Friday, 7 February 2014

ಬೇಂದ್ರೆ ಕಾವ್ಯ ಮತ್ತು ಜಾನಪದ -ಡಾ.ಖಾಡೆ

      • ದ.ರಾ.ಬೇಂದ್ರೆ ಅವರ ಕಾವ್ಯ ಮತ್ತು ಜಾನಪದ
        ************************
        -ಡಾ.ಪ್ರಕಾಶ ಗ.ಖಾಡೆ

        ಅಂಬಿಕಾತನಯದತ್ತ ಕಾವ್ಯನಾಮದಿಂದ ಜನಮಾಸದಲ್ಲಿ ಅಚ್ಚಳಿಯದೇ ಉಳಿದ ವರಕವಿ ದ.ರಾ. ಬೇಂದ್ರೆಯವರ ಕವಿತೆಗಳ ಮೋಹಕತೆಗೆ ಇರುವುದು ಪ್ರಾಸ ಪದಗಳ ಬಳಕೆಯಲ್ಲಿ. ಇದು ಜನಪದ ಭಾಷೆಯನ್ನು ಅವರು ಉಪಯೋಗಿಸಿಕೊಂಡುದರ ಪರಿಣಾಮವಾಗಿದೆ. ಒಂದು ಭಾಷೆಯ ಶಬ್ದಸಂಪತ್ತು, ನುಡಿಗಟ್ಟು ಹೆಚ್ಚಾಗಿದ್ದಷ್ಟು ಇಂಥ ಸಾಧ್ಯತೆಗಳೂ ಹೆಚ್ಚು. ಇಲ್ಲಿ ಭಾಷೆಯನ್ನು ಇಡಿಯಾಗಿ, ಅದರ ಎಲ್ಲ ಪ್ರಭೇದಗಳೂ ಸೇರಿದಂತೆ, ತೆಗೆದುಕೊಂಡ ಕವಿಗೆ ಇರುವಷ್ಟು ಶ್ರೀಮಂತಿಕೆ, ತನ್ನನ್ನು ಯಾವುದೋ ಒಂದು ಸೀಮೆಗೆ ಸೀಮಿತಗೊಳಿಸಿಕೊಂಡ ಕವಿಗೆ ಇಲ್ಲ. ಎಂದರೆ ಮಡಿವಂತಿಕೆಯನ್ನು ಬಿಟ್ಟುಕೊಟ್ಟ ಲೇಖಕನ ವ್ಯಾಪ್ತಿ ಸಹಜವಾಗಿ ಹೆಚ್ಚು. ಇದಕ್ಕೆ ಇನ್ನೊಂದು ರೀತಿಯಲ್ಲಿ ಆಂಡಯ್ಯನ ‘ಕಬ್ಬಿಗರ ಕಾವಂ’ ಒಂದು ಉದಾಹರಣೆ. ಶುದ್ಧ ಕನ್ನಡದಲ್ಲೇ ಬರೆಯುತ್ತೇನೆಂದು ಹೊರಟ ಆಂಡಯ್ಯನ ಭಾಷೆ ಅದರ ಕಸುವನ್ನು ಕಳೆದುಕೊಂಡಿತು. ಬೇಂದ್ರೆ ತಮ್ಮ ಕಾವ್ಯಕ್ಕೆ ಜನಪದವನ್ನು ಉಪಯೋಗಿಸಿಕೊಂಡರು ಎನ್ನುವುದಕ್ಕಿಂತಲೂ ಅವರು ಭಾಷೆಯ ಉಪಯೋಗಗಳಲ್ಲಿ ಎಲ್ಲ ಮಡಿವಂತಿಕೆಯನ್ನು ದಿಕ್ಕರಿಸಿದರು ಎನ್ನುವುದೇ ಹೆಚ್ಚು ಸೂಕ್ತವೆಂದು ತೋರುತ್ತದೆ ಎನ್ನುತ್ತಾರೆ ಕೆ.ವಿ.ತಿರುಮಲೇಶ್. ಶಿಷ್ಟಪದಗಳ ಜತೆ ಜತೆಯಲ್ಲೆ ಗ್ರಾಮ್ಯಪದಗಳೂ, ಮಾರ್ಗಶೈಲಿಯ ಜತೆಗೇ ದೇಸೀಯೂ ಅವರ ಕವಿತೆಗಳಲ್ಲಿ ಕಂಡು ಬರುತ್ತವೆ. ಒಂದು ಸ್ತರದಿಂದ ಇನ್ನೊಂದು ಸ್ತರಕ್ಕೆ ದಾಟುವುದು ಮಾತ್ರವಲ್ಲ, ಒಮ್ಮೆಲೆ ಎರಡೂ ಸ್ತರಗಳಲ್ಲಿ ಸಾಗುವುದು ಕೂಡ ಬೇಂದ್ರೆಯವರಿಗೆ ಸಾಧ್ಯವಾಯಿತು.
