ಸಾಹಿತ್ಯದ ತಾಯಿ ಬೇರು “ಜಾನಪದ”
* ಡಾ. ಪ್ರಕಾಶ ಗ. ಖಾಡೆ
ಜನಪದ ಸಾಹಿತ್ಯ ಜನ ಬದುಕಿದ, ಬದುಕುತ್ತಿರುವ ಎಲ್ಲ ಪ್ರದೇಶಗಳಲ್ಲೂ ಎಲ್ಲ ಕಾಲಕ್ಕೂ
ಉಳಿದುಕೊಂಡು ಬಂದಿದೆ. ಯಾವುದೇ ದೇಶದ ಮೊದಲ ಸಾಹಿತ್ಯ ಆ ದೇಶದ ಜನಪದ ಸಾಹಿತ್ಯವೇ ಆಗಿದೆ. ಈ ಕಾರಣವಾಗಿ ಅದರ ಒಡಲೊಳಗೇ ಉದಿಸಿ ಬಂದ ಶಿಷ್ಟ ಸಾಹಿತ್ಯದ ಬೇರುಗಳು ಜಾನಪದವೇ ಆಗಿರುವುದು ಸರ್ವವಿಧಿತ. ಕಾಲ ಕಾಲಕ್ಕೆ ಕಾವ್ಯದ ರೂಪ ಕಟ್ಟುವಿಕೆಯ ಶೈಲಿ ಬದಲಾಗುತ್ತ ಬಂದರೂ ಜಾನಪದರಿಂದಲೇ ಹೊಸತನ ಪಡೆದುಕೊಂಡು ನೆಲೆನಿಂತಿರುವುದು ಕಾಣುತ್ತೇವೆ. ಇವತ್ತು ತನ್ನ ಸತ್ವ ಸೊಗಡು ಕಳೆದುಕೊಂಡಿರುವ ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಕೇವಲ ಹಳೆಯದರ ಪಳೆಯುಳಿಕೆಯಾಗದಂತೆ ಜನಪದ ಸಾಹಿತ್ಯ ಇವತ್ತು ಆಧುನಿಕತೆಯ ಶಕ್ತಿ, ಸೌಂದರ್ಯ, ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದು ನಿಲ್ಲ ಬೇಕಾದ ಕಾಲ ಬಂದಿದೆ. ಹೀಗಾಗಿ ಜನಪದದಿಂದ ಶಿಷ್ಟ ಸಾಹಿತ್ಯ, ಶಿಷ್ಟ ಸಾಹಿತ್ಯದಿಂದ ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಕೊಡಕೊಳ್ಳುವ ಕಾರ್ಯ ನಡೆದೆ ಇದೆ. ಈ ಮೂಲಕ ಹೃದಯದಲ್ಲಿ ನಿಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ, ವೈಚಾರಿಕ ನೆಲೆಗಟ್ಟಿನಲ್ಲಿದ್ದ ಶಿಷ್ಟರು ಹೃದಯದಲ್ಲಿ ನಿಂತು ಬದುಕುವ ಸಂದರ್ಭ ಸೃಷ್ಠಿಯಾಗಿದೆ. ‘ಆಧುನಿಕತೆಯಿಂದ ಜನಪದವೂ ಜೀವಂತವಾಗುವುದು. ಜನಪದ ಸಾಹಿತ್ಯದ ಸತ್ವ ಸೊಬಗುಗಳಿಂದ ಇಂದಿನ ಹೆಚ್ಚಿನ ಕವಿಗಳು ಶಿಷ್ಟ ಸಾಹಿತ್ಯ ರಚಿಸುತ್ತಿರುವ ಅವರ ಕಾವ್ಯ ಜೀವಂತವಾಗಿರಲು ಕಾರಣವಾಗಿದೆ. ಇಲ್ಲದಿದ್ದರೆ ಅವರ ರಚನೆಗಳೆಲ್ಲ ಕಾಗದದ ಹೂವುಗಳಾಗುವವು’ಎಂಬ ಚೆನ್ನಣ್ಣ ವಾಲೀಕಾರರ ಮಾತುಗಳು ಜಾನಪದವನ್ನು ಅರಗಿಸಿ ಕೊಂಡ ಶಿಷ್ಟತೆಯ ಪ್ರಸ್ತುತತೆಯನ್ನು ಕಂಡರಿಸುತ್ತದೆ.
