Sunday, 10 March 2013

ಜನಪದ ಸಾಹಿತ್ಯ ಮತ್ತು ಸಿಂಧೂರ ಲಕ್ಷ್ಮಣ


 ಜನಪದ ಸಾಹಿತ್ಯ: ಸಿಂಧೂರ ಲಕ್ಷ್ಮಣ

-ಡಾ.ಪ್ರಕಾಶ ಗ. ಖಾಡೆ,ಬಾಗಲಕೋಟ
ಮೊ.9845500890
ಬ್ರಿಟೀಷ್ ಆಡಳಿತಗಾರರ ಹಾಗೂ ಮಿಶನರಿಗಳ ಪ್ರಭಾವ ಕಾರಣವಾಗಿ ವಸಾಹತು ಶಾಹಿಯ ಭದ್ರಬಾಹುಗಳು ಒಟ್ಟು ಸ್ಥಳೀಯತೆಯನ್ನು ಬಾಚಿತಬ್ಬಿಕೊಳ್ಳಲು ಹೂಡಿದ ತಂತ್ರಗಳು ಭಾರತೀಯ ಗ್ರಾಮ ಸಮುದಾಯವನ್ನು ಹೋರಾಟಕ್ಕೆ ಅಣಿಯಾಗುವಂತೆ ಮಾಡುವಂತಾಯಿತು. ಈ ಕಾರಣವಾಗಿ ದೇಸೀ ಹೋರಾಟಗಾರರು ಅಂದು ತೋರಿದ ಪ್ರತಿರೋಧವು ಒಳಬಂಡಾಯವೆನ್ನಿಸಿಕೊಂಡಿತೆ ಹೊರತು ಅದು ರಾಷ್ಟ್ರೀಯ ಚಳವಳಿಯ ಮುಖ್ಯಧಾರೆಯಾಗಿ ಗುರುತಿಸಿಕೊಳ್ಳದೆ ಹೋಯಿತು. ಆದರಿಂದು ನಡೆಯುತ್ತಿರುವ ಸಂಘರ್ಷದ ಸಂಕಥನದ ಸಂದರ್ಭದ ಚರ್ಚೆ ಇಂಥ ದೇಸೀ ಬಂಡಾಯಗಾರರ ಹೋರಾಟದ ಮೇಲೆ ಬೆಳಕುಚೆಲ್ಲುವ ಮತ್ತು ಅದನ್ನು ವ್ಯಾಪಕವಾಗಿ ಪ್ರಚುರಪಡಿಸುವ ಪ್ರಯತ್ನಗಳು ನಡೆಯುತ್ತಿರುವುದು ನಗಣ್ಯವೆನ್ನಿಸಿದ ಸ್ಥಳೀಯ ಚರಿತ್ರೆ ಮತ್ತು ಚರಿತ್ರೆಯ ನಾಯಕರು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಾಗಿದೆ.
ಜಾಗತೀಕರಣದ ಈ ಸಂದರ್ಭದಲ್ಲಿ ನವವಸಾಹತುಶಾಹಿ ತಲೆ ಎತ್ತುತ್ತಿರುವ ಅಪಾಯದ ಸೂಚನೆಗಳು ಗೋಚರಿಸುತ್ತಿರುವ ಹೊತ್ತಿನಲ್ಲಿ ವಸಾಹತುಶಾಹಿಯು ಜಗತ್ತಿನಾದ್ಯಂತ ಎಸಗಿರುವ ಆಕ್ರಮ ಶೀಲ ನೆಲೆಗಳ ಪುನರಾವಲೋಕನ ನಡೆಯುತ್ತಿರುವುದು, ಅದೂ ದೇಸೀ ಸಂಸ್ಕೃತಿಯ ಮೇಲೆ ಮಾಡಿದ ಆಘಾತಗಳನ್ನು ಹಾಗೂ ಅದರ ಬಗೆಗೆ ಸ್ಥಳೀಯ ಬಂಡಾಯ ಗಾರರು ತೋರಿದ ಪ್ರತಿಭಟನೆಗಳ ಕುರಿತ ಸಾಂಸ್ಕೃತಿಕ ದಾಖಲೆಗಳ ಅಧ್ಯಯನಕ್ಕೆ ಮುಂದಾಗಿ ರುವುದು ಭಾರತೀಯ ಗ್ರಾಮ ಸಮುದಾಯವನ್ನು ಎಚ್ಚರಿಸುವಂತಿದೆ.
