರ್ಯಾರಿಲ್ಲ ನಾಡಾ
ಬ್ರಿಟಿಷರು ನಮ್ಮ ನಾಡನ್ನು ಅದೆಂತು ಆಕ್ರಮಿಸಿಕೊಂಡರು ಎಂಬುದನ್ನು ಬಿಡಿಸಿಡುವ ಈ ಬಗೆಯ ಲಾವಣಿಗಳು ಚರಿತ್ರೆಯನ್ನು ಬಿಚ್ಚಿಡುವಲ್ಲಿ ಪ್ರಧಾನ ದಾಖಲೆಗಳಾದವು. ಸಂಗೊಳ್ಳಿ ರಾಯಣ್ಣ, ಆದಾಯ ತೆರಿಗೆ, ಹಲಗಲಿಯ ಬೇಡರು, ಕಿತ್ತೂರ ಚೆನ್ನವ್ವನ ಸೊಸೆ, ಲಾವಣಿ ಪದಾ, ಬಾದಾಮಿ ಕಿಲೆ ಕೆಡವಿದ ಪದಾ, ಇಂಗ್ರೇಜಿ ಸಂಸ್ಥಾನದ ಮೇಲಿನ ಪದಾ ಮೊದಲಾದ ಲಾವಣಿಗಳನ್ನು ಗಮನಿಸಿದಾಗ ಅಲ್ಲಿ ಕನ್ನಡ ದೇಸೀ ಚಳವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅದಿsಕಾರಿಶಾಹಿಯ ವಿರುದ್ಧವೇ ಬಂಡೆದ್ದು ಹಾಡಿದ್ದೂ ಒಂದು ದಾಖಲಾದ ಸಂಗತಿಯಾಗುತ್ತದೆ.
        ಜನರ ನೆಮ್ಮದಿಯ ಹತಗೊಳಿಸಿ ಕುತಂತ್ರದಿಂದ ತಂದ ಅನೇಕ ಕಾಯಿದೆಗಳು ಲಾವಣಿಕಾರರ ರೋಷಕ್ಕೆ ಕಾರಣವಾದವು. ಒಂದು ಬಗೆಯಲ್ಲಿ ಜನಸಮೂಹವನ್ನು ಬ್ರಿಟಿಷ್ ವಿರೋದಿs ನೆಲೆಯಲ್ಲಿ ಸಜ್ಜುಗೊಳಿಸಲು ಸ್ಥಳೀಯ ಈ ಹಾಡುಗಾರರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಿಡಿದೆದ್ದ ಕಿಡಿಗಳಾಗುತ್ತಾರೆ. ‘ಆದಾಯ ತೆರಿಗೆ’ ಉಂಟುಮಾಡಿದ ಶೋಷಣೆಯನ್ನು ‘ಏನ ಹೇಳಲಿ ಜನ್ಮದ ಗೋಳಾ ಇಂಗ್ರಜಿ ಉಪದರ ಆದೀತ ಭಾಳಾ. ಬಡವರ ಅಳತಾರೊ ಗಳಗಳಾ ಮಾಡತಾರ ಚಿಂತಿ’ ಎಂದು ಚಿತ್ರಿಸಿದರು. ಈ ಚಿತ್ರಣದಲ್ಲಿ ‘ಬ್ರಿಟಿಷರ ದಬ್ಬಾಳಿಕೆಯ ಮತ್ತೊಂದು ಕ್ರೂರನೋಟ ಇಲ್ಲಿದೆ. ಹೀಗೆ ಸ್ಥಳೀಯ ತಲ್ಲಣ, ಕರ್ಷಣಗಳನ್ನು ಈ ಬಗೆಯಲ್ಲಿ ಕಾವ್ಯದಲ್ಲಿ ಕಟ್ಟಿಕೊಡುವ ಲಾವಣಿಕಾರರು ಮುಖ್ಯವಾಗಿ ಚರಿತ್ರಕಾರರ ಸಾಲಿನಲ್ಲಿ ನಿಂತು ತಮ್ಮ ಕಾವ್ಯದ ಸಾರ್ಥಕತೆಯನ್ನು ತೋರ್ಪಡಿಸುವುದು ಕಾಣುತ್ತೇವೆ.
ಹುಲಕುಂದ ಲಾವಣಿಕಾರರು
  ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜನೇವರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿsೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದ ಭೀಮಕವಿ ಎಂದೇ ಹೆಸರಾದ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ ಹಾಗೂ ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. ಹೀಗೆ ಸ್ವತಂತ್ರ ಮೇಳಗಳು ತಲೆ ಎತ್ತುವ ಮೂಲಕ ಲಾವಣಿ ಗೀತ ಸಾಹಿತ್ಯ ತನ್ನ ವ್ಯಾಪಕತೆಯನ್ನು ಪಡೆದುಕೊಂಡಿತು.
   ನಾನಾ ಮುಖಗಳಿದ್ದ ರಾಷ್ಟ್ರೀಯ ಚಳವಳಿಗೆ ಜನ ಸಾಮಾನ್ಯರನ್ನು ಸಜ್ಜುಗೊಳಿಸಲು ಈ ಲಾವಣಿಕಾರರು ಮುಂದಾಗಿರವದು ಕಂಡು ಬರುತ್ತದೆ. ಇಷ್ಟಲ್ಲದೆ ಅಸ್ಪ್ನೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಖಾದಿ ಧರಿಸುವುದು ಇತ್ಯಾದಿ ಸಂಗತಿಗಳನ್ನು ಹಳ್ಳಿಗರಿಗೆ ಮನವರಿಕೆಯಾಗುವಂತೆ ತಿಳಿಸುವಲ್ಲಿ ತಮ್ಮ ಕಾವ್ಯ ಕುಶಲತೆ ಮೆರೆದರು. ಈ ಕಾರ್ಯದಲ್ಲಿ ಕನ್ನಡದಲ್ಲಿ ಅನೇಕ ಲಾವಣಿಕಾರರು ತಮ್ಮ ಹೆಸರು, ಕೀರ್ತಿಗೆ ಆಸೆ ಮಾಡದೆ ಕಾವ್ಯ ಕಟ್ಟಿ ಹಾಡಿದರು. ತೇರದಾಳ ತುಕಾರಾಮ, ಗೋಪಾಳ ದುರದುಂಡಿ, ಮುರಗೋಡ ಕುಬ್ಬಣ್ಣ, ಹುಲಕುಂದ ಬಿsೀಮಕವಿ, ಬಡಚಿ ಲಕ್ಷ್ಮಿಬಾಯಿ, ತುಂಗಳ ಸತ್ಯಪ್ಪ, ಪರಮಾನಂದವಾಡಿ ಮುಲ್ಲಾ, ಕುಡಚಿ ಮಲ್ಲಪ್ಪ, ಕುರ್ತಕೋಟಿ ಕಲ್ಮೇಶ, ಅಪ್ಪಾಜಿರಾವ ಮಹಾರಾಜ ಸರಕಾರ, ಪ್ರಭು, ಬಾಳಗೋಪಾಲ, ಬಿsೀಮಸಿಂಗ, ಯೋಗಣ್ಣ, ರಾಣು ಕುಂಬಣ್ಣಾ, ಶಾಹೀರ ಭೈರಿನಾಯ್ಕ ವಸ್ತಾದಿ ಖಾಜಾಬಾಯಿ ಹನುಮಂತ, ಹುಚಮಲ್ಲಯ್ಯ, ಸಂಗಣ್ಣ ಬಸಣ್ಣ, ಸಂಗಯ್ಯ ಕರಾಡಗೆ, ಸಾತುರಾಮ, ಸಿದ್ದರಾಮ ಮುಂತಾದವರು ದೇಸೀಕಾವ್ಯವನ್ನು ಕಟ್ಟಿ ಹಾಡಿ  ಹೆಸರಾದರು.
     18 ಮತ್ತು 19ನೆಯ ಶತಮಾನದಲ್ಲಿ ಉರ್ದು, ಮರಾಠಿ ಪ್ರಾಬಲ್ಯದ ಕನ್ನಡ ಪ್ರದೇಶದಲ್ಲಿ ಮುಸ್ಲಿಂ ತತ್ತ್ವಪದಕಾರರು ಕನ್ನಡ ತತ್ತ್ವಪದ ಸಾಹಿತ್ಯಕ್ಕೆ ಸಮೃದ್ಧತೆ ತಂದಂತೆ ಕನ್ನಡ ಲಾವಣಿ ಕವಿತೆಗಳನ್ನು ಕಟ್ಟಿ ಹೆಸರಾದುದು ಗಮನಾರ್ಹವಾಗಿದೆ. ‘ಉತ್ತರ ಕರ್ನಾಟಕದ ಸಾಮಾಜಿಕ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯ ಗಮನಾರ್ಹವಾದುದು. ಮೊಹರಂ ಪದಗಳನ್ನು ರಚಿಸಿದ ಹಿಂದೂಗಳಿರುವಂತೆಯೇ ಲಾವಣಿ ಮತ್ತು ತತ್ತ್ವಪದಗಳನ್ನು ರಚಿಸಿರುವ ಮುಸ್ಲಿಂ ಕವಿಗಳಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ವಿಷಯ ವಸ್ತುವಿನ ಮೇಲೆ ಗಳಿಸಿಕೊಂಡಿರುವ ಪ್ರೌಡಿsಮೆ ಆಗಾಧವಾದುದು. ವೇದಾಂತ ಪುರಾಣಗಳ ಬಗೆಗಿನ ನಿರರ್ಗಳ ನಿರೂಪಣೆ, ಸಮೃದ್ಧ ಪಾರಿಭಾಷಿಕ ಪದಗಳ ಬಳಕೆ ಅಚ್ಚರಿ ಮೂಡಿಸುವಂತಿವೆ ಎನ್ನುತ್ತಾರೆ ಡಾ.ಬಸವರಾಜ ಮಲಶೆಟ್ಟಿ ಅವರು. ಶಿಶುನಾಳ ಶರೀಫ(1840), ಬೀಬಿ ಇಂಗಳಗಿಯ ಶೇಕ  ಮಕ್ತಮಶಾ(1850), ಹಸನಸಾಬ(1858) ಮಂಗಲಗಿ ನನ್ನ ಸಾಹೇಬ(1874), ನರೋಣಾದ ಹೈದರಲಿ(1877), ಕೋರಳ್ಳಿಯ ಮೌಲಾಲಿ (1884), ಡೋಣುರದ ಬಸುಹಸನ(1888), ಯಾದವಾಡದ ಹುಸೇನಿ(1896), ಬೀಬಿ ಇಂಗಳಗಿಯ ಲಾಳೇಶ (1896) ಮಹಮ್ಮದ ಇಮಾಮಶಾ ರಾಣಿಬೆನ್ನೂರಿನ ಸಮ್ಮದ ಸಾಹೇಬ(1899), ಬಸವನ ಬಾಗೇವಾಡಿಯ ಚಾಂದ ಹುಸೇನಿ(1900), ದೇಗಾಂವದ ಇಮಾಮಸಾಹೇಬ(1906), ಚಾಂದಕವಟೆಯ ಗುಡಲಾಲ(1906), ಸಾವಳಗಿ ನಬೀಸಾಬ(1906) ಇಂಗಳೇಶ್ವರ ಲಾಲಸಾಬ(1922) ರಾಯಬಾಗದ  ಮೀರಾಸಾಹೇಬ(1922), ಹಲಸಂಗಿ ಖಾಜಾಬಾಯಿ(1924)... ಹೀಗೆ ಬೆಳವಲ ನಾಡಿನಲ್ಲಿ ಲಾವಣಿ ಕ್ಷೇತ್ರದಲ್ಲಿ ಹೆಸರಾದ ಈ  ಲಾವಣಿಕರರು ಕಾವ್ಯ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯಿಂದ ಗುರುತಿಸಿಕೊಂಡಿರುತ್ತಾರೆ.
    ಆಧುನಿಕ ಕನ್ನಡ ಕಾವ್ಯವನ್ನು ರೂಪಿಸುವಲ್ಲಿ ಲಾವಣಿಗಳು ಮಹತ್ವದ ಪಾತ್ರವಹಿಸಿದವು. ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು. ಲಾವಣಿಗಳಿಗೂ ಭಾವಗೀತೆಗಳಿಗೂ ಸಂಬಂಧವುಂಟು. ರಗಳೆಯ ಲಯ, ಅಂಶೀ ಷಟ್ಪದಿ ಅನೇಕ ಲಾವಣಿ ಮತ್ತು ಭಾವಗೀತಗಳ ಜೀವಾಳ. ಆಧುನಿಕ ಮರಾಠಿ ಸಾಹಿತ್ಯದ ಭಾವಗೀತಕಾರರು ಲಾವಣಿಯ ಪ್ರೇರಣೆಯಿಂದ ಲಾವಣಿ ಧಾಟಿಯ ಭಾವಗೀತೆಗಳನ್ನು ರಚಿಸಿದಂತೆ ಬೆಟಗೇರಿ ಕೃಷ್ಣಶರ್ಮರು, ಮಧುರಚೆನ್ನ, ಬೇಂದ್ರೆ ಮತ್ತು ಶ್ರೀಧರ ಖಾನೋಳಕರ ಅವರು ಲಾವಣಿ ಗತ್ತಿನ ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾರೆ. ಹೀಗೆ ಲಾವಣಿಕಾರರು, ಅನಂತರ ಭಾವಗೀತಕಾರರು ಮಾಡಿದ ರಚನೆಗಳು ಮೌಲಿಕವಾಗಿವೆ. ಹೀಗೆ ಹೊಸ ಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿತು.
                                                       -ಡಾ.ಪ್ರಕಾಶ ಗ.ಖಾಡೆ
ವಿಳಾಸ: ಡಾ.ಪ್ರಕಾಶ ಗ.ಖಾಡೆ,ಸೆಕ್ಟರ್ ನಂ. 63,ನವನಗರ,ಬಾಗಲಕೋಟ  ,ಮೊ.9845500890

