Wednesday 11 September 2013



ಜನಪದರ ಆಚರಣೆಯಲ್ಲಿ ಶಿವರಾತ್ರಿ


-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಶಿವಶಿವ ಅಂದರ ಸಿಡಿಲೆಲ್ಲ ಬಯಲಾಗಿ

ಕಲ್ಲ ಬಂದೆರಗಿ ಕಡಿಗಾಗಿ-ಎಲೆ ಮನವೆ

ಶಿವನೆಂಬ ಶಬುದ ಬಿಡಬ್ಯಾಡ

ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ ನಂಬುಗೆ ಮತ್ತು ಆಚರಣೆಗಳ ಮೇಲೆ ನಿಂತಿವೆ.ಆರಾಧನಾ ಸಂಸ್ಕøತಿಯ ಜನಪದರು ಋತುಮಾನಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸುತ್ತಾ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಸಾಕ್ಷಿಯಾಗಿದ್ದಾರೆ.ಜನಪದರ ಹಬ್ಬಗಳು ಸಹಬಾಳ್ವೆ,ಸಮಾನತೆ ಮತ್ತು ಸೌಹಾರ್ದತೆಗೆ ಮೊದಲಾಗಿವೆ.ಮನುಷ್ಯನ ಚಲನಶೀಲ ಮತ್ತು ಕ್ರಿಯಾಶೀಲ ದೇಹ ಮನಸ್ಸುಗಳ ಜೀವಂತಿಕೆಗೆ ಒಂದರ ಮೇಲೊಂದು ಬರುವ ಹಬ್ಬಗಳೇ ಆಧಾರವಾಗಿವೆ.ಜನಪದರ ಹಬ್ಬಗಳ ಆಚರಣೆಯಲ್ಲಿ ಶಿವರಾತ್ರಿಯೂ ಒಂದು.ಋತುಮಾಕ್ಕನುಗುಣವಾಗಿ ಹಬ್ಬಗಳು ರೂಪ ಪಡೆದುಕೊಂಡಿವೆ.ಚಳಿಗಾಲ ಮುಗಿದು ಸುಡು ಸುಡು ಬಿಸಿಲು ಆರಂಭವಾಗುವ ಹೊತ್ತು ,ಸುಗ್ಗಿ ಮುಗಿಸಿ ನಮ್ಮ ರೈತಾಪಿ ಜನರ ಬಿಡುವಾಗಿರುವ ಸಮಯ.ಕೈಯಲ್ಲಿ ಒಂದಿಷ್ಟು ಕಾಸು.ಇದೇ ಹೊತ್ತಿಗೆ ವಸಂತನ ಆಗಮನದ ವಾಸನೆ, ಬೇವಿನ ಹೂದಳಗಳಿಂದ ಹೊರಹೊಮ್ಮಿದ ಘಳಿಗೆ.ಎಲೆ ಉದುರಿ ಬರಡಾದ ಗಿಡ ಮರಗಳಲ್ಲಿ ಹೊಸ ಚಿಗುರಿನ ಉದಯ.ಮೊಗ್ಗೆ,ಹೂವು,ಮಿಡಿಗಳನ್ನು ಹೊತ್ತ ವನಸಂಕುಲ,ಕೋಗಿಲೆಯು ಹೊಸ ಚಿಗುರು ಮೆದ್ದು ಕಂಠ ಪರಿಶುದ್ದವಾಗಿ ಪಂಚÀಮ ಸರದಲ್ಲಿ ಹಾಡುವ ಸುಯೋಗ,ಹೊಸ ದುಪ್ಪಳತೊಟ್ಟ ಹಕ್ಕಿ ಪಕ್ಕಿಗ¼ ಚೆಲವು,ಸಕಲ ಸೃಷ್ಟಿಯೇ ಪ್ರಾಯ ತುಂಬಿ ಭೂರಮೆ ಹಸಿರು ತೊಡುವ ಹೊತ್ತಿಗೆ ಶಿವರಾತ್ರಿ ಹಬ್ಬ ಆಗಮಿಸುತ್ತದೆ.ಇದು ಶಿವಯೋಗದ ಪುಣ್ಯದಿನ. ಭರತಖಂಡದ ಎಲ್ಲ ಭಾಗಗಳಲ್ಲಿಯೂ ಆಚರಿಸಲ್ಪಡುವ ಹಬ್ಬ. ಹಬ್ಬದಂದು ದೇಶದ ತುಂಬೆಲ್ಲಾ ಶಿವನಿಗೆ ಅಭಿಷೇಕ ಮಹೋತ್ಸವಗಳು ನಡೆಯುವವು. ಶಿವನಿಗೆ ನಮ್ಮ ಜನಪದರು 'ಕೊಕ್ಕಾ ಬತ್ತಿ'ಗಳ ಸರಮಾಲೆಯನ್ನು, ಶಿವಪೂಜೆ ಮಾಡಿ ಬೆಳಗುವರು.

ಕೊಕ್ಕಾ ಬತ್ತಿ, ಕ್ವಾಡಾ ಬತ್ತಿ

ನಾಡಿಗೆಲ್ಲಾ ಒಂದೇ ಬತ್ತಿ

ಇದೇ ಆ ಜನರು ಬೆಳಗುವ ಶಿವದೀಪ.ಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ವಿಷ್ಣು,ಬ್ರಹ್ಮರು ಸೃಷ್ಠಿ ಸ್ಥಿತಿಯ ದೇವತೆಗಳಾದರೆ ಲಯದ ದೇವತೆ ಶಿವ. ಶಿವನ ಪ್ರಧಾನ ಲಕ್ಷಣವೆಂದರೆ ತಾಮಸಗುಣ. ಶಿವನಿಗೆ ಗಂಗಾ ಮತ್ತು ಪಾರ್ವತಿಯರೆಂಬ ಇಬ್ಬರು ಹೆಂಡತಿಯರು. ಶಿವ ತನ್ನ ಶಿರದಲ್ಲಿ ಗಂಗೆಯನ್ನು ಹೊಂದಿದ್ದಾನೆ.ಪಾರ್ವತಿಯ ತಪೋ ನಿಷ್ಠೆಗೆ ಮನಸೋತ ಶಿವನು ಅವಳನ್ನು ಮದುವೆಯಾದ ಬಳಿಕ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನೆಂಬುದೂ,ಭಗೀರಥನ ತಪಸ್ಸಿನ ಫಲದಿಂದ ಗಂಗೆ ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ವೇಗವನ್ನು ತಾಳಲು ಭೂಮಿ ಅಸಮರ್ಥಳೆಂಬುದನ್ನು ಗ್ರಹಿಸಿದ ಶಿವ ದೃಢವಾಗಿ ನಿಂತು ಆಕೆಯನ್ನು ತನ್ನ ಜಟಾಕಲಾಪದೊಳಗೆ ತಾಳಿಕೊಂಡನೆಂಬುದು ಪುರಾಣದಲ್ಲಿ ಪ್ರಸಿದ್ದವಾಗಿದೆ.

ಆರತಿ ಬೆಳಾಗೂವೆ ಅಖಂಡ ಗುರುವಿಗೆ

ಪಾರ್ವತಿದೇವಿ ರಮಣನಿಗೆ

ಮೂರು ಲೋಕಕೆ ಕಾರ್ತನನೀಸುವ

ಸಾಂಬ ಸದಾಶಿವ ಶಂಕರಗೆ

ಎಂದು ಪಾರ್ವತಿಯನ್ನು ಉಲ್ಲೇಖಿಸಿ ಹಾಡಿದರೆ,

ದೇಶ ದೇಶ ತಿರುಗಿ ನಮ್ಮ ಶಿವ

ಪಾತಾಳ ಗಂಗೆ ತಂದ

ಪಾತಾಳದ ಗಂಗೆ ಬಾಯಂದು ಕರುದಾರೆ

ಜ್ಯೋತಿ ಬೆಳಗುವೆನು ನಾನುಂದಾರತಿ ಬೆಳಗುವೆನು.

ಎಂದು ಗಂಗೆಯನ್ನು ಆರಾಧಿಸುತ್ತಾರೆ.