ಭಾರತೀಯ ರಾಷ್ಟ್ರೀಯ ಸ್ವಾತಂತ್ರ್ಯ ಆಂದೋಲನದ ಚರಿತ್ರೆಯಲ್ಲಿ ತಳಮಟ್ಟದ ಒಳ ಬಂಡಾಯಗಳ ತೀವ್ರತೆಯನ್ನು ಕಟ್ಟಿಕೊಡದೇ ಹೋದ ಕಾರಣವಾಗಿ ಅನೇಕ ದೇಸೀ ನಾಯಕರು ಪ್ರಧಾನ ಭಿತ್ತಿಗೆ ಬರದೇ ಆಳರಸರ ದೃಷ್ಟಿಯಲ್ಲಿ ಕಂಡುಬಂದಂತೆ ‘ದರೋಡೆ ಕೋರ’ರಾಗಿ ಮಾತ್ರ ಉಳಿಯುವಂತಾಯಿತು. ಇಂಥ ದೇಸೀ ನಾಯಕರ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಜಾನಪದ ಮೊದಲಾಯಿತು. ಜನಪದ ಗೀತೆಗಳು ಇಂದು ದೇಸಿ ಚಳವಳಿಯ ದಾಖಲೆಗೆ ಸಿಕ್ಕುವ ಅಮೂಲ್ಯ ಸಾಮಗ್ರಿಗಳೆನಿಸಿವೆ.
ಸಮಕಾಲೀನ ಹಾಗೂ ಚಾರಿತ್ರಿಕ ಅಂಶಗಳನ್ನು ಒಳಗೊಂಡ ಜನಪದ ಸಾಹಿತ್ಯವು ಹೋರಾಟದ ಚರಿತ್ರೆಯನ್ನು ಬಿಚ್ಚಿಡುವ ಮೂಲಕ ಮಹದುಪಕಾರಮಾಡಿತು. ಜನಪದ ಸಾಹಿತ್ಯದ ಗೀತಪ್ರಕಾರದ ತ್ರಿಪದಿ, ಲಾವಣಿ, ತತ್ವಪದ, ದುಂದುಮೆ ಪದ, ಬೀಸುವ ಕಲ್ಲಿನಪದ, ಹಂತಿಪದ, ರಿವಾಯತಪದ ಮೊದಲಾದವು ವೀರರ ಚರಿತ್ರೆಯನ್ನು ಸಾರುವ ಮೂಲಕ ದೇಶಿ ಚರಿತ್ರೆಯ ಶ್ರೀಮಂತ ದಾಖಲೆಗಳೆನಿಸಿವೆ.
ಕನ್ನಡ ಜನಪದ ಕಥೆ ಮತ್ತು ನೀತಿ ಸಾಹಿತ್ಯದಲ್ಲಿ ವಸಾಹತುಶಾಹಿ ದೌರ್ಜನ್ಯದ ಚಿತ್ರಣ ದೊಂದಿಗೆ ಹೋರಾಟದ ಸಂಗತಿಗಳು ದಾಖಲಾಗಿವೆ. ಬ್ರಿಟೀಷರ ಹಾಗೂ ಅವರ ಅಜ್ಞಾಪಾಲಕ ರಂತಿದ್ದ ಜಮೀನ್ದಾರರ ವಿರುದ್ಧ ದೇಸೀಯರು ತೋರಿದ ಪ್ರತಿಕ್ರಿಯೆಯ ಸಂದರ್ಭದ ಅಧಿಕೃತ ದಾಖಲೆ ಸಿಕ್ಕುವುದು ಜನಪದರ ಲಾವಣಿಗಳಲ್ಲಿ. ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಕಿತ್ತೂರ ಚೆನ್ನಮ್ಮನ ಸೊಸೆ, ಬಾದಾಮಿ ಕಿಲ್ಲೆ ಕೆಡವಿದ ಪದಾ, ಸಿಂಧೂರ ಲಕ್ಷ್ಮಣನ ಪದಾ ಮೊದಲಾದವು ನಿಶ್ಯಸ್ತ್ರೀಕರಣ ಕಾಯಿದೆ, ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯಿದೆ, ಹಣವಂತರ ವಿರುದ್ಧ ನಡೆದ ಬಂಡಾಯವನ್ನು ಚಿತ್ರಿಸುತ್ತಿವೆ. ಇಲ್ಲಿ ಕನ್ನಡ ದೇಸೀ ಚಳುವಳಿಗಾರರ ದಿಟ್ಟತನ, ಪರಕೀಯರ ಕುತಂತ್ರ, ಸ್ಥಳೀಯರ ರೋಷ ಎಲ್ಲವನ್ನು ಪದಕಟ್ಟಿ ಹಾಡುವಲ್ಲಿ ಲಾವಣಿಕಾರರು ಆಗ ಇದ್ದ ಅಧಿಕಾರಶಾಹಿ ವಿರುದ್ಧವೇ ಬಂಡೆದ್ದು ಹಾಡಿದ್ದೂ ದಾಖಲಾರ್ಹ ಸಂಗತಿಯಾಗಿದೆ.
