Monday 11 March 2013

ಜನಪದ ಆರಾಧನೆ


ಜನಪದ ಲೇಖನ :

ಹೊನವಾಡದ ಜೋಗರಾಣಿಗೆ ಸುಡುಗಾಡಿನಲ್ಲಿ ಪೂಜೆ

- ಡಾ. ಪ್ರಕಾಶ ಗ. ಖಾಡೆ

ಹೊನವಾಡ ಎಂಬುದು ವಿಜಾಪುರ ತಾಲೂಕಿನ ಒಂದು ಗ್ರಾಮ. ಇಲ್ಲಿ ಪ್ರತಿ ವರ್ಷ ಬಾದ್ಮಿ ಅಮವಾಸ್ಯೆಯ ನಡುರಾತ್ರಿಯಲ್ಲಿ ‘ಜೋಗರಾಣಿ’ ಎಂಬ ದೇವಿಗೆ ಸುಡುಗಾಡಿನಲ್ಲಿ ಪೂಜೆ ನಡೆಸುವ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಾದ್ಮಿ ಅಮವಾಸ್ಯೆಯಂದು ಇಲ್ಲಿಯ ಬನಶಂಕರಿಯ ಜಾತ್ರೆ ವೈಭವದಿಂದ ನಡೆಯುತ್ತದೆ. ಅದರ ಹಿಂದಿನ ರಾತ್ರಿ ಹನ್ನೆರಡು ಗಂಟೆಗೆ ಬನಶಂಕರಿ ಗುಡಿಯಿಂದ ಹೊರಟ ‘ಜೋಗರಾಣಿ’ ನಡುರಾತ್ರಿಯಲ್ಲಿ ಊರು ಸುತ್ತಿ ಸುಡುಗಾಡು ಸೇರುತ್ತಾಳೆ.ಅಲ್ಲಿಯ ‘ಜೋಗರಾಣಿ’ ಪಾದಗಟ್ಟೆಯ ಮೇಲೆ ಆಕೆಯ ಪೂಜೆ ನಡೆಯುತ್ತದೆ.
ಈ ಪೂಜೆಗಾಗಿ ಸ್ಥಳೀಯ ಕುಂಬಾರ ಮನೆತನದ ಯುವಕನಿಗೆ ‘ಜೋಗರಾಣಿ’ಯ ವೇಷ ಹಾಕಲಾಗುತ್ತದೆ. ವಿವಿಧ ಬಣ್ಣಗಳ ಉಡುಗೆಯೊಂದಿಗೆ ತಲೆಗೆ ಕೆಂಪು ಬಟ್ಟೆ ಕಟ್ಟಿ ಹೂವನ್ನು ಮುಡಿಸಿ, ಮುಖಕ್ಕೆ ಅರಿಷಿಣ,ಕುಂಕುಮ ಹಚ್ಚಲಾಗುತ್ತದೆ. ಈ ದೇವಿ ವೇಷಧಾರಿಯ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಟ್ಟಲು ಕೊಡುತ್ತಾರೆ.ಗಂಟೆ, ಜಾಗಟೆ, ವಾದ್ಯ ಸಮೇತ ಗುಡಿಯಿಂದ ನಡುರಾತ್ರಿ ದೇವಿ ಹೊರಡುವಾಗ ಊರಿನ ಸಕಲ ಆಯಗಾರರು ಕೈಯಲ್ಲೊಂದು ಉದ್ದನೆಯ ಕೋಲು ಹಿಡಿದು ದೇವಿಯ ಮುಂದೆ ಸಾಗುತ್ತಾರೆ.
ಜೋಗರಾಣಿಯು ಮೈ ತುಂಬಬಹುದೆಂದು ನಂಬುಗೆಯಿಂದ ಏಡ-ಬಲಕ್ಕೆ ಒಬ್ಬೊಬ್ಬರು ದೇವಿಯನ್ನು ಹಿಡಿದಿರುತ್ತಾರೆ. ಇಷ್ಟು ಹಿಡಿದರೂ ರಾಕ್ಷಸ ರೂಪದ ದೇವಿ ಒಮ್ಮೊಮ್ಮೆ ಕೊಸರಿಕೊಳ್ಳುತ್ತಾ ಕುಣಿಯುವುದು ಇದೆ. ಜೋಗರಾಣಿ ಕೈಯಲ್ಲಿನ ಬಿಚ್ಚುಗತ್ತಿಯನ್ನು ಬ್ರಾಹ್ಮಣ ಮನೆತನದ ಪೂಜಾರಿಗಳು ಹಿಡಿದಿದ್ದರೆ, ದೇವಿಯ ಕೈಯಲ್ಲಿ ಖಡ್ಗದ ಹಿಡಿಕೆ ಮಾತ್ರ ಕೊಟ್ಟಿರುತ್ತಾರೆ.