ಮೂರು ಹಬ್ಬ :

ಸವತಿ ಮತ್ಸರ ದೇವರನ್ನೂ ಬಿಟ್ಟಿಲ್ಲ. ಗಂಗೆ ಗೌರಿಯರ ಜಗಳ ಇದ್ದದ್ದೆ,ಗಂಗೆ ಕೈ ಬೀಸಿ ಮಳೆರಾಯನನ್ನು ಕರೆಯುತ್ತಾಳೆ.ಗಂಗೆ ಮೊಳಕಾಲುದ್ದ ನೀರಿನಲ್ಲಿ ನಿಂತರೆ,ಗೌರಿ ಕೊಚ್ಚಿ ಹೋಗುತ್ತಾಳೆ.ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ,ಗಂಗೆಯನ್ನು ಬೇಸ್ತರ ಮನೆಗೆ ಕಳಿಸುತ್ತಾ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ,ನಡು ಊರಲ್ಲಿ ನಿನ್ನ ಪೂಜಿಸುತ್ತಾರೆ.'ಎಂದರೆ ಗೌರಿಗೆ 'ಬ್ರಾಹ್ಮಣರ ಮನೆಯಲ್ಲಿ ಸೇರಿಕೊ, ವರ್ಷಕ್ಕೊಮ್ಮೆ ಗೌರಿ ಹಬ್ಬದಲ್ಲಿ ನೀನು ಬಾ ,ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ'ಎಂದು ಹೇಳಿಕಳಿಸುತ್ತಾನೆ.ನಿಮ್ಮೀಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ,ಆ ಹಬ್ಬದಲ್ಲಿ ನಾನು ಬರುತ್ತೀನಿ ಎಂದು ಶಿವ ಮೂವರಿಗೂಮೂರು ಹಬ್ಬ ನೇಮಿಸುತ್ತಾನೆ.ಈ ಹಬ್ಬಕ್ಕೆ ಧಾರ್ಮಿಕ ಮಹತ್ವವು ಇದೆ. ಬೆಳುವಲದಲ್ಲಿ ಬೇಸಗೆಯು ದಿನ ದಿನಕ್ಕೆ ಬೆಳೆಯ ಹತ್ತಲು ನಮ್ಮ ರೈತಾಪಿ ಜನ ಬಿಸಿಲಲ್ಲಿ ದುಡಿಯಲಾರದೆ ಶಿವ ಶಿವನೆಂದು ಊಟ ಮಾಡಿ ಮನೆಯಲ್ಲಿಯೇ ಉಳಿಯುವರು.

ದೇವರೆಂಬುವುದು ಒಂದು 'ದಿವ್ಯ ಜ್ಯೋತಿ' ಎಂಬ ತತ್ವವೂ ಅಡಗಿದೆ ಇದರಲ್ಲಿ. ಸುತ್ತೆಲ್ಲ ಶಿವಭಜನೆ ನಡೆದು ನಾಡೇ 'ಶಿವಲೋಕ'ವೆಂಬ ಭಾವನೆ ಬರುವುದು. ಶಿವಯೋಗದ ದಿವಸ ಶಿವಪೂಜೆ ಮಾಡಿ ಕೈಲಾಸವನ್ನು ಪಡೆದ ಶಿವಶರಣರ ಕಥೆಗಳನ್ನು ಕೇಳಿದ ನಮ್ಮ ಜನಪದರು ಶಿವಶರಣರನ್ನು ಕುರಿತು

ಹಾಡಿದ್ದಾರೆ.

ಬೇಡ ಬೇಟೆಗೆ ಹೋಗಿ, ಬೆಲ್ಲಪತ್ತರಿಕೊಯ್ದು

ಬೇಡಕನ್ನಯ್ಯ ಶಿವಪೂಜೆ| ಮಾಡಿದರ

ನಾಡೊಳಗ ನೋಡು ಶಿವರಾತ್ರಿ

ಶಿವಶರಣರ ಪ್ರಭಾವದಿಂದಲೇ ನಾಡಿನೊಳಗೆ ಬೈಗು ಬೆಳಗಾಗಿ ವರುಷ ವರುಷಕ್ಕೆ ಶಿವರಾತ್ರಿಯು ಜನಪದಕ್ಕೆ ಬರುವುದೆಂದು ಜನಪದರು ಹಂತಿಯಲ್ಲಿ ಮನತುಂಬಿ ಹಾಡಿದ್ದಾರೆ. ಬೇಡರ ಕನ್ನಯ್ಯನು ಪಡೆದ ಶಿವಯೋಗವನ್ನೂ, ಬಿಲ್ವಪತ್ರೆಯ ಮಹತ್ವವನ್ನು ಹಾಡಿನಲ್ಲಿ ತೋರಿಸಿದ್ದಾರೆ.

ಕುಂಬಾರ ಗುಂಡಯ್ಯ ತುಂಬಿ ತಿಗರಿಗೆ ಕೆಸರ

ಶಂಬು ಹರನೆಂದು ತಿರುಗಿಸಲು-ಶಿವ ಕುಣಿದ

ಹಂಬಲಿಸಿ ಜಂಗ ಕಟಿಗೊಂಡು

ಕಾಯಕ ನಿರತ ಶರಣರು ತಮ್ಮ ನಿತ್ಯ ಕಾಯಕದಲ್ಲಿ ಶಿವನನ್ನು ಆಹ್ವಾನಿಸಿಕೊಂಡಿದ್ದಾರೆ.ಶಿವನನ್ನು ಪರಿಪರಿಯಾಗಿ ತಮ್ಮ ರಚನೆಗಳಲ್ಲಿ ಶರಣರು ಹಾಡಿ ಹೊಗಳಿದ್ದಾರೆ.




ಶಿವನ ರೂಪ:

ಆರಾಧ್ಯ ದೈವ ಶಿವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.ಶಿವ ಕೆಂಪು ಬಣ್ಣವುಳ್ಳ ದಟ್ಟವಾದ ಜಡೆಗಳನ್ನು ಹೊಂದಿದ್ದಾನೆ. ಆದ್ದರಿಂದ ಇವನನ್ನು ಕಪರ್ದಿ ಎಂದು ಕರೆಯಲಾಗಿದೆ. ಶಿವನನ್ನು ಅಗ್ನಿಯೆಂದೂ ಕರೆಯಲಾಗಿದೆ. ಈತನಿಗೆ ಮೂರು ಕಣ್ಣುಗಳು, ಹಣೆಗಣ್ಣು ಬೆಂಕಿಯಿಂದ ಕೂಡಿದೆ, ಶಿವನನ್ನು ತ್ರಿನೇತ್ರ, ಪಾಲನೇತ್ರ, ಅಗ್ನಿಲೋಚನ ಎಂಬ ಮುಂತಾದ ಹೆಸರುಗಳಿಂದಲೂ ಕರೆಯಲಾಗಿದೆ.

ಅಳುವ ಕಂದನ ತುಟಿಯು ಹವಳದ ಕುಡಿಹಂಗ

ಕುಡಿಹುಬ್ಬು ಬೇವಿನೆಸಳಂಗ-ಕಣ್ಣೋಟ

ಶಿವನ ಕೈಯಲಗು ಹೊಳದಂಗ

ಎನ್ನುವಂತೆ ಶಿವ ಯಾವಾಗಲೂ ತನ್ನ ಕೈಯಲ್ಲಿ ಶೂಲವನ್ನು ಹಿಡಿದಿರುತ್ತಾನೆ. ಮತ್ತೊಂದು ಪಿನಾಕ ಎಂಬ ಆಯುಧವನ್ನು ಹಿಡಿದಿರುವುದರಿಂದ ಶಿವನಿಗೆ ಪಿನಾಕಪಾಣಿ ಎಂಬ ಹೆಸರು ಬಂದಿದೆ. ಶಿವ ಮತ್ತು ಶಿವನ ವಾಹನವಾದ ವೃಷಭ ಇಬ್ಬರೂ ಬಿಳಿಯ ಬಣ್ಣದವರಾಗಿದ್ದಾರೆ. ಶಿವನನ್ನು ಎರಡು, ನಾಲ್ಕು, ಎಂಟು ಮತ್ತು ಹತ್ತು ಕೈಗಳನ್ನುಳ್ಳವನು ಎಂದು ವರ್ಣಸಲಾಗಿದೆ. ಶಿವ ತನ್ನ ಪಿನಾಕದ ಜೊತೆಗೆ ಕಟ್ವಾಂಗ ಎಂಬ ಗದೆ, ಅಜಗವ ಎಂಬ ಧನಸ್ಸು, ಒಂದು ಜಿಂಕೆ, ಮಣಿ, ಬುರುಡೆ, ಢಮರುಗ ಮುಂತಾದ ಪವಿತ್ರವಾದ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಗಂಗಾ ಮತ್ತು ಚಂದ್ರರು ಆ ಶಿವನ ಶಿರದಲ್ಲಿ ನೆಲೆಸಿರುವುದರಿಂದ ಗಂಗಾಧರ ಮತ್ತು ಚಂದ್ರಚೂಡ ಎಂಬ ಹೆಸರುಗಳು ಬಂದಿವೆ. ಮನುಷ್ಯರ ತಲೆಬುರುಡೆಗಳ ಸರಮಾಲೆಯನ್ನು ತನ್ನ ಶಿರದ ಸುತ್ತಲು ಧರಿಸಿಕೊಂಡಿದ್ದಾನೆ. ಶಿವ ಹುಲಿಯ ಚರ್ಮವನ್ನು ಧರಿಸಿ, ಆನೆಯ ಚರ್ಮವನ್ನು ಹೊದ್ದುಕೊಂಡಿದ್ದಾನೆ. ಎಲ್ಲ ಅಂಗಾಂಗಗಳ ಮೇಲೂ ಆಭರಣದ ರೀತಿಯಲ್ಲಿ ಸರ್ಪಗಳು ಸುತ್ತಿಕೊಂಡಿವೆ. ಸರ್ಪಗಳನ್ನು ಕಿವಿಯಲ್ಲಿ ಧರಿಸಿದ್ದರಿಂದ ಶಿವನನ್ನು ನಾಗಕುಂಡಲ ಎಂದು ಕರೆಯಲಾಗಿದೆ.