ಏನ ಹೇಳಲಿ ಜನ್ಮದ ಗೋಳು
ಇಂಗ್ರೇಜಿ ಉಪದರ್ ಆದೀತ ಬಾಳಾ
ಬಡವರ ಅಳತಾದೊ ಗಳಗಳಾ
ಮಾಡತಾರ ಚಿಂತಿ
……………………
ಬಾಳು ಕೆಟ್ಟದ ಅಣ್ಣಾ ಸರಕಾರಾ
ಬಡವರ ತಂದಾರ ಕಣ್ಣೀರಾ
ಹೆಂತಾ ಯಾಳೇ ತಂದೀ ಈಶ್ವರಾ
ನಮಗ್ಯಾರದಿಲ್ಲ ಆಧಾರಾ.
ಬ್ರಿಟೀಷ್ ಆಳರಸರು ಜಾರಿಗೊಳಿಸಿದ ಈ ನೆಲಕ್ಕೆ ಹೊಂದದ ಕಾಯಿದೆಗಳು, ನ್ಯಾಯ ಪದ್ಧತಿ, ಹೇರಿದ ತೆರಿಗೆ ಮೊದಲಾದವು ಸ್ಥಳೀಯರನ್ನು ದುರ್ಬಲಗೊಳಿಸಿದವು. ರೈತರು, ಬಡವರು, ಕೂಲಿಕಾರರಾದ ಸ್ಥಳೀಯರಿಂದ ದುಡ್ಡು ವಸೂಲಿ ಮಾಡಿಕೊಡುವ ದಾಸ್ಯಕ್ಕೆ ಸ್ಥಳೀಯ ಅರಸರು ಶರಣಾಗುವಂತಾಯಿತು. ಇಂಥ ಧೋರಣೆ ನೀತಿಗಳು ಸ್ಥಳೀಯ ನಾಯಕ ರನ್ನು ರೊಚ್ಚಿಗೆಬ್ಬಿಸಿದವು. ಈ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಅನೇಕ ಬಂಡಾಯ ಗಳಲ್ಲಿ ವೀರ ಸಿಂಧೂರ ಲಕ್ಷ್ಮಣನ ಮತ್ತವರ ಸಹಚರರ ಬಂಡಾಯ ಉತ್ತರ ಕರ್ನಾಟಕದ ಭಾಗದಲ್ಲಿ ಜನಜನಿತವಾಗಿದೆ.
ಉತ್ತರ ಕರ್ನಾಟಕ ಅದರಲ್ಲೂ ಮುಂಬೈ ಕರ್ನಾಟಕದ ಪ್ರದೇಶಗಳಲ್ಲಿ ಸಿಂಧೂರ ಲಕ್ಷ್ಮಣನ ಹೆಸರು ನೆನಪಿಸಿದರೆ ಮೈ ರೋಮಾಂಚನಗೊಳ್ಳುತ್ತದೆ. ಬ್ರಿಟೀಷ್ ಅಧಿಕಾರಶಾಹಿ ಹಾಗೂ ಅವರ ಪೋಷಕರಾಗಿದ್ದ ಜಮೀನ್ದಾರರ ವಿರುದ್ಧ ತನ್ನ ಸಣ್ಣ ಗುಂಪನ್ನು ಜೊತೆಯಲ್ಲಿ ಟ್ಟುಕೊಂಡು ದೊಡ್ಡ ಹೋರಾಟ ಮಾಡಿದ ಸಿಂಧೂರ ಲಕ್ಷ್ಮಣ ಚರಿತ್ರೆ ಅಜರಾಮರ ವಾದುದು.
ಬಸವ ಪ್ರಭು ಲಾವಣಿ
ಬಿದರಿಗ್ರಾಮದ ಬಸವಪ್ರಭು ಹಾಡಿದ ಲಾವಣಿ(ಡಾ.ಆರ್.ಸಿ.ಮುದ್ದೇಬಿಹಾಳರು ಸಂಗ್ರಹಿಸಿದ್ದು)ಯಲ್ಲಿ ಸಿಂಧೂರ ಲಕ್ಷ್ಮಣನ ಸಮಗ್ರ ಜೀವನಗಾಥೆ ಸಿಕ್ಕುತ್ತದೆ. ಸರಕಾರಿ ಸೇವೆಯಲ್ಲಿದ್ದ ಲಕ್ಷ್ಮಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ತನ್ನ ಬಂಡಾಯದ ಮೂಲಕ ಮೇಲ್ವರ್ಗದ ಬಂಡವಾಳಶಾಹಿಗಳ ನಿದ್ದೆಗೆಡಿಸಿ ಬಡವರ, ದೀನದಲಿತರ ಹಾಗೂ ಅಸಹಾಯಕ ಜನರ ನೆರವಿಗೆ ನಿಂತ ಪರಿಸರವಾಗಿ ನಿರೂಪಿತವಾಗಿದೆ. ಲಾವಣಿ ಆರಂಭದಲ್ಲಿ ‘ಘಟ ಹೋಗುವುತನಕ ಹಟ ಬಿಡದ’ ಲಕ್ಷ್ಮಣನ ಧೈರ್ರ, ಸಾಹಸ ಹಾಗೂ ಸ್ವಾಭಿಮಾನದ ಚಿತ್ರ ಬರುತ್ತದೆ.