ಲಾವಣಿ ಸಾಹಿತ್ಯ


ವಿಜಯ ವಾಣಿ ವಿಜಯ ವಿಹಾರ 18.8.2013 ರಲ್ಲಿ ಪ್ರಕಟವಾದ ಲೇಖನ : ಲಾವಣಿ ಸಾಹಿತ್ಯ

Sunday 19 May 2013

ಕನ್ನಡ ಜನಪದ ಒಗಟುಗಳು -ಡಾ.ಪ್ರಕಾಶ ಗ.ಖಾಡೆ




ಕನ್ನಡ ಜನಪದ ಒಗಟುಗಳು

ಡಾ.ಪ್ರಕಾಶ ಗ.ಖಾಡೆ
 ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಒಗಟು ಪ್ರಕಾರಕ್ಕೆ ವಿಶಿಷ್ಟ ಸ್ಥಾನವಿದೆ. ಇಂಗ್ಲೀಷಿನಲ್ಲಿ ಇದಕ್ಕೆ ‘ಖiಜಜಟe’ ಎಂದು ಹೆಸರಿದೆ. ಇದು ಹಳೆಯ ಇಂಗ್ಲೀಷಿನ ‘ಖಚಿeಜಚಿಟಿÀ’ ಪದದಿಂದ ಬಂದದ್ದು. ಇದರ ಅರ್ಥ ‘ಣo give ಚಿಜviಛಿe             ’ ಎಂದು. ಕನ್ನಡದಲ್ಲಿ ಒಗಟು, ಒಂಟು, ಒಡಪು, ಒಡಗತೆ ಮುಂತಾದ ಪದಗಳು ಬಳಕೆಯಲ್ಲಿವೆ. ಒಗೆ ಅಥವಾ ಎಸೆ   ಣo ಣhಡಿoತಿ ಎಂಬರ್ಥದಲ್ಲಿ ಒಗಟು, ಒಡೆ-ಒಡೆಸು, ಬಿಡಿಸು ಎಂಬರ್ಥದಲ್ಲಿ ಒಗಟು ಬಳಕೆಯಲ್ಲಿದೆ.

ಒಗಟು ಎಂದರೆ ಜಟಿಲವಾದದ್ದು, ಗೋಜಲು ಗೋಜಲಾದದ್ದು, ಗೂಢವಾದದ್ದು ಎಂದು ಅರ್ಥೈಸಲಾಗುತ್ತಿದೆ. ಒಗಟುಗಳು ಒಗಟುಗಳು ಬುದ್ಧಿ ಪ್ರಧಾನವಾದವುಗಳು. ಇವು ಸಾಮಾನ್ಯವಾಗಿ ಊಹೆಯ ಮೇಲೆ ಉತ್ತರವನ್ನು ಹುಡುಕುವ, ಕೇಳಿದ ಕೂಡಲೇ ದಿU್ಪ್ಭ್ರಮೆ ಹಿಡಿಸುವ, ರಹಸ್ಯಾರ್ಥವುಳ್ಳ ಪ್ರಶ್ನಾರ್ಥಕ ಹೇಳಿಕೆಗಳು. ಪ್ರತಿಯೊಂದರಲ್ಲೂ ಸಮಸ್ಯೆಯೊಂದಿದ್ದು ಸುಲಭವಾಗಿ ಬಿಡಿಸಲಾರದ ರೀತಿಯಲ್ಲಿ ಸಂಯೋಜಿತವಾಗಿರುತ್ತವೆ. ಇದರಲ್ಲಿ ಒಡ್ಡಿದ್ದು ಒಂದಿದ್ದರೆ, ಒಡೆಸುವುದು ಮತ್ತೊಂದು ಇರುತ್ತದೆ.

 “ಒಗಟು ಅತ್ಯಂತ ಪ್ರಾಚೀನವಾದ ಮತ್ತು ವ್ಯಾಪಕವಾದ ಸೂತ್ರೀಕೃತ ಆಲೋಚನಾ ಪ್ರಕಾರಗಳಲ್ಲಿ ಒಂದಾಗಿದ್ದು ಈ ವಿಷಯದಲ್ಲಿ ಪುರಾಣ, ನೀತಿಕಥೆ, ಜನಪದ ಕಥೆ ಮತ್ತು ಗಾದೆಗಳಿಗೆ ಇದು ಸಮಾನವಾಗಿದೆ. ಒಗಟುಗಳು ಮೂಲತಃ ರೂಪಕಗಳು. ಈ ರೂಪಕಗಳು ಮೂಲ ಮಾನಸಿಕ ಪ್ರಕ್ರಿಯೆಗಳಾದ ಸಂಯೋಜನೆ, ತುಲನೆ, ಹೋಲಿಕೆ ಮತ್ತು ಮೌನಗಳ ಗ್ರಹಿಕೆಯ ಫಲ.” ಒಗಟಿಗೆ ಹೆಚ್ಚು ಶಕ್ತಿಯನ್ನು, ಆಕರ್ಷಣೆಯನ್ನು ತಂದಿರುವುದೆಂದರೆ ಈ ರೂಪಕವೇ. “ಅಲಂಕಾರಿವಾದ ಒಗಟು ರೂಪಕದೊಡನೆ ಅತ್ಯಂತ ಸಂಬಂಧವನ್ನು ಒಳಗೊಂಡಿದೆ. ಒಂದು ದೃಷ್ಟಿಯಲ್ಲಿ ಒಗಟು ಹಾಸ್ಯದ ಫಲ, ಮತ್ತೊಂದು ದೃಷ್ಟಿಯಲ್ಲಿ ಪ್ರಕೃತಿಯಲ್ಲಿ ಸಾದೃಶ್ಯವನ್ನು ಕಾಣುವ ಮನುಷ್ಯ ಸಾಮಥ್ರ್ಯದ ಫಲಿತಾಂಶ. ಊಹೆಯಿಂದ ಬಿಡಿಸಬೇಕಾದ ಸಂದಿಗ್ಧಮಯವಾದ ಹೇಳಿಕೆ. ಇದು ರೂಪಕ ಮೂಲ. ಎರಡು ವಸ್ತುಗಳ ತರ್ಕಬದ್ಧ ಸಮೀಕರಣೆ. ಜೇಮ್ಸ ಎ. ಕೆಲ್ಸೋನ ಈ ಹೇಳಿಕೆಯು ಮಾನವನಲ್ಲಿ ಸಹಜವಾಗಿಯೇ ಇರುವ ಹಾಸ್ಯ ವಿಡಂಬನೆಗಳು ಒಗಟಿನ ರಚನೆಗೆ ಕಾರಣವಾಗಿವೆ ಎಂಬುದನ್ನು ಸಾಧಿಸುತ್ತದೆ. ಮೇಲುನೋಟಕ್ಕೆ ಕೆಲವು ಒಗಟುಗಳು ಅಶ್ಲೀಲವಾಗಿ ಕಾಣುತ್ತವೆ. ಕ್ಷೇತ್ರ ಕಾರ್ಯದಲ್ಲಿ ಇಂಥ ಒಗಟುಗಳನ್ನು ಹೇಖುವ ಸಂದರ್ಭದಲ್ಲಿ ಜನಪದರಲ್ಲಿ ಯಾವ ಮುಜುಗರವು ತೋರದಿರುವದು ಅವುಗಳ ಉತ್ತರದಲ್ಲಿರುವ ಪರಿಶುದ್ಧತೆಯೇ ಕಾರಣವಾಗಿದೆ. ಇಲ್ಲಿ ಬರುವ ಪದಗಳು ಅಶ್ಲೀಲವಾಗಿದ್ದರೂ, ಅದರ ಉತ್ತರ ಮತ್ತು ಒಳ ಅರ್ಥ ಅತ್ಯಂತ ಶುದ್ಧವಾಗಿರುತ್ತದೆ. ಇಂಥ ಸಮಯದಲ್ಲಿ ಶೀಲಕ್ಕೂ, ಅಶ್ಲೀಲಕ್ಕೂ ಗೆರೆ ಎಳೆಯುವುದು ಬಹಳ ಕಷ್ಟದ ವಿಷಯ.
        “ಬಹುತೇಕ ಒಗಟುಗಳು ಭಾಷೆ ಹಾಗೂ ಸಾಹಿತ್ಯ ಸೌಂದರ್ಯದ ಅಶಂಗಳನ್ನು ರೂಢಿಸಿಕೊಂಡ ಹೇಳಿಕೆಗಳಾಗಿವೆ. ಒಗಟು ಪ್ರಾಚೀನವಾದ ಸುವ್ಯವಸ್ಥಿತಗೊಂಡ ಆಲೋಚನೆಯ ಫಲವಾಗಿz.É” ಆದಿವಾಸಿಗಳ ಬಾಳಿನಲ್ಲಿ ಪ್ರಕೃತೆಯ ಪಾತ್ರ ಮಹತ್ತರವಾದುದು. ಪ್ರಕೃತಿಗೂ ಮಾನವನಿಗೂ ಇದ್ದ ನಿಕಟ ಸಂಪರ್ಕದ ಫಲವಾಗಿ ಒಗಟು ಸೃಷ್ಟಿಯಾಗಿರಬೇಕು. ಒಗಟಿನಲ್ಲಿ ಕಾಣಬರುವ ಅನೇಕ ಪ್ರಕೃತಿಪರ ವಸ್ತು ಚಿತ್ರಗಳೇ ಇದಕ್ಕೆ ಸಾಕ್ಷಿ.
             ಎಲ್ಲಾ ಕಾಲದಾಗ ಹಸಿರ ಇರತೈತಿ      (ಗಿಳಿ)

             ಕೆಂಪ ಹುಡುಗ ಹಸಿರು ಟೊಪ್ಪಿಗಿ       (ಕೆಂಪು ಮೆಣಸಿನಕಾಯಿ)

