Saturday 15 March 2014

Holi : ಹೋಳಿ-ಡಾ.ಪ್ರಕಾಶ ಗ.ಖಾಡೆ

ನವ ವಸಂತ ತರುವ ಫಲವಂತಿಕೆಯ ಹೋಳಿ

ಡಾ ಪ್ರಕಾಶ ಗ ಖಾಡೆ

ವಸಂತ ಮಾಸದ ಸಂಭ್ರಮದ ಹಬ್ಬ ಹೋಳಿ.ಇದು ಫಲವಂತಿಕೆಯನ್ನು ವೃದ್ಧಿಸುವ ಹಾಗೂ ವರ್ಷವನ್ನು ಪುನಃಶ್ಚೇತನಗೊಳಿಸುವ ಹಬ್ಬ..ಹೋಳಿ ಹುಣ್ಣಿಮೆ ದಿವಸ ಕಾಮನ ಸುಂದರ ಪ್ರತಿಮೆ ಮಾಡಿಸಿ ,ಶೃಂಗರಿಸಿ ಊರಿನಲ್ಲಿರುವ ಕಾಮನ ಕಟ್ಟೆಯ ಮೇಲೆ ಹಂದರ ಕಟ್ಟಿ ಇಟ್ಟಿರುತ್ತಾರೆ.ಎಡಗಡೆ ಕಣ್ಣು ಮೂಗಿನಿಂದ ಚೆಲುವೆಯಾದ ಆಕರ್ಷಕ ಮೈಕಟ್ಟಿನ ರತಿದೇವಿಯ ಮೋಹಕ ಪ್ರತಿಮೆಯನ್ನು ಕೆಲವು ಕಡೆ ಇಡುವುದುಂಟು.ಕೆಲ ಊರುಗಳಲ್ಲಿ ಸರಕಾರಿ ಕಾಮಣ್ಣ ,ದೈವದ ಕಾಮಣ್ಣ ,ಓಣಿಯ ಕಾಮಣ್ಣ ಎಂದು ಮೂರು ಕಾಮಣ್ಣರನ್ನು ಪೂಜಿಸುತ್ತಾರೆ.ಸರಕಾರಿ ಕಾಮಣ್ಣನಿಗೆ ಊರ ದೈವದವರಿಂದ ,ಓಣಿಯ ಕಾಮಣ್ಣನಿಗೆ ಓಣಿಯ ಭಕ್ತರಿಂದ ಮಾನ ಮನ್ನಣೆ ದೊರೆಯುತ್ತದೆ.
ಕಾಮನ ಮುಂದೆ ಮಂಗಳವಾದ್ಯ ಬಾರಿಸುವ ,ಊದುವ ಸನಾದಿ ಅವರಿಗೆ ‘ಕಾಮನ ಮಾನೆ’ಗಳೆಂಬ ಭೂಮಿ ಉಂಬಳಿಯಾಗಿ ನೀಡಿದ ದಾಖಲೆಗಳಿವೆ. ಹೋಳಿ ಹಬ್ಬಕ್ಕೆ ದೊಡ್ಡ ಪರಂಪರೆ ಇದೆ.ಕಾಮನ ವಿಚಾರವಾಗಿ ಋಗ್ವೇದ ಅಥವಾ ವೇದಗಳಲ್ಲಿಯೂ ಉಲ್ಲೇಖವಿದೆ.ಸ್ಕಂದ ಪುರಾಣ ಮತ್ತು ಶಿವ ಪುರಾಣದಲ್ಲಿ ಕಾಮನ ಉಲ್ಲೇಖ ಬರುತ್ತದೆ.ಬುದ್ದನು ಕಾಮನನ್ನು ಗೆದ್ದ ವರ್ಣನೆಗಳು ಬೌದ್ದ ಸಾಹಿತ್ಯದಲ್ಲಿವೆ.ಪ್ರಸಿದ್ಧ ಸಂಸ್ಕೃತ ನಾಟಕಕಾರ ಕಾಳಿದಾಸ ತನ್ನ ಕಾವ್ಯದಲ್ಲಿ ಹೋಳಿಯನ್ನು ಉಲ್ಲೇಖಿಸಿದ್ದಾನೆ.ಪ್ರಾಚೀನ ಹಿಂದೂ ಧರ್ಮದ ಇತಿಹಾಸದಲ್ಲಿ ಹೋಳಿಯನ್ನು ವಿವರಿಸುವ ಅನೇಕ ಐತಿಹ್ಯಗಳಿವೆ.
ಹೋಳಿ ಕಥೆಗಳು :
1.ತುಂಬಿದ ಸಭೆಯಲ್ಲಿ ಶಿವ ಪಾರ್ವತಿಯನ್ನು ಲೋಕದಲ್ಲಿ ಸುಂದರನಾರು ಎಂದು ಕೇಳಿದಾಗ ಪಾರ್ವತಿಯು ‘ಕಾಮ’ ಎನ್ನುತ್ತಾಳೆ.ಶಿವನಿಗೆ ಸಿಟ್ಟು ಬಂದು ಕಾಮನನ್ನು ಉರಿಗಣ್ಣಿನಿಂದ ಸುಟ್ಟು ಬಿಡುತ್ತಾನೆ.ಆಗ ರತಿ ದುಃಖ ತಪ್ತಳಾಗುತ್ತಾಳೆ.ಅದನ್ನು ಕಂಡು ಶಿವ ಎಲ್ಲರ ಮನಸ್ಸಿನಲ್ಲಿ ನೆನೆದಾಗ ಕಾಮ ಹುಟ್ಟುತ್ತಾನೆ ಎಂದು ಸಮಾಧಾನ ಹೇಳುತ್ತಾನೆ.
2.ಹಬ್ಬ ಹುಣ್ಣಿವೆಗಳಲ್ಲಿ ಹೆಣ್ಣು ಆನಂದ ಪಡುವುದನ್ನು ಕಂಡು ಗಂಡು ದುಡಿಯುವ ತನಗೆ ಹಬ್ಬವಿಲ್ಲವೆಂದು ದೇವರ ಮೊರೆಹೊಕ್ಕಾಗ ,ಆಗ ದೇವರು ಇವರ ಮನವಿಯನ್ನು ಆಲಿಸಿ ಗಂಡು ಒಮ್ಮೆಯಾದರೂ ವರುಷದಲ್ಲಿ ನಕ್ಕಾಡಿ ಪ್ರಪಂಚ ಭಾರವನ್ನು ಮರೆಯಲೆಂದು ಆಡಲು ಹೋಳಿ ಹಬ್ಬವನ್ನು ದಯಪಾಲಿಸಿದನು.
3.ತನ್ನ ತಪಸ್ಸನ್ನು ಭಂಗಗೊಳಿಸಿದ ಉದ್ದೇಶದಿಂದ ಕಾಮನನ್ನು ಶಿವ ಮೂರನೆಯ ಕಣ್ಣಿನ ಜ್ವಾಲೆಯಿಂದ ಸುಟ್ಟದ್ದರದ್ಯೋತಕವಾಗಿ ಹೋಳಿಯನ್ನು ಆಚರಿಸುತ್ತಾರೆ.