ಸಿಂಧೂರಾಗ ಲಕ್ಷ್ಮಣ ಹುಟ್ಟ್ಯಾನ ಭಂಟ ಅನಿಸ್ಯಾನ
ಕೊಟ್ಟ ವಚನ ಹುಟ್ಟ ತಪ್ಪಲಿಲ್ಲ
ಘಟಹೋಗುತನಕ ಹಿಡಿದ ಹಟ ಬಿಡಲಿಲ್ಲ.
ಪಾಂಡವರೊಳಗ ಇದ್ದಾಂಗ ಭೀಮ ಚೆಲುವ ಚಂದ್ರಾಮ
ಥೇಟ ಹೋಳಿಕಾಮ ರೂಪದಲಿ ಡೌಲ
ಹೆತ್ತತಾಯಿ ಹೊಟ್ಟೀಲಿ ಹುಟ್ಟ್ಯಾನ ಪ್ರಬಲ.
ಹೀಗೆ ಸಿಂಧೂರ ಬಂಟನ ವರ್ಣನೆಯನ್ನು ಜನಪದರು ಕಂಡರಿಸಿದ್ದಾರೆ.
ಕಂಪನಿ ಸರಕಾರದ ಇನಿಸ್ಪೆಕ್ಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಸಿಂಧೂರ ಲಕ್ಷ್ಮಣ ವಾಯದೆ ಕೊಟ್ಟು ಅದರಂತೆ ನಡೆದುತೋರಿಸಿದ ಧೀರ. ಒಂದು ಸಂದರ್ಭದಲ್ಲಿ ಲಕ್ಷ್ಮಣ ಇನಿಸ್ಪೆಕ್ಟರ್‌ಗೆ ಹೇಳುತ್ತಾನೆ.
ಲಕ್ಷುಮಣ ತಿರುಗಿ ಹೇಳತಾನ ನಾಳೆ ಬರತೀನಿ
ಹುಷಾರಿ ಇರು ನೀ ಚಾವಡಿ ಒಳಗ
ಈ ಮಾತು ಸುಳ್ಳ ಅಲ್ಲ ಗಂಟು ಹಾಕು ಪದರಾಗ
ಅನೇಕ ಊರುಗಳಲ್ಲಿ ಗುಡ್ಡ ಗವ್ವರಗಳಲ್ಲಿ ಹುಲಿಯಂತೆ ಮೆರೆದು ಆಳರಸರ ಮತ್ತು ಶ್ರೀಮಂತರ ನಿದ್ದೆಗೆಡಿಸಿದ ಸಿಂಧೂರ ಲಕ್ಷ್ಮಣ ಇಂಗ್ಲೀಷರ ದರ್ಬಾರಕ್ಕೆ ಸವಾಲು ಆಗಿದ್ದ.  ಜನಪದ ಗೀತೆಯಲ್ಲಿ ಲಕ್ಷ್ಮಣನ ಕಾಲಕ್ಕೆ ಹಾಗೂ ಮುಂಚೆ ಹೋರಾಟದ ಮುಂಚೂಣಿ ಯಲ್ಲಿದ್ದ ವೀರನನ್ನು ನೆನೆಯುತ್ತಾ ಆ ವೀರರಿಗಿಂತ ಲಕ್ಷ್ಮಣ ಬಹದ್ದೂರನಾಗಿದ್ದ ಎಂದು ಸಾರುತ್ತಾರೆ.
ಸಂಗೋಳಿ ಸಂಪಗಾಂದಿ ರಾಯಣ್ಣ
ಮುಂಡರಗಿ ಭೀಮರಾಯಣ್ಣ
ಶೂರರಾದಾರಣ್ಣ ಆಗೀನ ಕಾಲಕ
ಕಟ್ಟಿಚೆನ್ನ ಸತ್ತಹ್ವಾದ
ದೇಶದಾಗ ಮಾಡಿಕೊಂಡ
ಶಿವಾಜಿ ಟೀಪುಸುಲ್ತಾನ ಗಾಯಕವಾಡ ನಾನು
ಪೇಶ್ವೆ ನಾರಾಯಣ ಹೆಸರ ದೂರತನಕ
ಅವ್ರ ಪ್ರಬಲರಾದರು ಪೇಶ್ವೆ ಆಳುವ ಕಾಲಕೆ||
ಈ ಇಂಗ್ರೇಜಿ ದರಬಾರದಾಗ
ಲಕ್ಷ್ಮಣನ್ಹಾಂಗ ಆಗಿಲ್ಲ ಯಾರು ತಿಳಿರಿ ನಿಮ್ಮನಕ
ಅಂತ ಈ ಶೂರನಿಗೆ ಬಹದ್ದೂರ ಅನ್ನಬಾರದ್ಯಾಕ
ಹೀಗೆ ವೀರಭಂಟ ಲಕ್ಷ್ಮಣ ಬಡವರ ಪಾಲಿಗೆ ಆಪತ್‌ಬಾಂಧವನಾಗಿ ಸ್ವಾಭಿಮಾನಿಯಾಗಿ ನಿಜವಾದ ಅರ್ಥದಲ್ಲಿ ಬಹದ್ದೂರನಾಗಿ ಗುರುತಿಸಿಕೊಳ್ಳುತ್ತಾನೆ. ಲಕ್ಷ್ಮಣ ತೀರಿಕೊಂಡಾಗ ‘ಮೋಸಮಾಡಿ ಅಭಿಮಾನ್ಯಗ ಹೊಡದಂಗಾತು ಕೌರವರು’ ಎಂದು ಹೋಲಿಸುತ್ತಾರೆ. ಕೊನೆಗೆ, “ಹುಟ್ಟಬೇಕು ಲಕ್ಷ್ಮಣನಂತವರು ಶ್ರೇಷ್ಠ ಅನಿಸಿಕೊಂಡು ಹ್ವಾದ ಗಬರು” ಎಂದು ಹಾಡು ಮುಗಿಸುತ್ತಾರೆ.