 ಒಗಟುಗಳು ಸಾಮಾನ್ಯವಾಗಿ ಕಾವ್ಯರೂಪದಲ್ಲಿರುತ್ತವೆ. ಬುದ್ಧಿಯ ಕೌಶಲ್ಯವನ್ನು ಒರೆಗೆ ಹಚ್ಚಿ ನೋಡುವ ಇವುಗಳ ಹಿನ್ನೆಲೆಯಲ್ಲಿ ವಿಶಿಷ್ಠವಾದ ಕವಿಯ ಮನೋಧರ್ಮದ ಮಿಡಿತವನ್ನು ಕಾಣಬಹುದು. ಒಂದು ಅರ್ಥದಲ್ಲಿ ಒಂದೊಂದು ಒಗಟೂ ಪುಟ್ಟ ಭಾವಗೀತೆ” .. ಒಟ್ಟಾರೆ ಒಗಟು ಸಂಕ್ಷಿಪ್ತ ರೂಪದ ಒಂದು ಆಕರ್ಷಕ ರಚನೆ.
 ಒಗಟುಗಳು ಸಾಹಿತ್ಯಿಕ ಮೌಲ್ಯವನ್ನು ಒಳಗೊಂಡ ಜನಪದ ಸಾಹಿತ್ಯದ ಶ್ರೇಷ್ಠ ರಚನೆಗಳಾಗಿವೆ. ಒಗಟು ಪರಿಭಾವಿಸಿದಷ್ಟೂ ಅರ್ಥಪರೆ ಬಿಚ್ಚಿಕೊಳ್ಳುವ ಗುಣವಿಷೇಶದಿಂದ, ಶ್ರೇಷ್ಠ ಕಾವ್ಯದ ನಿಲುವಿಗೇರುವ ಅಂಶಗಳನ್ನೂ ಹೊಂದಿದೆ. ಇಲ್ಲಿ ಮುಖ್ಯವಾದ ಸಂಗತಿಯೆಂದರೆ ಒಗಟು ರೂಪಕ ಮೂಲವಾದದ್ದೆಂಬುದು. ಈ ಗುಣದಿಂದಲೇ ಅದು ಧ್ವನಿಪೂರ್ಣವಾಗುತ್ತದೆ. ಧ್ವನಿ ಸಂಕ್ಷಿಪ್ತತೆಗೆ ಸಾಧನವಾದ ಸಾಂಕೇತಿಕತೆಯನ್ನು ಅರಸುತ್ತದೆ. ಹೀಗೆ ಸಾಂಕೇತಿಕತೆಯಲ್ಲಿ ಅಭಿವ್ಯಕ್ತಿಗೊಂಡ ಸಂಕ್ಷಿಪ್ತ ಕಾವ್ಯವೇ ಒಗಟು”

               ಚಿಕ್ಕ ಚಿಕ್ಕ ಹೋರಿ ಚಿಲಾರಿ ಹೋರಿ
               ಸಂಜೀಕ ಬರತೈತಿ ಕಿಲಾರಿ ಹೋರಿ   (ಕೌದಿ)

               ಓಡತೈತಿ ಕಾಲಿಲ್ಲ
               ಒತ್ತತೈತಿ ತೋಳಿಲ್ಲ              (ದಿನ)

 ಭಾವ ಹೆಪ್ಪುಗಟ್ಟಿ ಗೀತೆಯಾಗುವಂತೆ, ಭಾವ ಬುದ್ಧಿಗಳ ರಸಾಯನದಿಂದ ಗಾದೆಯಾಗುವಂತೆ, ಬುದ್ಧಿ ಹರಳಗೊಂಡು ಒಗಟಾಗುತ್ತದೆ. “ಪ್ರಾಚೀನವಾದ ಜನಪದ ಸಂಸ್ಕøತಿ ಬುದ್ಧಿ ಪ್ರತಿಭೆಗಳ ಸಂಯೋಜಿತ ಸೃಷ್ಟಿಯಾದ ಸೌಚಿದರ್ಯ, ಕಾರ್ಯಕಾರಣ ತರ್ಕಶಕ್ತಿಗಳನ್ನೊಳಗೊಂಡ, ಸಿಪ್ಪೆ ಸುಲಿಯುತ್ತಾ ತಿರುಳಿನೆಡೆಗೆ ಸೆಳೆದೊಯ್ಯುವ ಅರ್ಥಾಪೇಕ್ಷಿಯಾದ ಪದಚಕ್ರವ್ಯೂಹವೇ ಒಗಟು.”
  ಒಗಟು ಎಲ್ಲ ವಯೋಮಾನದವರಲ್ಲೂ ಉಳಿದುಕೊಂಡು ಬಂದಿವೆ. ಮಕ್ಕಳು, ಹಿರಿಯರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಇವನ್ನು ಬಳಸುತ್ತಾರೆ. ಪ್ರಾಚೀನ ಕಾಲದಿಂದಲೂ ಮಾನವ ಮನಸ್ಸು ತನ್ನ ಸುತ್ತಲಿನ ವಾತಾವರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಿಂದಾಗಿ ಒಗಟುಗಳು ಹುಟ್ಟಿಕೊಂಡಿವೆ. ಎಲ್ಲ ವಿಧದ ಸಾಮರಸ್ಯಯುಕ್ತತೆ, ಅಸಂಬದ್ಧತೆಗಳೂ ಮಕ್ಕಳು ಮತ್ತು ಮಕ್ಕಳಂಥ ಮನುಷ್ಯರ ಗಮನ ಸೆಳೆಯುತ್ತವೆ. ಆದ್ದರಿಂದಲೇ ಒಗಟುಗಳು ಮಕ್ಕಳಿಗೆ ಪ್ರಿಯ. ಒಗಟುಗಳು ಮಾನಸಿಕ ಶೈಶವಾವಸ್ಥೆಯ ನಿಗೂಢತೆಗಳೂ ಹೌದು. ವಿವೇಚನೆಯೂ ಹೌದು. ನಾಗರಿಕತೆ ಮುಂದುವರೆದಂತೆ ಅವು ಇನ್ನೂ ಜೀವಂತವಾಗಿ ಉಳಿದಿವೆ. ಸರಳವಾದ ಹೋಲಿಕೆಗಳು ಶ್ಲೇಷಗಳಾದಂತೆ ಅವುಗಳಲ್ಲಿಯ ಆಸಕ್ತಿ ಮಸುಕಾಗುತ್ತಾ ಅಳಿಸುತ್ತಾ ಬಂದಂತೆ ಒಗಟುಗಳು ಮತ್ತಷ್ಟು ಸಂಕೀರ್ಣವೂ, ಪ್ರಜ್ಞಾಪೂರ್ವಕವೂ ಆಗುತ್ತವೆ” ಎಂಬುದು ಒಗಟುಗಳ ಸರ್ವಕಾಲಿಕ ಶ್ರೇಷ್ಠತೆಯನ್ನು ಸಾರುತ್ತದೆ.  # (ಕೃಪೆ : ಅವಧಿ)
======================================================================
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890
   
                 