        ಹರಗೋಣ ಬಾ ಹೊಲ ಹೊಸದಾಗಿ
        ಬಿದ್ದದ ಹ್ಯಾಗೋ ಕಾಲ್ ಕಸವಾಗಿ
        ನಂಬಿಗೀಲೆ ದುಡಿತಾನ ಬಸವಣ್ಣಾ
        ನಂಬಿಗ್ಯಾಗೈತಿ ಅವನ ಕಸುವಣ್ಣಾ
        ಕಸುವೀಲೆ ಬೆಳೆಸೋಣ ಎತ್ತಗೋಳು
        ಎತ್ತಲ್ಲ ಅವು ನಮ್ಮ ಮುತ್ತಗೋಳು
        ಇಲ್ಲಿನ ಪ್ರಾಸದ ರೀತಿ ಸಹಜವಾಗುವುದು. ಬೇಂದ್ರೆಯವರ ಕಾವ್ಯದ ಮಾಂತ್ರಿಕತೆ ಇರುವುದೇ ಪ್ರಾಸದಲ್ಲಿ ತೋರುವ ವಿಶಿಷ್ಟ ರಚನಾಶಕ್ತಿಯಲ್ಲಿ. ಅವರ ಕಾವ್ಯ ಬಿಚ್ಚಿಕೊಳ್ಳುತ್ತ ಹೋಗುವ ಹೊಸ ಹೊಸ ಪದಗಳ, ವಾಕ್ಯಗಳ ರಚನಾ ಕೌಶಲವೇ ಒಂದು ಆಕರ್ಷಣೀಯವಾದುದು.ತಿರುಮಲೇಶರು ಹೇಳುವ ಹಾಗೆ ಬೇಂದ್ರೆಯವರಿಗೆ ಪದಗಳೆಂದರೆ ಬಾಗಿಲ ಹಾಗೆ, ಒಂದೊಂದು ಪದವನ್ನು ತೆಗೆಯುವಾಗಲೂ ಅವರು ಒಂದೊಂದು ಬಾಗಿಲನ್ನು ತಟ್ಟುವಂತೆ ತೋರುತ್ತದೆ. ಆದ್ದರಿಂದಲೆ ಬೇಂದ್ರೆಯವರ ಕವಿತೆಗಳನ್ನೋದುವುದೆಂದರೆ ಒಂದು ಬೆಳೆಕಿನ ಲೋಕವನ್ನು ಹೊಕ್ಕಂತೆ. ಬೇಂದ್ರೆ ಮಾತುಗಾರರು, ಮಾತಿಗೆ ಮಾತು ಜೋಡಿಸುವುದೆಂದರೆ ಅವರಿಗೆ ಪ್ರಿಯವಾದ ಸಂಗತಿ, ಆದರೆ ‘ಶಬ್ದ ಶ್ರುತಿಯಾದಾಗ ಮಾತು ಕೃತಿಯಾದೀತು’ ಎಂದು ಹೇಳಿದವರೂ ಅವರೇ, ಕೃತಿಯಲ್ಲಿ ತೋರಿಸಿ ಕೊಟ್ಟವರೂ ಅವರೆ. ಪ್ರಾಸಕ್ಕೆ ಪ್ರಾಸ ಸೇರಿಸುತ್ತ ಅವರು ಶಬ್ದಗಳ ಬೆನ್ನು ಹತ್ತುತ್ತಾರೆ. ಜನಪದರ ನುಡಿಗಟ್ಟು, ಮಾತಿನ ಶಕ್ತಿ ಇದನ್ನು ಬೇಂದ್ರೆಯವರಲ್ಲಿ ರೂಪಿಸಿದೆ.