ಕಲಿತನಕೆ ಹೆಸರಾದ ಸಿಂಧೂರ ಲಕ್ಷ್ಮಣ ಮೋಸದಿಂದ ಬಲಿಯಾದ ಸಂಗತಿ ಕಾಳ್ಗಿಚ್ಚಿನಂತೆ ಹಬ್ಬಿ ಸಿಂಧೂರಿನ ಅವನ ಕುಟುಂಬವರ್ಗವನ್ನು ತಲುಪಿತು. ಅವರ ರೋದನ ಹೇಳತೀರದು. ಜನಪದದ ಹಾಡಿನಲ್ಲಿ ಆ ಸಂದರ್ಭ ಹೀಗೆ ಚಿತ್ರಿತವಾಗಿದೆ.
ತೊಟ್ಟಿಲ ತೂಗತಿದ್ದೆ ಬಟ್ಟಲು ಬೆಳಗತಿದ್ದೆ
ಕೇಳಿಲ್ಲ ನಾನು ಹೊಸಸುದ್ದಿ! ಲಕ್ಷ್ಮಣನ
ಮಡದಿ ತಾ ಕೇಳಿ ಹೊರಳ್ಯಾಳ
ಅಂಗಳ ಹುಡುಗತಿದ್ದೆ ಗಂಗಾಳ ಬೆಳಗತಿದ್ದೆ
ಕೇಳಿಲ್ಲ ನಾನು ಹೊಸಸುದ್ದಿ! ಲಕ್ಷ್ಮಣನ
ತಾಯವ್ವ ಕೇಳಿ ಅಳತಾಳ
ಒಲಿಯ ಮ್ಯಾಲಿನ ಅಕ್ಕಿ ಉಕ್ಕುಕ್ಕಿ ಕುದಿವಾಗ
ಅವನಕ್ಕ ಅತ್ತಾಳ ಬೋರಾಡಿ! ಲಕ್ಷ್ಮಣಗ
ಹೊಡೆದವರ ವಂಶ ಅಳಿಯಲಿ.
ಜನೋಪಯೋಗಿ ಕೆಲಸ ಮಾಡಿ ಎಲ್ಲರ ನಾಲಿಗೆಯ ಮೇಲಿರುವ ವ್ಯಕ್ತಿಗೆ ಸಮಯ ಬಂದಾಗ ಜೊತೆಯಲ್ಲಿ ಯಾರೂ ಇರುವುದಿಲ್ಲ ಎಂಬುದು ಜನಪದ ನಂಬಿಕೆ. ಇಲ್ಲೂ ಹಾಗೆಯೇ ಆಯಿತು. ಜನಪದರು ಹೇಳುವ ಹಾಗೆ,
ಮ್ಯಾಳಿಗೆ ಮ್ಯಾಲಿನ ಹುಲ್ಲು ಗಾಳಿಗೆ ಹೋಗಾಗ
ಗಾಳಿನ ತರಬಾಕ ಸಗತಿಲ್ಲ- ಲಕ್ಷ್ಮಣಗ
ವ್ಯಾಳ್ಯಾ ಬಂದಾಗ ಯಾರಿಲ್ಲ.
ತಿಪ್ಪಿ ಮ್ಯಾಲಿನ ಹುಲ್ಲ ತೆಪ್ಪಾಗಿ ತೇಲಾಗ
ಎತ್ತಿ ತರುವ ಜಾಣ ಒಬ್ಬಿಲ್ಲ-ಲಕ್ಷ್ಮಣಗ
ಹೊತ್ತ ಬಂದಾಗ ಯಾರಿಲ್ಲ.