ಹೋಳಿ ನಂಬಿಕೆಗಳು :
1.ಕಾಮನ ಕರಿ (ಬೇವಿನ ಹೂ ಚಿಗುರು, ಬೂದಿ)ಯಲ್ಲಿ ರೈತನಿಗೆ ಬಲವಾದ ನಂಬಿಕೆ .ಸುಡುವ ಕಾಲಕ್ಕೆ ಕಾಮನ ಬೂದಿ ಯಾವ ದಿಕ್ಕಿಗೆ ಹಾರುವುದೋ ಆ ಭಾಗ ಮಳೆ ಬೆಳೆಯಿಂದ ಸಮೃದ್ಧಿಯಾಗುವುದೆಂಬ ನಂಬಿಕೆ ಇದೆ.
2.ಮರುದಿನವೇ ಮಳೆಯಾಗಿ ಕಾಮನ ಬೂದಿ ನೆಲದೊಂದಿಗೆ ಬೆರೆತರೆ ಆ ನಾಡಿಗೆ ರೋಗ ರುಜಿನ ಬರಗಾಲದ ಭಯವಿರುವುದಿಲ್ಲ.
3.ಕಾಮನ ಬೂದಿಯನ್ನ ತಂದು ,ಬಿತ್ತು ಬೀಜಗಳಲ್ಲಿ ಬೆರೆಸಿದರೆ ಬೀಜ ಹುಸಿಯಾಗದೇ ನಾಟಿ ಬರುತ್ತದೆ.
4.ಕಾಮನ ಕರಿಯ ಸಂಕೇತವಾದ ಬೇವಿನ ಹೂ ಚಿಗುರನ್ನು ಕಾಳು ತುಂಬುವ ಚೀಲ,ಕಣ ರಾಶಿಗಳಲ್ಲಿ ಇಡುತ್ತಾರೆ.
5.ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಹೋಳಿ ಬೆಂಕಿ ಯಾವ ದಿಕ್ಕಿನಲ್ಲಿ ವ್ಯಾಪಿಸುತ್ತದೆ ಎಂಬುದನ್ನು ಆಧರಿಸಿ ಕಾಲಜ್ಞಾನವನ್ನು ನುಡಿಯಲಾಗುತ್ತದೆ.
6.ದಹನ ಕ್ರಿಯೆ ಮುಗಿದ ನಂತರ ಬೆಳಗು ಮುಂಜಾವಿನಲ್ಲಿ ಕಾಮನ ಬೆಂಕಿಯಿಂದಲೇ ಒಲೆ ಹೊತ್ತಿಸುವರು,ಕಡಲೆಯನ್ನು ಹುರಿದು ತಿನ್ನುವರು.ಇದರಿಂದ ಆಯುಷ್ಯ ಹೆಚ್ಚುವದೆಂಬ ನಂಬಿಕೆ ಇದೆ.