ಭಾರತವಲ್ಲದೆ ವಿದೇಶಗಳಲ್ಲೂ ಶಿವನ ಆರಾಧನೆ ನಡೆಯುತ್ತಾ ಬಂದಿದೆ.ಮೂಲತಹ ಕೃಷಿಕರು, ಪಶುಸಂಗೋಪನೆಯಲ್ಲಿ ತೊಡಗಿರುವ ನಮ್ಮ ಬುಡಕಟ್ಟು ಜನಾಂಗದಲ್ಲಿ ಶಿವನನ್ನು ಪೂಜಿಸುವಲ್ಲಿ ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ಸಾತ್ವಿಕವಾದ ಪೂಜಾಕ್ರಮಗಳು ಇರುವಂತೆ ಸಾತ್ವಿಕವಲ್ಲದ ಪೂಜಾಕ್ರಮಗಳೂ ಇವೆ. 'ಪರಶುಪದಂ'(ಪಾಶುಪಥಂ) ಎಂಬ ಪೂಜಾಪ್ರಕಾರ ಬಹು ಪುರಾತನವಾದುದು. 'ಗೂಢಮಿಲ್ಲಂ' ಎಂಬ ಪ್ರದೇಶದಲ್ಲಿರುವ ಶಿವಲಿಂಗವು ಕ್ರಿ.ಪೂ. ಎರಡನೆಯ ಶತಮಾನದಷ್ಟು ಹಳೆಯದು.ಶಿವನ್ನು ಸಾಂಕೇತಿಸುವ ಅನೇಕ ಚಿನ್ಹೆಗಳಲ್ಲಿ ಶಿವಲಿಂಗವು ಬಹು ಮುಖ್ಯವಾದದ್ದು.ಅಪಘಾಣಿಸ್ತಾನz ಹಜರ ಮಂಗೋಲರಲ್ಲಿ ಗ್ರಾಮೀಣ ಬೇಸಾಯಗಾರರು ಮತ್ತು ಪಶುಸಂಗೋಪಕರು ಎಂಬ ಬುಡಕಟ್ಟುಗಳು ಶಿವನ ಆರಾಧಕರಾಗಿದ್ದಾರೆ.ದಕ್ಷಿಣ ರಾಜಸ್ತಾನದ ಬನೇಶ್ವರದಲ್ಲಿ ಬನೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯತ್ತದೆ.ಬನೇಶ್ವರ ಎಂದರೆ ಶಿವಲಿಂಗ,ಸ್ವಯಂ ಭೂಲಿಂಗ ಎಂಬ ಪ್ರತೀತಿಯಿದೆ.ಭಿಲ್ಲರ ವರ್ಣರಂಜಿತ ಪ್ರಮುಖ ಜಾತ್ರೆ ಇದು.

ಆಡಿನ ಹಿಕ್ಕಿ ತಂದು ತೀಡಿ ಲಿಂಗವ ಮಾಡಿ

ನೋಡಿದಿರೇನ ಶಿವನ ಮಹಿಮೆ-ಗೋಲಗೇರಿ ಲಿಂಗ

ಆಡಿನ ಹಿಕ್ಕ್ಯಾಗ ಒಲಿದಾನ

ಲಿಂಗಗಳಲ್ಲಿ ಎರಡು ವಿಧ. ಒಂದು, ಸ್ಥಾವರ ಲಿಂಗ; ಮತ್ತೊಂದು, ಚಲಿಸುವ ಲಿಂಗ. ಸ್ಥಾವರ ಲಿಂಗವು ಮಣ್ಣು, ಕಲ್ಲು, ಮರ, ಹರಳು ಮುಂತಾದವುಗಳಿಂದ ಮಾಡಿದಂಥವು. ನಾನಾ ರೀತಿಯ ಪೀಠಗಳಮೇಲೆ ಇರಿಸಿದ ತಾತ್ಕಾಲಿಕ ಲಿಂಗಗಳನ್ನು ಗಂಡು ಕಲ್ಲುಗಳಿಂದಲೂ, ಪೀಠಗಳನ್ನು ಹೆಣ್ಣು ಕಲ್ಲುಗಳಿಂದಲು ಮಾಡಲಾಗುತ್ತದೆ.ನಮ್ಮ ಜನಪದರು ಶಿವನನ್ನು ಕುರಿತು ಮನತುಂಬಿ ಹಾಡಿದ್ದಾರೆ.

ಶಿವ ಶಿವನಂದರ ಶಿವದಾರ ಕೊರಳಾಗ

ಶಿವದಾರ ನಮ್ಮ ಕೊರಳಾಗ-ಪಂಚಮುಖದ

ವಿಭೂತಿ ನಮ್ಮ ಹಣಿಮ್ಯಾಗ




ಕಲ್ಲಿಗಿ ಮುಕ್ಹಾಕಿ ಎಲ್ಲಾರ್ನ ನೆನದೀನಿ

ಸಲ್ಲ ಕೇಳಾಕ ಶಿವಬಂದ-ಮ್ಯಾಲಿರುವ

ಮಾದೇವ ಬಂದ ಮನನೋಡಿ.







ಹರಕೀಯ ಹೊತ್ತೇನಿ ಅರಿಕುಳ್ಳ ದೇವರಿಗೆ

ಹಾದಿ ಮ್ಯಾಲಿರುವ ಶಿವನಿಗೆ -ಪರಮಾನಂದ

ಮನಸೀನ ಹರಕಿ ಇಳದೇನ




ಆಕಾಶದಡವ್ಯಾಗ ಧೂಪದ ಹೊಗೆಯೆದ್ದು

ಆಯ್ತು ಮಲ್ಲಯ್ಯನ ಶಿವಪೂಜೆ-ಆಗಾಗ

ಆಕಾಸದ ಘಂಡಿ ಘಳಲೆಂದು.




ಮಂದೇನ ಕೊಟ್ಟೀತ ಮನವೇನು ದಣದೀತ

ಮುಂಜಾನದಾಗ ಗಿರಿಮಲ್ಲ -ಕೊಟ್ಟರ

ಮನಿ ತುಂಬಿ ನಮ್ಮ ಮನ ತುಂಬಿ.




ಕರುಣ ಬಂದರ ಕಾಯೋ ಮರಣ ಬಂದರೆ ಒಯ್ಯೋ

ಕರುಣಿ ಕಲ್ಯಾಣ ಬಸವಣ್ಣ-ಶಿವಲಿಂಗ

ಕಡೆತನಕಕಾಯೊ ಅಭಿಮಾನ.