ಗೋರಿಯಾಳದ ಕಡೆಗೆ ಮುಖಮಾಡಿ ಹೊರಡುವ ಜೋಗರಾಣಿಗೆ ದಾರಿಯಲ್ಲಿ ದೆವ್ವಗಳು ಗಂಟುಬಿದ್ದು ದೇವಿಯನ್ನು ನಿಲ್ಲಿಸುತ್ತವೆ ಎಂಬ ನಂಬಿಕೆಯಿದೆ. ಹೀಗೆ ದೇವಿ ನಿಂತ ಸ್ಥಳದಲ್ಲಿಯೇ ತೆಂಗಿನಕಾಯಿಯನ್ನು ನೆಲಕ್ಕಪ್ಪಳಿಸಿ ಒಡೆದು ಮುಂದೆ ಹೋಗುವುದು ವಾಡಿಕೆ. ಸುಡುಗಾಡು ಮುಟ್ಟುವ ಹೊತ್ತಿಗೆ ನೂರಾರು ತೆಂಗಿನ ಕಾಯಿಗಳು ಒಡೆಯಲ್ಪಟ್ಟಿರುತ್ತವೆ. ಗ್ರಾಮದ ಸುಡುಗಾಡಿನಲ್ಲಿ ಕಟ್ಟಿರುವ ಜೋಗರಾಣಿಯ ಪಾದಗಟ್ಟೆಯ ಮೇಲೆ ಜೋಗರಾಣಿಯನ್ನು ನಿಲ್ಲಿಸಿ ಪೂಜೆ ಮಾಡುತ್ತಾರೆ. ನಂತರ ಮತ್ತದೇ ಗಂಟೆ, ಜಾಗಟೆ, ವಾದ್ಯದೊಂದಿಗೆ ಆಕೆಯನ್ನು ಮರಳಿ ಗುಡಿಗೆ ಕರೆತರುತ್ತಾರೆ.
ದೇವಿಯಲ್ಲ..ದೆವ್ವ : ಜೋಗರಾಣಿಯನ್ನು ದೇವಿ ಎನ್ನುವುದಕ್ಕಿಂತ ‘ರಾಕ್ಷಸಿ’, ‘ದೆವ್ವ’ ಎಂದೇ ಗ್ರಾಮಸ್ಥರು ಕರೆಯುತ್ತಾರೆ. ರಾಕ್ಷಸನ ಕೆಲಸ ಏನಿದ್ದರೂ ರಾತ್ರಿಯೇ. ಆ ಕಾರಣವಾಗಿ ಜೋಗರಾಣಿಗೆ ನಡುರಾತ್ರಿಯಲ್ಲಿ ಪೂಜೆ ನಡೆಯುವದು ಇದಕ್ಕೆ ಪುಷ್ಟಿ ಕೊಡುತ್ತದೆ.
ಯಮನ ರಾಣಿಯೇ ? ಜೋಗರಾಣಿ ಎಂಬ ಪದ ‘ಜವರಾಣಿ’ ಎಂಬ ಪದದಿಂದ ಬಂದಿರಬಹುದೇ ? ಜವರಾಣಿ ಯಮನ ರಾಣಿ ಏಕಾಗಿರಬಾರದು? ಜವರಾಣಿ ಪದ ಮುಂದೆ ಜವರಾಣಿ>ಜೋರಾಣಿ>ಜೋಗರಾಣಿ ಎಂದು ಬದಲಾಗಿರಬಹುದೆ? ಇದು ನಿಜವಾದರೆ ಯಮನಿಗೂ ಒಬ್ಬ ರಾಣಿ ಇದ್ದು, ಆಕೆ ಕೈಯಲ್ಲಿ ಖಡ್ಗ,ಬಟ್ಟಲು ಹಿಡಿದು ಅಮವಾಸ್ಯೆಯ ನಡುರಾತ್ರಿಯಲ್ಲಿ ಪೊಜೆಗೊಳ್ಳುವುದು ವಿಸ್ಮಯದ ಸಂಗತಿ. ನಿಜವಾಗಿಯೂ ಈ ಆಚರಣೆ ಅಧ್ಯಯನಾಸಕ್ತರಿಗೆ ಕೂತೂಹಲದ ಸರಕಾಗುತ್ತದೆ. ಮೌಖಿಕ ಪರಂಪರೆ ಒಂದನ್ನೇ ನೆಚ್ಚಿಕೊಂಡರಾಗದು. ಇದಕ್ಕಾಗಿ ಪೌರಾಣಿಕ ದಾಖಲೆಗಳಿಗಾಗಿ ಸಂಶೋಧನೆ ನಡೆಯಬೇಕು.
ಏನೇ ಇರಲಿ ಅಮವಾಸ್ಯೆಯ ನಡುರಾತ್ರಿ ಸ್ಮಶಾನದಲ್ಲಿ ಪೂಜೆ ಮಾಡಿಸಿಕೊಳ್ಳುವ ಹೊನವಾಡದ ಜೋಗರಾಣಿ ಆಚರಣೆ ಕನ್ನಡದ ಗ್ರಾಮದೇವತೆಗಳ ಅಧ್ಯಯನ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ.

No comments:

Post a Comment