        ಗಳ ಗಳ ಗಾಳಿಯು ಜಳ ಜಳ ನೀರಾಗ
        ಸುಳಿ ಸುಳಿದು ಬಂದು ನೀರಾಟ – ಆಡುತಲೆ
        ಒಲಿದೊಲಿದ ನೀರು ತೆರಿತೆರಿ
        ತ್ರಿಪದಿಯಲ್ಲಿ ದಟ್ಟವಾಗಿ ಸುಳಿದುಕೊಳ್ಳುವ ಪ್ರಾಸ ಪದಗಳು ಉಂಟು ಮಾಡುವ ಅರ್ಥವಂತಿಕೆಯೇ ಬೇಂದ್ರೆ ಅವರ ಕಾವ್ಯದ ಜೀವಾಳ. ಶಬ್ದವನ್ನು ಅದರ ವಿಶಿಷ್ಟ ನಾದದ ಮೂಲಕ ಕುಣಿಸುವ ಬೇಂದ್ರೆಯವರ ಕಾವ್ಯಶಿಲ್ಪ ಕನ್ನಡ ಜನಪದವನ್ನು ಮೂರ್ತಿಕರಿಸಿದೆ.
        ಓ ಆಷಾಢಾ ಆಷಾಢಾ
        ಆಡಿಸ್ಯಾಡ ಬ್ಯಾಡಾ
        ………………
        ಹುಲಗಲದಾಗ ಗಿಲೀಗಿಲೀ ಅಂತಾವ |
        ಗಿಲಗಂಚೀಕಾಯಿ
        ಹೊಟ್ಟಿಯೊಳಗ ಹೂರಣಿಲ್ಲಾ | ಬಿಡತಾವೋ ಬಾಯಿ

        ಹುಲಗಲ, ಗಿಲೀ ಗಿಲೀ, ಗಿಲಗಂಚಿ, ಆಷಾಢ, ಆಡಿಸಬ್ಯಾಡ ಈ ಪದಗಳೆಲ್ಲ ಬೇಂದ್ರೆಯವರ ಜಾನಪದ ಮಾಂತ್ರಿತೆಯಿಂದ ರೂಪಿತವಾದವು. ಹಳ್ಳಿಗರ ನಿತ್ಯದ ಬದುಕಿನಲ್ಲಿ ನಡೆಯುವ ಸಂದರ್ಭಗಳನ್ನು ಇವು ಕಟ್ಟಿಕೊಡುತ್ತವೆ. ಮಳೆಬಾರದೆ ರೈತರ ಕುಟುಂಬಗಳು ಅನುಭವಿಸುವ ಯಾತನೆಯನ್ನು ‘ಗಿಲಗಂಚೀಕಾಯಿಯ’ ಅನುಪಯುಕ್ತ ಸಪ್ಪಳ ಹಸಿದ ಹೊಟ್ಟೆಯನ್ನು ಅಣಕಿಸುವಂತಿದೆ.ಆದಿ ಪ್ರಾಸ, ಅಂತ್ಯ ಪ್ರಾಸವೆನ್ನದೇ ಬೇಂದ್ರೆಯವರು ಪದಪದಕ್ಕೂ ಸಾಲು ಸಾಲಿಗೂ ರೂಪಿಸಿದ ಪ್ರಾಸದ ಸೃಷ್ಟಿ ಜನಪದರ ಹಾಡುಗಳಿಂದ ಪಡೆದ ಕಾಣ್ಕೆಯಾಗಿದೆ. ‘ಜನುಮದ ಜಾತ್ರಿ’ ಕವಿತೆಯ ತ್ರಿಪದಿಗಳು ತುಂಬಿಕೊಂಡು ಬಂದ ಪ್ರಾಸ ಪದಗಳು ಗ್ರಾಮೀಣರ ಪದಸಂಪತ್ತಿನ ಆಗಾಧತೆಗೆ ಸಾಕ್ಷಿಯಾಗಿವೆ.