ಬಾಗಲಕೋಟೆ ಹೋಳಿ :
ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ.ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದರೆ,ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಬಾಗಲಕೋಟ ಎರಡನೆಯ ಸ್ಥಾನದಲ್ಲಿದೆ.ಬಾಗಲಕೋಟೆಯಲ್ಲಿಮೊದಲಿನಿಂದಲೂ ಮುಖ್ಯವಾಗಿ 5 ಪೇಟೆಗಳಿವೆ.ಕಿಲ್ಲಾ,ಹಳಪೇಟ,ಹೊಸಪೇಟ,ಜೈನಪೇಟ ಮತ್ತು ವೆಂಕಟಪೇಟ.ಮುಳುಗಡೆಯಿಂದ ಇವೆಲ್ಲ ಮೂಲ ಸ್ವರೂಪದಲ್ಲಿ ಉಳಿದಿಲ್ಲ.ಈ ಐದು ಓಣಿಗಳಿಗೆ ತುರಾಯಿ ಹಲಗೆ ಹಾಗೂ ಹಿಂದಿನ ಕಾಲದಿಂದ ಬಂದ ನಿಶಾನೆಗಳು ಇರುವವು.ಪ್ರತಿಯೊಂದು ಓಣಿಗಳಲ್ಲಿ ಹೋಳಿಹಬ್ಬದ ಬಾಬಿನ ಮನೆತನಗಳಿವೆ.ಮುಳುಗಡೆಯಿಂದ ಮಾಘ ಅಮವಾಸ್ಯೆಯ ಮರುದಿನದಿಂದಲೇ ಅಖಂಡ ಬಾಗಲಕೋಟೆಯ ಓಣಿ ಓಣಿಗಳಲ್ಲಿ ಹಲಗೆಯ ಸಪ್ಪಳ ಕೇಳಿ ಬರುತ್ತದೆ.ಬಾಗಲಕೋಟ ಹೋಳಿ ಹಬ್ಬದ ಅತಿ ಮುಖ್ಯ ಆಕರ್ಷಣೆ ಎಂದರೆ ‘ಸಂಪ್ರದಾಯ ತುರಾಯಿ ಹಲಗೆ ವಾದನ’ವಾಗಿದೆ.ತುರಾಯಿ ಹಲಗೆ ಎಂದರೆ ಸುಮಾರು ಹತ್ತು ಚಿಟ್ಟಲಿಗೆಗಳ ಒಂದು ಬೃಹತ್ ಆಕಾರದ ಹಲಗೆ.ಈ ಹಲಗೆಯ ಮೇಲೆ ಬಿರುದಾಗಿ ಚಿನ್ನದ ಇಲ್ಲವೇ ಬೆಳ್ಳಿಯ ಕಳಸ ಇರುತ್ತದೆ.ಇದಕ್ಕೆ ತುರಾಯಿ ಎನ್ನುತ್ತಾರೆ.ತುರಾಯಿ ಮೇಲುಗಡೆ ರಂಗು ರಂಗಿನ ಗುಚ್ಛವಿದ್ದು ರಾತ್ರಿ ಸಮಯದಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಿರುತ್ತಾರೆ.ಇದರ ಜೊತೆಗೆ ಅದರದೇ ಆದ ,ಹಿಂದಿನ ಕಾಲದಿಂದ ಬಂದ ರಂಗು ರಂಗಿನ ರೇಶ್ಮೆ ಬಟ್ಟೆಗಳ ಮೂವತ್ತು ಅಡಿ ಎತ್ತರದ ನಿಶಾನೆಗಳು ಇರುವವು.ಈ ನಿಶಾನೆಗಳು ಕೆಲವು ಹಿರಿಯರು ಪೇಶ್ವೆ ಮಹಾರಾಜರಿಂದಲೂ,ಇನ್ನೂ ಕೆಲ ಹಿರಿಯರು ವಿಜಾಪುರದ ಆದಿಲ್ ಶಾಹಿ ಸುಲ್ತಾನರಿಂದ ಬಂದವುಗಳಾಗಿವೆ.


ಹೋಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಹಲಗೆ ವಾದನ ಕೇಳುವುದೇ ಒಂದು ಸಂಭ್ರಮ.ಹಿರಿಕಿರಿಯರೆನ್ನದೇ ಎಲ್ಲ ವಯೋಮಾನದವರು ಇಲ್ಲಿ ಹಲಗೆ ನುಡಿಸುತ್ತಾರೆ.ಹಲಗೆವಾದನ ಪ್ರಾರಂಭವಾಗುವದು ಶಹನಾಯಿ ನುಡಿಸುವದರೊಂದಿಗೆ ಮುಖ್ಯ ಕಲಾವಿದನೊಬ್ಬ ದೊಡ್ಡ ಹಲಗೆಯನ್ನು ಹಿಡಿದು ನೃತ್ಯಕ್ಕೆ ಚಾಲನೆ ನೀಡುತ್ತಾನೆ.ಡಪ್ಪಿಗೆ ಸರಿಯಾಗಿ ಚಿಕ್ಕ ಹಲಗೆಯವರು ಪೆಟ್ಟು ಹಾಕುತ್ತಾರೆ.ಜತೆಗೆ ಡಗ್ಗಾ,ಝಮರಿ ಚಳ್ಳಮ,ಕಣಿಯ ವಾದಕರು ಕ್ರಮಬದ್ದ ಹೆಜ್ಜೆ ಹಾಕುತ್ತ ‘ಇನ್ನೂ ಯಾಕ ಬರಲಿಲ್ಲಾವ.. ಹುಬ್ಬಳ್ಳಿಯಾವ..’,'ಚೆನ್ನಪ್ಪ ಚೆನಗೌಡಾ’ ಎಂಬ ಸನಾದಿ ಸೂರಿನೊಡನೆ ತನ್ಮಯವಾಗಿ ಹರ್ಷದಿಂದ ಕುಣಿದು ಕುಪ್ಪಳಿಸುವರು.
ಕಾಮ ದಹನ :