Saturday 20 April 2013


ನಮ್ಮೂರ ನಮಗ ಪಾಡ ,ಯಾತಕವ್ವ ಹುಬ್ಬಳ್ಳಿ ಧಾರ್ವಾಡ
ಡಾ.ಪ್ರಕಾಶ ಗ.ಖಾಡೆ
(ಎಪ್ರೀಲ್ 16 ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಜನ್ಮ ದಿನ.ಅವರ ನೆನಪಿಗೆ ಈ ಲೇಖನ)
ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ ಮೂಲರೂಪಕ್ಕೆ ಮತ್ತಷ್ಟು ಜೀವ ತುಂಬಿ ಚಿತ್ರಿತವಾಗಿರುವ ಅವರ ಜಾನಪದ ಪ್ರಭಾವಿತ ಕವಿತೆಗಳು ನಾಡವರ ನಾಲಿಗೆಯ ಮೇಲೆ ನಲಿದು ಜನಪ್ರಿಯವಾದವು. ಆನಂದಕಂದರ ಜನಪದ ರೀತಿಯ ಕವಿತೆಗಳು ಜಾನಪದವೇ ಎನ್ನುವಷ್ಟು ಜನಾನುರಾಗಿಯಾಗಿವೆ. ಈ ಜನಪ್ರಿಯತೆಗೆ ಮುಖ್ಯಕಾರಣ ಜಾನಪದದ ಧಾಟಿ ಆದರೂ ಆ ಕಾಲಕ್ಕೆ ಆನಂದ ಕಂದರ ಗೀತೆಗಳನ್ನು ಹಾಡಿ ಖ್ಯಾತಿ ಪಡೆದ ‘ಸಾವಿರ ಹಾಡಿನ ಸರದಾರ’ರೆನಿಸಿದ ಹುಕ್ಕೇರಿ ಬಾಳಪ್ಪನವರೂ ಒಂದು ಕಾರಣ. ಜನಪದ ಹಾಡುಗಾರ ಹುಕ್ಕೇರಿ ಬಾಳಪ್ಪನವರು ಆನಂದಕಂದರ ಹಲವಾರು ಕವನಗಳನ್ನು ಅವಿಸ್ಮರಣೀಯವೆಂಬಂತೆ ರಸಪೂರ್ಣವಾಗಿ ಹಾಡಿ ತೋರಿಸಿದ್ದಾರೆ.
‘ಆನಂದಕಂದ’ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರ ಜಾನಪದ ಆಸಕ್ತಿಗೆ ಮೂಲಕಾರಣ ಅವರು ಬೆಳೆದ ಪರಿಸರ ಮತ್ತು ತಾಯಿಯ ಪ್ರಭಾವ. 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದ ಬೆಟಗೇರಿ ಕೃಷ್ಣಶರ್ಮರು. ಮನೆಯಲ್ಲಿಯ ಹಬ್ಬ-ಹರಿದಿನಗಳ ಆಚರಣೆ, ಪುರಾಣ ಪುಣ್ಯ ಕಥೆಗಳ ಶ್ರವಣ. ಜಾನಪದದ ನಿಕಟ ಸಂಪರ್ಕ ಅವರಿಗೆ ದಕ್ಕಿತು. ಆನಂದಕಂದರು ಕಳೆದ ಶತಮಾನದ ಇಪ್ಪತ್ತನೆಯ ದಶಕವು ಭಾರತವು ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಕಾಲದಲ್ಲಿ ರಾಷ್ಟ್ರೀಯತೆಗೆ ಆಕರ್ಷಿತರಾದರು. ರಾಷ್ಟ್ರೀಯತೆಯ ಜಾಗ್ರತೆಗೆ ಪೋಷಕವಾಗುವ ಅನೇಕ ಹಾಡುಗಳನ್ನು ಈ ಅವದಿsಯಲ್ಲಿ ರಚಿಸಿದರು. ರಾಷ್ಟ್ರೀಯ ಪದ್ಯಾವಲಿ(1921), ಗಾಂದಿsೀ ಗೀತ ಸಪ್ತಕ (1921) ರಾಷ್ಟ್ರೀಯ ಪದ್ಯಮಾಲೆ(1921)ಯ ಹಾಡುಗಳು ಭಾವ ತೀವ್ರತೆ ಮತ್ತು ಗೇಯತೆಯಿಂದೊಡಗೂಡಿ ಜನತೆಯಲ್ಲಿ ದೇಶಾಬಿsಮಾನದ ಪ್ರಜ್ವಲಿಸುವಂತೆ ಮಾಡಿದವು.
ಬೆಟಗೇರಿ ಕೃಷ್ಣಶರ್ಮ ಅವರು ಜಾನಪದ ಕಾರ್ಯವನ್ನು 1929 ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ತ್ರಿಪದಿಗಳನ್ನು ಹಾಡುವುದರೊಂದಿಗೆ ಆರಂಭ ಮಾಡಿದರು. ಅವುಗಳ ಸೊಬಗು ಸೌಂದರ್ಯದ ಜೊತೆಗೆ ಜಾನಪದದ ಶಕ್ತಿ ಸಾಮಥ್ರ್ಯವನ್ನು ಎತ್ತಿ ತೋರಿದರು. ‘ಹಳ್ಳಿಯ ಹಾಡುಗಳು’ ಜಾನಪದವನ್ನು ಹೆಚ್ಚು ಪ್ರಸಿದ್ಧಿಗೆ ತರಲು ಸಹಾಯಕಾರಿಯಾಯಿತು. 1922ರಲ್ಲಿ ಬೆಟಗೇರಿಯವರು ಸಂಗ್ರಹಿಸಿದ ‘ಕೆರೆಗೆ ಹಾರ’ ಜನಪದ ಗೀತೆಯು ಅವರಿಗೆ ಹೆಸರು ಹಾಗೂ ಕೀರ್ತಿ ತಂದಿತು.
‘ಕೆರೆಗೆ ಹಾರ’ ವನ್ನು 1925 ರಿಂದ ತಮ್ಮ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ವಿವರಿಸಿ, ಧಾಟಿ ಹಾಗೂ ಭಾವಪೂರ್ಣವಾಗಿ ಹಾಡಿ ತೋರಿಸುತ್ತಿದ್ದರು. ಈ ಹಾಡು ಕೋಲು ಪದದಲ್ಲಿ ಹೆಣೆದುಕೊಂಡಿದೆ. “ಸವದತ್ತಿ ತಾಲ್ಲೂಕಿನ ಊರಾಗಿರುವ ಯರಗಟ್ಟಿಯ ಹೂಗಾರ ಮನೆತನದ ಹೆಣ್ಣು ಮಗಳನ್ನು ಶ್ರೀ ಕೃಷ್ಣಶರ್ಮರ ಹುಟ್ಟೂರಾದ ಬೆಟಗೇರಿಯಲ್ಲಿರುವ ಹೂಗಾರ ಮನೆತನದ ಕಲ್ಲಯ್ಯ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದರು. ಹಬ್ಬ ಹುಣ್ಣಿವೆಗಳ ರಾತ್ರಿಗಳಲ್ಲಿ ಹೆಣ್ಣು ಮಕ್ಕಳ ಹಾಡುಗಳು ನಡೆಯುತ್ತಿದ್ದವು. ಕೃಷ್ಣಶರ್ಮರು ಗುಂಪಿನಲ್ಲಿ ಕುಳಿತು ಕೇಳಿ ಕಂಠಪಾಠ ಮಾಡಿ ಬರೆದು ಬಳಿಕ ತಮ್ಮ ಮನೆಗೆ ಕರೆಯಿಸಿ ಮತ್ತೆ ಹಾಡಿಸಿ, ಸರಿಯಾಗಿ ನೋಡಿ, ಸಂಗ್ರಹಿಸಿದರು. ಈ ಹಾಡು ಬೆಟಗೇರಿ ಅವರಿಗೆ ಜಾನಪದ ಶೈಲಿಯನ್ನೇ ಕಲಿಸಿತು.” ಎನ್ನುತ್ತಾರೆ ಡಾ.ನಿಂಗಣ್ಣ ಸಣ್ಣಕ್ಕಿಯವರು.
ನಲ್ವಾಡುಗಳು :
ಆನಂದಕಂದರ ‘ನಲ್ವಾಡುಗಳು’ ಆಡುನುಡಿಯ ಸಹಜ ರೂಪಕತೆಯಿಂದ ಕಾವ್ಯವನ್ನು ಸರಳಗೊಳಿಸುತ್ತ ಜನಸಾಮಾನ್ಯರ ನಾಲುಗೆಯ ಮೇಲೂ ನಲಿಯುವಂತೆ ಮಾಡಿವೆ. ‘ನಲ್ವಾಡುಗಳು’ ಸಂಕಲನವು ಇಪ್ಪತ್ತೇರಡು ಪ್ರೀತಿ ಗೀತೆಗಳನ್ನುಜಾನಪದದಲ್ಲಿ ರೂಪಿಸಿದ ಸಂಕಲನ. ಇಲ್ಲಿ ಬೆಟಗೇರಿ ಅವರು ಅಪ್ಪಟ ಜನಪದ ಕವಿಯಂತೆ ಕಾಣುತ್ತಾರೆ. ಶುದ್ದ ಜಾನಪದಕ್ಕೆ ಇವರ ಕವಿತೆಗಳು ಪ್ರಧಾನವಾಗಿ ತೋರುತ್ತವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದದ ವಿವಿಧ ಲಯಗಳೆಲ್ಲವನ್ನೂ ಯಶಸ್ವಿಯಾಗಿ ‘ನಲ್ವಾಡುಗಳು’ ಸಂಕಲನ ಕವಿತೆಗಳಲ್ಲಿ ತಂದಿದ್ದಾರೆ.
ಗೋದಿ ಬೀಜಕ್ಕಂತ ಗೋಕಾಂವಿಗ್ಹೋಗಿದ್ದೆ
ಸಾದಗಪ್ಪಿನ ಸವಿಹೆಣ್ಣ
ಸಾದಗಪ್ಪಿನ ಸವಿಹೆಣ್ಣ ನೋಡುತಲೆ
ಗೋದಿ ಬಿತ್ತಿಗಿಯ ಮರತೆನೊ
ಜನಪದ ತ್ರಿಪದಿಗಳಲ್ಲಿ ಕಂಡು ಬರುವ ಶೈಲಿ, ರೂಪ, ವಸ್ತು ಬೆಟಗೇರಿ ಅವರ ಕವಿತೆಗಳಲ್ಲಿ ಸ್ಥಾನ ಪಡೆದಿವೆ. ‘ನಲ್ವಾಡುಗಳು’ ಸಂಕಲನದ’ ನಮ್ಮೂರ ಜಾತ್ರಿ ಬಲು ಜೋರಾ, ಬೆಣ್ಣಿಯಾಕಿ, ಬುತ್ತಿ ತೂಗೊಂಡು ಹೋಗ್ತಿನಿ ಹೊಲಕ, ಯಾರೋ ಏನೋ ಬರತಾರಂತ, ಹಿಂಗ್ಯಾಕ ನೋಡತಾನ, ಚಿನ್ನತ್ತಿಯ ಮಗ, ಬಡವರ ಮಗಳು, ಗೌಡರ ಮನೆ ಸೊಸಿ, ಗೆಣತಿ, ಏನ ಮಾಡ ಅಂತೀ, ಬೆಳವಲ ಒಕ್ಕಲತಿ ಮೊದಲಾದ ಕವಿತೆಗಳು ಹೆಸರೇ ಸೂಚಿಸುವಂತೆ ಜನಪದ ಸಂಸ್ಕøತಿಗೆ ಸೇರಿದ್ದು, ಅಲ್ಲಿನ ವಸ್ತು, ಲಯ, ಸೊಗಸು ಸೌಂದರ್ಯಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕಿಂತ ಜಾನಪದವೇ ಆಗಿದೆ ಎಂದು ಗುರುತಿಸಲು ಸಾಧ್ಯ. ‘ನಮ್ಮ ಹಳ್ಳಿಯೂರs ನಮಗ ಪಾಡs ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ’ ಎಂಬ ಆನಂದಕಂದ ಜನಪ್ರಿಯ ಈ ಗೀತೆ ಅವರ ಒಟ್ಟು ಕಾವ್ಯ ಧೋರಣೆಯನ್ನು ಪ್ರಕಟಿಸುತ್ತದೆ.
ಊರ ಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳs ನೆಳ್ಳs
ನೀರ ತರುವಾಗ ಗೆಣತ್ಯಾರ ಜೋಡs
ಯಾತಕವ್ವಾ ಹುಬ್ಬಳ್ಳಿ – ಧಾರ್ವಾಡs
ಆಧುನಿಕತೆಯ ಸೋಗಿನಲ್ಲಿ ವಾಸ್ತವದ ಬದುಕು ಅನುಭವಿಸುವ ವಂಚಿತ ಸಮುದಾಯದ ನೋವು ನಿರಾಸೆಗಳನ್ನು ಈ ಮೂಲಕ ಅಬಿsವ್ಯಕ್ತಪಡಿಸುವ ಕವಿ ಗ್ರಾಮ ಸಂಸ್ಕøತಿಯ ತಾಜಾತನ, ಅದರ ಸಹಜತೆಗೆ ಮಾರುಹೋಗಿ ಅದರಲ್ಲಿ ಬದುಕಿನ ಅಂತಿಮ ಸಾರ್ಥಕತೆಯನ್ನು ಪ್ರಕಟಿಸಿದ್ದಾರೆ. ಬೇಂದ್ರೆ, ಕುವೆಂಪು ಅವರಂತೆ ಭಾಷೆಯನ್ನು ಹೇಗೆ ಬೇಕೊ ಹಾಗೆ ಹಿಂಜುವುದಕ್ಕೆ, ಹಿಂಡುವುದಕ್ಕೆ ಬೆಟಗೇರಿಯವರು ಹೋಗಿಲ್ಲ. ಭಾವವನ್ನು ಸ್ಪಷ್ಟಪಡಿಸುವ ಶಕ್ತಿಯನ್ನು ಬೆಟಗೇರಿಯವರ ಭಾಷೆ ಜಾನಪದದಿಂದ ಪಡೆದಿದೆ. ಸಂಭಾಷಣೆಯ ರೀತಿಯೂ ಜನಪದರ ಮಾತಿನ ಯಥಾವತ್ತ ರೂಪವಾಗಿದೆ. ಚೆಲುವೆ ಹೆಣ್ಣನ್ನು ಒಲಿದು ತಂದ ಅಣ್ಣನಿಗೆ ತಂಗಿ ಕೇಳುವ ಮಾತು ಗಮನಿಸಿ,
“ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು
ಮಾಟ ಮಾಡಿದೇನೋ”
‘ಎಲ್ಲಿಂದೀಕೀನ ಕರೆತಂದೆಣ್ಣಾ ಯಾರು ಹೇಳು ಈಕಿ’ ಎಂಬ ಮಾತಿನಲ್ಲಿ ಸಹಜತೆ ಇದೆ. ಜನಪದರ ಆಡುನುಡಿಯಲ್ಲಿ ಬಳಕೆಯಾಗುವ ಪಡೆನುಡಿ, ಗಾದೆ, ನಾಣ್ನುಡಿಗಳ ರೂಪಗಳು ಆನಂದಕಂದರ ಕಾವ್ಯದಲ್ಲಿಯೂ ಬೇಂದ್ರೆಯವರ ಕಾವ್ಯದಂತೆ ತುಂಬಿಕೊಂಡಿವೆ.
ಉಟ್ಟಾಳು ಹಸಿರು ಪತ್ತಲಾ
ಪತ್ತಲಲ್ಲ ಹೂವಿನ್ಹಿತ್ತಲಾ
( ನಾಜೂಕದ ನಾರಿ)
‘ಮುಂಗುರುಳು ಹಾರ್ಯಾಡುವ ಹಣಿ
ಚೆಲ್ವಿಕೆಯ ಖಣೀ’
(ಬೆಣ್ಣಿಯಾಕಿ)
ಹೀಗೆ ಅನೇಕ ರೂಪಗಳು ಮಾತಿನ ಮೋಡಿಯಿಂದ ಜಾನಪದರ ಶಕ್ತಿ ಸೌಂದರ್ಯ, ಮಾತಿನ ಶೈಲಿ ಸಿದ್ದಿ ಬೆಟಗೇರಿಯವರ ಕಾವ್ಯದಲ್ಲಿ ಸಮೃದ್ಧಗೊಂಡಿವೆ.
‘ನಾ ಸಂತಿಗೆ ಹೋಗಿನ್ನಿ – ಆಕಿ ತಂದಿದ್ದಾಳೋ ಬೆಣ್ಣಿ;
ಹಿಂಡು ಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ
(ಬೆಣ್ಣಿಯಾಕಿ)
‘ಹೆಜ್ಜೆ ಹೆಜ್ಜೆಗೂ ಘಿಲಿಘಿಲಿ, ಘಿಲಿಘಿಲಿ ಗೆಜ್ಜಿಯ ಕುಣಿಸುತ ಬರುವಾಕಿ’
(ಗೌಡರ ಮನಿಸೊಸಿ),
ಬುತ್ತೀ ತೊಗೊಂಡು ಹೋಗ್ತಿನಿ ಹೊಲಕ
ನಾ ಬರ್ತೀನಿ ಹೊತ್ತು ಮುಣುಗುದಕ
ಹೊಳಿ ದಂಡೀ ಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿ ಜೋಳ ನಿಲಾ
(ಬೆಳವಲ ಒಕ್ಕಲತಿ)
ಹೀಗೆ ಜನಪದ ಜೀವನದ ವೈವಿಧ್ಯಮಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಆನಂದಕಂದರು ‘ನಲ್ವಾಡುಗಳು’ ಸಂಕಲನದ ಕವಿತೆಗಳಲ್ಲಿ ಕಂಡರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ಬೆಳಗಾವಿ-ಧಾರವಾಡ-ವಿಜಾಪುರ ಭಾಗದ ಕನ್ನಡ ಭಾಷಾ ಪ್ರಭೇಧವನ್ನು ತಮ್ಮ ಕವಿತೆಗಳಲ್ಲಿ ಬಳಸಿಕೊಂಡಿದ್ದಾರೆ. ಸತ್ವಪೂರ್ಣ ಜಾನಪದೀಯ ಭಾಷೆ ಇಲ್ಲಿದೆ. ಒಟ್ಟಿನಲ್ಲಿ ‘ಆನಂದಕಂದ’ರ ಕವಿತೆಗಳು ಕನ್ನಡ ನವೋದಯ ಕಾವ್ಯ ಸಂದರ್ಭದಲ್ಲಿ ಜಾನಪದವನ್ನು ಅದರ ಮೂಲತನದಿಂದಲೇ ಎತ್ತಿಕೊಂಡಷ್ಟು ಪ್ರಭಾವಕ್ಕೆ ಒಳಗಾಗಿವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದರ ವಿವಿಧ ಲಯಗಳೆಲ್ಲವನ್ನು ಹಾಗೂ ಅವರ ಬದುಕಿನ ಕ್ರಮವನ್ನು ಅವರ ಕವಿತೆಗಳು ಯಶಸ್ವಿಯಾಗಿ ತನ್ನದಾಗಿಸಿಕೊಂಡಿವೆ. ಬೇಂದ್ರೆ, ಮಧುರಚೆನ್ನರಂತೆ ಜಾನಪದದ ಮಹತ್ವಪೂರ್ಣ ಸಾಧಕರಾಗಿ ಬೆಟಗೇರಿ ಕೃಷ್ಣಶರ್ಮರು ನವೋದಯ ಕಾವ್ಯದ ಸಂದರ್ಭದಲ್ಲಿ ಎದ್ದು ಕಾಣುತ್ತಾರೆ.

