Wednesday 11 September 2013



ಜನಪದರ ಆಚರಣೆಯಲ್ಲಿ ಶಿವರಾತ್ರಿ


-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಶಿವಶಿವ ಅಂದರ ಸಿಡಿಲೆಲ್ಲ ಬಯಲಾಗಿ

ಕಲ್ಲ ಬಂದೆರಗಿ ಕಡಿಗಾಗಿ-ಎಲೆ ಮನವೆ

ಶಿವನೆಂಬ ಶಬುದ ಬಿಡಬ್ಯಾಡ

ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ ನಂಬುಗೆ ಮತ್ತು ಆಚರಣೆಗಳ ಮೇಲೆ ನಿಂತಿವೆ.ಆರಾಧನಾ ಸಂಸ್ಕøತಿಯ ಜನಪದರು ಋತುಮಾನಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸುತ್ತಾ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಸಾಕ್ಷಿಯಾಗಿದ್ದಾರೆ.ಜನಪದರ ಹಬ್ಬಗಳು ಸಹಬಾಳ್ವೆ,ಸಮಾನತೆ ಮತ್ತು ಸೌಹಾರ್ದತೆಗೆ ಮೊದಲಾಗಿವೆ.ಮನುಷ್ಯನ ಚಲನಶೀಲ ಮತ್ತು ಕ್ರಿಯಾಶೀಲ ದೇಹ ಮನಸ್ಸುಗಳ ಜೀವಂತಿಕೆಗೆ ಒಂದರ ಮೇಲೊಂದು ಬರುವ ಹಬ್ಬಗಳೇ ಆಧಾರವಾಗಿವೆ.ಜನಪದರ ಹಬ್ಬಗಳ ಆಚರಣೆಯಲ್ಲಿ ಶಿವರಾತ್ರಿಯೂ ಒಂದು.ಋತುಮಾಕ್ಕನುಗುಣವಾಗಿ ಹಬ್ಬಗಳು ರೂಪ ಪಡೆದುಕೊಂಡಿವೆ.ಚಳಿಗಾಲ ಮುಗಿದು ಸುಡು ಸುಡು ಬಿಸಿಲು ಆರಂಭವಾಗುವ ಹೊತ್ತು ,ಸುಗ್ಗಿ ಮುಗಿಸಿ ನಮ್ಮ ರೈತಾಪಿ ಜನರ ಬಿಡುವಾಗಿರುವ ಸಮಯ.ಕೈಯಲ್ಲಿ ಒಂದಿಷ್ಟು ಕಾಸು.ಇದೇ ಹೊತ್ತಿಗೆ ವಸಂತನ ಆಗಮನದ ವಾಸನೆ, ಬೇವಿನ ಹೂದಳಗಳಿಂದ ಹೊರಹೊಮ್ಮಿದ ಘಳಿಗೆ.ಎಲೆ ಉದುರಿ ಬರಡಾದ ಗಿಡ ಮರಗಳಲ್ಲಿ ಹೊಸ ಚಿಗುರಿನ ಉದಯ.ಮೊಗ್ಗೆ,ಹೂವು,ಮಿಡಿಗಳನ್ನು ಹೊತ್ತ ವನಸಂಕುಲ,ಕೋಗಿಲೆಯು ಹೊಸ ಚಿಗುರು ಮೆದ್ದು ಕಂಠ ಪರಿಶುದ್ದವಾಗಿ ಪಂಚÀಮ ಸರದಲ್ಲಿ ಹಾಡುವ ಸುಯೋಗ,ಹೊಸ ದುಪ್ಪಳತೊಟ್ಟ ಹಕ್ಕಿ ಪಕ್ಕಿಗ¼ ಚೆಲವು,ಸಕಲ ಸೃಷ್ಟಿಯೇ ಪ್ರಾಯ ತುಂಬಿ ಭೂರಮೆ ಹಸಿರು ತೊಡುವ ಹೊತ್ತಿಗೆ ಶಿವರಾತ್ರಿ ಹಬ್ಬ ಆಗಮಿಸುತ್ತದೆ.ಇದು ಶಿವಯೋಗದ ಪುಣ್ಯದಿನ. ಭರತಖಂಡದ ಎಲ್ಲ ಭಾಗಗಳಲ್ಲಿಯೂ ಆಚರಿಸಲ್ಪಡುವ ಹಬ್ಬ. ಹಬ್ಬದಂದು ದೇಶದ ತುಂಬೆಲ್ಲಾ ಶಿವನಿಗೆ ಅಭಿಷೇಕ ಮಹೋತ್ಸವಗಳು ನಡೆಯುವವು. ಶಿವನಿಗೆ ನಮ್ಮ ಜನಪದರು 'ಕೊಕ್ಕಾ ಬತ್ತಿ'ಗಳ ಸರಮಾಲೆಯನ್ನು, ಶಿವಪೂಜೆ ಮಾಡಿ ಬೆಳಗುವರು.