ಆದಾವ ನಮ ಜೋಳ
ಉಳಿದಾವ ನಮ ಹಾಡ
ಎನ್ನುವಂತೆ ಜನಪದಕ್ಕೆ ಅಂತ್ಯ ಎಂಬುದು ಇಲ್ಲ. ಅದು ಬೇರೆ ಬೇರೆ ರೂಪದಿಂದ ಹೊರ ಹೊಮ್ಮುತ್ತಲೇ ಇರುತ್ತದೆ. ವೈಜ್ಞಾನಿಕ ನಾಗರಿಕತೆಯ ಹಾಗೂ ಅರ್ವಾಚೀನ ಕಲೆಗಳ ತಾಯಿ ಬೇರುಗಳನ್ನು ಪ್ರಾಚೀನ ಜನಪದದಲ್ಲಿ ಗುರುತಿಸುತ್ತೇವೆ.
ಖ್ಯಾತ ವಿದ್ವಾಂಸರಾದ ದೇ.ಜವರೇಗೌಡರು ಹೇಳುವಂತೆ:
“ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಯಾವಾಗಲೂ ಎಂದಿನಿಂದಲೂ ಜನಪದ ಸಾಹಿತ್ಯಕ್ಕೆ ಋಣಿಯಾಗಿದೆ. ಹೋಮರ್, ವಾಲ್ಮೀಕಿ, ವ್ಯಾಸಾದಿ ಕವಿಗಳೆಲ್ಲರೂ ಅಜ್ಞಾತ ಜನಪದ ಕವಿಗಳಿಗೆ ನಾನಾ ರೀತಿಯಲ್ಲಿ ಋಣಿಗಳಾಗಿದ್ದಾರೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ.” ಶಿಷ್ಟ ಸಾಹಿತ್ಯ ಮಡುಗೊಂಡು ಪಾಚಿ ಬೆಳೆದು ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯ ವಾಹಿನಿ ಅದರ ಮೇಲೆ ಹರಿದು ಪಾಚಿ ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. ವಡ್ರ್ಸವರ್ತ, ಬರನ್ಸ, ಸ್ಕಾಟ್, ಪುಸ್ಕಿನ್, ಕುಮಾರವ್ಯಾಸ, ವಚನಕಾರರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಅದರಂತೆ ಪಂಪ ತನ್ನ ಕಾವ್ಯದ ಉನ್ನತಿಗೆ ಪ್ರೌಢದ ಜತೆಗೆ ದೇಸೀಯನ್ನು ಸಮೀಕರಿಸಿದ್ದಾನೆ.ಶಿವಶರಣರು ತಮ್ಮ ಹಿಂದಿನ ಚಂಪೂ ಪರಂಪರೆಯನ್ನು ಮುರಿದು ವಚನ ಪರಂಪರೆಯನ್ನು ಪ್ರತಿಷ್ಠಾಪಿಸಲು ಜನಪದ ಸಾಹಿತ್ಯವನ್ನೇ ಆಶ್ರಯಿಸಿದರು. ಜನಪದ ಭಾಷೆ, ಛಂದಸ್ಸು ಶಿಷ್ಟ ಸಾಹಿತ್ಯದ ಹುಟ್ಟಿಗೆ ಮೂಲವಾಗಿದೆ. ಗರತಿಯ ತ್ರಿಪದಿಯೇ ಶಿಷ್ಟರ ಚೌಪದಿ, ಷಟ್ಪದಿ ಹುಟ್ಟಿಗೆ ಬುನಾದಿಯಾಗಿದೆ. ಜನಪದ ಛಂದಸ್ಸು, ಜೈನರ ಚಂಪೂ, ವೀರಶೈವರ ವಚನ ರಗಳೆ, ಬ್ರಾಹ್ಮಣರ ಷಟ್ಪದಿ, ದಾಸರ ಹಾಡು, ಸರ್ವಜ್ಞನ ತ್ರಿಪದಿಗಳಿಗೆ ಆಶ್ರಯವಾಗಿದೆ.