ಬಾಗಲಕೋಟೆಯ ಹೋಳಿ ಆಚರಣೆಯ ಕಾಮದಹನ ಪ್ರಕ್ರಿಯೆಯು ಸಕಲ ಸಮುದಾಯದವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಗುತ್ತದೆ.ಹೋಳಿಯ ದಿನ ಕಾಮನನ್ನು ಸುಡುವುದಕ್ಕಾಗಿ ಹುಡುಗರು ಓಣಿಯ ಮನೆಮನೆಯಲ್ಲೂ ಕಣ್ಣು ತಪ್ಪಿಸಿ ಕುಳ್ಳು,ಕಟ್ಟಿಗೆ,ನಿಚ್ಚಣಿಕೆ ಕದ್ದು ತಂದು ಒಂದೆಡೆ ಕೂಡಿಹಾಕುವ ಸಂಪ್ರದಾಯವಿದೆ.ಬಹುತೇಕ ಈ ಸಂಪ್ರದಾಯ ಮರೆಯಾಗಿದೆ.ಕೇಳಿ ಮತ್ತು ಕೊಂಡು ತಂದ ಕಟ್ಟಿಗೆ,ಕುಳ್ಳು ಮತ್ತು ಬಿದಿರುಗಳನ್ನು ರಾಶಿಗಟ್ಟಲೇ ಹೇರಿ ಅದರ ನಡುವೆ ಕಾಮನ ಚಿತ್ರ ಬರೆದು ಚಿತ್ರವನ್ನು ಕೋಲಿಗೆ ಅಂಟಿಸಿ ಕಾಮನಿಗೆ ಪೂಜೆ ಸಲ್ಲಿಸಿ ದಹಿಸಲು ಸಿದ್ದರಾಗುತ್ತಾರೆ.ನಂತರ ಹಲಗೆ ಮೇಳದೊಂದಿಗೆ ನಿಶಾನೆ ಹಾಗೂ ಚಲುವಾದಿ ಬಟ್ಟಲುದೊಂದಿಗೆ ಓಣಿಯ ಶೆಟ್ಟರನ್ನು ಕರೆದುಕೊಂಡು ದಲಿತರ ಓಣಿಗೆ ಹೋಗಿಅಲ್ಲಿ ಖಾತೆದಾರರ ಮನೆಯಲ್ಲಿ ವೀಳ್ಯದೆಲೆ,ಅಡಿಕೆಯನ್ನು ಕೊಟ್ಟು ಅವರನ್ನು ಆಮಂತ್ರಿಸುವ ಸಂಪ್ರದಾವಿದೆ.ಆಚರಣೆಯ ಬಾಬುದಾರರಾದ ಖಾತೆದಾರರ ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡಲಾಗುತ್ತದೆ.ನಸುಕಿನ ಜಾವದಿಂದ ಆರಂಭವಾದ ಕಾಮದಹನವು ರಾತ್ರಿಯವರೆಗೂ ನಗರದ ವಿವಿಧ ಓಣಿ ಮತ್ತು ಬಡಾವಣೆಗಳಲ್ಲಿ ಪ್ರಮುಖ ಕಾಮಣ್ಣರ ದಹನ ನಡೆಯುತ್ತದೆ.ಮೊದಲು ಹೊತ್ತಿಸಿದ ಬೆಂಕಿಯನ್ನೇ ಎಲ್ಲರೂ ತಂದು ಕಾಮದಹನ ಮಾಡುವುದು ವಿಶೇಷ.ಕಾಮನನ್ನು ಸುಟ್ಟ ದಿವಸ ಅದೇ ಬೂದಿಯಿಂದಲೇ ದೊಡ್ಡವರು ಸಣ್ಣವರೆನ್ನದೇ ಬೂದಿ ಆಟವಾಡುತ್ತಾರೆ.
ಬಣ್ಣದ ಬಂಡಿಗಳು :