-ಡಾ.ಪ್ರಕಾಶ ಗ.ಖಾಡೆ,

=============================================================

ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890

ಸಾಹಿತ್ಯದ ತಾಯಿಬೇರು ಜಾನಪದ


  ಸಾಹಿತ್ಯದ ತಾಯಿ ಬೇರು “ಜಾನಪದ”

                          * ಡಾ. ಪ್ರಕಾಶ ಗ. ಖಾಡೆ


ಜನಪದ ಸಾಹಿತ್ಯ ಜನ ಬದುಕಿದ, ಬದುಕುತ್ತಿರುವ ಎಲ್ಲ ಪ್ರದೇಶಗಳಲ್ಲೂ ಎಲ್ಲ ಕಾಲಕ್ಕೂ

ಉಳಿದುಕೊಂಡು ಬಂದಿದೆ. ಯಾವುದೇ ದೇಶದ ಮೊದಲ ಸಾಹಿತ್ಯ ಆ ದೇಶದ ಜನಪದ ಸಾಹಿತ್ಯವೇ ಆಗಿದೆ. ಈ ಕಾರಣವಾಗಿ ಅದರ ಒಡಲೊಳಗೇ ಉದಿಸಿ ಬಂದ ಶಿಷ್ಟ ಸಾಹಿತ್ಯದ ಬೇರುಗಳು ಜಾನಪದವೇ ಆಗಿರುವುದು ಸರ್ವವಿಧಿತ. ಕಾಲ ಕಾಲಕ್ಕೆ ಕಾವ್ಯದ ರೂಪ ಕಟ್ಟುವಿಕೆಯ ಶೈಲಿ ಬದಲಾಗುತ್ತ ಬಂದರೂ ಜಾನಪದರಿಂದಲೇ ಹೊಸತನ ಪಡೆದುಕೊಂಡು ನೆಲೆನಿಂತಿರುವುದು ಕಾಣುತ್ತೇವೆ. ಇವತ್ತು ತನ್ನ ಸತ್ವ ಸೊಗಡು ಕಳೆದುಕೊಂಡಿರುವ ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಕೇವಲ ಹಳೆಯದರ ಪಳೆಯುಳಿಕೆಯಾಗದಂತೆ ಜನಪದ ಸಾಹಿತ್ಯ ಇವತ್ತು ಆಧುನಿಕತೆಯ ಶಕ್ತಿ, ಸೌಂದರ್ಯ, ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದು ನಿಲ್ಲ ಬೇಕಾದ ಕಾಲ ಬಂದಿದೆ. ಹೀಗಾಗಿ ಜನಪದದಿಂದ ಶಿಷ್ಟ ಸಾಹಿತ್ಯ, ಶಿಷ್ಟ ಸಾಹಿತ್ಯದಿಂದ ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಕೊಡಕೊಳ್ಳುವ ಕಾರ್ಯ ನಡೆದೆ ಇದೆ. ಈ ಮೂಲಕ ಹೃದಯದಲ್ಲಿ ನಿಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ, ವೈಚಾರಿಕ ನೆಲೆಗಟ್ಟಿನಲ್ಲಿದ್ದ ಶಿಷ್ಟರು  ಹೃದಯದಲ್ಲಿ ನಿಂತು ಬದುಕುವ ಸಂದರ್ಭ ಸೃಷ್ಠಿಯಾಗಿದೆ. ‘ಆಧುನಿಕತೆಯಿಂದ ಜನಪದವೂ ಜೀವಂತವಾಗುವುದು. ಜನಪದ ಸಾಹಿತ್ಯದ ಸತ್ವ ಸೊಬಗುಗಳಿಂದ ಇಂದಿನ ಹೆಚ್ಚಿನ ಕವಿಗಳು ಶಿಷ್ಟ ಸಾಹಿತ್ಯ ರಚಿಸುತ್ತಿರುವ ಅವರ ಕಾವ್ಯ ಜೀವಂತವಾಗಿರಲು ಕಾರಣವಾಗಿದೆ. ಇಲ್ಲದಿದ್ದರೆ ಅವರ ರಚನೆಗಳೆಲ್ಲ ಕಾಗದದ ಹೂವುಗಳಾಗುವವು’ಎಂಬ ಚೆನ್ನಣ್ಣ ವಾಲೀಕಾರರ ಮಾತುಗಳು ಜಾನಪದವನ್ನು ಅರಗಿಸಿ ಕೊಂಡ ಶಿಷ್ಟತೆಯ ಪ್ರಸ್ತುತತೆಯನ್ನು ಕಂಡರಿಸುತ್ತದೆ.

                ಆದಾವ ನಮ ಜೋಳ


                ಉಳಿದಾವ ನಮ ಹಾಡ

   ಎನ್ನುವಂತೆ ಜನಪದಕ್ಕೆ ಅಂತ್ಯ ಎಂಬುದು ಇಲ್ಲ. ಅದು ಬೇರೆ ಬೇರೆ ರೂಪದಿಂದ ಹೊರ ಹೊಮ್ಮುತ್ತಲೇ ಇರುತ್ತದೆ. ವೈಜ್ಞಾನಿಕ ನಾಗರಿಕತೆಯ ಹಾಗೂ ಅರ್ವಾಚೀನ ಕಲೆಗಳ ತಾಯಿ ಬೇರುಗಳನ್ನು ಪ್ರಾಚೀನ ಜನಪದದಲ್ಲಿ ಗುರುತಿಸುತ್ತೇವೆ.


     ಖ್ಯಾತ ವಿದ್ವಾಂಸರಾದ ದೇ.ಜವರೇಗೌಡರು ಹೇಳುವಂತೆ:

“ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಯಾವಾಗಲೂ ಎಂದಿನಿಂದಲೂ ಜನಪದ ಸಾಹಿತ್ಯಕ್ಕೆ ಋಣಿಯಾಗಿದೆ. ಹೋಮರ್, ವಾಲ್ಮೀಕಿ, ವ್ಯಾಸಾದಿ ಕವಿಗಳೆಲ್ಲರೂ ಅಜ್ಞಾತ ಜನಪದ ಕವಿಗಳಿಗೆ ನಾನಾ ರೀತಿಯಲ್ಲಿ ಋಣಿಗಳಾಗಿದ್ದಾರೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ.” ಶಿಷ್ಟ ಸಾಹಿತ್ಯ ಮಡುಗೊಂಡು ಪಾಚಿ ಬೆಳೆದು ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯ  ವಾಹಿನಿ ಅದರ ಮೇಲೆ ಹರಿದು ಪಾಚಿ ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. ವಡ್ರ್ಸವರ್ತ, ಬರನ್ಸ,  ಸ್ಕಾಟ್, ಪುಸ್ಕಿನ್, ಕುಮಾರವ್ಯಾಸ, ವಚನಕಾರರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಅದರಂತೆ ಪಂಪ ತನ್ನ ಕಾವ್ಯದ ಉನ್ನತಿಗೆ ಪ್ರೌಢದ ಜತೆಗೆ ದೇಸೀಯನ್ನು ಸಮೀಕರಿಸಿದ್ದಾನೆ.ಶಿವಶರಣರು ತಮ್ಮ ಹಿಂದಿನ ಚಂಪೂ ಪರಂಪರೆಯನ್ನು ಮುರಿದು ವಚನ ಪರಂಪರೆಯನ್ನು ಪ್ರತಿಷ್ಠಾಪಿಸಲು ಜನಪದ ಸಾಹಿತ್ಯವನ್ನೇ ಆಶ್ರಯಿಸಿದರು. ಜನಪದ ಭಾಷೆ, ಛಂದಸ್ಸು ಶಿಷ್ಟ ಸಾಹಿತ್ಯದ ಹುಟ್ಟಿಗೆ ಮೂಲವಾಗಿದೆ. ಗರತಿಯ  ತ್ರಿಪದಿಯೇ ಶಿಷ್ಟರ ಚೌಪದಿ, ಷಟ್ಪದಿ ಹುಟ್ಟಿಗೆ ಬುನಾದಿಯಾಗಿದೆ. ಜನಪದ ಛಂದಸ್ಸು, ಜೈನರ ಚಂಪೂ, ವೀರಶೈವರ ವಚನ ರಗಳೆ, ಬ್ರಾಹ್ಮಣರ ಷಟ್ಪದಿ, ದಾಸರ ಹಾಡು, ಸರ್ವಜ್ಞನ ತ್ರಿಪದಿಗಳಿಗೆ ಆಶ್ರಯವಾಗಿದೆ.