        ನೇತ್ರ ಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
        ಪಾತ್ರ ಕುಣಿಸ್ಯಾನ ಒಲುಮೀಗೆ ದಿನ – ದಿನ
        ಜಾತ್ರೆಯೆನಿಸಿತ್ತು ಜನುಮವು
        ಹುಬ್ಬು ಹಾರಿಸಿದಾಗ ಹಬ್ಬ ಎನಿಸಿತು ನನಗ
        ‘ಅಬ್ಬ’ ಎನಬೇಡ ನನ ಗೆಣತಿ – ಸಾವಿರಕ
        ಒಬ್ಬ ನೋಡವ್ವ ನನನಲ್ಲನಲ್ಲ
        ನಲ್ಲೆಯರ ಜೀವನ ದಿನ ದಿನವೂ ಜಾತ್ರೆಯ ಸಡಗರ, ಸಂಭ್ರಮಗಳಿಂದ ಕೂಡಿರಲಿ ಎಂಬುದು ಕವನದ ಆಶಯ. ‘ಸಾವಿರಕ ಒಬ್ಬ ನೋಡವ್ವ ನನನಲ್ಲ’ ಎಂದು ನಲ್ಲೆ ತನ್ನ ಗೆಳತಿಗೆ ಹೇಳುವಲ್ಲಿ ಅವರ ಜೀವನದ ಸಾಮೀಪ್ಯ ಅಡಗಿದೆ. ತ್ರಿಪದಿ ರೂಪದ ಈ ಕವಿತೆ ಗ್ರಾಮೀಣದ ನಿರ್ಮಲ ಪ್ರೇಮ ಬದುಕನ್ನು ಚಿತ್ರಿಸುತ್ತದೆ. ಬೇಂದ್ರೆಯವರ ‘ನಗೀ ನವಿಲು’ ಅತ್ಯಂತ ಜನಪ್ರಿಯವಾದ ಕವಿತೆ. ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ 1929ರಲ್ಲಿ ಬರೆದ ಈ ಕವಿತೆ ‘ಗರಿ’(1932)ಯಲ್ಲಿ ಪ್ರಕಟವಾಗಿದೆ. ಕಲಘಟಗಿ ಅತ್ಯಂತ ಬೆಳೆಯುಳ್ಳ ಪ್ರದೇಶ. ಅಲ್ಲಿ ಒಮ್ಮೆ ಬರಗಾಲ ಬಿದ್ದಾಗ, ಜನರ ತೊಳಲಾಟ ಕಂಡು, ಅನ್ನ ಸಿಗದೆ ದುಃಖ ಅನುಭವಿಸುತ್ತ ಇರುವ ಸಂದರ್ಭದಲ್ಲಿ ಹಿಂದಿನ ವೈಭವದ ನೆನಪನ್ನು ಕವಿ ಹೆಣ್ಣೊಬ್ಬಳ ಮೊಗದಲ್ಲಿ ಕಾಣುವ ಕುಶಲತೆ ಜಾನಪದೀಯವಾದುದು.
        ನಾರೀ ನಿನ್ನ ಮಾರಿ ಮ್ಯಾಗ
        ನಗೀ ನವಿಲು ಆಡತ್ತಿತ್ತು
        ಆಡತ್ತಿತ್ತು ಓಡತ್ತಿತ್ತು
        ಮುಗಿಲ ಕಡೆಗೆ ನೋಡುತ್ತಿತ್ತು.