ಎಂಬಲ್ಲಿ ಲಕ್ಷ್ಮಣನ ಮೋಸದ ಸಾವು ಜನಪದರ ರೋಷಕ್ಕೆ ಕಾರಣವಾಗಿದೆ. ನಂಬಿದವರೆ ವಿಶ್ವಾಸದ್ರೋಹ ಮಾಡಿದ ಸಂಗತಿಯನ್ನು ಜನಪದರು,
ಜಾಣ ಜಾಣರು ಕೂಡಿ ಜಾಲಿಯ ಗಿಡದಾಗ
ಜಾಲ್ಯಾಗ ಕತ್ತಿ ಮಸ್ತಾರ-ಲಕ್ಷ್ಮಣನ
ಕುತ್ತಿಗಿ ಮ್ಯಾಲ ಎಳೆದಾರ
ಬಂಟ ಬಂಟರು ಕೂಡಿ ಕಂಟ್ಯಾಗ ಕೂತಾರ
ಕಂಟ್ಯಾಗ ಕತ್ತಿ ಮಸ್ತಾರ-ಲಕ್ಷ್ಮಣನ
ಟೊಂಕದ ಮ್ಯಾಲ ಎಳೆದಾರ.
ಹೀಗೆ ಮೋಸಕ್ಕೆ ಬಲಿಯಾದ ವೀರನ ಸಾವನ್ನು ಜನಪದರು ತುಂಬಾ ನೋವಿನಿಂದಲೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಿಂಧೂರ ಲಕ್ಷ್ಮಣನ ಅವಸಾನದ ನಂತರ ರಚಿತವಾದ ಜನಪದ ಕೋಲಾಟವೊಂದರಲ್ಲಿ ಜನಸಾಮಾನ್ಯರ ರೋದನ ಹೆಪ್ಪುಗಟ್ಟಿದೆ. ಮೋಸದಿಂದ ಆದ ಅವಸಾನವನ್ನು ಈ ಕೋಲಾಟ ಪದ ಚಿತ್ರಿಸುತ್ತದೆ.
ವಿಶ್ವಾಸ ಹಳಬರು ಊಟಕ ಹೇಳ್ಯಾರ
ಬಂಧೂಕ ಭಾರ ಬರಿಮಾಡಿ ಕೋಲ|
ಬಂದೂಕ ಭಾರಬರಿ ಲಕ್ಷ್ಮಣನ
ಊಟಕ್ಕೆ ಕೊತ್ತವಗ ಒಗದಾದ ಕೋಲ.
ವಿಶ್ವಾಸದ್ರೋಹ ಬಗೆದ ಸಂದರ್ಭದಲ್ಲಿ ವೀರನ ಅಂತ್ಯವನ್ನು ಚಿತ್ರಿಸಿದ ಈ ಪದದಲ್ಲಿ.
ಬಿದ್ದಾನ ಬಿದ್ದಾನ ಬಿಳಿಯಂಗಿ ಮೇಲಾಗಿ
ರುದ್ದರ ಜೋಡಂಗಿ ರಗತಾಗಿ ಕೋಲ
ರುದ್ದರ ಜೋಡಂಗಿ ರಗತಾಗಿ ಲಕ್ಷ್ಮಣ್ಣ
ಬಿದ್ದಾನ ಬೀಳಗಿ ಬಯಲಾಗ| ಕೋಲ”
ಜನಸಾಮಾನ್ಯರ ಆಪತ್‌ಬಾಂಧವ, ಅನಾಥರ ಪಾಲಿನ ರಕ್ಷಕನಾಗಿದ್ದ ಸಿಂಧೂರ ಲಕ್ಷ್ಮಣ ಬೀಳಗಿಯ ಬಯಲಲ್ಲಿ ಶವವಾಗಿ ಬಿದ್ದಕೊಂಡ ಸಂದರ್ಭವನ್ನು ಹೆಣ್ಣು ಮಕ್ಕಳು ಹೀಗೆ ಹಾಡಿದ್ದಾರೆ.
ಮಠಬಿಟ್ಟ ಮನೆಬಿಟ್ಟ ಮಠದ ಗೊಡವಿಯ ಬಿಟ್ಟ
ತನ್ನವರ, ಬಂಧುಗಳ ಕೈಬಿಟ್ಟು ಕೋಲ|
ತನ್ನವರ ಬಂಧುಗಳ ಕೈಬಿಟ್ಟು ಮಲಗ್ಯಾನ
ಕಪ್ಪರ ಪಡೆವ್ವಗ ತಲಿಕೊಟ್ಟು ಕೋಲ.
ಜನಪದರ ಬದುಕು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಅಗಲಿ ಹೋದ ಲಕ್ಷ್ಮಣನನ್ನು ಕುರಿತು ಕಾವ್ಯ ಕಟ್ಟಿದ ಜನಪದರು ಲಕ್ಷ್ಮಣನನಿಲ್ಲದ ಸಂದರ್ಭಕ್ಕೆ ಅರಳಿದ ಹೂಗಳಿಗೆ ಏನು ಅರ್ಥವೆಂದು ಮಾರ್ಮಿಕವಾಗಿ ಕೇಳಿಕೊಳ್ಳುತ್ತಾರೆ.