ಕೊಕ್ಕಾ ಬತ್ತಿ, ಕ್ವಾಡಾ ಬತ್ತಿ

ನಾಡಿಗೆಲ್ಲಾ ಒಂದೇ ಬತ್ತಿ

ಇದೇ ಆ ಜನರು ಬೆಳಗುವ ಶಿವದೀಪ.ಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ವಿಷ್ಣು,ಬ್ರಹ್ಮರು ಸೃಷ್ಠಿ ಸ್ಥಿತಿಯ ದೇವತೆಗಳಾದರೆ ಲಯದ ದೇವತೆ ಶಿವ. ಶಿವನ ಪ್ರಧಾನ ಲಕ್ಷಣವೆಂದರೆ ತಾಮಸಗುಣ. ಶಿವನಿಗೆ ಗಂಗಾ ಮತ್ತು ಪಾರ್ವತಿಯರೆಂಬ ಇಬ್ಬರು ಹೆಂಡತಿಯರು. ಶಿವ ತನ್ನ ಶಿರದಲ್ಲಿ ಗಂಗೆಯನ್ನು ಹೊಂದಿದ್ದಾನೆ.ಪಾರ್ವತಿಯ ತಪೋ ನಿಷ್ಠೆಗೆ ಮನಸೋತ ಶಿವನು ಅವಳನ್ನು ಮದುವೆಯಾದ ಬಳಿಕ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನೆಂಬುದೂ,ಭಗೀರಥನ ತಪಸ್ಸಿನ ಫಲದಿಂದ ಗಂಗೆ ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ವೇಗವನ್ನು ತಾಳಲು ಭೂಮಿ ಅಸಮರ್ಥಳೆಂಬುದನ್ನು ಗ್ರಹಿಸಿದ ಶಿವ ದೃಢವಾಗಿ ನಿಂತು ಆಕೆಯನ್ನು ತನ್ನ ಜಟಾಕಲಾಪದೊಳಗೆ ತಾಳಿಕೊಂಡನೆಂಬುದು ಪುರಾಣದಲ್ಲಿ ಪ್ರಸಿದ್ದವಾಗಿದೆ.

ಆರತಿ ಬೆಳಾಗೂವೆ ಅಖಂಡ ಗುರುವಿಗೆ

ಪಾರ್ವತಿದೇವಿ ರಮಣನಿಗೆ

ಮೂರು ಲೋಕಕೆ ಕಾರ್ತನನೀಸುವ

ಸಾಂಬ ಸದಾಶಿವ ಶಂಕರಗೆ

ಎಂದು ಪಾರ್ವತಿಯನ್ನು ಉಲ್ಲೇಖಿಸಿ ಹಾಡಿದರೆ,

ದೇಶ ದೇಶ ತಿರುಗಿ ನಮ್ಮ ಶಿವ

ಪಾತಾಳ ಗಂಗೆ ತಂದ

ಪಾತಾಳದ ಗಂಗೆ ಬಾಯಂದು ಕರುದಾರೆ

ಜ್ಯೋತಿ ಬೆಳಗುವೆನು ನಾನುಂದಾರತಿ ಬೆಳಗುವೆನು.

ಎಂದು ಗಂಗೆಯನ್ನು ಆರಾಧಿಸುತ್ತಾರೆ.