        ಕಣ್ಣಿನ್ಯಾಗ ಬಣ್ಣದ ನೋಟ
        ತಕ ತಕ ಕುಣಿದಾಡತಿತ್ತ
        ಕುಣೀತಿತ್ತ ಮಣೀತಿತ್ತ
        ಒನಪಿಲೆ ಒನದಾಡತಿತ್ತ
        ಕಣ್ಣೀರಿನ ಮಳೆಯ ಕೂಡ
        ತನ್ನ ದುಃಖ ತೋಡತಿತ್ತ
        ದೊರಕದಕ್ಕ ಬಾಡತಿತ್ತ
        ನೋವು, ವಿರಹದ ಸಂದರ್ಭವನ್ನು ಅಬಿವ್ಯಕ್ತಪಡಿಸುವಲ್ಲಿ ಕವಿ ಬಳಸಿಕೊಳ್ಳುವ ಭಾವನೆಗಳು ಹೃದಯ ಪೂರ್ವಕವಾದವುಗಳು. ಅಂತೆಯೇ ಜನಪದ ಮಾತು, ನಡೆನುಡಿ ಹೃದಯ ಪೂರ್ಣವಾದುದು. ಬೇಂದ್ರೆ ಅವರು ಹಳ್ಳಿಗರು ಆಡುವ ಮಾತು, ಆಡಿದ ಮಾತು ತುಂಬಾ ಸಹಜವಾಗಿ, ಸರಳವಾಗಿ ತಮ್ಮದಾಗಿಸಿ ಕೊಳ್ಳುತ್ತಾರೆ. ಗ್ರಾಮ್ಯ ಭಾಷೆಯನ್ನು ಕಾವ್ಯಲಿಪಿಗೆ ತರುವಾಗ ಬೇಂದ್ರೆಯವರು ತೋರುವ ಸಹಜತೆ, ಸರಳತೆ ಕನ್ನಡಕಾವ್ಯ ಸಂದರ್ಭದಲ್ಲಿಯೇ ವಿಸ್ಮಯವಾದುದು. ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಇಂಥದೊಂದು ಪ್ರಯೋಗ ಆರಂಬಿಸಿ ಕಾವ್ಯದ ನಿಜವಾದ ಶಕ್ತಿ ಸೌಂದರ್ಯವನ್ನು ಜಾನಪದದ ಮೂಲಕ ಪ್ರಕಟಪಡಿಸಿದ ಹಿರಿಮೆ ಬೇಂದ್ರೆಯವರದು. ಬೇಂದ್ರೆಯವರ ಮನೆಮಾತು ಕನ್ನಡವಾಗಿರಲಿಲ್ಲ. ಮರಾಠಿಮಯವಾಗಿದ್ದ ಪರಿಸರ, ಮರಾಠಿ ಮನೆಮಾತಾಗಿದ್ದ ನೆಲೆಯಲ್ಲಿ ಬೇಂದ್ರೆಯವರು ಜನರಾಡುವ ಮಾತನ್ನು ಕಾವ್ಯಕ್ಕೆ ತಂದದ್ದು ಒಂದು ಅಚ್ಚರಿ. ‘ಕನ್ನಡ ಮನೆ ಮಾತಾಗಿರದ ಕನ್ನಡ ಲೇಖಕರು ಹೆಚ್ಚಾಗಿ ಶಿಷ್ಟಭಾಷೆಯನ್ನೆ ಮಾಧ್ಯಮವನ್ನಾಗಿ ಉಪಯೋಗಿಸಿರುವುದು ಕಂಡುಬರುತ್ತದೆ. ಪಂಜೆ, ಕಾಮತ್, ಗೋವಿಂದ ಪೈ, ಮುಂತಾದವರ ಮಟ್ಟಿಗೆ ಬಹುಶಃ ಇದು ಆಯ್ಕೆಯ ಪ್ರಶ್ನೆಯಾಗಿರಲಾರದು; ಏಕೆಂದರೆ ದಕ್ಷಿಣ ಕನ್ನಡದಲ್ಲಿ ಸಾರ್ವತ್ರಿಕವಾಗಿ ಆಡುವ ಭಾಷೆಗೂ ಶಿಷ್ಟ ಭಾಷೆಗೂ ಹೆಚ್ಚಿನ ವ್ಯತ್ಯಾಸವಿರುವಂತೆ ಕಂಡು ಬರುವುದಿಲ್ಲ. ಆದರೆ ಬೇಂದ್ರೆಯವರ ಸಂದರ್ಭದಲ್ಲಿ ಜನಪದ ಭಾಷೆ ಅವರದೇ ಆಯ್ಕೆಯಾಗಿದೆ ಎಂದು ಕೆ.