ಬಾಗಲಕೋಟೆ ಹೋಳಿಯ ಮುಖ್ಯ ಆಕರ್ಷಣೆ ಬಣ್ಣದ ಬಂಡಿಗಳು.ನೂರಾರು ಎತ್ತಿನ ಗಾಡಿಗಳಲ್ಲಿ ದೊಡ್ಡ ಹಂಡೆಗಳಲ್ಲಿ ಬಣ್ಣ ತುಂಬಿಕೊಂಡುಬಣ್ಣವಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಜೀವನದ ಒಂದು ಸಾರ್ಥಕ ಭಾವ.ಬಣ್ಣವಾಡಲು ಇತ್ತೀಚಿಗೆ ಎತ್ತಿನ ಬಂಡಿಗಳ ಬದಲು ಟ್ರ್ಯಾಕ್ಟರ್,ಟ್ರಕ್ಕುಗಳನ್ನು ಉಪಯೋಗಿಸುತ್ತಿದ್ದಾರೆ. ಒಂದೊಂದು ಓಣಿಯವರು ಕನಿಷ್ಟ ಐವತ್ತರಿಂದ ಅರವತ್ತು ಎತ್ತಿನ ಗಾಡಿಗಳಲ್ಲಿ ,ಒಂದೊಂದು ಗಾಡಿಗಳಲ್ಲಿ ನಾಲ್ಕಾರು ಹಂಡೆ,ಇಲ್ಲವೇ ಬ್ಯಾರಲ್ಲುಗಳನ್ನಿಟ್ಟು ಅವುಗಳ ತುಂಬ ಬಣ್ಣ ತುಂಬಿ ಕೇಕೇ ಹಾಕುತ್ತಾ ಹಾದಿ ಬೀದಿಯಲ್ಲಿ ನೆರೆದ ಜನರಮೇಲೆ ಬಣ್ಣ ಎರಚುತ್ತಾರೆ.ಒಂದೊಂದು ಓಣಿಗಳಲ್ಲಿ ಬಂಡಿಯ ಬಣ್ಣದಾಟಕ್ಕೆ ದಿನವನ್ನು ಗೊತ್ತುಮಾಡಲಾಗಿರುತ್ತದೆ.ಹಾಗಾಗಿ ಹಬ್ಬದ 5 ದಿನಗಳ ಕಾಲ ಬಾಗಲಕೋಟೆಯ ಮಾರುಕಟ್ಟೆಯು ಸ್ವಯಂಘೋಷಿತ ಬಂದ್ ಆಗುವದರಿಂದ ವ್ಯಾಪಾರಸ್ಥರು ಇದೇ ವೇಳೆಯಲ್ಲಿಯೇ ಕುಟುಂಬ ಸಮೇತರಾಗಿ ದಕ್ಷಿಣ ಇಲ್ಲವೆ ಉತ್ತರ ಭಾರತ ಪ್ರವಾಸ ಹೋಗಿಬಿಡುತ್ತಾರೆ.ನೌಕರರು ಗೋವ ಮೊದಲಾದ ಬೀಚ ಕಡೆಗೆ ಮುಖ ಮಾಡುತ್ತಾರೆ.ಹೀಗೆ ಸಂಭ್ರಮದ ಹಬ್ಬದಲ್ಲಿ ಊರುಬಿಟ್ಟು ಹೋಗುವ ಮಂದಿಗೆ ಹಾಡಿನಲ್ಲಿಯೇ ಹೀಗೆ ವಿನಂತಿಸಿಕೊಳ್ಳುತ್ತಾರೆ.
ಮುತ್ತು ಮಾಣಿಕ್ಯ ಬೇಡ,ಮತ್ತೆ ಸಂಪದ ಬೇಡ
ಹೋಳಿಹಬ್ಬದ ವೈಭವ ಬೇಡನ್ನಬೇಡ ಅಣ್ಣಯ್ಯ .
ಎಂದು ಗೋಗರೆಯುತ್ತಾರೆ. ಇತ್ತೀಚಿಗೆ ಹೆಣ್ಣು ಮಕ್ಕಳೂ ಗುಂಪು ಗುಂಪಾಗಿ ಮನೆಮನೆಗಳಿಗೆ ತೆರಳಿ ಬಣ್ಣವಾಡುವ ಸಂಪ್ರದಾಯ ಬೆಳೆದು ಬಂದಿದೆ.
ಸೋಗಿನ ಬಂಡಿಗಳು :
ಬಾಗಲಕೋಟ ಹೋಳಿ ಆಚರಣೆಯ ಸಂದರ್ಭದ ಸೋಗಿನ ಬಂಡಿಗಳು ಭಾರತೀಯ ಪರಂಪರೆಯ ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿಯಾಗಿವೆ.ರಾಮಾಯಣ,ಮಹಾಭಾರತದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ವೇಷ ತೊಟ್ಟು ಬಂಡಿಗಳಲ್ಲಿ ಬಂದು ಪ್ರದಶರ್ಿಸುವ ‘ಸೋಗಿನ ಬಂಡಿಗಳು’ ಬಾಗಲಕೋಟ ಹೋಳಿಗೆ ವಿಶೇಷ ಕಳೆ ಕಟ್ಟುತ್ತವೆ.ಓಕಳಿಯಾಟದಂತೆ ಒಂದೊಂದು ಓಣಿಯವರು ಸೋಗಿನ ಬಂಡಿಗಳ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿದೆ.ಪೌರಾಣಿಕ,ಐತಿಹಾಸಿಕ ,ಸಾಮಾಜಿಕ, ರಾಜಕೀಯ, ಹಾಗೂ ವಿಡಂಬನಾತ್ಮಕ ಸೋಗಿನ ಬಂಡಿಗಳು ಸ್ಥಬ್ಧ ಚಿತ್ರಗಳ ಹಾಗೆ ರಾರಾಜಿಸುತ್ತವೆ.ಬಣ್ಣದ ದಿನದ ರಾತ್ರಿ ಸೋಗಿನ ಬಂಡಿಯಿಂದ ಹಳೆ ಬಾಗಲಕೋಟೆ ಮಾರುಕಟ್ಟೆ ಪ್ರದೇಶ ವಿಜೃಂಬಿಸುತ್ತದೆ.