ಮೂರು ಹಬ್ಬ :

ಸವತಿ ಮತ್ಸರ ದೇವರನ್ನೂ ಬಿಟ್ಟಿಲ್ಲ. ಗಂಗೆ ಗೌರಿಯರ ಜಗಳ ಇದ್ದದ್ದೆ,ಗಂಗೆ ಕೈ ಬೀಸಿ ಮಳೆರಾಯನನ್ನು ಕರೆಯುತ್ತಾಳೆ.ಗಂಗೆ ಮೊಳಕಾಲುದ್ದ ನೀರಿನಲ್ಲಿ ನಿಂತರೆ,ಗೌರಿ ಕೊಚ್ಚಿ ಹೋಗುತ್ತಾಳೆ.ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ,ಗಂಗೆಯನ್ನು ಬೇಸ್ತರ ಮನೆಗೆ ಕಳಿಸುತ್ತಾ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ,ನಡು ಊರಲ್ಲಿ ನಿನ್ನ ಪೂಜಿಸುತ್ತಾರೆ.'ಎಂದರೆ ಗೌರಿಗೆ 'ಬ್ರಾಹ್ಮಣರ ಮನೆಯಲ್ಲಿ ಸೇರಿಕೊ, ವರ್ಷಕ್ಕೊಮ್ಮೆ ಗೌರಿ ಹಬ್ಬದಲ್ಲಿ ನೀನು ಬಾ ,ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ'ಎಂದು ಹೇಳಿಕಳಿಸುತ್ತಾನೆ.ನಿಮ್ಮೀಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ,ಆ ಹಬ್ಬದಲ್ಲಿ ನಾನು ಬರುತ್ತೀನಿ ಎಂದು ಶಿವ ಮೂವರಿಗೂಮೂರು ಹಬ್ಬ ನೇಮಿಸುತ್ತಾನೆ.ಈ ಹಬ್ಬಕ್ಕೆ ಧಾರ್ಮಿಕ ಮಹತ್ವವು ಇದೆ. ಬೆಳುವಲದಲ್ಲಿ ಬೇಸಗೆಯು ದಿನ ದಿನಕ್ಕೆ ಬೆಳೆಯ ಹತ್ತಲು ನಮ್ಮ ರೈತಾಪಿ ಜನ ಬಿಸಿಲಲ್ಲಿ ದುಡಿಯಲಾರದೆ ಶಿವ ಶಿವನೆಂದು ಊಟ ಮಾಡಿ ಮನೆಯಲ್ಲಿಯೇ ಉಳಿಯುವರು.

ದೇವರೆಂಬುವುದು ಒಂದು 'ದಿವ್ಯ ಜ್ಯೋತಿ' ಎಂಬ ತತ್ವವೂ ಅಡಗಿದೆ ಇದರಲ್ಲಿ. ಸುತ್ತೆಲ್ಲ ಶಿವಭಜನೆ ನಡೆದು ನಾಡೇ 'ಶಿವಲೋಕ'ವೆಂಬ ಭಾವನೆ ಬರುವುದು. ಶಿವಯೋಗದ ದಿವಸ ಶಿವಪೂಜೆ ಮಾಡಿ ಕೈಲಾಸವನ್ನು ಪಡೆದ ಶಿವಶರಣರ ಕಥೆಗಳನ್ನು ಕೇಳಿದ ನಮ್ಮ ಜನಪದರು ಶಿವಶರಣರನ್ನು ಕುರಿತು

ಹಾಡಿದ್ದಾರೆ.

ಬೇಡ ಬೇಟೆಗೆ ಹೋಗಿ, ಬೆಲ್ಲಪತ್ತರಿಕೊಯ್ದು

ಬೇಡಕನ್ನಯ್ಯ ಶಿವಪೂಜೆ| ಮಾಡಿದರ

ನಾಡೊಳಗ ನೋಡು ಶಿವರಾತ್ರಿ

ಶಿವಶರಣರ ಪ್ರಭಾವದಿಂದಲೇ ನಾಡಿನೊಳಗೆ ಬೈಗು ಬೆಳಗಾಗಿ ವರುಷ ವರುಷಕ್ಕೆ ಶಿವರಾತ್ರಿಯು ಜನಪದಕ್ಕೆ ಬರುವುದೆಂದು ಜನಪದರು ಹಂತಿಯಲ್ಲಿ ಮನತುಂಬಿ ಹಾಡಿದ್ದಾರೆ. ಬೇಡರ ಕನ್ನಯ್ಯನು ಪಡೆದ ಶಿವಯೋಗವನ್ನೂ, ಬಿಲ್ವಪತ್ರೆಯ ಮಹತ್ವವನ್ನು ಹಾಡಿನಲ್ಲಿ ತೋರಿಸಿದ್ದಾರೆ.