ಜನಪದ ಗೀತೆ ಎಲ್ಲವನ್ನು ಒಳಗೊಂಡ ಬಯಲು ಆಲಯ. ಅದು ಉದ್ದೇಶಪೂರ್ವಕವಾಗಿ ಕಲಾತ್ಮಕವಾದುದಲ್ಲ. ಅದರ ಜೀವಂತಿಕೆಯೇ ಅದರ ಕಲಾತ್ಮಕತೆ, ಅನುಭವ ಮತ್ತು ಶಾಸ್ತ್ರರೂಪದ ಇಲ್ಲಿನ ವಸ್ತು ಜನರ ಸಮೂಹ ಕೇಂದ್ರಿತ ಆಸಕ್ತಿ, ಮಾತೃ ನಂಬಿಕೆಗಳ ಮೇಲೆ ನಿಂತಿರುವಂಥದಾಗಿದೆ. ‘ವ್ಯಕ್ತಿ ವ್ಯವಸ್ಥೆಯ ಸಂಬಂಧ, ಸಾಮಾಜಿಕ ರಚನೆ, ಸಂಘರ್ಷ ರೂಪದ ಜೀವನ, ಮಾನವ ಜೀವನದ ಸ್ಥಿತಿಗತಿಗಳ ನೀತಿ, ನಿಯಮ ನಿಷ್ಠೆ, ಸಾರ್ಥಕತೆಗಳು ಆಚಾರ, ವಿಚಾರ, ಸಂಪ್ರದಾಯ ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ’ ಹೀಗೆ ಒಟ್ಟು ಬದುಕಿನ ಪ್ರತಿ ಮಗ್ಗಲುಗಳನ್ನು ಆವರಿಸಿಕೊಂಡಿರುವ ಜನಪದವು ಶಿಷ್ಟ ಪ್ರಕಾರಕ್ಕೆ ತನ್ನ ಕೊಡುಗೆ ನೀಡುತ್ತ ಉಳಿದುಕೊಂಡು ಬಂದಿರುವುದು ಅದರ ಚಲನ ಶೀಲತೆಗೆ ಸಾಕ್ಷಿಯಾಗಿದೆ.
ಚಂಪೂ, ವಚನÀ, ಷಟ್ಪದಿ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯ ಪರಂಪರೆಯ ಉದ್ದಕ್ಕೂ ಜಾನಪದದ ಇತಿಹಾಸ ಗುರುತಿಸಬಹುದು.ತ್ರಿಪದಿಗಳು, ಕಥನಕವನಗಳು, ಗೊಂದಲಿಗರ ಹಾಡುಗಳು, ಲಾವಣಿಗಳು, ಕೋಲಾಟದ , ಬಯಲಾಟದ ಪದಗಳು, ಡೊಳ್ಳಿನ ಪದಗಳು.. ಹೀಗೆ ಅನೇಕ ರೀತಿಯ ಪದ್ಯ ರೂಪಗಳು ಬಹುಕಾಲದಿಂದಲೂ ನಡೆದು ಬಂದಿರುವುದು ಇತಿಹಾಸದ ಮುಂದುವರಿಕೆಯಾಗಿದೆ.