ಸಿಂಧೂರ ತೋಟದಾಗ ಚೆಂದಕ ಮಲ್ಲಿಗಿ ಹೂವ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಕೋಲ|
ಬಂದು ಲಕ್ಷ್ಮಣ್ಣ ಮುಡಿಲಲ್ಲಿ ಆ ಹೂವ
ಅಕ್ಕ ತಂಗೇರು ನೋಡಿ ಅಳತಾರ ಕೋಲ.
ಸಿಂಧೂರ ತೋಟದಾಗ ಚೆಂದಕ ಸಂಪಿಗಿ ಹೂವ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಕೋಲ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಆ ಹೂವ
ಗೆಳತೆರು ನೋಡಿ ಅಳತಾರ ಕೋಲ.
ಸಿಂಧೂರ ತೋಟದಾಗ ಚಂದಕ ಚಂಡು ಹೂವ
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಕೋಲ|
ಬಂದು ಲಕ್ಷ್ಮಣ್ಣ ಮುಡಿಲಿಲ್ಲ ಆ ಹೂವ
ತಾಯಿ ತಂದಿ ನೋಡಿ ಅಳತಾರ ಕೋಲ
‘ಎಣ್ಣಿಯ ಬಿಂದಿಗಿಗಿ ಸಣ್ಣರವಿ ಕವಿದಂಗ’ ಎಂದು ಮಾರ್ಮಿಕವಾಗಿ ನಾಣ್ನುಡಿಯನ್ನು ಬಳಸಿ ಹೇಳಿಕೊಟ್ಟ ಈ ಮುಂದಿನ ಸಾಲುಗಳು ಲಕ್ಷ್ಮಣ್ಣನಿಲ್ಲದ ಶೂನ್ಯದಲ್ಲಿ ಆತನ ಬಳಗ ಹರಿಸಿದ ಕಣ್ಣೀರಿನ ಸಂದರ್ಭವನ್ನು ದೃವ್ಯವಾಗಿ ಬಿಚ್ಚಿಡಲಾಗಿದೆ.
ಎಣ್ಣಿsಯ ಬಿಂದಿಗಿಗಿ ಸಣ್ಣಿರವಿ ಕವಿದಂಗ
ಅವನಮ್ಮ ಲಕ್ಷ್ಮಣನ ಬಳಗದ ಕೋಲ
ಅವನಮ್ಮ ಲಕ್ಷ್ಮಣನ ಬಳಗದ ಕಣ್ಣೀರ
ಸಣ್ಣ ಮಳಿಯಾಗಿ ಸುರಿದಾವ ಕೋಲ.
ತುಪ್ಪದ ಬಿಂದಿಗಿಗಿ ಕಟ್ಟಿರವಿ ಕವಿದಂಗ
ಅವನಮ್ಮ ಲಕ್ಷ್ಮಣನ ಬಳಗದ ಕೋಲ
ಅವನಮ್ಮ ಲಕ್ಷ್ಮಣನ ಬಳಗದ ಕಣ್ಣೀರು
ಉತ್ತರಿಯ ಮಳಿಯಾಗಿ ಸುರಿದಾವ ಕೋಲ.
ಸಿಂಧೂರ ಲಕ್ಷ್ಮಣ ತೀರಿಕೊಂಡಾಗ ಹೆಂಡತಿ ಚಂದ್ರವ್ವಳ ರೋದನವನ್ನು ಜನಪದರು ತಮ್ಮ ಗೀತೆಯಲ್ಲಿ ಕಂಡರಿಸಿದ್ದಾರೆ.
ಆ ಬಳಿಯ ಈ ಬಳಿಯ ಜಂಬ ನೀರಲು ಬಳಿಯ
ಮಡದಿ ಚಂದ್ರವ್ವನ ಕೈಬಳಿಯ ಕೋಲ
ಮಡದಿ ಚಂದ್ರವ್ವನ ಕೈ ಬಳಿಯ ತಗೆವಾದ
ತಾಯಿ-ತಂದಿ ನೋಡಿ ಅಳತಾರ ಕೋಲ.