ಆನಂದ ಕಂದರ ಕಾವ್ಯಾವಲೋಕನ « ಅವಧಿ / avadhi

ಆನಂದ ಕಂದರ ಕಾವ್ಯಾವಲೋಕನ « ಅವಧಿ / avadhi

Monday 15 April 2013

ಕನ್ನಡ ಜನಪದಕ್ಕೆ ಮೊದಲ ನೇಗಿಲ ಹೂಡಿದ 'ಹಲಸಂಗಿ ಗೆಳೆಯರು.'



 ವಿಶೇಷ ಲೇಖನ

ಕನ್ನಡ ಜನಪದಕ್ಕೆ ಮೊದಲ ನೇಗಿಲು ಹೂಡಿದ ‘ಹಲಸಂಗಿ ಗೆಳೆಯರು

               
- ಡಾ.ಪ್ರಕಾಶ ಗ.ಖಾಡೆ

            ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ  ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ  ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಾಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು
    ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ  ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”
   
ಮಧುರ ಚೆನ್ನ
ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್‍ವುಲ್ ಪಿs್ಲೀಟರ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ  ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ.  1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಾಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ  ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.
 ಗರತಿಯ ಹಾಡು :
   ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.
        ‘ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಾಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುŒಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ.  ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. ಜನವಾಣಿ ಬೇರು: ಕವಿವಾಣಿ ಹೂವು’ ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.
ಬ್ಯಾಸಗಿ ದಿವಸಕ ಬೇವಿನ ಮರತಂಪ
ತವರ ಮನಿಯಾ ದೀಪ ತವರೇರಿ ನೋಡೇನ
ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ
ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ
ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ
ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ
ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು
ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ
ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...
     ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು.
ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು
ಅಳಿಯ ಎಂಥವರು ನನಗ್ಹೇಳ | ಹಂಪೀಯ
ವಿರುಪಾಕ್ಷಿಗಿಂತ ಚೆಲುವರು.
    ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾದಿsಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ”  ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.
     ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ  ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ  ಆಗಿದೆ.
                                                                        ಜಿ.ಬಿ.ಖಾಡೆ
       ‘ಗರತಿಯ ಹಾಡು’ ಗ್ರಾಮೀಣರ ಆಸರಿಕೆ ಬ್ಯಾಸರಿಕೆ, ಪ್ರೀತಿ ಪ್ರೇಮ, ಸರಸ ವಿರಸ, ಮಮತೆ ಬಾಂಧವ್ಯ ಹೀಗೆ ನಿತ್ಯ ಬದುಕಿನ ಸಮಗ್ರ ಭಾವಗಳ ಅಬಿsವ್ಯಕ್ತಿಯಾಗಿ ಕನ್ನಡ ಕಾವ್ಯವನ್ನು ಜನಮುಖಿಯಾಗಿ ಸಾರ್ವತ್ರಿಕಗೊಳಿಸಿತು. ಉತ್ತರ ಕರ್ನಾಟಕದ ವಿಶೇಷವಾಗಿ ತದ್ದೇವಾಡ ಪ್ರಾಂತದ ಆಡುಮಾತಿನ ಬಂಧ. ಬಳುಕುಗಳನ್ನು ಹೊತ್ತು ಹುಟ್ಟಿರುವ ಈ ತ್ರಿಪದಿಗಳಿಗೆ ಸರಿಮಿಗಿಲೆನ್ನಿಸುವ ಜನಪದ ಗೀತ ಸಂಗ್ರಹಗಳು ಕನ್ನಡದಲ್ಲಿ ಬಹಳ ಇಲ್ಲ ಎಂಬುದು ‘ಗರತಿಯ ಹಾಡು’ ಕೃತಿಯ ಹೆಗ್ಗಳಿಕೆ ಸಾರುತ್ತದೆ. ಮುಂದೆ ಇದೇ ಭಾಗದಲ್ಲಿ ಹಲಸಂಗಿ ಗೆಳೆಯರ ತರುವಾಯ ತ್ರಿಪದಿ ಸಂಕಲನಗಳು ಮೂಡಿ ಬಂದವು. ಅವುಗಳಲ್ಲಿ ಈಶ್ವರಚಂದ್ರ ಚಿಂತಾಮಣಿ ಅವರ ‘ಗರತಿಯರ ಮನೆಯಿಂದ’ ಹಾಗೂ ಜಿ.ಬಿ.ಖಾಡೆ ಅವರ ‘ಕಾಡು ಹೂಗಳು’ ಸಂಕಲನಗಳು ಹೆಚ್ಚು ಜನಪ್ರಿಯವಾದವು. ಹಲಸಂಗಿ ಗೆಳೆಯರ ಮತ್ತು ಚಿಂತಾಮಣಿ ಅವರ ತರುವಾಯ ಅಖಂಡ ವಿಜಾಪುರ ಜಿಲ್ಲೆಯ ಜನಪದ ಗೀತ ಸಾಹಿತ್ಯ ಸಂಗ್ರಹ, ಸಂಪಾದನಾ ಕಾರ್ಯದಲ್ಲಿ ತೊದಲಬಾಗಿ(ಜಮಖಂಡಿ)ಯ ಜಿ.ಬಿ.ಖಾಡೆ ಅವರು 1965ರಲ್ಲಿ  ಬಹುದೊಡ್ಡ ಕೆಲಸ ಮಾಡಿದರು. ಅವರು ಹಳ್ಳಿ ಹಳ್ಳಿ ಸುತ್ತಿ ಸಂಗ್ರಹಿಸಿದ ಬೀಸುವ ಕಲ್ಲಿನ, ಕೋಲಾಟದ ಹಾಗೂ ಹಂತಿ ಪದಗಳನ್ನು ಒಳಗೊಂಡ ತ್ರಿಪದಿ ಸಂಕಲನವು ‘ಕಾಡು ಹೂಗಳು’ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 1973ರಲ್ಲಿ ಪ್ರಕಟಿಸಿತು. ಮುಂದೆ ರಿವಾಯತ ಪದಗಳ ಸಂಕಲನ ‘ಹಳ್ಳಿ ಹಬ್ಬಿಸಿದ ಹೂಬಳ್ಳಿ’ ಹಾಗೂ ಡೊಳ್ಳಿನ ಮೇಳದವರು ಹೇಳಿದ 23 ಜನಪದ ಕಥೆಗಳ ‘ಬೆಳವಲ ಬೆಳಕು’ ಕೃತಿಗಳು 1981ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಹಲಸಂಗಿ ಗೆಳೆಯರ ಪರಂಪರೆಯು ಈ ಭಾಗದಲ್ಲಿ ಜಿ.ಬಿ.ಖಾಡೆ ಅವರಿಂದ ಮುಂದುವರೆಯಿತು.
ಜೀವನ ಸಂಗೀತ :
        ಹಲಸಂಗಿ ಗೆಳೆಯರು ಮೊದಲ ಬಾರಿಗೆ ಲಾವಣಿ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು..      ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್‍ವುಲ್ ಪಿs್ಲೀಟರ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ  ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. ‘ಜೀವನ ಸಂಗೀತ’ ಕೃತಿಯು ಹಲವು ನೆಲೆಗಳಲ್ಲಿ ಕನ್ನಡ ಕಾವ್ಯವನ್ನು ಚೇತನಗೊಳಿಸಿತು. ಮುಖ್ಯವಾಗಿ ಲಾವಣಿ ಕವಿಯ ಖಾಜಾಭಾಯಿಯನ್ನು ಮತ್ತು ಆತನ ಶೃಂಗಾರ ಕಾವ್ಯದ ರಸಪೂರ್ಣತೆಯನ್ನು ಕನ್ನಡ ಓದುಗರಿಗೆ ಕೊಟ್ಟಿತು. ಆಧುನಿಕ ಕನ್ನಡ ಕಾವ್ಯದಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ದಾಂಪತ್ಯ ಗೀತೆಗಳ ‘ಮೈಸೂರು ಮಲ್ಲಿಗೆ’ ಕನ್ನಡ ಸಹೃದಯರನ್ನು ಪ್ರಭಾವಿಸಿಕೊಂಡಂತೆ, ಕನ್ನಡ ನವೋದಯದ ಆರಂಭಕಾಲದಲ್ಲಿ ಖಾಜಾಭಾಯಿಯ ಶೃಂಗಾರ ಲಾವಣಿಗಳಿಂದ ‘ಜೀವನ ಸಂಗೀತ’ ಹೆಸರಾಯಿತು. ಸಂಗ್ರಹದ ಪರಿಚಯದಲ್ಲಿ ‘ಏಳು ಮಂದಿ ಲಾವಣಿಕಾರರ ಮಿಗಿಲಾದ ಹನ್ನೆರಡು ಲಾವಣಿಗಳನ್ನು ನಾಡಿಗರ ಇದಿರಿಗೆ ಇಟ್ಟಿದ್ದೇವೆ. ಅಲ್ಲದೆ ಎರಡು ಚಿಕ್ಕ ಲಾವಣಿಗಳುಂಟು. ಅವುಗಳನ್ನು ಇಡೀ ಸಂಗ್ರಹದ ಮೊದಲೊಂದು ಕೊನೆಗೊಂದು ಸೇರಿಸಿ ದ್ದೇವೆ.’ ಎಂದಿದ್ದಾರೆ ಸಂಗ್ರಹಕಾರರು. ಇಲ್ಲಿ ಹಲಸಂಗಿಯ ಲಾವಣಿಕಾರ ಖಾಜಾಭಾಯಿಯ ಲಾವಣಿಗಳೇ ಹೆಚ್ಚಾಗಿದ್ದು, ಅವೆಲ್ಲ ಅತ್ಯಂತ ಮನೋಜ್ಞವಾಗಿವೆ. ಅಲ್ಲದೆ ಕುಬ್ಬಣ್ಣ, ಸಂಗಣ್ಣ, ನಾನಾ ಸಾಹೇಬ, ನ್ಯಾಮಣ್ಣ, ಶಿವಲಿಂಗ, ಗೋಪಾಳ ದುರದುಂಡಿ, ಸಿದ್ದೂ-ಶಿವಲಿಂಗ ಇವರ ರಚನೆಗಳಿವೆ. ಆ ಕಾಲದ ಕಾವ್ಯದ ನೀರಸ ಬಗೆಯನ್ನು ಸಂಗ್ರಹಕಾರರು ಕೃತಿಯ ಪರಿಚಯದಲ್ಲಿ ಹೇಳುತ್ತ ಕನ್ನಡ ಕಾವ್ಯಕ್ಕೆ ಜೀವಂತಿಕೆಯನ್ನು ತುಂಬುವ ಈ ಲಾವಣಿಗಳನ್ನು ನಾವು ಸಂಗ್ರಹಿಸಬೇಕಾಯಿತು ಎನ್ನುತ್ತಾರೆ.