ಇಂದಿಗೂ ಜನಪದ ಕಾವ್ಯ ಪರಂಪರೆ ಜೀವಂತವಾಗಿದೆ. ಗೊಂದಲಿಗರು, ಹೆಳವರು ತಾವು ಕಲಿತ ಹಾಡುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾವು ಹೋದೆಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಹಿಮ್ಮೇಳದಲ್ಲಿ ಉಪಯೋಗಿಸಿಕೊಳ್ಳುತ್ತಾರೆ,
ಮುಂದೆ ಅವರೂ ಸ್ವತಂತ್ರವಾಗಿ ಹಾಡಬಲ್ಲವರಾಗುತ್ತಾರೆ. ಶಕ್ತರಾದವರು ಹೊಸ ಹಾಡುಗಳನ್ನು ಕಟ್ಟಿಕೊಂಡು ಜೋಡಿಸಿಕೊಳ್ಳುತ್ತಾರೆ. ಕಂಸಾಳೆ ಸಿರಿಯ ದೇವರ ಗುಡ್ಡರು ಗುರುವಿನ ಮೂಲಕ ಹಾಡುಗಳನ್ನು ಕಷ್ಟಪಟ್ಟು ಕಲಿಯುತ್ತಾರೆ ಇದು ಪರಂಪರೆಯಿಂದ ಸಾಗಿ ಬಂದ ಇತಿಹಾಸ ಗುರುತಿಸುತ್ತದೆ.
ಜಾನಪದಕ್ಕೆ ಪ್ರಭು ಸಂಸ್ಕ್ರತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಅನ್ವಯಿಸಿಕೊಳ್ಳುವ ಬಗ್ಗೆ ಹಿ.ಶಿ. ರಾಮಚಂದ್ರೇಗೌಡರ ವಿರೋಧವಿದೆ. ಶ್ರೇಷ್ಠತೆಯ ಮಾನದಂಡಗಳು ವರ್ಗಸಮಾಜ ಮತ್ತು ಬಹುಸಮಾಜದ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಬೇರೆ ಬೇರೆಯಾಗುತ್ತವೆ. ಕಾವ್ಯ ಧ್ವನಿ-ಸಾಂಸ್ಸøತಿಕ ಧ್ವನಿ ಅದು ಅಲೌಕಿಕ ಧ್ವನಿ ಅಲ್ಲ. ಇದರ ಪರಿಣಾಮವಾಗಿ ಸಂಸ್ಕøತಿ ಹುಟ್ಟಿಕೊಳ್ಳುತ್ತದೆ. ಸಾಹಿತ್ಯ ಸ್ಠೃಷ್ಟಿಯಾಗುತ್ತದೆ. ಇಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ಸಂದರ್ಭಗಳನ್ನು ಗಮನಿಸಬೇಕು.
‘ಶಿಷ್ಟ ಜನಪದವಾದರೆ ಅದಕ್ಕೆ ಚಿರಂತತೆ ಬರುವುದು. ಜನಪದ ಶಿಷ್ಟವಾದರೆ ಅದಕ್ಕೆ ಸಾವುಂಟಾಗುವುದು’ ಎಂಬ ಚೆನ್ನಣ್ಣ ವಾಲೀಕಾರರ ಮಾತನ್ನು ಇಲ್ಲಿ ಗಮನಿಸಬೇಕು. ಶಿಷ್ಟರ ಸಾಹಿತ್ಯ ಶಿಷ್ಟರ ಮಧ್ಯೆಯೇ ಬೆಳೆದು ಅಲ್ಲಿಯೇ ಪರ್ಯಾವಸಾನಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕವಿ, ಗಮಕಿ, ಕೆಲವೊಮ್ಮೆ ಸಹೃದಯ ಇರುತ್ತಾರೆ. ಶಿಷ್ಟ ಸಾಹಿತ್ಯದ ಪ್ರದರ್ಶನಕ್ಕೆ ಸಂದರ್ಭ ಒದಗಿಸಿಕೊಂಡು ಅದಕ್ಕಾಗಿಯೇ ವೇದಿಕೆ ನಿರ್ಮಿಸಬೇಕು. ಶಿಷ್ಟ ಸಾಹಿತಿ ತಾನೇ ರಚಿಸಿದ ಕವನವನ್ನು ಬಾಯಿಪಾಠ ಮಾಡಿ ಹಾಡಬೇಕಾಗುತ್ತದೆ. ಆದರೆ ಜನಪದದಲ್ಲಿ ಹೀಗಿಲ್ಲ. ಜನಪದ ಗೀತೆಗಳನ್ನು ಹಾಡುವವರು ಅವರದೇ ಆದ ರಾಗ, ಭಾವ, ತಾಳ, ಮೇಳಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಹಾಗೆ ಹಾಡುವಾಗ ಭಾವಕ್ಕನುಗುಣವಾಗಿ ಸಂದರ್ಭ ತಕ್ಕಂತೆ ಹಿಗ್ಗಿಸುವ ಕುಗ್ಗಿಸುವ ಸಾಮಥ್ರ್ಯವೂ ಅವರದಾಗಿರುತ್ತದೆ. ಆದ್ದರಿಂದ ಸಹೃದಯವೇ ಜನಪದ, ಜಾನಪದವೇ ಸಹೃದಯ. ಜನಪದ ಅದಕ್ಕಾಗಿಯೇ ನಿರ್ಮಿಸಿ ಮತ್ತೆ ಕಿತ್ತೆಸುವ ಅಗತ್ಯವಿಲ್ಲ. ಅದು ಜನಸಾಮಾನ್ಯರ ನಿತ್ಯ ಜೀವನದೊಂದಿಗೆ ಬೆರೆತು ಅವರೊಡನೆಯೇ ಜೀವಿಸುತ್ತದೆ. ಜೊತೆಗೆ ಜನಪದ ಕವಿ ಅನುಭಾವಿಯಾಗಿದ್ದರಿಂದ ಅದನ್ನು ಹೇಳುವ ಚತುರನಾಗಿರುತ್ತಾನೆ. ಹೀಗೆ ಶಿಷ್ಟ ಮತ್ತು ಜನಪದ ಸಾಹಿತ್ಯ ತನ್ನ ನೆಲೆಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತವೆ.
‘ಜನಪದ ಕಾವ್ಯದಲ್ಲಿ ಚಿಕ್ಕಪುಟ್ಟ ಪದಗಳೇ ಹೆಚ್ಚು, ಕಾರಣ ದೀರ್ಘ ಕವಿತೆಗಳನ್ನು ಕಟ್ಟುತ್ತ ನೆನಪಿಡುವುದು ಕಠಿಣ’ ಎಂದು ಹೇಳುವ ಮಾತಿದೆ. ಆದರೆ ಇದು ತಪ್ಪು. ಜನಪದ ಕಾವ್ಯಗಳು ಕೇವಲ ತ್ರಿಪದಿ ರೂಪದ ಪುಟ್ಟ ಪುಟ್ಟ ಕೃತಿಗಳಾಗದೆ ಅನೇಕ ಮಹಾಕಾವ್ಯಗಳು ಜಾನಪದದ ವಿಸ್ತಾರವನ್ನು ಸಾರಿವೆ.’ ಈ ಕಾವ್ಯಗಳ ಹಿರಿಮೆಯನ್ನು ದೇ. ಜವರೇಗೌಡರು ಹೀಗೆ ದಾಖಲಿಸುತ್ತಾರೆ:
‘ಮಲೆಯ ಮಾದೇಶ್ವರ ಕಾವ್ಯ, ದೇವರ ಗುಡ್ಡದ ಮಹಾಕಾವ್ಯ ಕಂಸಾಳೆ ವಾದ್ಯದೊಡನೆ ಏಳೆಂಟು ರಾತ್ರಿ ಅವಿಚ್ಛಿನ್ನವಾಗಿ ಅದರ ಗಾಯನ ಸಾಗುತ್ತದೆ. ವೈವಿಧ್ಯಮಯವಾದ ಛಂದೋಬಂಧಗಳಲ್ಲಿ ರಚಿತವಾದ ಲಲಿತಕಾವ್ಯವಿದು...