               ಜನಪದ ಗೀತೆ ಎಲ್ಲವನ್ನು ಒಳಗೊಂಡ ಬಯಲು ಆಲಯ. ಅದು ಉದ್ದೇಶಪೂರ್ವಕವಾಗಿ ಕಲಾತ್ಮಕವಾದುದಲ್ಲ. ಅದರ ಜೀವಂತಿಕೆಯೇ ಅದರ ಕಲಾತ್ಮಕತೆ, ಅನುಭವ ಮತ್ತು ಶಾಸ್ತ್ರರೂಪದ ಇಲ್ಲಿನ ವಸ್ತು ಜನರ ಸಮೂಹ ಕೇಂದ್ರಿತ ಆಸಕ್ತಿ, ಮಾತೃ ನಂಬಿಕೆಗಳ ಮೇಲೆ ನಿಂತಿರುವಂಥದಾಗಿದೆ. ‘ವ್ಯಕ್ತಿ ವ್ಯವಸ್ಥೆಯ ಸಂಬಂಧ, ಸಾಮಾಜಿಕ ರಚನೆ, ಸಂಘರ್ಷ ರೂಪದ ಜೀವನ, ಮಾನವ ಜೀವನದ ಸ್ಥಿತಿಗತಿಗಳ ನೀತಿ, ನಿಯಮ ನಿಷ್ಠೆ, ಸಾರ್ಥಕತೆಗಳು ಆಚಾರ, ವಿಚಾರ, ಸಂಪ್ರದಾಯ ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ’ ಹೀಗೆ ಒಟ್ಟು ಬದುಕಿನ ಪ್ರತಿ ಮಗ್ಗಲುಗಳನ್ನು ಆವರಿಸಿಕೊಂಡಿರುವ ಜನಪದವು ಶಿಷ್ಟ ಪ್ರಕಾರಕ್ಕೆ ತನ್ನ ಕೊಡುಗೆ ನೀಡುತ್ತ ಉಳಿದುಕೊಂಡು ಬಂದಿರುವುದು ಅದರ ಚಲನ ಶೀಲತೆಗೆ ಸಾಕ್ಷಿಯಾಗಿದೆ.     

        ಚಂಪೂ, ವಚನÀ, ಷಟ್ಪದಿ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯ ಪರಂಪರೆಯ ಉದ್ದಕ್ಕೂ ಜಾನಪದದ ಇತಿಹಾಸ ಗುರುತಿಸಬಹುದು.ತ್ರಿಪದಿಗಳು, ಕಥನಕವನಗಳು, ಗೊಂದಲಿಗರ ಹಾಡುಗಳು, ಲಾವಣಿಗಳು, ಕೋಲಾಟದ , ಬಯಲಾಟದ ಪದಗಳು, ಡೊಳ್ಳಿನ ಪದಗಳು.. ಹೀಗೆ ಅನೇಕ ರೀತಿಯ ಪದ್ಯ ರೂಪಗಳು ಬಹುಕಾಲದಿಂದಲೂ ನಡೆದು ಬಂದಿರುವುದು ಇತಿಹಾಸದ ಮುಂದುವರಿಕೆಯಾಗಿದೆ.

ಇಂದಿಗೂ ಜನಪದ ಕಾವ್ಯ ಪರಂಪರೆ ಜೀವಂತವಾಗಿದೆ. ಗೊಂದಲಿಗರು, ಹೆಳವರು ತಾವು ಕಲಿತ ಹಾಡುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾವು ಹೋದೆಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಹಿಮ್ಮೇಳದಲ್ಲಿ ಉಪಯೋಗಿಸಿಕೊಳ್ಳುತ್ತಾರೆ,

                      ಮುಂದೆ ಅವರೂ ಸ್ವತಂತ್ರವಾಗಿ ಹಾಡಬಲ್ಲವರಾಗುತ್ತಾರೆ. ಶಕ್ತರಾದವರು ಹೊಸ ಹಾಡುಗಳನ್ನು ಕಟ್ಟಿಕೊಂಡು ಜೋಡಿಸಿಕೊಳ್ಳುತ್ತಾರೆ. ಕಂಸಾಳೆ ಸಿರಿಯ ದೇವರ ಗುಡ್ಡರು ಗುರುವಿನ ಮೂಲಕ ಹಾಡುಗಳನ್ನು ಕಷ್ಟಪಟ್ಟು ಕಲಿಯುತ್ತಾರೆ ಇದು ಪರಂಪರೆಯಿಂದ ಸಾಗಿ ಬಂದ ಇತಿಹಾಸ ಗುರುತಿಸುತ್ತದೆ.

        ಜಾನಪದಕ್ಕೆ ಪ್ರಭು ಸಂಸ್ಕ್ರತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಅನ್ವಯಿಸಿಕೊಳ್ಳುವ ಬಗ್ಗೆ ಹಿ.ಶಿ. ರಾಮಚಂದ್ರೇಗೌಡರ ವಿರೋಧವಿದೆ. ಶ್ರೇಷ್ಠತೆಯ ಮಾನದಂಡಗಳು ವರ್ಗಸಮಾಜ ಮತ್ತು ಬಹುಸಮಾಜದ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಬೇರೆ ಬೇರೆಯಾಗುತ್ತವೆ. ಕಾವ್ಯ ಧ್ವನಿ-ಸಾಂಸ್ಸøತಿಕ ಧ್ವನಿ ಅದು ಅಲೌಕಿಕ ಧ್ವನಿ ಅಲ್ಲ. ಇದರ ಪರಿಣಾಮವಾಗಿ ಸಂಸ್ಕøತಿ ಹುಟ್ಟಿಕೊಳ್ಳುತ್ತದೆ. ಸಾಹಿತ್ಯ ಸ್ಠೃಷ್ಟಿಯಾಗುತ್ತದೆ. ಇಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ಸಂದರ್ಭಗಳನ್ನು ಗಮನಿಸಬೇಕು.                                              

     ‘ಶಿಷ್ಟ ಜನಪದವಾದರೆ ಅದಕ್ಕೆ ಚಿರಂತತೆ ಬರುವುದು. ಜನಪದ ಶಿಷ್ಟವಾದರೆ ಅದಕ್ಕೆ ಸಾವುಂಟಾಗುವುದು’ ಎಂಬ ಚೆನ್ನಣ್ಣ ವಾಲೀಕಾರರ ಮಾತನ್ನು ಇಲ್ಲಿ ಗಮನಿಸಬೇಕು. ಶಿಷ್ಟರ ಸಾಹಿತ್ಯ ಶಿಷ್ಟರ ಮಧ್ಯೆಯೇ ಬೆಳೆದು ಅಲ್ಲಿಯೇ ಪರ್ಯಾವಸಾನಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕವಿ, ಗಮಕಿ, ಕೆಲವೊಮ್ಮೆ ಸಹೃದಯ ಇರುತ್ತಾರೆ. ಶಿಷ್ಟ ಸಾಹಿತ್ಯದ ಪ್ರದರ್ಶನಕ್ಕೆ ಸಂದರ್ಭ ಒದಗಿಸಿಕೊಂಡು ಅದಕ್ಕಾಗಿಯೇ ವೇದಿಕೆ ನಿರ್ಮಿಸಬೇಕು. ಶಿಷ್ಟ ಸಾಹಿತಿ ತಾನೇ ರಚಿಸಿದ ಕವನವನ್ನು ಬಾಯಿಪಾಠ ಮಾಡಿ ಹಾಡಬೇಕಾಗುತ್ತದೆ. ಆದರೆ ಜನಪದದಲ್ಲಿ ಹೀಗಿಲ್ಲ. ಜನಪದ ಗೀತೆಗಳನ್ನು ಹಾಡುವವರು ಅವರದೇ ಆದ ರಾಗ, ಭಾವ, ತಾಳ, ಮೇಳಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಹಾಗೆ ಹಾಡುವಾಗ ಭಾವಕ್ಕನುಗುಣವಾಗಿ ಸಂದರ್ಭ ತಕ್ಕಂತೆ ಹಿಗ್ಗಿಸುವ ಕುಗ್ಗಿಸುವ ಸಾಮಥ್ರ್ಯವೂ ಅವರದಾಗಿರುತ್ತದೆ. ಆದ್ದರಿಂದ ಸಹೃದಯವೇ ಜನಪದ, ಜಾನಪದವೇ ಸಹೃದಯ. ಜನಪದ ಅದಕ್ಕಾಗಿಯೇ ನಿರ್ಮಿಸಿ ಮತ್ತೆ ಕಿತ್ತೆಸುವ ಅಗತ್ಯವಿಲ್ಲ. ಅದು ಜನಸಾಮಾನ್ಯರ ನಿತ್ಯ ಜೀವನದೊಂದಿಗೆ ಬೆರೆತು ಅವರೊಡನೆಯೇ ಜೀವಿಸುತ್ತದೆ. ಜೊತೆಗೆ ಜನಪದ ಕವಿ ಅನುಭಾವಿಯಾಗಿದ್ದರಿಂದ ಅದನ್ನು ಹೇಳುವ ಚತುರನಾಗಿರುತ್ತಾನೆ. ಹೀಗೆ ಶಿಷ್ಟ ಮತ್ತು ಜನಪದ ಸಾಹಿತ್ಯ ತನ್ನ ನೆಲೆಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತವೆ.

        ‘ಜನಪದ ಕಾವ್ಯದಲ್ಲಿ ಚಿಕ್ಕಪುಟ್ಟ ಪದಗಳೇ ಹೆಚ್ಚು, ಕಾರಣ ದೀರ್ಘ ಕವಿತೆಗಳನ್ನು ಕಟ್ಟುತ್ತ ನೆನಪಿಡುವುದು ಕಠಿಣ’ ಎಂದು ಹೇಳುವ ಮಾತಿದೆ. ಆದರೆ ಇದು ತಪ್ಪು. ಜನಪದ ಕಾವ್ಯಗಳು ಕೇವಲ ತ್ರಿಪದಿ ರೂಪದ ಪುಟ್ಟ ಪುಟ್ಟ ಕೃತಿಗಳಾಗದೆ ಅನೇಕ ಮಹಾಕಾವ್ಯಗಳು ಜಾನಪದದ ವಿಸ್ತಾರವನ್ನು ಸಾರಿವೆ.’ ಈ ಕಾವ್ಯಗಳ ಹಿರಿಮೆಯನ್ನು ದೇ. ಜವರೇಗೌಡರು ಹೀಗೆ ದಾಖಲಿಸುತ್ತಾರೆ:

       ‘ಮಲೆಯ ಮಾದೇಶ್ವರ ಕಾವ್ಯ, ದೇವರ ಗುಡ್ಡದ ಮಹಾಕಾವ್ಯ ಕಂಸಾಳೆ ವಾದ್ಯದೊಡನೆ ಏಳೆಂಟು ರಾತ್ರಿ ಅವಿಚ್ಛಿನ್ನವಾಗಿ ಅದರ ಗಾಯನ ಸಾಗುತ್ತದೆ. ವೈವಿಧ್ಯಮಯವಾದ ಛಂದೋಬಂಧಗಳಲ್ಲಿ ರಚಿತವಾದ ಲಲಿತಕಾವ್ಯವಿದು... 

                     

ನೀಲಗಾರರಿಗೆ  ಮೀಸಲಾದ ಮಂಟೇಸ್ವಾಮಿ ಕಾವ್ಯ ಒಂದೇ ಒಂದು ಛಂದದಲ್ಲಿ ತಂಬೂರಿಯೊಡನೆ ನಿರರ್ಗಳವಾಗಿ ಹರಿಯುತ್ತದೆ. ಮೊದಲನೆಯದರಲ್ಲಿ ಮೂವತ್ತೆರಡು ಸಾವಿರ ಸಾಲುಗಳೂ, ಎರಡನೆಯದರಲ್ಲಿ ಇಪ್ಪತ್ನಾಲ್ಕು ಸಾವಿರ ಸಾಲುಗಳಿದ್ದು ಕಲೇವಾಲಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೇ ಹೇಳಬೇಕು. ನೀಲಗಾರರ ಮಂಟೇಸ್ವಾಮಿ ಕಾವ್ಯವನ್ನು ‘ಧರೆಗೆ ದೊಡ್ಡವರ ವಚನ’ವೆಂದು ಕರೆಯುತ್ತಾರೆ. ಸುಮಾರು ಹದಿನೈದು ಸಾವಿರ ಸಾಲುಗಳು ವಿಸ್ತಾರವುಳ್ಳ, ಹತ್ತು ವಿಭಾಗಗಳಲ್ಲಿ ದೊರೆಯುವ ‘ಜನಪದ ಬಸವ ಪುರಾಣ’ವೊಂದು ಸೊಗಸಾದ ಮಹಾಕಾವ್ಯ. ಚೌಡಿಕೆ ಸಂಪ್ರದಾಯದ ಎಲ್ಲಮ್ಮನ ಕಾವ್ಯ ಮತ್ತು ಕಾಡುಗೊಲ್ಲರ ಸಂಪ್ರದಾಯದ ಜುಂಜಪ್ಪನ ಕಾವ್ಯಗಳು ಮಹಾ ಕಾವ್ಯದ ವಿಸ್ತಾರ ಹೊಂದಿರದಿದ್ದರೂ ಗುಣಲಕ್ಷಣಗಳಿಂದ  ಸಮೃದ್ಧವಾದ ಜನಪ್ರಿಯ ಕೃತಿಗಳು’ ಹೀಗೆ ಕೆರೆಯ ಹೊನ್ನಮ್ಮ, ಕಾಳಿಂಗರಾಯ, ಚೆನ್ನಿಗ ಚೆಲುವಯ್ಯ ಮುಂತಾದ ಮಹಾಕಾವ್ಯಗಳು ಕನ್ನಡ ಜನಪದ ಕಾವ್ಯದ ಗುಣ ಗಾತ್ರಗಳೆರಡರಿಂದಲೂ  ಸಮೃದ್ಧವಾಗಿ, ಬೇರೆ ಕಡೆ ಸಿಗದ ಮೌಲಿಕ ಸಾಹಿತ್ಯ ‘ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗ ಬಲ್ಲವುಗಳಾಗಿವೆ’ ಎಂದಿದ್ದಾರೆ.

        ಶಿಷ್ಟ ಸಾಹಿತ್ಯÀ ಕೇವಲ ಮನಸ್ಸಿನ ಸಾಹಿತ್ಯ, ಜನಪದ ಸಾಹಿತ್ಯ ದೇಹ ಮತ್ತು ಮನಸ್ಸಿನ ಸಾಹಿತ್ಯ ಇದು ಕ್ರಿಯೆಯೊಂದಿಗೆ ಹುಟ್ಟುತ್ತದೆ. ಬೀಸುವಾಗ, ಕುಟ್ಟುವಾಗ, ಅಲೆದಾಡುವಾಗ, ದೋಣಿ ನಡೆಸುವಾಗ ಹೀಗೆ ಒಟ್ಟು ಕ್ರಿಯೆಯಲ್ಲಿಯೇ ರೂಪುಗೊಂಡು ಬಳಕೆಯಾಗುತ್ತದೆ. ಶಿಷ್ಟ ಸಾಹಿತ್ಯವು ಏಕಸೃಷ್ಟಿಗೆ, ಏಕ ಶ್ರೇಷ್ಠತೆಗೆ ಸಂಬಂಧಪಟ್ಟಿದಾದರೆ, ಜನಪದ ಸಾಹಿತ್ಯ ಪುನರ್ ಸೃಷ್ಠಿಯಾಗುವಂಥದು. ಒಂದು ವ್ಯಕ್ತಿ ಸೃಷ್ಠಿ, ಮತ್ತೊಂದು ಸಮೂಹ ಸೃಷ್ಠಿ. ಜನಪದ ಸಾಹಿತ್ಯ ಸಮಾಜನಿಷ್ಠವಾಗಿ, ವಿಷಯನಿಷ್ಠವಾಗಿ ಮಾತನಾಡುತ್ತದೆ. ಅದು ವಸ್ತುನಿಷ್ಠವಾಗಿ ಮಾತನಾಡುವುದಿಲ್ಲ. ಹೀಗೆ ಅದರ ಪ್ರತ್ಯೇಕ ಅಸ್ತಿತ್ವಗಳನ್ನು ಗುರುತಿಸಿದರೂ ಅವು ಒಂದರೊಳಗೊಂದು  ಬೆಸೆದುಕೊಂಡು ಸೃಷ್ಟಿಯಾಗುತ್ತಿರುವುದು ಜನಪದದ ಪುನರ್ ಸೃಷ್ಟಿಯ ದ್ಯೋತಕವಾಗಿದೆ.