       ‘ಶೃಂಗಾರ’ ಪ್ರಧಾನವಾದ ‘ಜೀವನ ಸಂಗೀತ’ ಲಾವಣಿ ಕೃತಿ ಕನ್ನಡ ಕಾವ್ಯಕ್ಷೇತ್ರಕ್ಕೆ ದೇಸೀಯತೆಯ ಹೊಸಸ್ಪರ್ಶ ನೀಡಿತು. ಇಲ್ಲಿಯ ಅಸಲಜಾತ ಹೆಣ್ಣು, ಸಂಪಿಗಿ ತೆನಿಯಂಥ ಹುಡುಗ, ವತ್ಸಲಾಪಹರಣ, ಚಂದ್ರಣಿ, ಕೃಷ್ಣಲೀಲೆ, ಗಿಡ್ಡಪೆÇೀರಿ ಈ ಕವಿತೆಗಳೆಲ್ಲ ಶೃಂಗಾರವನ್ನು ಒಂದು ರಸಗಟ್ಟಿಯಾಗಿ ಮಾಡಿಕೊಂಡಿವೆ. ಹಾಗೆಯೇ ‘ಜೀವನ ಸಂಗೀತ’ದಲ್ಲಿ ಶೃಂಗಾರದೊಂದಿಗೆ ಹಾಸ್ಯರಸವು ಜೊತೆಯಾಗಿಯೇ ಬಂದಿದೆ.    
        ಒಟ್ಟಾರೆ ‘ಜೀವನ ಸಂಗೀತ’ವು ಕನ್ನಡ ಲಾವಣಿ ಸಾಹಿತ್ಯದ ಒಂದು ಬಹುಮುಖ್ಯವಾದ ಕೃತಿಯಾಗಿ ಹೊರಹೊಮ್ಮುವುದರೊಂದಿಗೆ ಆ ಕಾಲಕ್ಕೆ ಅಡಿಯಿಟ್ಟ ಕನ್ನಡ ನವೋದಯಕ್ಕೆ ಮೊದಲ ಪಂಕ್ತಿಯ ಸಾಧಕ ಕೃತಿ ಎನಿಸಿತು. ಇಲ್ಲಿಯ ಎಲ್ಲ ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು.
 ಮಲ್ಲಿಗೆ ದಂಡೆ :
      ಹೆಣ್ಣು ಮಕ್ಕಳ ಹಾಡು ಸಂಗ್ರಹವಾದ ‘ಮಲ್ಲಿಗೆ ದಂಡೆ’ ಕೃತಿಯನ್ನು ಕಾಪಸೆ ರೇವಪ್ಪನವರು ಸಂಪಾದಿಸಿಕೊಟ್ಟರು.ಗ್ರಾಮೀಣರ ಜನಜೀವನದ ಮೇಲೆ ಹಾಡು ಹಾಸು ಹೊಕ್ಕಾಗಿರುವುದನ್ನು ‘ಮಲ್ಲಿಗೆ ದಂಡೆ’ಯ ಹಾಡುಗಳು ನಿರೂಪಿಸಿವೆ. ಇಲ್ಲಿ ಜನಪದರ ಆಚರಣೆಗಳ ವಿಶಿಷ್ಟ ಹೆಣಿಕೆ ಇದೆ. ಸ್ತುತಿಪದ, ಪ್ರಣಯ, ಭಾವಗೀತೆ, ಕಥೆಯ ಹಾಡು, ಮದುವೆಯ ಹಾಡು, ಸೋಬಾನದ ಹಾಡು, ಹಾಸ್ಯದ ಹಾಡು ಮುಂತಾದ ಸಾಂದಬಿರ್sಕ ಹಾಡುಗಳು ಇಲ್ಲಿ ಸಂಗ್ರಹಿಸಲಾಗಿದೆ. ಜನಪದರು ನಿತ್ಯ ಹೊಸತಾಗುವ, ಹೊಸತನಕ್ಕಾಗಿ ತೆರೆದುಕೊಳ್ಳುವ  ವಿಶಿಷ್ಟತೆಗೆ ಸಾಕ್ಷಿಯಾಗಿ ಅವರ ಹಾಡುಗಳು ಮತ್ತು ಹಾಡೊಳಗಿನ ವಸ್ತು ಸಂಗತಿಗಳು ಪ್ರಧಾನವಾಗುತ್ತವೆ. ‘ರೇವಪ್ಪನವರ ಸಾಹಿತ್ಯಿಕ ಕಾರ್ಯಗಳಲ್ಲಿ ಚಿರಸ್ಮರಣೀಯವಾದದ್ದು ಮಲ್ಲಿಗೆ ದಂಡೆ, ರೇವಪ್ಪನವರ ಈ ಪರಿಶ್ರಮವು ಕನ್ನಡ ಸಾರಸ್ವತ ಪ್ರಪಂಚ ಎಂದೂ ಮರೆಯದಂತಹದು.’ ಮಧುರಚೆನ್ನರು ಈ ಕೃತಿಯ ಮುನ್ನುಡಿಯಲ್ಲಿ ಕೃತಿಯ ಮೌಲ್ಯವನ್ನು ಪ್ರಕಟಪಡಿಸಿದ್ದಾರೆ. ಅಲ್ಲದೆ ಆಧುನಿಕ ಕನ್ನಡ  ಕಾವ್ಯ ಕಟ್ಟುವ ಮಾಲೆಗಾರರಿಗೆ ಇಲ್ಲಿ ಹೂವ ತಂದು ಇಟ್ಟ ಬಗ್ಗೆ ಅವರು ಹೀಗೆ ಬರೆಯುತ್ತಾರೆ. ‘ವರಕವಿಗಳು ಉದಯಿಸುವ ಮುಂಚೆ ನಮ್ಮಂಥ ನರಕವಿಗಳ ಜಂಗುಳಿಯೇಳುವುದು ಅನಿವಾರ್ಯ. ಇವರ ಕಾವ್ಯಶಕ್ತಿಯು ಸಾಗುವಳಿಯಿಂದ ಬೆಳೆಯಬೇಕಾದದ್ದು. ಇವರ ಸಸಿಗೆ ಹೊರಗಿನ ನೀರೂ ಹವೆಯೂ ಕಾಲಕಾಲಕ್ಕೆ ಒದಗಬೇಕು. ಈ ದೃಷ್ಟಿಯಿಂದ ಸಂಗ್ರಹಿಸಿದ ಪ್ರಸ್ತುತ ಗೀತ ಗುಚ್ಫವು ನವ್ಯ ಕಾವ್ಯಕುಮಾರಿಯ ಕಳೆಯನ್ನು ಹೆಚ್ಚಿಸುವುದಕ್ಕೆಂದು ಅವಳಿಗೆ ಕಟ್ಟಿದ ‘ಮಲ್ಲಿಗೆ ದಂಡೆ’ಯಾಗಿದೆ ಎಂದಿದ್ದಾರೆ.
     ‘ಮಲ್ಲಿಗೆ ದಂಡೆ’ ಕೃತಿಗೆ ವಿಶಿಷ್ಟತೆ ಪ್ರಾಪ್ತವಾಗಿರುವುದು ಇಲ್ಲಿನ ಜನಪದರ ಮನೆ ಮನೆಗಳಲ್ಲಿ ಆಚರಣೆಗಳನ್ನು ಕಟ್ಟಿಕೊಡುವಲ್ಲಿ. ಭಟಗಿ ಹಾಡು, ಒಳಕಲ್ಲ ಪೂಜೆ ಹಾಡು, ಅರಿಷಿಣ ಹಚ್ಚೋ ಹಾಡು, ಐರಾಣಿಯ ಹಾಡು,  ಸಂಡಿಗಿ ಕಡಿಯುವ ಹಾಡು, ನೂಲು ಸುತ್ತುವ ಹಾಡು, ಅಡಿಕೆ ಆಡುವ ಹಾಡು, ಭೂಮದ ಹಾಡು, ಬೀಗರ ಹಾಡು, ಕೂಸು ಒಪ್ಪಿಸುವ ಹಾಡು ಮೊದಲಾದವು ಮದುವೆ ಸಂದರ್ಭವನ್ನು ಕಟ್ಟಿಕೊಟ್ಟರೆ, ಮನಸ ಜೈನರ ಮಡದಿ, ಹಿಂಬಳಿ ಮುಂಬಳಿ, ರನ್ನದುಡುಗಣಿ, ಬಾಲಿ ತಾ ಮೈನೆರದು, ಹಣಿಯಂಬೊ ಭಾಂವಕ, ಹಸು ಮಗಳS ನೀಲಮ್ಮ ಹಾಡುಗಳು ಸೋಬಾನೆ ಪದಗಳಾಗಿವೆ. ಅಲ್ಲದೆ ಕುಬಸಾ ಮಾಡೊ ಹಾಡು, ಬಯಕೆಯ ಹಾಡು, ಉಡಿ ತುಂಬುವ ಹಾಡು, ಬೇನೆ ತಿನ್ನುವ ಹಾಡು, ತೊಟ್ಟಿಲಲ್ಲಿ ಹಾಕುವ ಹಾಡು ಮುಂತಾದ ವಿಶಿಷ್ಟ ಸಂದರ್ಭದ ಹಾಡುಗಳು ಇಲ್ಲಿವೆ. ಮದುವೆ ಮೊದಲಾದ ಸಂದರ್ಭಗಳಲ್ಲಿ ಜರುಗುವ ಹಾಸ್ಯದ ಪ್ರಸಂಗದ ಹಾಡುಗಳೂ ಇಲ್ಲಿವೆ. ಈ ಎಲ್ಲಾ ಹಾಡುಗಳ ಕೊನೆಯಲ್ಲಿ ಪ್ರತಿ ಹಾಡಿನ ಅರ್ಥ, ಸಂದರ್ಭ ಮತ್ತು ಪ್ರಾದೇಶೀಕ ಪದಗಳ ಅರ್ಥ ಹಾಗೂ ಛಂದಸ್ಸು ವಿವರಿಸಲಾಗಿದೆ. ಹೀಗಾಗಿ ‘ಮಲ್ಲಿಗೆ ದಂಡೆ’ ಸಂಕಲನವು ಜನಪದ ಗೀತ ಸಂಗ್ರಾಹಕರಿಗೆ ಒಂದು ಮಾದರಿ ಎನಿಸಿದೆ.
ಮದುವೆ, ಸೋಬಾನೆಗಳಲ್ಲಿ ಹೆಣ್ಣು ಮಕ್ಕಳ ಹೆರಳ ತುಂಬ ‘ಮಲ್ಲಿಗೆ ದಂಡೆ’ಯದೇ ಘಮಘಮಿಪ ಶೃಂಗಾರ. ಈ ಶೀರ್ಷಿಕೆಯ ಸಾರ್ಥಕತೆ ಎಂಬಂತೆ ಇಲ್ಲಿನ ಒಂದೊಂದು ಹಾಡೂ ‘ಮಲ್ಲಿಗೆ ದಂಡೆ’ಯ ಸುವಾಸನೆಯನ್ನೂ, ಮೋಹಕತೆಯನ್ನು ಒಟ್ಟಿಗೆ ನೀಡುತ್ತದೆ.
ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನಿಕಾಯಿ
ಮಸರ ಕಲಸಿದ ಬುತ್ತಿ ಬಿಸಿಯ ಬಾನ
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ |
ಬಂಕಿ ಕಾಡತಾವ
ಬಸುರಿದ್ದ ಹೆಣ್ಣು ಬಯಸುವ ಈ ತಿನಿಸುಗಳು ಬೆಳವಲನಾಡಿನ ವಿಶಿಷ್ಟ ಆಹಾರ ಕ್ರಮವನ್ನು ಸಾರುತ್ತವೆ ಮತ್ತು ಅವರ ಆರೋಗ್ಯಕ್ಕೆ ಬೇಕಾದ ಆಹಾರದ ಮತ್ತು ವಿಶ್ರಾಂತಿಯ ಅರಿವನ್ನು ಒಟ್ಟಿಗೆ ನೀಡುತ್ತವೆ. ‘ಗ್ರಾಮೀಣ ಭಾವ ಸಂಪತ್ತಿಗೆ ಈ ಹಾಡುಗಳು ಒಳ್ಳೆಯ ನಿದರ್ಶನಗಳಾಗಿವೆ.’ ಒಟ್ಟಾರೆ ಗುರುಲಿಂಗ ಕಾಪಸೆ ಅವರು ಗುರುತಿಸಿರುವಂತೆ ‘ಮಲ್ಲಿಗೆ ದಂಡೆ’ ಒಟ್ಟು ಸಂಗ್ರಹವೇ ಜನಪದ ಹಾಡುಗಳ ಪರಿಮಳ ಸೂಸುವ ಒಂದು ಅಪೂರ್ವ ಸಂಗ್ರಹ. ರೇವಪ್ಪನವರು ತೆಗೆದುಕೊಂಡ ಪರಿಶ್ರಮ, ಸಂಪಾದನಾ ಕಾರ್ಯದಲ್ಲಿ ತೋರಿದ ಶ್ರದ್ಧೆ, ಆಯ್ಕೆಯಲ್ಲಿ ತೋರಿಸಿಕೊಟ್ಟ ಔಚಿತ್ಯ ಪ್ರe್ಞÉ ಮುಂತಾದವುಗಳೆಲ್ಲ ಶ್ಲಾಘನೀಯವಾದವು.
        ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪೂರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡುಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಬಿsಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
=======================================================================