ನೀಲಗಾರರಿಗೆ ಮೀಸಲಾದ ಮಂಟೇಸ್ವಾಮಿ ಕಾವ್ಯ ಒಂದೇ ಒಂದು ಛಂದದಲ್ಲಿ ತಂಬೂರಿಯೊಡನೆ ನಿರರ್ಗಳವಾಗಿ ಹರಿಯುತ್ತದೆ. ಮೊದಲನೆಯದರಲ್ಲಿ ಮೂವತ್ತೆರಡು ಸಾವಿರ ಸಾಲುಗಳೂ, ಎರಡನೆಯದರಲ್ಲಿ ಇಪ್ಪತ್ನಾಲ್ಕು ಸಾವಿರ ಸಾಲುಗಳಿದ್ದು ಕಲೇವಾಲಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೇ ಹೇಳಬೇಕು. ನೀಲಗಾರರ ಮಂಟೇಸ್ವಾಮಿ ಕಾವ್ಯವನ್ನು ‘ಧರೆಗೆ ದೊಡ್ಡವರ ವಚನ’ವೆಂದು ಕರೆಯುತ್ತಾರೆ. ಸುಮಾರು ಹದಿನೈದು ಸಾವಿರ ಸಾಲುಗಳು ವಿಸ್ತಾರವುಳ್ಳ, ಹತ್ತು ವಿಭಾಗಗಳಲ್ಲಿ ದೊರೆಯುವ ‘ಜನಪದ ಬಸವ ಪುರಾಣ’ವೊಂದು ಸೊಗಸಾದ ಮಹಾಕಾವ್ಯ. ಚೌಡಿಕೆ ಸಂಪ್ರದಾಯದ ಎಲ್ಲಮ್ಮನ ಕಾವ್ಯ ಮತ್ತು ಕಾಡುಗೊಲ್ಲರ ಸಂಪ್ರದಾಯದ ಜುಂಜಪ್ಪನ ಕಾವ್ಯಗಳು ಮಹಾ ಕಾವ್ಯದ ವಿಸ್ತಾರ ಹೊಂದಿರದಿದ್ದರೂ ಗುಣಲಕ್ಷಣಗಳಿಂದ ಸಮೃದ್ಧವಾದ ಜನಪ್ರಿಯ ಕೃತಿಗಳು’ ಹೀಗೆ ಕೆರೆಯ ಹೊನ್ನಮ್ಮ, ಕಾಳಿಂಗರಾಯ, ಚೆನ್ನಿಗ ಚೆಲುವಯ್ಯ ಮುಂತಾದ ಮಹಾಕಾವ್ಯಗಳು ಕನ್ನಡ ಜನಪದ ಕಾವ್ಯದ ಗುಣ ಗಾತ್ರಗಳೆರಡರಿಂದಲೂ ಸಮೃದ್ಧವಾಗಿ, ಬೇರೆ ಕಡೆ ಸಿಗದ ಮೌಲಿಕ ಸಾಹಿತ್ಯ ‘ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗ ಬಲ್ಲವುಗಳಾಗಿವೆ’ ಎಂದಿದ್ದಾರೆ.