ವಿ.ತಿರುಮಲೇಶ್ ಹೇಳುವಲ್ಲಿ ಧಾರವಾಡ ಕೇಂದ್ರದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕನ್ನಡ ನುಡಿಯ ಸಾಧನೆ, ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತದೆ. ಏಕೆಂದರೆ ಬೇಂದ್ರೆ ಅವರು ಬರೆವ ಕಾಲಕ್ಕೆ ಜನಪದ ಗೀತೆಗಳು, ಶರೀಫ್ರ ರಚನೆಗಳು ಒಂದು ಬಗೆಯಲ್ಲಿ ದಟ್ಟ ಪ್ರಭಾವವನ್ನು ಉಂಟು ಮಾಡಿದ್ದವು. ಅನ್ಯಭಾಷೆಯ ಶರೀಫ್ರು ಕನ್ನಡ ಗ್ರಾಮ್ಯದಲ್ಲಿಯೇ ಕಾವ್ಯ ಕಟ್ಟಿದ್ದೂ ಬೇಂದ್ರೆಯವರ ಪ್ರೇರಣೆಗೆ ಕಾರಣವಿದ್ದಿತು. ಆಡುಮಾತನ್ನು ಕಾವ್ಯಕ್ಕೆ ತಂದ ಬೇಂದ್ರೆಯವರ ಸಾಧನೆ ಮತ್ತು ಸಿದ್ಧಿ ಗಮನಾರ್ಹವಾದುದು. ಭಾಷೆಯ ಸತ್ವವಿರುವುದೇ ಆಡುಮಾತಿನಲ್ಲಿ, ಆಡುಮಾತು ಒಂದು ಪಾತಳಿಗೆ ಸಿಗುವುದಿಲ್ಲ; ಅದರ ಪ್ರವಾಹವನ್ನೂ ಯಾರೊಬ್ಬರೂ ತಡೆಯಲಾರರು. ಯಾರು ಹಿಡಿದಿಡಲಾರದ ಜೀವವಿರುವುದೂ ಆಡುಮಾತಿನಲ್ಲೇ ಮಾತಾಡಬಲ್ಲವರ ಸ್ವಾತಂತ್ರ್ಯವನ್ನು ಯಾರೂ ಕದಿಯಲಾರರು’ ಎನ್ನುತ್ತಾನೆ ಗುಡಮನ್. ಭಾಷೆ ಗ್ರಾಂಥಿಕವಾದಾಗ ಅದು ಅಂತಃಸತ್ವವನ್ನು ಕಳೆದುಕೊಳ್ಳುತ್ತದೆ.
        ಇಂಥ ತತ್ವಹೀನ ಭಾಷೆಯಲ್ಲಿ ಕಾವ್ಯವನ್ನು ರಚಿಸಲಾಗುವುದಿಲ್ಲ. ಆದ್ದರಿಂದಲೆ ಬೇಂದ್ರೆ ಆಡುನುಡಿಯನ್ನು ಹಾಗೂ ಜನಪದ ಶೈಲಿಯನ್ನು ಕಾವ್ಯಕ್ಕೆ ಬಗ್ಗಿಸಲು ಮಾಡಿದ ನಿಧರ್ಾರ ಒಟ್ಟು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಮಹತ್ವವುಳ್ಳದ್ದು. ಬೇಂದ್ರೆಯವರ ಮಟ್ಟಿಗೆ ಹೇಳುವುದಾದರೆ ಇದರಿಂದ ಅವರು ಶಿಷ್ಟ ಭಾಷೆಯ ಮಡಿವಂತಿಕೆಯ ಬಂಧನದಿಂದ ಹೊರಬರುವುದು ಸಾಧ್ಯವಾಯಿತು. ಇನ್ನು ಹೊಸಗನ್ನಡ ಕಾವ್ಯದ ಮಟ್ಟಿಗೆ ನೋಡಿದರೆ, ಕಾವ್ಯದ ಭಾಷೆ ಮತ್ತು ಜನಪದದ ಮಧ್ಯೆ ತಲೆಹಾಕಿದ್ದ ದೊಡ್ಡ ಕಂದರವನ್ನು ಬಹುಮಟ್ಟಿಗೆ ಕಿರಿದಾಗಿಸಲು ಬೇಂದ್ರೆಯವರ ಪ್ರಯೋಗಗಳು ಕಾರಣವಾದವು. ಕೆ.