                                                              ವಿಳಾಸ :
ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ.  ಮೊ. 9845500890

Friday 5 April 2013

ಕನ್ನಡ ಜನಪದ ದಲ್ಲಿ ಪ್ರಕಟವಾದ ಲೇಖನ :



ಗುರುವಾರ 4 ಎಪ್ರಿಲ್ 2013

ಅಂತರಾಷ್ಟ್ರೀಯ ಪ್ರಜ್ಞೆ ಮತ್ತು ದೇಸೀಯತೆ.

  -ಡಾ.ಪ್ರಕಾಶ ಗ.ಖಾಡೆ

  ನಮ್ಮಲ್ಲಿ ಸ್ಥಳೀಯತೆ ಎಂಬುದು ನಗಣ್ಯ ಆದ ಸಂದರ್ಭದಲ್ಲಿ ಇಲ್ಲಿ ದೇಸೀ ಜೀವನಮುಖಿಯಾದ ಮೌಖಿಕ ಕಾವ್ಯ ಪ್ರಕ್ರಿಯೆಯು ತನ್ನ ಅಸ್ತಿತ್ವದ ನೆಲೆಗಾಗಿ ಯಾವುದೇ ಬಗೆಯ ಪ್ರಯತ್ನವಾದಿ ಹುಡುಕಾಟಕ್ಕೆ ತಾನು ನಿಲ್ಲದೆ, ಹಾಗೆಂದು ತೋರುಗೊಡದೆ ಅದು ಸದಾ ಪ್ರವಹಿಸುತ್ತಿರುವುದು ಅದರ ಜಾಗೃತಿ ಮತ್ತು ಜೀವಂತಿಗೆಯ ಹೆಚ್ಚುಗಾರಿಕೆಯಾಗಿದೆ. ಆದರೆ ಅದೊಂದು ಅದಿsಕೃತತೆ ಪ್ರಾಪ್ತವಾಗುವ ಸಮಯ ಸಂದರ್ಭಕ್ಕಾಗಿ ಕಾಯುತ್ತಿತ್ತು. ಹೀಗೆ ಈ ನಾಡಿನ ಬಹುಮುಖಿ ದೇಸೀ ಕವಿತ್ವ ರಚನಾಕಾರರು, ಹಾಡುಗಾರರು, ಮೇಳದವರು ಕಟ್ಟಿಕೊಂಡ ಕೇಳುಗ ನೆಲೆಯನ್ನು ಸದಾ ಹಸಿಯಾಗಿಯೇ ಇಟ್ಟುಕೊಂಡು ಬಂದು ತನ್ನ ಸಮೃದ್ಧ ನೆಲದ ಪೈರಿಗಾಗಿ ಕಾದು ಕೊಂಡು ಬಂದ ಈ ಬಗೆಯ ಫಲವತ್ತತೆಗೆ ಸಾಕ್ಷಿಯಾಗಿ ಮೌಖಿಕ ಕಾವ್ಯ ಸಂವಹನ ಸಂದರ್ಭಗಳು ಹೆಚ್ಚು ತೋರುಗೊಳ್ಳುತ್ತ ಒಂದು ನಿರಂತರತೆಯ ಪ್ರಕ್ರಿಯೆಗೆ ಒಳಗಾಗುವುದು ಇದೆ.
    ಇಲ್ಲಿ ಮೊದಲಿನಿಂದಲೂ ಮಾರ್ಗ-ದೇಸೀ, ಶಿಷ್ಟ-ಜಾನಪದ, ನಗರ-ಗ್ರಾಮೀಣ ಎಂಬ ಈ ಬಗೆಯ ವಾಗ್ವಾದಗಳು ನಡೆದುಕೊಂಡು ಬಂದಿವೆ. ಇಂಥ ವಾಗ್ವಾದಗಳನ್ನು ಕೆಲ ಉದಾಹರಣೆಗಳ ಮೂಲಕ ಒಟ್ಟು ಕಾವ್ಯ ಸಂದರ್ಭವನ್ನು ಪ್ರತ್ಯೇಕವಾಗಿಟ್ಟುಕೊಂಡು ನೋಡಿದರೂ ಒಂದರೊಳಗೊಂದರ ಬೆಸುಗೆ ಬಿಡಿಸುವಲ್ಲಿ ಒಂದು ಬಗೆಯ ೞsದ್ರತೆಯ ಸೃಷ್ಟಿಗೆ ಒಳಗಾಗುತ್ತೇವೆ. ಏಕೆಂದರೆ ದೇಸಿ, ಜಾನಪದ, ಗ್ರಾಮ್ಯವೆನ್ನುವುದು ನಮ್ಮ ಕಾವ್ಯ ರಚನಾ ವ್ಯಕ್ತತೆಯ ಉದ್ದಕ್ಕೂ ತನ್ನ ಅಸ್ತಿತ್ವ, bsಪು ಮೂಡಿಸಿಕೊಂಡೆ ಬಂದಿದೆ. ಕಿ.ರಂ. ನಾಗರಾಜರು ಗುರುತಿಸುವಂತೆ.
   ಕನ್ನಡದ ಮಟ್ಟಿಗೆ ಹೇಳುವುದಾದರೆ ಶಿಷ್ಟ ಎಂಬ ಪ್ರಭೇದವೇ ಒಂದು ರೀತಿಯಲ್ಲಿ ಅಸ್ಪಷ್ಟವೂ, ಕೃತಕವೂ ಆಗಿದೆ. ಏಕೆಂದರೆ ವಚನಕಾರರಾಗಲಿ, ಹರಿಹರ, ರಾಘವಾಂಕ, ಕುಮಾರವ್ಯಾಸ, ಕೀರ್ತನಕಾರರು, ಲಕ್ಷ್ಮೀಶ, ಸರ್ವಜ್ಞ ಇವರ ಕೃತಿಗಳು ನಮ್ಮ ಗ್ರಾಮೀಣ ಸಂಸ್ಕೃತಿಯ ಅತ್ಯಂತ ಪ್ರಮುಖ ಭಾಗವಾಗಿ ಹರಡಿಕೊಂಡಿವೆ.ನಮ್ಮ ಹಿಂದಿನವರ ಈ ಕಾವ್ಯಗಳು ಸ್ಥಳೀಯವಾದವನ್ನೇ ಹೆಚ್ಚು ಜನಪದಗೊಳಿಸಿರುವುದು ಹಾಗೂ ನಂತರದ ಇವತ್ತಿಗೂ ಪುರಾಣ, ಪ್ರವಚನಗಳಲ್ಲಿ ಹೇಳಿಕೊಂಡು ಬರುತ್ತಿರುವ ’ಶೂನ್ಯ ಸಂಪಾದನೆ’ ಬಸವ ಪುರಾಣ, ’ರಾಜಶೇಖರ ವಿಳಾಸ’, ’ನೇಮಿಜಿನೇಶ ಸಂಗತಿ’, ’ಹರಿಭಕ್ತಿಸುಧೆ’, ’ಹರಿಕಥಾಮತೃಸಾರ’ - ಇವುಗಳು ಈಗಿನ ಸಂದರ್ಭದಲ್ಲೂ ಹೆಚ್ಚು ಜನಪದವಾಗಿರುವುದು ಅವುಗಳ ಜಾನಪದೀಯತೆಯನ್ನೇ ಸಾರುತ್ತವೆ.

   ಪ್ರದೇಶ ಮತ್ತು ಸಂದರ್ಭಗಳು ವಿಸ್ತೃತವಾಗುತ್ತ ಸಾಗಿದಂತೆ ಮಾರ್ಗ-ದೇಸೀ ಒಂದರೊಳಗೊಂದು ಹುಟ್ಟು ಪಡೆಯುವ ಸಾಧ್ಯತೆ ಇದೆ. ’ಐರೋಪ್ಯ ಮಾರ್ಗದ ಎದುರಿನಲ್ಲಿ ಸಂಸ್ಕೃತವು ದೇಸೀಯಾಗಿ ಕಂಡರೆ, ಸಂಸ್ಕೃತ ಮಾರ್ಗದ ಎದುರಿನಲ್ಲಿ ದೇಶಭಾಷೆಗಳು ದೇಸೀಯವಾಗಿ ಕಾಣುತ್ತವೆ. ಅದೇ ದೇಶ ಭಾಷಾ ಸಾಹಿತ್ಯಗಳ ಲಿಖಿತ ಮಾರ್ಗದ ಎದುರಿನಲ್ಲಿ ಅದೇ ದೇಶ, ಭಾಷಾ ಸಾಹಿತ್ಯಗಳ ಅಲಿಖಿತ ನೆಲೆಗಳು ದೇಸೀ ಆಗುತ್ತವೆ. ಮಾರ್ಗವೇ ದೇಸೀಯಾಗುವ, ದೇಸೀಯೇ ಮಾರ್ಗವಾಗುವ, ಮಾರ್ಗದೊಳಗೆ ಮಾರ್ಗವಿರುವ, ದೇಸೀಯೊಳಗೆ ದೇಸೀಯಿರುವ ಸಂಕೀರ್ಣವಾದ ನೇಯ್ಗೆಯನ್ನು ಇಲ್ಲಿ ಗ್ರಹಿಸಬೇಕಾಗಿದೆ. ಹೀಗಾಗಿ ಒಂದು ಸಂದರ್ಭದ ಕಾವ್ಯದಲ್ಲಿ ಈ ದೇಸೀಯ ಹುಡುಕಾಟವು ಒಂದು ರೀತಿಯಲ್ಲಿ ಮಾರ್ಗಮುಖಿ ನೆಲೆಗಳನ್ನು ಗುರುತಿಸುತ್ತದೆ. ಯಾಕೆಂದರೆ ವಿಸ್ಮೃತಿಗೆ ಒಳಗಾದ ಈ ಬಗೆಯ ಸಾಹಿತ್ಯ ಶೋಧನೆ ಅದು ಪ್ರಭಾವಿಸಿಕೊಂಡ ನೆಲೆಗಳಿಂದ ಹುಡುಕಿ ಕಟ್ಟಿಕೊಡಬೇಕಾಗುತ್ತದೆ.