ರಾತ್ರಿಯಾಗುತ್ತಿದ್ದಂತೆ ಜನರ ಕುತೂಹಲ ಕೆರಳುತ್ತದೆ.ಪೌರಾಣಿಕ ಸನ್ನಿವೇಶಗಳಾದ ರಾಮನ ಪಟ್ಟಾಭೀಷೇಕ,ದ್ರೌಪದಿಯ ವಸ್ರಾಪಹರಣ,ಸೀತೆ ಅಶೋಕವನದಲ್ಲಿರುವಾಗ ಮಾರುತಿ ಉಂಗುರ ಕೊಟ್ಟ ಸನ್ನಿವೇಶ ಮೊದಲಾವನ್ನು ಶ್ರೀಮಂತ ವೇಷಭೂಷಣ ತೊಟ್ಟು ,ಪಾತ್ರಗಳನ್ನು ಹಾಕಿ ಸಂಭ್ರಮಿಸುತ್ತಾರೆ.
ಸೋಗಿನ ಬಂಡಿಗೆ ಸುಂದರವಾದ ಕಟೌಟುಗಳನ್ನು ಮಾಡಿ ಅವುಗಳಲ್ಲಿ ಪ್ರಮುಖ ಪಾತ್ರಗಳನ್ನು ವೇಷಭೂಷಣಗಳಿಂದ ಅಲಂಕರಿಸುತ್ತಾರೆ.ವೇಷಭೂಷಣಗಳನ್ನು ತಯಾರಿಸಿಕೊಡುವ ಇಲ್ಲವೇ ಬಾಡಿಗೆ ಕೊಡುವ ಕೆಲ ಪ್ರಸಿದ್ದ ಮನೆತನಗಳು ಇಲ್ಲಿವೆ.ಬಾಗಲಕೋಟೆಯ ಪ್ರಖ್ಯಾತ ಕಲಾವಿದರಾದ ನಾವಲಗಿ ಹಾಗೂ ಶಿವಪ್ಪ ಕರಿಗಾರ ಅವರು ಸುಂದರವಾದ ಕಟೌಟ ಮಾಡುವುದರಲ್ಲಿ ಸಿದ್ಧಹಸ್ತರು.ಶಿಂಗಣ್ಣ ರೊಳ್ಳಿ ಮನೆತನದವರು ವೇಷ ಹಾಕಿದವರ ಮುಖಕ್ಕೆ ಬಣ್ಣ ಹಚ್ಚುವ ಪ್ರಸಾಧನ ಕಲೆಯಲ್ಲಿ ಖ್ಯಾತಿ ಪಡೆದಿದ್ದಾರೆ.
ಕಾಮದಹನ,ಬಣ್ಣದ ಬಂಡಿ,ಸೋಗಿನ ಬಂಡಿ ಈ ಎಲ್ಲ ಆಚರಣೆಗಳೊಂದಿಗೆ ವಿವಿಧ ಬಡಾವಣೆಗಳಲ್ಲಿ ‘ಹಲಗೆ ಮೇಳ’ಗಳು ನಡೆಯುತ್ತವೆ.ಸ್ಪಧರ್ಾತ್ಮಕವಾಗಿ ನಡೆಯುವ ಮೇಳಗಳಿಗೆ ಬಹುಮಾನ ನೀಡಲಾಗುತ್ತದೆ.ವಿವಿಧ ವೇಷ ಭೂಷಣಗಳಿಂದ ಕೂಡಿ ತಾಳಕ್ಕೆ ತಕ್ಕಂತೆ ಕುಣಿತ,ಸಂಪ್ರದಾನಿ ವಾದ್ಯದೊಂದಿಗೆ ನೋಡುಗರಿಗೆ ಮುದ ನೀಡುತ್ತಾರೆ.ಮುಳುಗಡೆಯ ಬಾಗಲಕೋಟೆಯಲ್ಲಿ ಯಾವ ಹಬ್ಬದಾಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರುವಲ್ಲಿ ಇಲ್ಲಿನ ಹಿರಿಯರ ಮತ್ತು ಯುವ ಸಮುದಾಯದವರ ಪಾತ್ರ ದೊಡ್ಡದು.ನಗರದ ಬಾಗಲಕೋಟ ಹೋಳಿ ಆಚರಣಾ ಸಮಿತಿ,ಮಹಾತ್ಮ ಗಾಂಧಿ ರಸ್ತೆ ವರ್ತಕರ ಸಂಘ,ಜ್ಯೋತಿಪ್ರಕಾಶ ಸಾಳುಂಕೆ ಅಭಿಮಾನಿಗಳ ಗೆಳೆಯರ ಬಳಗ,ಕಿಲ್ಲಾಗಲ್ಲಿ,ವಿದ್ಯಾಗಿರಿ,ನವನಗರಗಳ ಗೆಳೆಯರ ಬಳಗ,ಸುಭಾಶಚಂದ್ರ ಭೋಸ ಯುವಕ ಸಂಘ ಹೀಗೆ ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಬಾಗಲಕೋಟೆ ಹೋಳಿ ಆಚರಣೆಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಕೀತರ್ಿ ಇಲ್ಲಿ ಮುಳುಗಡೆಯೊತ್ತರ ಬಾಗಲಕೋಟೆಯ ಸಮಸ್ತ ಜನತೆಗೆ ಸಲ್ಲುತ್ತದೆ.ಒಟ್ಟಾರೆ ಬಡವ ,ಶ್ರೀಮಂತವೆನ್ನದೇ ಜಾತಿ,ಮತ,ಪಂಥಗಳನ್ನು ಮರೆತು ಮೇಲು ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಆಚರಿಸುವ ಭಾವೈಕ್ಯದ ಸಂಕೇತವಾದ ಹೋಳಿ ಹಬ್ಬವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.