          ‘ಜಾನಪದಕ್ಕೆ ಸಾವಿಲ್ಲ; ಅದು ಭಿನ್ನ ರೂಪದಲ್ಲಿ ಮುಂದುವರೆಯುತ್ತದೆ’ ಎಂಬ ಮಾತಿನಂತೆ ‘ಜಾನಪದ ಪಳಿಯುಳಿಕೆ’ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳೆಯುಳಿಕೆ ಎಂದಲ್ಲ, ಪಳೆಯುಳಿಕೆಯ ಪುನಃಸೃಷ್ಟಿ ಅಂದರೆ ಪಳೆಯುಳಿಕೆಯನ್ನು ಪುನಃಸೃಷ್ಟಿಸುತ್ತಾ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ ಎಂಬ ತಿದ್ದುಪಡಿಯೊಂದಿಗೆ ತಿಳಿದುಕೊಳ್ಳಬೇಕು ಎಂಬುದು ಅದರ ನಿರಂತರ ಪುನಃಸೃಷ್ಟಿ ಕ್ರಿಯೆಯನ್ನು ಕಾಣುತ್ತೇವೆ. ಪ್ರಸ್ತುತ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಈ ಸಂದರ್ಭದಲ್ಲಿ ಈ ಚಿಂತನೆಗಳು ಪೂರಕವಾಗಲಿ.                ###                                                                                                                                                                    ಡಾ.ಪ್ರಕಾಶ ಗ.ಖಾಡೆ, ,ಮನೆ ನಂ135, ಸೆಕ್ಟರ್ ನಂ63, ನವನಗರ, ಬಾಗಲಕೋಟ -587103. emಚಿiಟ : ಜಡಿಠಿಡಿಚಿಞಚಿshಞhಚಿಜe@gmಚಿiಟ.ಛಿom,



 

ಬಾಗಲಕೋಟ ಜಿಲ್ಲೆಯ ಜಾನಪದ

 ವಿಶೇಷ ಲೇಖನ

         ಬಾಗಲಕೋಟ ಜಿಲ್ಲೆಯ ಜಾನಪದ ಪರಂಪರೆ

                           - ಡಾ.ಪ್ರಕಾಶ ಗ.ಖಾಡೆ

 ಕನ್ನಡ ಜಾನಪದ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯು ಹಲವು ಪ್ರಥಮಗಳಿಗೆ ಕಾರಣವಾಗಿದೆ.ಕನ್ನಡ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಈ ಜಿಲ್ಲೆಯವರು ಎಂಬುದು ದಾಖಲಾರ್ಹವಾದುದು.ಕ್ರಿ.ಶ. 700 ರ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಸಿಕ್ಕುವ ತ್ರಿಪದಿ ಕನ್ನಡ ಜಾನಪದದ ತಾಯಿ ಬೇರಾದರೆ,ಇದೇ ಬಾದಾಮಿಯಿಂದಲೇ ಕ್ರಿ.ಶ. 1874 ರ ಸುಮಾರಿಗೆ ಕನ್ನಡದಲ್ಲಿ ಮೊದಲ ಜನಪದ ಸಾಹಿತ್ಯ ಸಂಗ್ರಹಣಾ ಕಾರ್ಯ ಆರಂಭವಾಯಿತು.ಜೊತೆಗೆ ಬಾದಾಮಿ ತಾಲೂಕಿನ ಕೆರೂರದ ಡಾ.ಬಿ.ಎಸ್.ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದಲ್ಲಿ ಮೊದಲ ಪಿಎಚ್.ಡಿ. ಸಂಪಾದಿಸಿದರು.ಹೀಗೆ ಜಾನಪದದ ರೂಪ,ಸಂಗ್ರಹ ,ಸಂಪಾದನೆ,ಸಂಶೋಧನೆ ಕಾರ್ಯಗಳೆಲ್ಲ ಬಾಗಲಕೋಟ ಜಿಲ್ಲೆಯಿಂದಲೇ ಮೊದಲಾದದ್ದು ಒಂದು ಐತಿಹಾಸಿಕ ಸತ್ಯವಾÀಗಿದೆ.
                                                                  ಜಿ.ಬಿ.ಖಾಡೆ
ಹಲಸಂಗಿ ಗೆಳೆಯರು ಮಾಡಿದ ಜನಪದ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ಪ್ರೇರಿತರಾಗಿ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗಣಪತಿ ಬಾಪು ಖಾಡೆಯವರು ಕ್ರಿ.ಶ. 1965 ರಲ್ಲಿ ಜಮಖಂಡಿ ಭಾಗದ ಹಳ್ಳಿಗಳಲ್ಲಿ ಹಾಡುವ ಬೀಸುಕಲ್ಲಿನ ಪದಗಳು, ಕೋಲಾಟದ ಪದಗಳು,ಡೊಳ್ಳಿನ ಹಾಗೂ ಹಂತಿ ಪದಗಳನ್ನು ಸಂಗ್ರಹಿಸಿದರು.ಹೀಗೆ ಸಂಗ್ರಹಿಸಿದ ಜಿ.ಬಿ.ಖಾಡೆಯವರ ಜನಪದ ಹಾಡುಗಳ ಸಂಕಲನ 'ಕಾಡು ಹೂಗಳು' ಹೆಸರಿನಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗದಿಂದ 1973 ರಲ್ಲಿ ಪ್ರಕಟವಾಯಿತು.ಈ ಕೃತಿಯಿಂದ ಜಮಖಂಡಿ ಭಾಗದ ಕೃಷ್ಣಾ ತೀರದ ಜನಪದ ಸಾಹಿತ್ಯ ಮೊದಲ ಬಾರಿಗೆ ಸಂಶೋಧಕರಿಗೆ ಲಭ್ಯವಾಗುವಂತಾಯಿತು.

ಸಧ್ಯ ಮುಧೋಳದಲ್ಲಿ ನೆಲೆಸಿರುವ 72 ವಯಸ್ಸಿನ ಹಿರಿಯ ಜನಪದ ತಜ್ಞರಾದ ಜಿ.ಬಿ.ಖಾಡೆಯವರು ಸಂಪಾದಿಸಿರುವ 23 ಜನಪದ ಕಥೆಗಳ 'ಬೆಳವಲ ಬೆಳಕು 'ಕೃತಿ ಮತ್ತು ಅಪಾರ ಪ್ರಮಾಣದ ಕರಬಲಾ ಪದಗಳ'ಹಳ್ಳಿ ಹಬ್ಬಿಸಿದ ಹೂಬಳ್ಳಿ' ಕೃತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 1981 ರಲ್ಲಿ ಪ್ರಕಟಿಸಿದೆ.ಅಲ್ಲದೇ 'ಬದುಕೇ ಜಾನಪದ' ಹೆಸರಿನಲ್ಲಿ ಅವರ ಜನಪದ ಆತ್ಮ ಕಥನವು 2010 ರಲ್ಲಿ ಪ್ರಕಟವಾಗಿದೆ.ಜಮಖಂಡಿ ತಾಲೂಕು ತುಂಗಳದವರಾದ ಡಾ.ಸಂಗಮೇಶ ಬಿರಾದಾರ ಅವರು ಜನಪದ ಸಾಹಿತ್ಯ ಸಂಗ್ರಹದೊಂದಿಗೆ ಸಂಶೋಧನೆಗೆ ಒತ್ತು ಕೊಟ್ಟರು.ಚಾಪ ಹಾಕತೀವ ಡಪ್ಪಿನ ಮ್ಯಾಲ,ತೇರದಾಳದ ಲಾವಣಿಕಾರರು,ಪಾರಿಜಾತ ಪುಷ್ಪಗಳು,ಜಾನಪದ ಅಲೆಗಳು ಡಾ.ಬಿರಾದಾರ ಅವರ ಜನಪದ ಕೃತಿಗಳು.ಡಾ.ಶ್ರೀರಾಮ ಇಟ್ಟಣ್ಣವರ ಅವರು ಬಯಲಾಟಗಳ ರಾಜ ಎಂದೇ ಖ್ಯಾತಿ ಪಡೆದಿರುವ 'ಶ್ರೀ ಕೃಷ್ಣ ಪಾರಿಜಾತ' ಕುರಿತು ಪಿಎಚ್.ಡಿ. ಅಧ್ಯಯನ ಕೈಕೊಂಡು ಮೊದಲಬಾರಿಗೆ ಅದರ ಚರಿತ್ರೆ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.ಲಾವಣಿ,ಕೌಜಲಗಿ ನಿಂಗಮ್ಮ ಇವರ ಇತರ ಜಾನಪದ ಕೃತಿಗಳು.ಜಿಲ್ಲೆಯ ಡಾ.ಪಿ.ಕೆ.ಖಂಡೋಬಾ ಅವರು ಲಂಬಾಣಿ ಜೀವನ ಸಂಸ್ಕøತಿ ಕುರಿತು ಆಳವಾದ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ.ಡಾ.ಮೃತ್ಯುಂಜಯ ಹೊರಕೇರಿ ಅವರ'ಜನಪದ ಬೈಗುಳಗಳು' ಒಂದು ವಿಶಿಷ್ಟ ಜನಪದ ಕೃತಿ.ಎಸ್.ಜಿ.ಕೋಟಿಯವರ'ತೀರದ ದನಿ',ಡಾ.ಸರೋಜಿನಿ ಪಾವಟೆಯವರ 'ಚಲವಾದಿ ಗೌರಮ್ಮನ ಕಥೆಗಳು',ಶಿವಯೋಗಿ ಬಿದರಿಯವರ 'ಪಲ್ಲಕ್ಕಿ ಮ್ಯಾಲ ಮಗ ಬರಲಿ',ಜಿಲ್ಲೆಯ ಪ್ರಮುಖ ಜನಪದ ಕೃತಿಗಳು.
ಹೊಸತೆಲೆಮಾರಿನ ಜನಪದ ವಿದ್ವಾಂಸರಲ್ಲಿ ಡಾ.ಪ್ರಕಾಶ ಖಾಡೆ,ಡಾ.ವಿರೇಶ ಬಡಿಗೇರ ಹಾಗೂ ಡಾ.ಅಶೋಕ ನರೋಡೆ ಮುಖ್ಯರು
.ಬಾಗಲಕೋಟೆಯಲ್ಲಿ ನೆಲೆಸಿರುವ ಡಾ.ಪ್ರಕಾಶ ಖಾಡೆಯವರು ತಂದೆಯ ಜಾನಪದ ಕಾಯಕವನ್ನು ಮುಂದುವರಿಸಿದ್ದಾರೆ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ 'ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ',ಕೃಷ್ಣಾತೀರದ ಜನಪದ ಒಗಟುಗಳು,ಜನಪದ ಕೋಗಿಲೆ ಗೌರಮ್ಮ ಚಲವಾದಿ,