ಅ ಮಣಿಯ ಈ ಮಣಿಯ ಜಂಬನೀಲದ ಮಣಿಯ
ಮಡದಿ ಚೆಂದ್ರವ್ವನ ಗುಳದಾಳಿ ಕೋಲ|
ಮಡದಿ ಚಂದ್ರವ್ವನ ಗುಳದಾಳಿ ತೆಗೆವಾಗ
ಗೆಳತಿಯರು ನೋಡಿ ಅಳತಾರ ಕೋಲ
ಹೀಗೆ ವೀರ ಸಿಂಧೂರ ಲಕ್ಷ್ಮಣನ ಸಾವಿನ ನಂತರ ತಂದೆ ತಾಯಿ ಹೆಂಡತಿ ಅಪಾರ ಬಳಗ ರೋಧಿಸುವ ಪರಿಯನ್ನು ಈ ಜನಪದಗೀತೆ ಕಟ್ಟಿಕೊಡುತ್ತದೆ. ಬಾಗಲಕೋಟೆ ತಾಲೂಕು ತುಳಸಿಗೇರಿಯ ಹರಿಜನ ಕೇರಿಯಲ್ಲಿ ಹೆಣ್ಣುಮಕ್ಕಳು ಹಾಡುತ್ತಿದ್ದ ಈ ಕೋಲಾಟದ ಪದವನ್ನು ಡಾ.ಆರ್.ಸಿ.ಮುದ್ದೇಬಿಹಾಳ ಅವರು ಸಂಗ್ರಹಿಸಿಕೊಟ್ಟಿದ್ದಾರೆ.
ಜನಪದ ಗೀತೆಗಳಲ್ಲಿ ವೀರರ ಚಿತ್ರಣ ಹೆಚ್ಚಾಗಿ ಲಾವಣಿಗಳಲ್ಲಿ ಕಂಡುಬರುತ್ತವೆ. ಕೆಲ ತ್ರಿಪದಿಗಳಲ್ಲಿ ಉಲ್ಲೇಖಿತವಾಗಿವೆ. ಕನ್ನಡ ಜನಪದ ಗೀತೆಗಳಲ್ಲಿ ವೀರರನ್ನು ಕುರಿತ ಗೀತೆಗಳ ಸಮಗ್ರ ಸಂಪಾದನೆ ಮತ್ತು ಪ್ರಕಟಣೆಯಾಗಬೇಕಿದೆ. ಸಂಗ್ರಹಿತ ಕೆಲವೇ ಕೆಲವು ಸಾಹಿತ್ಯದಿಂದ ಹೋರಾಟಗಾರರ ಒಟ್ಟು ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುವುದು ತೊಡಕಾಗುತ್ತದೆ. ಪ್ರತಿಷ್ಠಿತ ವಲಯದಿಂದ ಬಂದ ಹೋರಾಟಗಾರರಿಗಿಂತಲೂ ಅಪ್ರತಿಷ್ಠಿತ ವಲಯದಿಂದ ರೂಪುಗೊಂಡು ಬಂದ ಹೋರಾಟಗಾರರ ಚರಿತ್ರೆಯನ್ನು ಶಿಷ್ಟಸಾಹಿತಿಗಳು ಕಟ್ಟಿಕೊಡುವಲ್ಲಿ ಮಡಿವಂತಿಕೆ ತೋರಿರುವುದು ಕಂಡುಬರುತ್ತದೆ.
ಭಾರತೀಯ ಪರಂಪರೆಯಲ್ಲಿ ವೀರರಿಗಿದ್ದ ಸ್ಥಾನಮಾನ ಗೌರವಗಳು ದೊಡ್ಡವು. ನಮ್ಮ ಪ್ರಮುಖ ಕಾವ್ಯಗಳೆಲ್ಲ ಹೆಚ್ಚಾಗಿ ಯುದ್ಧ ವಿವರಗಳಿಂದಲೇ ತುಂಬಿಕೊಂಡಿವೆ. ಮಹಾಭಾರತ, ರಾಮಾಯಣಗಳೂ ಯುದ್ಧ ವಿವರಣೆಯಿಂದ ತುಂಬಿಕೊಂಡಿವೆ. ಉದ್ದಕ್ಕೂ ರಚನೆಯಾದ ಈ ಮಹಾಕಾವ್ಯಗಳು ರಾಜಮಹಾರಾಜರ ಚರಿತ್ರೆ ಸಾರಿದರೆ, ಕೆಳವರ್ಗದಿಂದ ಬಂದ ಹೋರಾಟಗಾರರ ಚರಿತ್ರೆಯನ್ನು ಜನಪದರು ಸಾರಿ ಹೇಳಬೇಕಾಯಿತು. ನಮ್ಮ ಗೀಗಿ,  ಲಾವಣಿಕಾರರು ಕಟ್ಟಿ ಹಾಡಿದ ವೀರರ ಗೀತೆಗಳ ವಾಸ್ತವಿಕ ನೆಲೆಯ ಅಧ್ಯಯನದ ಮೂಲಕ  ಹೊಸ ಇತಿಹಾಸ ಬರೆವ ತುರ್ತು ಇಂದು ಅಗತ್ಯವಾಗಿದೆ.
* * *
  • blogger
  • delicious
  • digg
  • facebook
  • reddit
  • stumble
  • twitter
  • print
  • email
ಪುಸ್ತಕ: 
ಲೇಖಕರು: 
ಪ್ರಕಾಶಕರು: 
ಸಂಪುಟ ಸಂಪಾದಕರು: 

No comments:

Post a Comment