ವಿ.ತಿರುಮಲೇಶರು ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತ ಜೆಕ್ ಲೇಖಕ ಶಾಲ್ದನ್ನು ನೆರೂದ ನಲ್ಲಿ ಕಂಡ ‘ತೊಳೆಯದ, ಬಾಚದ ಶಬ್ದಗಳನ್ನು ಬೀದಿಯಿಂದ ಹೆಕ್ಕಿ ಅದನ್ನು ಅನಂತತೆಯ ಸಂದೇಶ ವಾಹಕಗಳಾಗಿ ಮಾಡುವ ಎದೆಗಾರಿಕೆ ಬೇಂದ್ರೆಯವರಲ್ಲೂ ಕಾಣುತ್ತೇವೆ. ಆಡುಮಾತಿನ ಆಯ್ಕೆ ಮಾತ್ರ ಕಾವ್ಯವಾಗುವುದಿಲ್ಲ. ಅದರ ಬಳಕೆಯಲ್ಲಿ ತೋರುವ ಸೃಜನಶೀಲತೆ ಕವಿಯ ಪ್ರತಿಭೆಯನ್ನು ಅವಲಂಬಿಸಿದೆ. ದೈನಂದಿನ ಬಳಕೆಗೆ ಸಿಕ್ಕಿ ಸವೆದು ಹೋದ ಆಡುಮಾತು ಕಾವ್ಯರೂಪು ಪಡೆಯುವಲ್ಲಿ ಕವಿಯ ಸಿದ್ದಿ ಅಡಗಿದೆ. ಬೇಂದ್ರೆಯವರಾದರೂ ಜನಪದವನ್ನು ಹಾಗೆಯೆ ತೆಗೆದುಕೊಳ್ಳಲಿಲ್ಲ. ಅದೇ ರೀತಿ ತೊಳೆಯದ, ಬಾಚದ ಶಬ್ದಗಳಿಂದಷ್ಟೇ ಅವರು ತೃಪ್ತರಾಗಲೂ ಇಲ್ಲ. ತರ್ಕದ ಹಾಗೂ ಅರ್ಥದ ಆಚೆಗಿದನ್ನು ನೋಡುವುದಕ್ಕೆ ಅವರು ಮರೆಯಲಿಲ್ಲ. ಆದ್ದರಿಂದಲೇ, ಸಮರ್ಥವಾದ ಶೈಲಿ ಕೇವಲ ಭಾಷೆಯಷ್ಟೇ ಸಂಬಂದಿಸಿರದೆ, ಒಂದು ಸಮಗ್ರ ದೃಷ್ಟಿಕೋನಕ್ಕೆ ಸಂಬಂದಿಸಿರುತ್ತದೆ. ಬೇಂದ್ರೆಯವರಿಗೆ ದ್ಯಾವಾ-ಪೃಥವಿ ಎರಡೂ ಒಮ್ಮೆಲೆ ಬೇಕಾಯಿತು. ಜನಪದದ ಮೂಲಕ ಅವರು ಮಣ್ಣಿನ ಸಂಪರ್ಕ ಇಟ್ಟುಕೊಂಡಿದ್ದೇ ಆಕಾಶದ ಕಡೆಗೂ ಕೈ ಚಾಚಿದರು. ಜನಪದವನ್ನು ಮುಖ್ಯ ಮಾಧ್ಯಮವನ್ನಾಗಿ ಬೇಂದ್ರೆಯವರು ಆರಿಸಿಕೊಂಡರೂ ಅದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು. ಒಟ್ಟಾರೆ ಬೇಂದ್ರೆಯವರು ಬಳಸಿದ ಲಯ, ಭಾಷೆ, ಭಾವ ಬಹಳಷ್ಟು ಭಾರಿ ವಸ್ತು ಸಹ ಜಾನಪದದಿಂದ ಪಡೆದುದಾಗಿದೆ. ಗೊಂದಲಿಗರ ಹಾಡು, ದುರುಗಿ ಮುರಗವ್ವ, ಹರಕೆ ಹಾಡು, ಲಾವಣಿಕಾರರ ಪ್ರಾಸಿನ ಲಾಗು, ಗರತಿಯರ ಉಪಮೆ ಅವರ ಕವಿತೆಗಳಲ್ಲಿ ಧಾರಾಳವಾಗಿವೆ. ಅವರ ಕವಿತೆಗಳಲ್ಲಿ ವ್ಯಕ್ತವಾದ ಗಾಢವಾದ ಜಾನಪದ ಪ್ರಜ್ಞೆ ಅವರನ್ನು ಕನ್ನಡ ನವೋದಯದ ಕಾವ್ಯದ ‘ಜಾನಪದ ಗಾರುಡಿಗ’ ಎಂದೇ ಗುರುತಿಸಲಾಯಿತು.