ನೆಲಮೂಲ ಸಂಸ್ಕøತಿ.ಜಾನಪದ ಹೆಬ್ಬಾಗಿಲು. ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು,ಜಾನಪದ ಲೋಕ ಇವರ ಪ್ರಕಟಿತ ಜನಪದ ಕೃತಿಗಳು.ಹಂಪಿ ವಿ.ವಿ.ಪ್ರಾಧ್ಯಾಪಕರಾದ ಡಾ.ವಿರೇಶ ಬಡಿಗೇರ ಬಾಗಲಕೋಟ ತಾಲೂಕಿನ ಬೆಣ್ಣುರ ಗ್ರಾಮದವರು.ಉತ್ತರ ಕರ್ನಾಟಕದ ಜನಪದ ಗೀತ ಮೇಳಗಲು,ರಾಶಿ ಬುತ್ತಿ,ಅಡಿಗಲ್ಲು,ಹಳೆಲಾವಣಿಗಳು,ಗುಳ್ಳವ್ವ ಆಚರಣೆ,ಹಾಗೂ ಸಂಸ್ಕøತಿ ಸಂರಚನೆ ಇವರ ಜನಪದ ಕೃತಿಗಳು.ಡಾ.ಅಶೋಕ ನರೋಡೆಯವರ 'ಗೋಸಾಯಿಗಳು ಒಂದು ಜನಾಂಗೀಯ ಅಧ್ಯಯನ,ಉತ್ತರ ಕರ್ನಾಟಕದ ಗೀ ಗೀ ಮೇಳಗಳು.ಜಾನಪದ ಜಗತ್ತಿಗೆ ಅಗಸೀ ಬಾಗಿಲು,ಕೌಜಲಗಿ ನಿಂಗಮ್ಮ ಇವರ ಜನಪದ ಕೃತಿಗಳು,ಬೀರಪ್ಪ ಹಳಮನಿ ಅವರ ಡೊಳ್ಳನ ಪದಗಳು,ಡಾ.ಬಿ.ಆರ್ ಪೋಲಿಸ ಪಾಟೀಲ ಅವರ ಲಾವಣಿಗಳು,ಮೊದಲಾದವು ಬಾಗಲಕೋಟ ಜಿಲ್ಲೆಯ ಜನಪದ ಸಾಹಿತ್ಯದ ಕೃತಿ ರತ್ನಗಳಾಗಿವೆ.

ಕಲಾ ಶ್ರೀಮಂತಿಕೆ ;
ಬಾಗಲಕೋಟ ಜಿಲ್ಲೆಯು ಜನಪದ ಕಲೆಗಳ ತವರುಮನೆ ಎನಿಸಿದೆ.ಇಲ್ಲಿ ಪ್ರತಿ ಊರಿಗೆ ಒಂದು ಭಜನಾ ಮೇಳ,ಡೊಳ್ಳಿನ ಮೇಳ,ಕರಡಿ ಮಜಲು ಕಾಣಸಿಗುತ್ತವೆ.ಸೋಬಾನೆ ಪದಗಳನ್ನು,ಬೀಸುವ ಪದಗಳನ್ನು ಹಾಡುವ ತಾಯಂದಿರು ಪ್ರತಿ ಹಳ್ಳಿಗಳಲ್ಲಿದ್ದಾರೆ.ಜಿಲ್ಲೆಯ ಶ್ರೀಮಂತ ಜನಪದ ಕಲೆ ಶ್ರೀ ಕೃಷ್ಣಪಾರಿಜಾತ.ಪಾರಿಜಾತದಲ್ಲಿ ಕೌಜಲಗಿ ನಿಂಗಮ್ಮ,ಕೃಷ್ಣಾಜಿ ದೇಶಪಾಂಡೆ,ಅಪ್ಪಾಲಾಲ ನಧಾಪ,ಬರಗಿ ರಾಚಯ್ಯ, ಟಕ್ಕಳಕಿ ವಿಠ್ಠಲರಾವ,ಸೂಳಿಕೇರಿ ಯಮೂನಾಬಾಯಿ,

                                                      ಪಾರಿಜಾತ ಕಲಾವಿದೆ ನಾಡೋಜ ಯಲ್ಲವ್ವ
ಯಲ್ಲವ್ವ ರೊಡ್ಡಪ್ಪನವರ,ಕಾಶಿಬಾಯಿ ದಾದನಟ್ಟಿ,ಮೊದಲಾದವರು ಖ್ಯಾತನಾಮರು.ಗೊಂದಲಿಗರ ಕಲೆಯಲ್ಲಿ ಬಾಗಲಕೋಟೆಯ ಸುಗತೇಕರ ಕುಟುಂಬದವರು ಜನಪ್ರಿಯರು.ಹುನಗುಂದ ತಾಲೂಕಿನ ಕೋಡಿಹಾಳ, ಮುಧೋಳ ತಾಲೂಕಿನ ಲೋಕಾಪುರಗಳಲ್ಲಿ ಬುಡಬುಡಕಿ ಕಲೆಯ ಕಲೆಗಾರಿದ್ದಾರೆ.ಬಾದಾಮಿ ತಾಲೂಕಿನ ಕರಡಿಗುಡ್ಡದಲ್ಲಿ ಕಿಳ್ಳೆ ಕ್ಯಾತ ಕಲಾವಿದರು ಉಳಿದುಕೊಂಡಿದ್ದಾರೆ.ದುರಗ ಮುರಗಿ ಅಲೆಮಾರಿ ಜನಾಂಗದವರು ಜಿಲ್ಲೆಯಲ್ಲಿ ಕಾಣಸಿಗುತ್ತಾರೆ.ಬಾದಾಮಿ ತಾಲೂಕಿನ ಕುಟಕನಕೇರಿ,ಕೆಂದೂರಗಳಲ್ಲಿ ಮೋಡಿ ಆಟದ ಮನೆತನಗಳು ಮೋಡಿ ಆಟದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.ಪ್ರಸಿದ್ದ ಬಾಗಲಕೋಟೆಯ ಹೋಳಿ ಆಚರಣೆಯಲ್ಲಿ ಹಲಗೆ ನುಡಿಸುವ ತಂಡಗಳಿವೆ.ಮಹಾಲಿಂಗಪುರದ ಕರಡಿ ಮನೆತನ ಕರಡಿ ವಾದನಕ್ಕೆ ರಾಷ್ಟ ಖ್ಯಾತಿ ಪಡೆದಿದೆ.ಜಿಲ್ಲೆಯ ತುಂಬೆಲ್ಲ ಜನಪದ ಕಲೆಯ ಸೊಬಗು ಚೆಲ್ಲುವರಿದಿದೆ.ಆದರೆ ಆಧುನಿಕತೆಯ ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಜನಪದ ಕಲೆಗಳು ಮರೆಯಾಗುತ್ತಿವೆ, ಕಲಾವಿದರು ಪ್ರೋತ್ಸಾಹವಿಲ್ಲದೆ ಸೊರಗುತ್ತಿದ್ದಾರೆ.
-------------------------------------------------------------------
Dr.Prakash G.Khade,Navanagar,Bagalkot-587103, Cell-9845500890