ಶಿಷ್ಟ ಸಾಹಿತ್ಯÀ ಕೇವಲ ಮನಸ್ಸಿನ ಸಾಹಿತ್ಯ, ಜನಪದ ಸಾಹಿತ್ಯ ದೇಹ ಮತ್ತು ಮನಸ್ಸಿನ ಸಾಹಿತ್ಯ ಇದು ಕ್ರಿಯೆಯೊಂದಿಗೆ ಹುಟ್ಟುತ್ತದೆ. ಬೀಸುವಾಗ, ಕುಟ್ಟುವಾಗ, ಅಲೆದಾಡುವಾಗ, ದೋಣಿ ನಡೆಸುವಾಗ ಹೀಗೆ ಒಟ್ಟು ಕ್ರಿಯೆಯಲ್ಲಿಯೇ ರೂಪುಗೊಂಡು ಬಳಕೆಯಾಗುತ್ತದೆ. ಶಿಷ್ಟ ಸಾಹಿತ್ಯವು ಏಕಸೃಷ್ಟಿಗೆ, ಏಕ ಶ್ರೇಷ್ಠತೆಗೆ ಸಂಬಂಧಪಟ್ಟಿದಾದರೆ, ಜನಪದ ಸಾಹಿತ್ಯ ಪುನರ್ ಸೃಷ್ಠಿಯಾಗುವಂಥದು. ಒಂದು ವ್ಯಕ್ತಿ ಸೃಷ್ಠಿ, ಮತ್ತೊಂದು ಸಮೂಹ ಸೃಷ್ಠಿ. ಜನಪದ ಸಾಹಿತ್ಯ ಸಮಾಜನಿಷ್ಠವಾಗಿ, ವಿಷಯನಿಷ್ಠವಾಗಿ ಮಾತನಾಡುತ್ತದೆ. ಅದು ವಸ್ತುನಿಷ್ಠವಾಗಿ ಮಾತನಾಡುವುದಿಲ್ಲ. ಹೀಗೆ ಅದರ ಪ್ರತ್ಯೇಕ ಅಸ್ತಿತ್ವಗಳನ್ನು ಗುರುತಿಸಿದರೂ ಅವು ಒಂದರೊಳಗೊಂದು ಬೆಸೆದುಕೊಂಡು ಸೃಷ್ಟಿಯಾಗುತ್ತಿರುವುದು ಜನಪದದ ಪುನರ್ ಸೃಷ್ಟಿಯ ದ್ಯೋತಕವಾಗಿದೆ.
‘ಜಾನಪದಕ್ಕೆ ಸಾವಿಲ್ಲ; ಅದು ಭಿನ್ನ ರೂಪದಲ್ಲಿ ಮುಂದುವರೆಯುತ್ತದೆ’ ಎಂಬ ಮಾತಿನಂತೆ ‘ಜಾನಪದ ಪಳಿಯುಳಿಕೆ’ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳೆಯುಳಿಕೆ ಎಂದಲ್ಲ, ಪಳೆಯುಳಿಕೆಯ ಪುನಃಸೃಷ್ಟಿ ಅಂದರೆ ಪಳೆಯುಳಿಕೆಯನ್ನು ಪುನಃಸೃಷ್ಟಿಸುತ್ತಾ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ ಎಂಬ ತಿದ್ದುಪಡಿಯೊಂದಿಗೆ ತಿಳಿದುಕೊಳ್ಳಬೇಕು ಎಂಬುದು ಅದರ ನಿರಂತರ ಪುನಃಸೃಷ್ಟಿ ಕ್ರಿಯೆಯನ್ನು ಕಾಣುತ್ತೇವೆ. ಪ್ರಸ್ತುತ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಈ ಸಂದರ್ಭದಲ್ಲಿ ಈ ಚಿಂತನೆಗಳು ಪೂರಕವಾಗಲಿ. ### ಡಾ.ಪ್ರಕಾಶ ಗ.ಖಾಡೆ, ,ಮನೆ ನಂ135, ಸೆಕ್ಟರ್ ನಂ63, ನವನಗರ, ಬಾಗಲಕೋಟ -587103. emಚಿiಟ : ಜಡಿಠಿಡಿಚಿಞಚಿshಞhಚಿಜe@gmಚಿiಟ.ಛಿom,
No comments:
Post a Comment