        - ಡಾ.ಪ್ರಕಾಶ ಗ.ಖಾಡೆ
        (ಅವಧಿಯಲ್ಲಿ 31.1.2014 ಪ್ರಕಟ)
        Like ·  · 
        • Santhosh Kumar Vasista ಬೇಂದ್ರೆಯಜ್ಜನ ಬಗ್ಗೆ,ಅವರ ಕಾವ್ಯ ಚಿಂತನೆಯ ಬಗ್ಗೆ ಎಷ್ಟು ಹೇಳಿದರೂ ಸಾಕಾಗದು ಬಿಡಿ..! ಧನ್ಯವಾದ ನಿಮಗೆ ಇನ್ನಷ್ಟು ಹೇಳಿದ್ದಕ್ಕೆ ...
        • Shwetha Hosabale odiddini...chennagi barediddiri..thanks
        • Govind Kulkarni yugada kavi jagada kavi rushi kavi dattatreya ramachandra bendre
        • Manjunatha Maravanthe ಆಡುಮಾತಿನ ಕವಿತೆಯಿಂದ ನಾಡು ಜನರ ಹೃದಯತಟ್ಟಿದ ಬೇಂದ್ರೆಯವರ ಬಗ್ಗೆ ಸೊಗಸಾದ ಲೇಖನ.
        • Prashant Joshi ಜಾನಪದ ಭಾಷೆಯನ್ನು ಅವರಿಗಿಂತ ಚೆನ್ನಾಗಿ ಸಾಹಿತ್ಯಕ್ಕೆ ಬಳಸಿಕೊಂಡ ಉದಾಹರಣೆ ಕನ್ನಡದಲ್ಲಿ ಇನ್ನೊಂದಿಲ್ಲ. .. ಬೇಂದ್ರೆಯಜ್ಜರ ಕಾವ್ಯ ಪ್ರಾಕಾರವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು ಇಂಥ ಒಳ್ಳೆ ಬರಹಕ್ಕೆ\
        • Deepak Shinde satyagal paridhiyalli iddastu din manusya bramnirasan golluvadill allava sir
        • Irappa Kambali ಬೇಂದ್ರೆ ಯಾವತ್ತಿಗೂ ನಮಗೆ ಕಾಡುವ ಕವಿಯೇ ಸೈ! ಅಂಬಿಕಾತನಯದತ್ತನ ಕಾವ್ಯಕ್ಕೆ ಸುಂದರವಾದ ಅಡಿಟಿಪ್ಪಣಿ.
        • Prakash Khade
      • ಇಂದು 'ಕವಿ ದಿನ' .ಅವಧಿಯಲ್ಲಿ ಬೇಂದ್ರೆ ಅಜ್ಜನ ಪದ್ಯಗಳ ಕುರಿತು ನನ್ನ ಲೇಖನ.
        Like ·  ·