ಕುಂಬಾರ ಗುಂಡಯ್ಯ ತುಂಬಿ ತಿಗರಿಗೆ ಕೆಸರ

ಶಂಬು ಹರನೆಂದು ತಿರುಗಿಸಲು-ಶಿವ ಕುಣಿದ

ಹಂಬಲಿಸಿ ಜಂಗ ಕಟಿಗೊಂಡು

ಕಾಯಕ ನಿರತ ಶರಣರು ತಮ್ಮ ನಿತ್ಯ ಕಾಯಕದಲ್ಲಿ ಶಿವನನ್ನು ಆಹ್ವಾನಿಸಿಕೊಂಡಿದ್ದಾರೆ.ಶಿವನನ್ನು ಪರಿಪರಿಯಾಗಿ ತಮ್ಮ ರಚನೆಗಳಲ್ಲಿ ಶರಣರು ಹಾಡಿ ಹೊಗಳಿದ್ದಾರೆ.




ಶಿವನ ರೂಪ:

ಆರಾಧ್ಯ ದೈವ ಶಿವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.ಶಿವ ಕೆಂಪು ಬಣ್ಣವುಳ್ಳ ದಟ್ಟವಾದ ಜಡೆಗಳನ್ನು ಹೊಂದಿದ್ದಾನೆ. ಆದ್ದರಿಂದ ಇವನನ್ನು ಕಪರ್ದಿ ಎಂದು ಕರೆಯಲಾಗಿದೆ. ಶಿವನನ್ನು ಅಗ್ನಿಯೆಂದೂ ಕರೆಯಲಾಗಿದೆ. ಈತನಿಗೆ ಮೂರು ಕಣ್ಣುಗಳು, ಹಣೆಗಣ್ಣು ಬೆಂಕಿಯಿಂದ ಕೂಡಿದೆ, ಶಿವನನ್ನು ತ್ರಿನೇತ್ರ, ಪಾಲನೇತ್ರ, ಅಗ್ನಿಲೋಚನ ಎಂಬ ಮುಂತಾದ ಹೆಸರುಗಳಿಂದಲೂ ಕರೆಯಲಾಗಿದೆ.

ಅಳುವ ಕಂದನ ತುಟಿಯು ಹವಳದ ಕುಡಿಹಂಗ

ಕುಡಿಹುಬ್ಬು ಬೇವಿನೆಸಳಂಗ-ಕಣ್ಣೋಟ

ಶಿವನ ಕೈಯಲಗು ಹೊಳದಂಗ

ಎನ್ನುವಂತೆ ಶಿವ ಯಾವಾಗಲೂ ತನ್ನ ಕೈಯಲ್ಲಿ ಶೂಲವನ್ನು ಹಿಡಿದಿರುತ್ತಾನೆ. ಮತ್ತೊಂದು ಪಿನಾಕ ಎಂಬ ಆಯುಧವನ್ನು ಹಿಡಿದಿರುವುದರಿಂದ ಶಿವನಿಗೆ ಪಿನಾಕಪಾಣಿ ಎಂಬ ಹೆಸರು ಬಂದಿದೆ. ಶಿವ ಮತ್ತು ಶಿವನ ವಾಹನವಾದ ವೃಷಭ ಇಬ್ಬರೂ ಬಿಳಿಯ ಬಣ್ಣದವರಾಗಿದ್ದಾರೆ. ಶಿವನನ್ನು ಎರಡು, ನಾಲ್ಕು, ಎಂಟು ಮತ್ತು ಹತ್ತು ಕೈಗಳನ್ನುಳ್ಳವನು ಎಂದು ವರ್ಣಸಲಾಗಿದೆ. ಶಿವ ತನ್ನ ಪಿನಾಕದ ಜೊತೆಗೆ ಕಟ್ವಾಂಗ ಎಂಬ ಗದೆ, ಅಜಗವ ಎಂಬ ಧನಸ್ಸು, ಒಂದು ಜಿಂಕೆ, ಮಣಿ, ಬುರುಡೆ, ಢಮರುಗ ಮುಂತಾದ ಪವಿತ್ರವಾದ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಗಂಗಾ ಮತ್ತು ಚಂದ್ರರು ಆ ಶಿವನ ಶಿರದಲ್ಲಿ ನೆಲೆಸಿರುವುದರಿಂದ ಗಂಗಾಧರ ಮತ್ತು ಚಂದ್ರಚೂಡ ಎಂಬ ಹೆಸರುಗಳು ಬಂದಿವೆ. ಮನುಷ್ಯರ ತಲೆಬುರುಡೆಗಳ ಸರಮಾಲೆಯನ್ನು ತನ್ನ ಶಿರದ ಸುತ್ತಲು ಧರಿಸಿಕೊಂಡಿದ್ದಾನೆ. ಶಿವ ಹುಲಿಯ ಚರ್ಮವನ್ನು ಧರಿಸಿ, ಆನೆಯ ಚರ್ಮವನ್ನು ಹೊದ್ದುಕೊಂಡಿದ್ದಾನೆ. ಎಲ್ಲ ಅಂಗಾಂಗಗಳ ಮೇಲೂ ಆಭರಣದ ರೀತಿಯಲ್ಲಿ ಸರ್ಪಗಳು ಸುತ್ತಿಕೊಂಡಿವೆ. ಸರ್ಪಗಳನ್ನು ಕಿವಿಯಲ್ಲಿ ಧರಿಸಿದ್ದರಿಂದ ಶಿವನನ್ನು ನಾಗಕುಂಡಲ ಎಂದು ಕರೆಯಲಾಗಿದೆ.