    ಹೀಗೆ ಪಂಪ ಸಾರಿದಂತೆ ’ದೇಸೀಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ಪುದು’ ಎಂದು ಸಾರಿದಂತೆ ಪಾರಂಪರಿಕ ಕ್ರಿಯೆ ಪ್ರಕ್ರಿಯೆ ರೂಪದ ಸ್ವದೇಶೀ ಸತ್ಯಗಳನ್ನು ಶೋದಿsಸುವುದು ಈ ಸಂದರ್ಭದ ಅಗತ್ಯವಾಗಿದೆ. ವಸಾಹತುಶಾಹಿ ಸಂದರ್ಭದ ನೆಲೆಯಲ್ಲಿ ದೇಸೀವಾದಿ ಚಿಂತನೆಗಳು ಹುಟ್ಟಿಕೊಳ್ಳುವ ಮೂಲಕ ಸ್ಥಳೀಯ ಕಾವ್ಯಕ್ಕೆ ಒಂದು ಬಗೆಯ ಜೀವಂತಿಕೆಯ ಅರಿವಾಯಿತು. ವಸಾಹತುಶಾಹಿ ತನ್ನ ಉದ್ದೇಶದ ಈಡೇರಿಕೆಗಾಗಿ ಬಳಸಿದ ತಂತ್ರಗಳು ಒಟ್ಟು ದೇಸಿತನವನ್ನು ಹತ್ತಿಕ್ಕುವುದೇ ಆಗಿತ್ತು. ಆದರೆ ಪುರಾತನ ಜಾಗೃತಿಯೊಂದಿಗೇ ನಡುವೆಯೇ ಬಂದ ಇಂಥ ಚಿಂತನೆಗಳು ವ್ಯಾಪಕವಾಗಿ ಹಬ್ಬದಿರಲು ಇಲ್ಲಿನ ಗಟ್ಟಿಗೊಂಡ ಸಾಂಸ್ಕೃತಿಕ ಸಂದರ್ಭಗಳು ವಿಸ್ತಾರವಾಗಿ ಹಬ್ಬಿದ ಭೌಗೋಳಿಕ ಸನ್ನಿವೇಶಕ್ಕೆ ಪೂರಕವಾಯಿತು.
ವಸಾಹತುಶಾಹಿ ಸಂದರ್ಭವು ತನ್ನ ಅಸ್ತಿತ್ವಕ್ಕಾಗಿ ಇಲ್ಲಿ ಗೊಂದಲಗಳನ್ನು ಸೃಷ್ಟಿಸಬೇಕಾಯಿತು. ’ವಸಾಹತುಶಾಹಿ ಮುಖ್ಯ ಗುರಿಯೆಂದರೆ ದೇಸೀಯ ಸಂಸ್ಕೃತಿಗಳ ಬಹುಮುಖತ್ವವನ್ನು ಹತ್ತಿಕ್ಕುವುದು, ಅವುಗಳ ಅನನ್ಯತೆಯನ್ನು ನಾಶಮಾಡಿ ಅವುಗಳನ್ನು ಸಾಂಸ್ಕೃತಿಕ ವಸಾಹತುಗಳನ್ನಾಗಿ ಪರಿವರ್ತಿಸುವುದು, ಇಂಥ ಸಂದರ್ಭದಲ್ಲಿ ಪರಸ್ಪರ ವಿನಿಮಯದ ಬದಲು ಯಜಮಾನಿಕೆಯೇ ಮುಖ್ಯವಾಗುತ್ತದೆ. ವಸಾಹತುಶಾಹಿಯ ಉದ್ದೇಶಗಳು ಪೂರ್ತಿ ಈಡೇರದಿದ್ದರೂ ದೇಸೀಯ ಸಂಸ್ಕೃತಿಯಲ್ಲಿ ಏರುಪೇರುಗಳು ಉಂಟಾಗುತ್ತವೆ. ದೇಸೀವಾದಿ ನಿಲುವುಗಳು ಹುಟ್ಟಿಕೊಳ್ಳುವುದು ಇಂಥ ಸನ್ನಿವೇಶದಲ್ಲಿ’ ಎಂಬುದನ್ನು ರಾಜೇಂದ್ರ ಚೆನ್ನಿ ಅವರ ಹೇಳಿಕೆಯಿಂದ ಸ್ಪಷ್ಟ ಪಡಿಸಲು ಸಾಧ್ಯ.

    ಈ ಸಂಘರ್ಷದ ನೆಲೆಯಲ್ಲಿ ತನ್ನ ಭಾಷೆ, ಸಂಸ್ಕೃತಿಯ ಅಬಿsಮಾನದ ನೆಲೆ ಮುಂಚಿನಿಂದಲೂ ಇಲ್ಲಿ ಬಂದಿದೆ. ಅನ್ಯ ಸಂಸ್ಕೃತಿಯ ಒತ್ತಡಗಳು ತುಂಬಾ ಸಪ್ಪಳ ಮಾಡಿಕೊಂಡು ಬರಲು ಆಕರ್ಷಣೆಗೆ ತೆರೆದುಕೊಂಡರೂ ಇಲ್ಲಿನ ಜನಸಮುದಾಯದ ಸ್ಥಳೀಯತೆಯನ್ನು ಬಿಟ್ಟು ಕೊಡಲಿಲ್ಲ. ಮಾತು ವ್ಯವಹಾರ ಅದು ಎಷ್ಟೇ ಸ್ಥಳೀಯವಾದುದು ಆಗಿರುತ್ತದೆಯೋ ಅಲ್ಲಿ ಸಹಜ ಬದುಕಿಗೆ ದಾರಿಯಾಗುತ್ತದೆ. ದೇಸಿಯತೆಯ ನೆಲೆಗಳನ್ನು ತಟ್ಟಿಕೊಂಡು ಬಂದ ವಸಾಹತುಶಾಹಿ ಬಾಹುಗಳು ಇಲ್ಲಿ ಸ್ಥಳೀಯವಾದುದನ್ನು ಹತ್ತಿಕ್ಕಲು ನೋಡಿದ್ದೇ ಹೆಚ್ಚು. ಆದರೆ ಆ ಸಂದರ್ಭಕ್ಕೆ ನಮ್ಮವರು ಕಾದುಕೊಂಡು ಬಂದ ಸ್ಥಳೀಯ ಕೋಮಲ, ನಿರ್ಮಲ ಭಾವಗಳು ಭಾವುಕ ನೆಲೆಯಲ್ಲಿ ನಿಲ್ಲದೆ ಅರ್ಥ ಮಾಡಿಸಿದ್ದು  ಸಾಧನೆ. ಲಂಕೇಶ್ ಅವರು ಒಂದು ಕರ್ತವ್ಯವನ್ನು eಪಿಸುತ್ತಾರೆ.’ನಾವು ಈಗ ಈ ಜಗತ್ತಿನಲ್ಲಿರುವ ನೂರಾರು ಸಾಂಸ್ಕೃತಿಕ ವಲಯಗಳನ್ನು ಗಮನಿಸಿದರೆ, ಸ್ಥಳೀಯ ನಂಬಿಕೆ ಮತ್ತು ಆಚರಣೆಗಳನ್ನು ಅಭ್ಯಸಿಸಿದರೆ ಈ ಸಂಸ್ಕೃತಿಗಳು ಅಂತರ್‌ರಾಷ್ಟ್ರೀಯ ಪ್ರeಯ ಜೊತೆಗೆ ಸಂಘರ್ಷಿಸುವುದು ಖಂಡಿತ ಅನ್ನಿಸುತ್ತದೆ. ಬೇಂದ್ರೆಯವರ ಸಾಧನಕೇರಿಯ ಚೆಂದ, ಅರ್ಥದ ಈ ಅಂತರಾಷ್ಟ್ರೀಯ ಮನಸ್ಸರಿಗೆ ತಿಳಿಯುವುದು ಕಷ್ಟ.

    ಅಂತರ್‌ರಾಷ್ಟ್ರೀಯವೆಂದರೆ ಏನು? ಈ ಅಂತರ್‌ರಾಷ್ಟ್ರೀಯ ಮನುಷ್ಯನಿಗೆ ಇಡೀ ಜಗತ್ತು ಒಂದು’ ಎಂಬ ಲಂಕೇಶ್‌ರ ಚಿಂತನೆಯು ಬಳಕೆಯ ಸಂದರ್ಭಗಳಲ್ಲಿ ಸ್ಥಳೀಯವಾದಕ್ಕೆ ಹೊರಗಿನ ಪ್ರಭಾವಗಳು ಉಂಟುಮಾಡಿದ ಒತ್ತಡಗಳು ಅರ್ಥರೂಪಿ ಸಂದರ್ಭದಲ್ಲಿ ಮೌಲ್ಯಕಳಕೊಳ್ಳುವ ಸೂಚನೆ ಸಾರುತ್ತದೆ. ಅವರೇ ಈ ಚಿಂತನೆಯ ಮುಂದುವರಿಕೆಯಾಗಿ ಹೇಳುತ್ತಾರೆ. ಮಾತೃಭಾಷೆ ಮತ್ತು ಪರಿಸರ ಒಂದು ಸಮುದಾಯಕ್ಕೆ ಮತ್ತು ಆ ಸಮುದಾಯದ ಸೂಕ್ಷ್ಮ ವ್ಯಕ್ತಿಗಳಿಗೆ ಕಾಣುವ ಹಾಗೆ ಒಂದು ಅಂತಾರಾಷ್ಟ್ರೀಯ ಮನಸ್ಸಿಗೆ ಕಾಣುವುದಿಲ್ಲ. ಆ ಮನಸ್ಸಿಗೆ ಎಲ್ಲ ಒಂದೇ. ತಲೆ, ಹೃದಯ ಎರಡೂ ಇಲ್ಲದ ವಸ್ತು. ಆದ್ದರಿಂದಲೇ ಅಂತರ್‌ರಾಷ್ಟ್ರೀಯ ಪ್ರeಯೇ ಒಂದು ಅಸ್ತ್ರವಾಗುತ್ತಿರುವಾಗ ನಾವು ನಮ್ಮ ಸ್ಥಳೀಯ ಕೋಮಲ ವೈಯಕ್ತಿಕ ಕೃತಿಗಳನ್ನು ರಕ್ಷಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಈ ಸ್ಥಳೀಯ ಕೋಮಲ ಕೃತಿಗಳೇ ಆಧುನಿಕ ಕಾವ್ಯವನ್ನು ರೂಪಿಸುವಲ್ಲಿ ಕಾರಣವಾದ ಸಂದರ್ಭವನ್ನು ಕಟ್ಟಿಕೊಡಲು  ದೇಸೀಯ ಹಾಡು ಸಂಪ್ರದಾಯಗಳು ಹುಟ್ಟುಹಾಕಿದ, ಸಾಂಸ್ಕೃತಿಕ ಬದುಕು ರೂಪಿಸಿದ, ಹೊಸತಾದ ಕಾವ್ಯ ಕ್ರಿಯೆಗೆ ಜಾನಪದ ಸಂದರ್ಭ ಪ್ರಧಾನವಾಗಬೇಕಾಯಿತು.

 -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.೬೩,ನವನಗರ,ಬಾಗಲಕೋಟ ಮೊ.೯೮೪೫೫೦೦೮೯೦.