ಹೋಳಿ ಹಾಡುಗಳು :
ಯಾಲಕ್ಕಿ ಎಲಿ ಸಣ್ಣ ಜೀರಗಿ ಮೆಂತೆವ ಸಣ್ಣ
ನೀರಿಗಿ ಹೋಗುವವಳ ನಡುಸಣ್ಣ
ನಮ್ಮ ಬಸವಣ್ಣನ ಹೆಗಲ ಮ್ಯಾಗಿರುವ ನೊಗ ಸಣ್ಣ.


ಹತ್ತೀಯ ಹೊಲಕಂತ ಹೊತ್ತಾಳ ಬಿಂದಿಗಿ
ಕಸ್ತೂರಿಯಂಥ ಕರಿ ಹುಡುಗಿ
ಕಸ್ತೂರಿಯಂಥ ಕರಿಹುಡುಗಿಯ ಸಲುವಾಗಿ
ಒತ್ತೀ ಬಿದ್ದಾವ ಹೊಲಮನಿಯ.

ಹಲ್ಲಿ ಕಡಬ ಮಾಡಿ ವಲ್ಲಿ ಪದರೀಗಿ ಕಟ್ಟಿ
ಬೆಲ್ಲಿಲ್ಲ ಗೆಳೆಯಾ ಬೈಬ್ಯಾಡ
ಬೆಲ್ಲಿಲ್ಲಂತ ಬೈಬ್ಯಾಡ ಗೆಳೆಯಾ
ನಿನ್ನ ಗಲ್ಲಕ್ಕ ಕೊಟ್ಟ ಬೆಲ್ಲ ಮರಿಬ್ಯಾಡ.
ನತ್ತನ್ನ ಇಟ್ಟಾಳ ನಲಿನಲಿದ ನಗತಾಳ
ನಗುವ ಹುಡುಗಿಯ ಕಂಡ-ಹುಡುಗ
ಹಿತ್ತಲ ಬೇಲಿ ಜಿಗಿದಾನ
ಹಿತ್ತಲ ಜಿಗಿಬ್ಯಾಡ ಕೈಕಾಲ ಮುರಕೊಬ್ಯಾಡ
ಸುತ್ತಾಡ ಬಾರ ನನ್ನ ಸುಬೇದಾರ-ಚೆಲುವಾ
ಸುತ್ತಾಕ ಕೊಡತಿನಿ ಪಟಗಾವ.
ಒಟ್ಟಾರೆ ಹೋಳಿ ಆಚರಣೆಯು ವಸಂತ ಮಾಸದಲ್ಲಿ ಮಾನವರನ್ನು ಹೊಸ ಮನುಷ್ಯರನ್ನಾಗಿ ರೂಪಿಸುವ ಚೆಲುವಾದ ಹಬ್ಬ.
-ಡಾ.ಪ್ರಕಾಶ ಗ.ಖಾಡೆ ,ನವನಗರ,ಬಾಗಲಕೋಟ
Dr.Prakash G.Khade,M.A.Ph.d.
Bagalkot-587103.
Mo. 9845500890

6 comments:

  1. ಸರ್,ತಾವು ಬರೆದ ಹೋಳಿಹಬ್ಬದ ಲೇಖನ ಓದಿ ಮನಸ್ಸಿಗೆ ತುಂಬಾ ಸಂತಸವಾಯಿತು.ತಮ್ಮ ಬರವಣಿಗೆ ಮೇಲ್ಪಂಕ್ತಿಯದು ಸರ್.

    ReplyDelete
  2. Very nice article sir,you have written clear historical article about Bagalkot holi festival..

    ReplyDelete