ಭಾರತವಲ್ಲದೆ ವಿದೇಶಗಳಲ್ಲೂ ಶಿವನ ಆರಾಧನೆ ನಡೆಯುತ್ತಾ ಬಂದಿದೆ.ಮೂಲತಹ ಕೃಷಿಕರು, ಪಶುಸಂಗೋಪನೆಯಲ್ಲಿ ತೊಡಗಿರುವ ನಮ್ಮ ಬುಡಕಟ್ಟು ಜನಾಂಗದಲ್ಲಿ ಶಿವನನ್ನು ಪೂಜಿಸುವಲ್ಲಿ ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ಸಾತ್ವಿಕವಾದ ಪೂಜಾಕ್ರಮಗಳು ಇರುವಂತೆ ಸಾತ್ವಿಕವಲ್ಲದ ಪೂಜಾಕ್ರಮಗಳೂ ಇವೆ. 'ಪರಶುಪದಂ'(ಪಾಶುಪಥಂ) ಎಂಬ ಪೂಜಾಪ್ರಕಾರ ಬಹು ಪುರಾತನವಾದುದು. 'ಗೂಢಮಿಲ್ಲಂ' ಎಂಬ ಪ್ರದೇಶದಲ್ಲಿರುವ ಶಿವಲಿಂಗವು ಕ್ರಿ.ಪೂ. ಎರಡನೆಯ ಶತಮಾನದಷ್ಟು ಹಳೆಯದು.ಶಿವನ್ನು ಸಾಂಕೇತಿಸುವ ಅನೇಕ ಚಿನ್ಹೆಗಳಲ್ಲಿ ಶಿವಲಿಂಗವು ಬಹು ಮುಖ್ಯವಾದದ್ದು.ಅಪಘಾಣಿಸ್ತಾನz ಹಜರ ಮಂಗೋಲರಲ್ಲಿ ಗ್ರಾಮೀಣ ಬೇಸಾಯಗಾರರು ಮತ್ತು ಪಶುಸಂಗೋಪಕರು ಎಂಬ ಬುಡಕಟ್ಟುಗಳು ಶಿವನ ಆರಾಧಕರಾಗಿದ್ದಾರೆ.ದಕ್ಷಿಣ ರಾಜಸ್ತಾನದ ಬನೇಶ್ವರದಲ್ಲಿ ಬನೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯತ್ತದೆ.ಬನೇಶ್ವರ ಎಂದರೆ ಶಿವಲಿಂಗ,ಸ್ವಯಂ ಭೂಲಿಂಗ ಎಂಬ ಪ್ರತೀತಿಯಿದೆ.ಭಿಲ್ಲರ ವರ್ಣರಂಜಿತ ಪ್ರಮುಖ ಜಾತ್ರೆ ಇದು.

ಆಡಿನ ಹಿಕ್ಕಿ ತಂದು ತೀಡಿ ಲಿಂಗವ ಮಾಡಿ

ನೋಡಿದಿರೇನ ಶಿವನ ಮಹಿಮೆ-ಗೋಲಗೇರಿ ಲಿಂಗ

ಆಡಿನ ಹಿಕ್ಕ್ಯಾಗ ಒಲಿದಾನ

ಲಿಂಗಗಳಲ್ಲಿ ಎರಡು ವಿಧ. ಒಂದು, ಸ್ಥಾವರ ಲಿಂಗ; ಮತ್ತೊಂದು, ಚಲಿಸುವ ಲಿಂಗ. ಸ್ಥಾವರ ಲಿಂಗವು ಮಣ್ಣು, ಕಲ್ಲು, ಮರ, ಹರಳು ಮುಂತಾದವುಗಳಿಂದ ಮಾಡಿದಂಥವು. ನಾನಾ ರೀತಿಯ ಪೀಠಗಳಮೇಲೆ ಇರಿಸಿದ ತಾತ್ಕಾಲಿಕ ಲಿಂಗಗಳನ್ನು ಗಂಡು ಕಲ್ಲುಗಳಿಂದಲೂ, ಪೀಠಗಳನ್ನು ಹೆಣ್ಣು ಕಲ್ಲುಗಳಿಂದಲು ಮಾಡಲಾಗುತ್ತದೆ.ನಮ್ಮ ಜನಪದರು ಶಿವನನ್ನು ಕುರಿತು ಮನತುಂಬಿ ಹಾಡಿದ್ದಾರೆ.

ಶಿವ ಶಿವನಂದರ ಶಿವದಾರ ಕೊರಳಾಗ

ಶಿವದಾರ ನಮ್ಮ ಕೊರಳಾಗ-ಪಂಚಮುಖದ

ವಿಭೂತಿ ನಮ್ಮ ಹಣಿಮ್ಯಾಗ




ಕಲ್ಲಿಗಿ ಮುಕ್ಹಾಕಿ ಎಲ್ಲಾರ್ನ ನೆನದೀನಿ

ಸಲ್ಲ ಕೇಳಾಕ ಶಿವಬಂದ-ಮ್ಯಾಲಿರುವ

ಮಾದೇವ ಬಂದ ಮನನೋಡಿ.







ಹರಕೀಯ ಹೊತ್ತೇನಿ ಅರಿಕುಳ್ಳ ದೇವರಿಗೆ

ಹಾದಿ ಮ್ಯಾಲಿರುವ ಶಿವನಿಗೆ -ಪರಮಾನಂದ

ಮನಸೀನ ಹರಕಿ ಇಳದೇನ




ಆಕಾಶದಡವ್ಯಾಗ ಧೂಪದ ಹೊಗೆಯೆದ್ದು

ಆಯ್ತು ಮಲ್ಲಯ್ಯನ ಶಿವಪೂಜೆ-ಆಗಾಗ

ಆಕಾಸದ ಘಂಡಿ ಘಳಲೆಂದು.




ಮಂದೇನ ಕೊಟ್ಟೀತ ಮನವೇನು ದಣದೀತ

ಮುಂಜಾನದಾಗ ಗಿರಿಮಲ್ಲ -ಕೊಟ್ಟರ

ಮನಿ ತುಂಬಿ ನಮ್ಮ ಮನ ತುಂಬಿ.




ಕರುಣ ಬಂದರ ಕಾಯೋ ಮರಣ ಬಂದರೆ ಒಯ್ಯೋ

ಕರುಣಿ ಕಲ್ಯಾಣ ಬಸವಣ್ಣ-ಶಿವಲಿಂಗ

ಕಡೆತನಕಕಾಯೊ ಅಭಿಮಾನ.

-ಡಾ.ಪ್ರಕಾಶ ಗ.ಖಾಡೆ,

=============================================================

ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890

1 comment:

  1. ನಾನು ದೇವರ ಭಕ್ತನಲ್ಲ. ಆದರೆ ಈ ಪದಗಳನ್ನು ಓದಿದ್ದರೆ ಖಂಡಿತ ಭಕ್ತನಾಗುತ್ತಿದ್ದೆ.ಸೊಗಸಾದ ಪದಗಳು.

    ReplyDelete